ಮಧುರ ಕಾವ್ಯದ ಮಳೆ ಸುರಿಸಿದ ಮಾಂತ್ರಿಕ


Team Udayavani, Mar 7, 2021, 6:40 AM IST

ಮಧುರ ಕಾವ್ಯದ ಮಳೆ ಸುರಿಸಿದ ಮಾಂತ್ರಿಕ

ಕಾವ್ಯ ಅಂದರೆ ಸುಮ್ಮನೆ ಏನ್ರೀ? ಶಬ್ದ ಭಂಡಾರ ಇರಬೇಕು ಅದರಲ್ಲಿ ಎಂಬ ನಂಬಿಕೆ ಗಾಢವಾಗಿದ್ದ ದಿನಗಳು ಅವು. ನವ್ಯ ಕಾವ್ಯದ ಪ್ರಭಾವದಿಂದ ಹೆಚ್ಚು ಒತ್ತಕ್ಷರಗಳ, ಕ್ಲಿಷ್ಟ ಪದಗಳ ಪದ್ಯಗಳು ಸೃಷ್ಟಿಯಾಗುತ್ತಿದ್ದ ಸಂದರ್ಭ ಅದು. ಇಂಥ ಸಂದರ್ಭದಲ್ಲಿ ತೀರಾ ಸರಳ ಅನ್ನಿಸುವ ಪದಗಳ ಕವಿತೆಯೊಂದಿಗೆ ಬಂದವರು ಲಕ್ಷ್ಮೀನಾರಾಯಣ ಭಟ್ಟರು…

“ನೋಡ್ರೀ, ಸಂದರ್ಶನದ ಜತೆಯಲ್ಲಿ ನನ್ನ ಫೋಟೋ ಹಾಕ್ತೀರಾ ಅಲ್ವ? ಚೆನ್ನಾಗಿರುವ ಫೋಟೋ ಹಾಕಿ. ಅದ್ಯಾವುದೋ ಹಳೆಯ ಫೋಟೋ ಹಾಕ್ತೀರ, ಈ ಥರದ ಅಶಿಸ್ತು ನನಗೆ ಇಷ್ಟ ಆಗಲ್ಲ…’
ಸಂದರ್ಶನಕ್ಕೆಂದು ಅವರ ಮನೆಗೆ ಹೋದಾಗಲೆಲ್ಲ, ಕಡೆಯಲ್ಲಿ ಆಕ್ಷೇಪದ ಧಾಟಿಯಲ್ಲಿ ಲಕ್ಷ್ಮೀ ನಾರಾಯಣ ಭಟ್ಟರು ಹೇಳುತ್ತಿದ್ದ ಮಾತುಗಳಿವು.

ಕವಿ, ಅಧ್ಯಾಪಕ, ಗೀತೆರಚನೆಕಾರ, ಅನುವಾದಕ, ನಾಟಕಕಾರ, ವಿಮರ್ಶಕ, ಭಾಷಣಕಾರ … ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದವರು ಲ.ನಾ. ಭಟ್ಟರು. ಕೈ ಹಾಕಿದ ಪ್ರತೀ ಕ್ಷೇತ್ರದಲ್ಲೂ ಅಪಾರ ಯಶಸ್ಸು ಪಡೆದ ಹೆಗ್ಗಳಿಕೆ ಅವರದು. ಶಿವಮೊಗ್ಗದಲ್ಲಿ ಜನಿಸಿ, ಮೈಸೂರಿನಲ್ಲಿ, ಅದೂ ವಾರಾನ್ನದ ವಿದ್ಯಾರ್ಥಿಯಾಗಿ ಶಿಕ್ಷಣ ಮುಗಿಸಿದ ಭಟ್ಟರು ಅನಂತರ ಅಧ್ಯಾಪಕರಾಗಿ ಬಂದದ್ದು ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ. ಅನಂತರದಲ್ಲಿ ಕವಿ ಮತ್ತು ಬರಹಗಾರನಾಗಿ ಸಾಹಿತ್ಯ ಲೋಕದಲ್ಲಿ ಅವರು ಮೂಡಿಸಿದ ಹೆಜ್ಜೆಗುರುತು ಬೆರಗು ಹುಟ್ಟಿಸುವಂಥದು.

