ಆಮ್ಲಜನಕ ಸರಬರಾಜಿಗೆ ಅಡೆತಡೆ ಬೇಡ: ಕರ್ನಾಟಕ ಸೇರಿ 15 ರಾಜ್ಯಗಳಿಗೆ ಪ್ರಧಾನಿ ಸೂಚನೆ
Team Udayavani, Apr 17, 2021, 1:11 AM IST
ಹೊಸದಿಲ್ಲಿ : ದೇಶಾದ್ಯಂತ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಚಿಕಿತ್ಸೆಗಾಗಿ ಮೂಲಸೌಕರ್ಯಗಳ ಕೊರತೆಯೂ ಅಲ್ಲಲ್ಲಿ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಕೊರೊನಾ ತೀವ್ರ ಬಾಧೆಗೆ ತುತ್ತಾಗಿರುವ 15 ರಾಜ್ಯಗಳಲ್ಲಿ ಆಮ್ಲಜನಕದ ಪೂರೈಕೆ ವ್ಯವಸ್ಥೆಯ ಬಗ್ಗೆ ಅವಲೋಕನ ಸಭೆ ನಡೆಸಿದರು. ಸಭೆಯಲ್ಲಿ, ಆರೋಗ್ಯ ಸಚಿವಾಲಯಗಳ ಹಿರಿಯ ಅಧಿಕಾರಿಗಳು, ಕೈಗಾರಿಕ ಉತ್ತೇಜನ ಮತ್ತು ಆಂತರಿಕ ವಹಿವಾಟು (ಡಿಪಿಐಐಟಿ) ಅಧಿಕಾರಿಗಳು, ಉಕ್ಕು, ರಸ್ತೆ ಸಾರಿಗೆ ಸಚಿವಾಲಯಗಳ ಅಧಿಕಾರಿಗಳೂ ಭಾಗವಹಿಸಿದ್ದರು.
ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಛತ್ತೀಸ್‌ಗಢ, ಕೇರಳ, ತಮಿಳುನಾಡು, ಪಂಜಾಬ್,
ಹರಿಯಾಣ, ರಾಜಸ್ಥಾನ ಮುಂತಾದ ರಾಜ್ಯಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ತಮ್ಮ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕೊರೊನಾ ಪ್ರಕರಣಗಳ ಚಿಕಿತ್ಸೆಗೆ ಇರುವ ಮೂಲ ಸೌಕರ್ಯಗಳ ಕುರಿತಾಗಿ ಪ್ರಧಾನಿಗೆ ಮಾಹಿತಿ ನೀಡಿದರು.
ಈ ವೇಳೆ, ಪ್ರಧಾನಿಯವರು ಪ್ರಮುಖವಾಗಿ ರಾಜ್ಯಗಳಲ್ಲಿರುವ ಆಮ್ಲಜನಕ ಸಿಲಿಂಡರ್‌ಗಳ ಬಗ್ಗೆ ಮಾಹಿತಿಯನ್ನು ಪಡೆದರು. ರಾಜ್ಯಗಳ ನಡುವೆ ಆಮ್ಲಜನಕದ ಸಾಗಾಣಿಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ಸಲಹೆ ನೀಡಿದರು. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗಳು ಆಮ್ಲಜನಕ ಪೂರೈಕೆಗೆ ತಡೆಯೊಡ್ಡಬಾರದು. ಇನ್ನು, ಆಮ್ಲಜನಕ ಸಿಲಿಂಡರ್ ಫಿಲ್ಲಿಂಗ್ ಸ್ಟೇಶನ್‌ಗಳನ್ನು ದಿನದ 24 ಗಂಟೆಯೂ ಸೇವೆ ಸಲ್ಲಿಸಲು ಅನುಮತಿ ನೀಡಬೇಕೆಂದು ಅವರು ಹೇಳಿದರು.
ಇತ್ತೀಚೆಗೆ, ಕೈಗಾರಿಕ ಉದ್ದೇಶಗಳಿಗಾಗಿ ಬಳಸುವ ಆಮ್ಲಜನಕ ಸಿಲಿಂಡರ್‌ಗಳನ್ನು ವೈದ್ಯಕೀಯ ಉಪಯೋಗಕ್ಕಾಗಿ ಸರಬರಾಜು ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಹಾಗೆಯೇ, ನೈಟ್ರೋಜನ್, ಆರ್ಗಾನ್ ಅನಿಲಗಳ ಸಾಗಾಣಿಕೆಗೆ ಬಳಸುವ ಟ್ಯಾಂಕರ್‌ಗಳನ್ನು ಆಮ್ಲಜನಕ ಸಾಗಾಣಿಕೆಗೆ ಬಳಸಲೂ ಒಪ್ಪಿಗೆ ಸೂಚಿಸಿದೆ.