ಕಾವ್ಯ ಅಂದರೆ ಸುಮ್ಮನೆ ಏನ್ರೀ? ಶಬ್ದ ಭಂಡಾರ ಇರಬೇಕು ಅದರಲ್ಲಿ ಎಂಬ ನಂಬಿಕೆ ಗಾಢವಾಗಿದ್ದ ದಿನಗಳು ಅವು. ನವ್ಯ ಕಾವ್ಯದ ಪ್ರಭಾವದಿಂದ ಹೆಚ್ಚು ಒತ್ತಕ್ಷರಗಳ, ಕ್ಲಿಷ್ಟ ಪದಗಳ ಪದ್ಯಗಳು ಸೃಷ್ಟಿಯಾಗುತ್ತಿದ್ದ ಸಂದರ್ಭ ಅದು. ಇಂಥ ಸಂದರ್ಭದಲ್ಲಿ ತೀರಾ ಸರಳ ಅನ್ನಿಸುವ ಪದಗಳ ಕವಿತೆಯೊಂದಿಗೆ ಬಂದವರು ಲಕ್ಷ್ಮೀನಾರಾಯಣ ಭಟ್ಟರು.
ಅನಂತರದಲ್ಲಿ ಸುಗಮ ಸಂಗೀತ ಕ್ಷೇತ್ರದಲ್ಲಿ “ಮಧುರ ಗೀತೆಗಳ ಮಳೆ’ ಸುರಿಯಿತು. ಆ ಕಾವ್ಯಧಾರೆಯ ಮುಂಚೂಣಿಯಲ್ಲಿ ಭಟ್ಟರೇ ಇದ್ದರು.

ಅನುಭವಿಸಿ ಬರೆದರು!
ಭಟ್ಟರು ಸುಮ್ಮನೇ ಪದಕ್ಕೆ ಪದ ಸೇರಿಸಿ ಹಾಡು ಕಟ್ಟಲಿಲ್ಲ. ಒಂದೊಂದು ಅಕ್ಷರವನ್ನೂ ಅನುಭವಿಸಿ ಬರೆದರು. ಅದಕ್ಕೆ ಸಾಕ್ಷಿ ಬೇಕು ಅನ್ನುವವರು ಗೋಪಿ ಗೀತೆಗಳನ್ನು ಓದಬೇಕು. ಶ್ರೀಕೃಷ್ಣನಿಗಾಗಿ ಹಂಬಲಿಸುವ ಮೀರಾಳ ಭಕ್ತಿ, ಪ್ರೀತಿ, ವಿರಹದ ಮನಃಸ್ಥಿತಿಯನ್ನು ಅದ್ಭುತ, ಅನನ್ಯ ಅನ್ನುವಂತೆ ಭಾವಗೀತೆಗಳ ಮೂಲಕ ಮೊಗೆದುಕೊಟ್ಟವರು ಭಟ್ಟರು. ಹಾಗೆಯೇ- ಗೇರ್‌ ಗೇರ್‌ ಮಂಗಣ್ಣ… ಭಾಳಾ ಒಳ್ಳೇ ವ್ರು‌ ನಮ್‌ ಮಿಸ್ಸು… ಅಮ್ಮಾ ಅಮ್ಮಾ ನಂಗೆ ಒಂದು ಉಂಡೆ ಕೊಡ್ತೀಯಾ… ಗೀತೆಗಳನ್ನು ಕೇಳಿದರೆ ಮಕ್ಕಳು ಮಾತ್ರವಲ್ಲ; ದೊಡ್ಡವರಿಗೂ ಕುಣಿಯುವ ಮನಸ್ಸಾಗುತ್ತದೆ. ಭಟ್ಟರ ಕಾವ್ಯಶಕ್ತಿಯನ್ನು ವಿವರಿಸಲು ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೇ?

ಭಟ್ಟರು 450ಕ್ಕೂ ಹೆಚ್ಚು ಭಾವಗೀತೆಗಳನ್ನು ಬರೆದದ್ದು ಒಂದು ದಾಖಲೆಯೇ. ಹಾಗಂತ ಅವರ ಮೇಲೆ ಹೊಗಳಿಕೆ- ಮೆಚ್ಚುಗೆಯ ಹೂಮಾಲೆ ಸುರಿಯಿತೆಂದು ಭಾವಿಸುವಂತಿಲ್ಲ. ಅವರನ್ನು,ಅವರಂತೆಯೇ ಹಾಡು ಬರೆಯುವವರನ್ನು “ಕ್ಯಾಸೆಟ್‌ ಕವಿಗಳು’ ಎಂದು ಟೀಕಿಸಲಾಯಿತು. ಅವರ ಪದ್ಯಗಳಿಗೆ “ದಾಸ ಸಾಹಿತ್ಯ’ ಎಂದು ಕರೆಯಲಾಯಿತು. ಉಹೂಂ, ಇಂಥ ಯಾವ ಟೀಕೆಗಳಿಗೂ ಅವರು ಬೆಚ್ಚಲಿಲ್ಲ. ಬದಲಾಗಿ, “ಕವಿಯಾದವನು ಮಾತ್ರವೇ ಹಾಡು ಬರೆಯಬಲ್ಲ’ ಎಂದು ಉತ್ತರಿಸಿದರು.
ಆ ಮೂಲಕ, ನಾನು ಕವಿ ಎಂದು ಅಧಿಕಾರಯುತವಾಗಿಯೇ ಹೇಳಿಕೊಂಡರು. ಭಾವಗೀತೆಗಳನ್ನು, ಗಾಯಕರನ್ನು ಬೆಳೆಸಿದರು, ಜತೆಗೆ ತಾವೂ ಬೆಳೆದರು.

“ಶರೀಫ‌’ ಭಟ್ಟರು
ಶಿಶುನಾಳ ಶರೀಫ‌ರ ಗೀತೆಗಳನ್ನು ಪರಿಷ್ಕರಿಸಿ ಅವನ್ನು ಪ್ರಕಟಿಸಿದ್ದು, ಭಟ್ಟರು ಮಾಡಿದ ಮಹತ್ವದ ಕೆಲಸಗಳಲ್ಲಿ ಒಂದು. ಗೀತೆಗಳನ್ನು ಪರಿಷ್ಕರಿಸಿದ್ದು ಮಾತ್ರವಲ್ಲ; ಅವುಗಳನ್ನು ಪ್ರಕಟಿಸಲೆಂದೇ ತಮ್ಮದೇ ಪ್ರಕಾಶನ ಸಂಸ್ಥೆಯನ್ನೂ ಹುಟ್ಟುಹಾಕಿದರು. ಭಟ್ಟರ ಸಾಹಸ ಅಷ್ಟಕ್ಕೇ ಮುಗಿಯಲಿಲ್ಲ. ಸುಗಮ ಸಂಗೀತ ಕ್ಷೇತ್ರದ ಖ್ಯಾತ ಗಾಯಕರಾದ ಸಿ. ಅಶ್ವಥ್‌, ಶಿವಮೊಗ್ಗ ಸುಬ್ಬಣ್ಣ ಅವರನ್ನು ಭೇಟಿ ಮಾಡಿ, ಆ ಗೀತೆಗಳ ಮಹತ್ವ ವಿವರಿಸಿ, ಯಾವ ಗೀತೆಯನ್ನು ಯಾವ ಧಾಟಿಯಲ್ಲಿ ಹಾಡಿದರೆ ಚೆಂದ ಎಂದು ಸಲಹೆಯನ್ನೂ ನೀಡಿದರು. ಆ ಮೂಲಕ ಶರೀಫ‌ರ ಗೀತೆಗಳು ಮನೆಮನೆಯನ್ನೂ ತಲುಪಲು ಕಾರಣರಾದರು. ಅವರಿಗೆ “ಷರೀಫ‌ ಭಟ್ಟರು’ ಎಂಬ ಇನ್ನೊಂದು ಹೆಸರು ಅಂಟಿಕೊಂಡದ್ದು ಆಗಲೇ.

ಶ್ರೇಷ್ಠ ಉಪನ್ಯಾಸಕ
ಕವಿಯೊಬ್ಬ ಒಳ್ಳೆಯ ಉಪನ್ಯಾಸಕ, ಬರಹಗಾರ ಮತ್ತು ವಾಗ್ಮಿಯಾಗಿರುವುದು ಅಪರೂಪ. ಅಂಥದೊಂದು ಅನನ್ಯ ಪ್ರತಿಭೆ ಭಟ್ಟರಿಗೆ ಒಲಿದಿತ್ತು. ಅವರು ಶೇಕÕ…ಪಿಯರ್‌ನ ಸಾನೆಟ್‌ಗಳನ್ನು ಎಲ್ಲರೂ ಒಪ್ಪುವ ರೀತಿಯಲ್ಲಿ ಕನ್ನಡಕ್ಕೆ ತಂದರು. ಎಲಿಯಟ್‌ನ ಶ್ರೇಷ್ಠ ಪದ್ಯಗಳನ್ನೂ ಕನ್ನಡಕ್ಕೆ ಅನುವಾದ ಮಾಡಿದರು. ಇದೇ ಸಂದರ್ಭದಲ್ಲಿ ಅಧ್ಯಾಪಕರಾಗಿಯೂ ಗೆದ್ದರು. ಬೆಂಗಳೂರು ವಿವಿಯಲ್ಲಿ ಅವರ ಪಾಠ ಕೇಳಲಿಕ್ಕೆಂದೇ ಇತರ ತರಗತಿಯ ವಿದ್ಯಾರ್ಥಿಗಳೂ ಬರುತ್ತಿದ್ದುದನ್ನು, ಭಟ್ಟರ ತರಗತಿಗಳು ಕೆಲವೊಮ್ಮೆ ಪೂರ್ತಿ ಎರಡು ಗಂಟೆಗಳ ಕಾಲ ನಡೆದದ್ದನ್ನು ಈಗಲೂ ನೆನಪಿಸಿಕೊಂಡು ಸಂಭ್ರಮಿಸುವವರಿ¨ªಾರೆ. ಈಗ ಉತ್ತಮ ಭಾಷಣಕಾರ, ಅಧ್ಯಾಪಕ ಅನ್ನಿಸಿಕೊಂಡಿರುವ ಎಷ್ಟೋ ಜನ, ಇದನ್ನೆಲ್ಲ ನಾವು ಕಲಿತದ್ದು ಭಟ್ಟರಿಂದ. ಅವರಷ್ಟು ಚೆನ್ನಾಗಿ ಪಾಠ ಮಾಡಲು ನಮಗೆ ಸಾಧ್ಯವೇ ಇಲ್ಲ ಎನ್ನುವುದುಂಟು.

ಇಷ್ಟಾದರೂ ಕನ್ನಡ ಸಾಹಿತ್ಯಲೋಕದಲ್ಲಿ ತಮಗೆ ಸಿಗಬೇಕಿದ್ದಷ್ಟು ಪ್ರಾಶಸ್ತ್ಯ ಸಿಗಲಿಲ್ಲ ಅನ್ನುವ ಸಣ್ಣದೊಂದು ಕೊರಗು ಭಟ್ಟರಿಗೆ ಉಳಿದುಬಿಟ್ಟಿತ್ತು. ಆಪ್ತ ಮಾತುಕತೆಯ ಸಂದರ್ಭದಲ್ಲಿ ಪರೋಕ್ಷವಾಗಿ ಅದನ್ನು ಹೇಳಿಯೂ ಬಿಡುತ್ತಿದ್ದರು. ಈ ಮಾತಿಗೆ ಪುಷ್ಟಿ ನೀಡುವಂತೆ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಅವರಿಗೆ ಒಲಿಯಲೇ ಇಲ್ಲ. ಅವರ ಕವಿತೆಗಳ ಬಗ್ಗೆ ಹೆಚ್ಚಿನ ಚರ್ಚೆ ಆಗಲಿಲ್ಲ. ಆದರೆ, ಯಾವ ಸಂದರ್ಭದಲ್ಲೂ ಈ ಬೇಸರವನ್ನು ಅವರು ಹೇಳಿಕೊಳ್ಳಲಿಲ್ಲ. ಮಾತಿಗೆ ಕುಳಿತಾಗಲೆಲ್ಲ ಸಾಹಿತ್ಯ ಮತ್ತು ಅದರ ಪ್ರಾಮುಖ್ಯದ ಬಗ್ಗೆಯಷ್ಟೇ ಮಾತಾಡಿದರು. ಕಾವ್ಯವನ್ನಷ್ಟೇ ಧ್ಯಾನಿಸಿದರು. ಭಾವಗೀತೆಯ ಸಾಲುಗಳನ್ನು ಗುನುಗಿದರು.

ಅಂಥ ಹಿರಿಯರು, ಈಗ ಲೋಕದ ವ್ಯವಹಾರ ಮುಗಿಸಿ ಹೋಗಿಬಿಟ್ಟಿ¨ªಾರೆ. ಅವರಿಗೆ ಭಾವ- ಶ್ರದ್ಧಾಂಜಲಿ.

ಮೇಷ್ಟ್ರೆಂದ್ರೆ ಈ ಕವಿತೆಗಳು…
1 ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ
ತೇಲಿ ಸಾಗುವ ಮುಗಿಲು ಹರುಷವುಕ್ಕಿ
ಯಾರು ಇಟ್ಟರು ಇವನು ಇಲ್ಲಿ ಹೀಗೆ
ತುದಿಮೊದಲು ತಿಳಿಯದೇ ನೀಲಿಯಲ್ಲಿ?

2. ಎಲ್ಲಿ ಜಾರಿತೋ ಮನವು
ಎಲ್ಲೇ ಮೀರಿತೋ
ಎಲ್ಲಿ ಅಲೆಯುತಿಹುದೋ, ಏಕೆ
ನಿಲ್ಲದಾಯಿತೋ!

3. ನಿನ್ನ ಬೊಗಸೆ ಕಣ್ಣಿಗೆ
ಕೆನ್ನೆ ಜೇನುದೊನ್ನೆಗೆ
ಸಮ ಯಾವುದೇ ಚಿನ್ನ ನಿನ್ನ
ಜಡೆ ಹರಡಿದ ಬೆನ್ನಿಗೆ?

4. ನೀ ಸಿಗದೆ ಬಾಳೊಂದು ಬಾಳೆ ಕೃಷ್ಣಾ
ನಾ ತಾಳಲಾರೆ ಈ ವಿರಹ ತೃಷ್ಣಾ

5. ನಲ್ಲೆ ನಮ್ಮ ಪ್ರೀತಿಗೇಕೆ
ಇಂಥ ಪಾಡು ಈ ನೆಲೆ
ಆಯಿತೇಕೆ ಹೀಗೆ ಬಾಳು
ಗಾಳಿಗೆದ್ದ ತರಗೆಲೆ?

6. ಪ್ರೀತಿಯ ದೀಪವ ಎದೆಯಲಿ ಬೆಳಗಿ
ಮರೆಗೆ ಸರಿದೆಯೇನು?
ಅರಿಯದ ಹೆಣ್ಣನು ಉರಿಸುವೆಯಲ್ಲ
ಎಂಥ ಕಟುಕ ನೀನು!

7. ಅಮ್ಮ ಎಂಬ ಮಾತಿಗಿಂತ
ಬೇರೆ ಮಂತ್ರ ಎಲ್ಲಿದೆ?
ಅದು ನೀಡುವ ಶಾಂತಿ ಕಾಂತಿ
ಯಾವ ತಾರೆ ರವಿಗಿದೆ?

8. ಹರಿಯುವ ನದಿಗೆ ಯಾವ ಹೊಣೆ?
ಹಾರುವ ಹಕ್ಕಿಗೆ ಎಲ್ಲಿ ಮನೆ?
ಬಾಳಿನ ಕಡಲಿನ ತೆರೆಗಳ ಸೀಳಿ
ತಲುಪುವುದಾಚೆಯ ದಡದ ಕೊನೆ

9. ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಭುವಿಗೆ?

10. ಭಾಳ ಒಳ್ಳೇವ್ರು ನಮ್‌ ಮಿಸ್ಸು
ಏನ್‌ ಹೇಳಿದ್ರೂ ಎಸ್ಸೆಸ್ಸು
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲ ಫೇಮಸ್ಸು

11. ಯಾರು ಜೀವವೇ ಯಾರು ಬಂದವರು
ಭಾವನೆಗಳನೇರಿ?ಒಣಗಿದೆನ್ನೆದೆಗೆ
ಮಳೆಯ ತಂದವರು ಬಿಸಿಲ ತೆರೆಯ ಸೀಳಿ?

12. ಎಂಥಾ ಹದವಿತ್ತೇ! ಹರೆಯಕೆ ಏನೋ ಮುದವಿತ್ತೇ
ಅಟ್ಟೀ ಹಿಡಿದು ಮುಟ್ಟೀ ತಡೆದು ಗುಟ್ಟೂ ಸವಿಯಿತ್ತೇ   - ಗೆಳತಿ

13. ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಕರೆಯುವ ಕೈ ಬೀಸಿ
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ

14. ತಾಯೆ ನಿನ್ನ ಮಡಿಲಲಿ
ಕಣ್ಣ ತೆರೆದ ಕ್ಷಣದಲಿ
ಸೂತ್ರವೊಂದು ಬಿಗಿಯಿತೆಮ್ಮ
ಸಂಬಂಧದ ನೆಪದಲಿ

ಷರೀಫ‌ರನ್ನು ಮುನ್ನೆಲೆಗೆ ತಂದಿದ್ದೇ ಭಟ್ಟರು!
“ವಯಸ್ಸಿನಲ್ಲಿ ಭಟ್ಟರು ನನಗಿಂತ ಕಿರಿಯರು. ನಾನೊಮ್ಮೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕಾರ್ಯಕ್ರಮ ವೊಂದರಲ್ಲಿ ಹಾಡುವಾಗ ಪಕ್ಕದ ಮಹಾರಾಜ ಕಾಲೇಜಿನಿಂದ ಬಂದು ನನ್ನ ಹಾಡು ಕೇಳಿ ಖುಷಿಪಟ್ಟಿದ್ದರು. ಬಳಿಕ ಅವರು ಬರೆದ ಹಲವಾರು ಕವಿತೆಗಳನ್ನು ನಾನು ಸಂಗೀತ ಸಂಯೋಜನೆ ಮಾಡಿ ಹಾಡಿದ್ದೂ ಉಂಟು.

ಭಟ್ಟರು ಮೈಸೂರಿಗೆ ಬಂದಾಗ ನಮ್ಮ ಮನೆಗೆ ತಪ್ಪದೇ ಭೇಟಿ ನೀಡಿ ಹೋಗುತ್ತಿದ್ದರು. ನನ್ನ ಮೊದಲ ಕವನ ಸಂಕಲನವಾದಲಹರಿಗೆ ಅವರೇ ಮುನ್ನುಡಿ ಬರೆದರು. ಜತೆಗೆ ನನ್ನ ಗಾಯನದ ಮೊದಲ ಧ್ವನಿ ಮುದ್ರಿಕೆಯನ್ನೂ ಅವರೇ ಬಿಡುಗಡೆ ಮಾಡಿದ್ದರು. ಪಂಪ, ರನ್ನ-ಜನ್ನ, ಹರಿಹರ, ರಾಘವಾಂಕರ ಕಾವ್ಯಗಳ ಆಳ ಅಧ್ಯಯನ ಅವರಲ್ಲಿತ್ತು. ಅವುಗಳಲ್ಲಿದ್ದ ಪಾಂಡಿತ್ಯವನ್ನು ಕರಗತ ಮಾಡಿಕೊಂಡು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಿರರ್ಗಳವಾಗಿ ಭಾಷಣ ಮಾಡುತ್ತಿದ್ದ ನಿಸ್ಸೀಮ.
ಕವಿಗಳು ಎಂದರೆ ತೋಟದಲ್ಲಿ ಅರಳುವ ಬಣ್ಣ ಬಣ್ಣದ ಸುಂದರ ಹೂಗಳು. ಸುಗಮ ಸಂಗೀತ ಕಲಾವಿದರು ಅವುಗಳನ್ನು ಹೆಕ್ಕಿ ಮಾಲೆಯನ್ನಾಗಿ ಮಾಡಿ ಮನೆ ಮನೆಗೆ ನೀಡುವ ಹೂವಾಡಿಗರಂತೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಸಂತ ಶಶುನಾಳ ಷರೀಫ‌ರ ತಣ್ತೀಪದಗಳನ್ನು ಸಂಗ್ರಹಿಸಿ ಷರೀಫ‌ರನ್ನು ಮತ್ತು ಅವರ ತಣ್ತೀ ಪದಗಳನ್ನು ಜನರಿಗೆ ಪರಿಚಯಿಸಿದವರು ಲಕ್ಷ್ಮೀನಾರಾಯಣ ಭಟ್ಟರು. ಇದಕ್ಕೂ ಮೊದಲು ಕೆಲವು ಭಾಗಗಳಲ್ಲಿ ಒಂದೆರೆಡು ಷರೀಫ‌ರ ತಣ್ತೀಪದಗಳು ಮಾತ್ರ ಜನರಿಗೆ ತಿಳಿದಿತ್ತು. ಬಳಿಕ ಭಟ್ಟರು ತಣ್ತೀ ಪದಗಳನ್ನು ಸಂಗ್ರಹಿಸಿ, ಅವುಗಳನ್ನು ಜನತೆಗೆ ಮುಟ್ಟಿಸಿದರು. ಅಷ್ಟೇ ಅಲ್ಲದೇ ತಾವು ಸಂಗ್ರಹಿಸಿದ ತಣ್ತೀ ಪದಗಳನ್ನು ಗಾಯಕ ಅಶ್ವತ್ಥ್ ಅವರಿಂದ ಹಾಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಷರೀಫ‌ರನ್ನು ಮುನ್ನೆಲೆಗೆ ತಂದಿದ್ದೇ ಭಟ್ಟರು.
ಎಚ್‌. ಆರ್‌. ಲೀಲಾವತಿ, ಸುಗಮ ಸಂಗೀತ ಗಾಯಕಿ
**
ಟ್ಯೂನ್‌ಗೆ ಕವಿತೆ ಬರೆದ್ರೆ ಅದು ಕಳಪೆಯಾಗುತ್ತೆ!
ಎಂಥ ಸಂದರ್ಭದಲ್ಲೂ ಭಟ್ಟರು ತಾವು ನಂಬಿದ ಸಿದ್ಧಾಂತದಿಂದ ದೂರ ಸರಿಯುತ್ತಿರಲಿಲ್ಲ. ಒಮ್ಮೆ ದೇಶದ ಪ್ರಸಿದ್ಧ ವೀಣಾ ವಿದ್ವಾಂಸರಾದ ಏಮಣಿ ಶಂಕರ ಶಾಸ್ತ್ರಿಯವರಿಂದ ಬೆಂಗಳೂರು ಆಕಾಶವಾಣಿಯಲ್ಲಿ ಒಂದು ಕಾರ್ಯಕ್ರಮ ಮಾಡಿಸುವುದಿತ್ತು. ಅದಕ್ಕೆ ಕವಿತೆ ಬರೆದುಕೊಡುವಂತೆ ಭಟ್ಟರನ್ನು ಕೇಳಿಕೊಳ್ಳಲಾಗಿತ್ತು. ಕವಿತೆಯೂ ಸಿದ್ಧವಾಗಿತ್ತು. ಆಕಾಶವಾಣಿಗೆ ಬಂದ ಏಮಣಿಯವರು ಭಟ್ಟರ ಪರಿಚಯ ಮಾಡಿಕೊಂಡ ನಂತರ ಇಂಗ್ಲಿಷಿನಲ್ಲಿ- “ನೋಡಿ ಭಟ್ಟರೆ, ದಿಲ್ಲಿಯಿಂದ ಬರುವಾಗ ದಾರಿಯಲ್ಲಿ ನನಗೆ ಸೊಗಸಾದ ಟ್ಯೂನ್‌ ಹೊಳೆಯಿತು. (ಆ ಮಟ್ಟನ್ನು ಹಾಡಿ ತೋರಿಸಿದರು.) ಅದಕ್ಕೆ ಹೊಂದುವಂತೆ ಪದ್ಯ ಬರೆದುಕೊಡಿ, ಅದಕ್ಕೆ ನಾಲ್ಕು ಗಂಟೆ ಸಮಯ ತೆಗೆದುಕೊಳ್ಳಿ’ ಎಂದರು. ಭಟ್ಟರು, ಯೆಮಣಿಯವರ ವೀಣಾವಾದನವನ್ನು ತುಂಬು ಮನದಿಂದ ಪ್ರಶಂಶಿಸಿ, ಅನಂತರ ಹೇಳಿದರು: “ಸಿದ್ಧವಾಗಿರುವ ಟ್ಯೂನ್‌ಗೆ ಕವಿತೆ ಬರೆಯುವುದು ನನಗೆ ಒಪ್ಪಿಗೆಯಿಲ್ಲ. ಹಾಗೆ ಬರೆದರೆ ಅದು ಕಳಪೆ ಕವಿತೆ ಆಗುತ್ತೆ. ಈ ವಿಷಯದಲ್ಲಿ ನನ್ನನ್ನು ಕ್ಷಮಿಸಿ…’
- ರತ್ನಮಾಲಾ ಪ್ರಕಾಶ್‌, ಹಿರಿಯ ಗಾಯಕಿ

ನನ್ನೊಳಗಿನ ಹಾಡೊಂದು ದಿಢೀರನೆ ಎದ್ದು ಹೊರಟಂತೆ!
ನನ್ನೊಳಗೆ ಗಾಯಕಿ, ಅವರೊಳಗೆ ಕವಿ ಕಣ್ತೆರೆಯುವ ಹೊತ್ತಿನಿಂದಲೇ ನಾನು ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರನ್ನು ಬಲ್ಲೆ. ಅದೂ ಸುಮಾರು 65 ವರ್ಷಗಳಿಂದ. ಭಟ್ಟರು, ಶಿವಮೊಗ್ಗ ಸುಬ್ಬಣ್ಣ ಮತ್ತು ನಾನು- ಮೂವರೂ ಶಿವಮೊಗ್ಗದಲ್ಲಿ ಹುಟ್ಟಿ, ಬೆಳೆದವರು. ಸುಮಾರು ಅರ್ಧ ಕಿ.ಮೀ. ಅಂತರದಲ್ಲಿ ನಮ್ಮೆಲ್ಲರ ಮನೆ. ಅವರು ಓದಲೆಂದು ಮೈಸೂರಿಗೆ ಹೋದರು. ನಾನು ಚಿತ್ರಸಂಗೀತದ ಸೆಲೆಗೆ ಬಿದ್ದು ಮದರಾಸಿಗೆ ಹೊರಟೆ. ಮತ್ತೆ ಇಬ್ಬರೂ ಪರಸ್ಪರ ನೋಡಿದ್ದು ಬೆಂಗಳೂರಲ್ಲೇ. ಅಷ್ಟರಲ್ಲಾಗಲೇ ಭಟ್ಟರು ಪ್ರಸಿದ್ಧ ಕವಿಯಾಗಿದ್ದರು. ಸುಬ್ಬಣ್ಣನೂ ಬೆಂಗಳೂರಿಗೆ ಬಂದಮೇಲೆ ಮೂವರ ಟೆಂಟೂ ಒಂದೇ ಊರಾಯಿತು!
ನಮ್ಮ ಊರಿನವರು ಎಂಬ ಕಾರಣಕ್ಕಾಗಿ ಅವರ ಗೀತೆಗಳು ನನಗೆ ಅದೇನೋ ರಸವತ್ತು. ಒಬ್ಬಟ್ಟಿಗೆ ತುಪ್ಪ ಬಿದ್ದಂತೆ. ನಾನು ಹಾಡಿದ ಭಟ್ಟರ ಮೊದಲ ಭಾವಗೀತೆ “ಬಾರೋ ವಸಂತ ಬಾರೋ ಬಾ…’. 1973ರಲ್ಲಿ ಈ ಗೀತೆಗೆ ಎಚ್‌.ಕೆ. ನಾರಾಯಣ ರಾಗ ಸಂಯೋಜನೆ ಮಾಡಿದ್ದರು. ವಸಂತ ನಮ್ಮ ಬಾಳಿನೊಳಗೆ ಹೀಗೆ ಬರಲಿ ಅಂತ ಬಯಸುತ್ತ ಕವಿ, “ಎಳೆ ಕಂದನ ದನಿಗೆಜ್ಜೆಯಲಿ, ಇನಿಯಳ ಮಲ್ಲಿಗೆ ಲಜ್ಜೆಯಲಿ…’ ಎಂದು ಬಣ್ಣಿಸುವ ಬಗೆ ಅನನ್ಯ. “ನೀವು ಹೇಗೆ ಇಷ್ಟು ಚೆನ್ನಾಗಿ ಬರೆಯುತ್ತೀರಿ’ ಎಂದು ಭಟ್ಟರನ್ನು ಕೇಳಿದರೆ, “ನೀವು ಹೇಗೆ ಇಷ್ಟು ಮಧುರವಾಗಿ ಹಾಡುತ್ತೀರೋ ಹಾಗೆ!’ ಎನ್ನುತ್ತಿದ್ದರು.

ಭಟ್ಟರಿಗೆ ಕವಿತೆಯಂತೆ ಮಾತೂ ಸಿದ್ಧಿಸಿತ್ತು. ಆಪ್ತರು, ವಿದ್ವತೂ³ರ್ಣ ಜನರೊಂದಿಗಷ್ಟೇ ಅವರ ಮಾತಿರುತ್ತಿತ್ತು. ವಿದ್ಯಾರ್ಥಿಗಳಿಗೆಲ್ಲ ಅಚ್ಚುಮೆಚ್ಚಿನ ಗುರು. ಕವಿ ದೊಡ್ಡರಂಗೇಗೌಡರು ಒಂದು ಸಲ ಹೀಗಂದಿದ್ದರು: ಭಟ್ಟರ ಕ್ಲಾಸಿನ ಋಣವನ್ನು ಇಡೀ ಆಯುಸ್ಸು ಪಾಠ ಮಾಡಿ ತೀರಿಸಿದರೂ ಸಾಧ್ಯವಿಲ್ಲ!’ ಭಟ್ಟರ ಮಾತಿನ ಶಕ್ತಿ ತಿಳಿದವರಿಗೆ ಈ ಸಾಲಿನ ತೂಕ ಗೋಚರ.
ಸುಮಾರು 22 ವರ್ಷಗಳ ಕಾಲ ಅವರ ಭಾವಗೀತೆಗಳನ್ನು ಹಾಡಿದ್ದೇನೆ. “ಬಾರೋ ವಸಂತ’, “ಕಳೆದ ಕಾಲವ ಗುಣಿಸಿ’, “ಮತ್ತೆ ಮತ್ತೆ ಕಳಚಿದರೂ ಪತ್ರ ಪುಷ್ಪ ಫ‌ಲ’, “ಎಲ್ಲಿ ಜಾರಿತೋ ಮನವು’, “ನಡೆದಿದೆ ಪೂಜಾರತಿ’, “ತಾಯೆ ನಿನ್ನ ಮಡಿಲಲಿ’- ಇದನ್ನೆಲ್ಲ ಎಷ್ಟು ಸಲ ಹಾಡಿದ್ದೇನೋ ಲೆಕ್ಕವಿಲ್ಲ. ಅವರ ಭಾವಗೀತೆಗಳು ಅವರಿಗಿಂತ ಮೊದಲೇ ಅಮೆರಿಕವನ್ನು ತಲುಪಿದ್ದನ್ನು ಕಣ್ಣಾರೆ ಕಂಡವಳು ನಾನು. ಒಮ್ಮೆ ನಾನು ಅಮೆರಿಕಕ್ಕೆ ಹೋದಾಗ ಹಲವೆಡೆ ಕಾರ್ಯಕ್ರಮಗಳಲ್ಲಿ ಹಾಡಬೇಕಿತ್ತು. ಪ್ರತೀ ಕಾರ್ಯಕ್ರಮದಲ್ಲೂ ಭಟ್ಟರ 3-4 ಗೀತೆಗಳು ಇದ್ದೇ ಇರುತ್ತಿದ್ದವು. ಕೊನೆಯಲ್ಲಿ ಬಾಕಿ ಉಳಿದ ಚೀಟಿಗಳಲ್ಲೂ ಭಟ್ಟರ ಹಾಡುಗಳೇ ಇರುತ್ತಿದ್ದುದ್ದನ್ನು ನೋಡಿ ಹೆಮ್ಮೆಪಡುತ್ತಿದ್ದೆ. ಆಕಾಶವಾಣಿಯವರು ಸುಗಮಸಂಗೀತ ಕಲಾವಿದರನ್ನು ಅಲಕ್ಷಿಸಿದ ಕಹಿ ಅನುಭವ ಮೈಸೂರು ಅನಂತಸ್ವಾಮಿಯವರಿಗೆ ಆಗಿತ್ತು. ಇದನ್ನು ಪ್ರತಿಭಟಿಸಲು ಅನಂತಸ್ವಾಮಿಯವರು ಹಿಂಜರಿದಾಗ ಭಟ್ಟರೇ ಮುಂದಾಳತ್ವ ವಹಿಸಿ, ಪತ್ರಗಳ ಸಮರ ನಡೆಸಿದ್ದರು. ಭಟ್ಟರಿಂದಾಗಿ ನಾಡಿನ ಸುಗಮ ಸಂಗೀತ ಚಳುವಳಿಗೆ ದೊಡ್ಡಬಲ ಬಂದಿತ್ತು. ಈಗ ಭಟ್ಟರು ಇಲ್ಲ ಎಂಬುದನ್ನು ಕೇಳಿ, ನನ್ನೊಳಗಿನ ಹಾಡೊಂದು ದಿಢೀರನೆ ಎದ್ದು ಹೊರಟಂತೆ ಮನಸ್ಸು ಮರುಗುತ್ತಿದೆ.

– ಬಿ.ಕೆ. ಸುಮಿತ್ರಾ, ಸುಗಮ ಸಂಗೀತ ಗಾಯಕಿ

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.