ಛತ್ತೀಸ್ ಗಢ, ಯುಪಿಗೆ ಸೂಚನೆ: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಹಾಸಿಗೆ ವ್ಯವಸ್ಥೆ, ವೆಂಟಿಲೇಟರ್ ಸೌಲಭ್ಯ, ಆಮ್ಲಜನಕ ಸಿಲಿಂಡರ್ ಹಾಗೂ ಆ್ಯಂಬುಲೆನ್ಸ್ ಸೌಲಭ್ಯಗಳನ್ನು ಹೆಚ್ಚಿಸಬೇಕೆಂದು ಛತ್ತೀಸ್ ಗಢ ಹಾಗೂ ಉತ್ತರ ಪ್ರದೇಶ ಸರಕಾರಗಳಿಗೆ ಕೇಂದ್ರ ಸೂಚಿಸಿದೆ.
ಇತರೆಡೆ ನಿರ್ಬಂಧ: ಚಂಡೀಗಢದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಂಡಿದೆ. ಒಡಿಶಾದ ಭುವನೇಶ್ವರದಲ್ಲಿ ಶನಿವಾರದಿಂದ ನೈಟ್ ಕರ್ಫ್ಯೂ ಜಾರಿಯಾಗಿದೆ. ಮತ್ತೂಂದೆಡೆ, ಮೇಘಾಲಯದ ಶಿಲ್ಲಾಂಗ್ ನಲ್ಲಿ ಇನ್ನು ಪ್ರತೀ ರವಿವಾರವೂ 144ನೇ ಸೆಕ್ಷನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಮತ್ತೆ 2 ಲಕ್ಷ ಕೇಸ್: ಗುರುವಾರ-ಶುಕ್ರವಾರ ನಡುವಿನ 24 ಗಂಟೆಯಲ್ಲಿ 2,17,353 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಶುರುವಾದಾಗಿನಿಂದ ಇದು ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣ. ಗುರುವಾರದಂದು, 2,00,739 ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲದೆ ದಿನವೊಂದಕ್ಕೆ 2 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ವಿಶ್ವದ 2ನೇ ರಾಷ್ಟ್ರವೆಂದು ಭಾರತ ಪರಿಗಣಿಸಲ್ಪಟ್ಟಿದೆ. ಈ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಸಾವಿನ ಸಂಖ್ಯೆ ಕೂಡ ಭಾರತದಲ್ಲಿ ಹೆಚ್ಚಾಗಿದ್ದು 24 ಗಂಟೆಯಲ್ಲಿ 1,185 ಮಂದಿ ಸಾವಿಗೀಡಾಗಿದ್ದಾರೆ. 2020ರ ಸೆ. 19ರ ಅನಂತರ ಇದು ಗರಿಷ್ಠವಾಗಿದೆ.
10 ರಾಜ್ಯಗಳಲ್ಲಿ ಶೇ. 80 ಪ್ರಕರಣ: ದೇಶದಲ್ಲಿನ ಒಟ್ಟಾರೆ ಪ್ರಕರಣಗಳಲ್ಲಿ ಶೇ. 79.10ರಷ್ಟು ಪ್ರಕರಣ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ದಿಲ್ಲಿ, ಛತ್ತೀಸ್ ಗಢ, ಮಧ್ಯಪ್ರದೇಶ, ಗುಜರಾತ್, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲದಲ್ಲಿ ಕಂಡು ಬಂದಿವೆ. ದಿನದ ಗರಿಷ್ಠ ಪ್ರಕರಣಗಳು ಮಹಾರಾಷ್ಟ್ರದಲ್ಲಿ (61,695) ದಾಖಲಾಗಿದ್ದು, ಅನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ (22,339) ಹಾಗೂ ದಿಲ್ಲಿ (16,699) ಇವೆ.
ಹ್ಯಾಫ್ ಕಿನ್‌ಗೆ ಅನುಮತಿ: ಮುಂಬಯಿ ಮೂಲದ ಹ್ಯಾಫ್ ಕಿನ್ ಬಯೋ ಫಾರ್ಮಾ ಕಂಪೆನಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಭಾರತ್ ಬಯೋಟೆಕ್‌ನ ಅನಂತರ ಈ ಲಸಿಕೆ ಉತ್ಪಾದನೆ ಪಡೆದ ಎರಡನೇ ಕಂಪೆನಿಯಿದು. ಪ್ರಸಕ್ತ ವರ್ಷದಲ್ಲಿ 22.8 ಕೋಟಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವ ಗುರಿಯನ್ನು ಕಂಪೆನಿ ಹೊಂದಿದೆ ಎಂದು ಹ್ಯಾಫ್ ಕಿನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಹಾಸಿಗೆ, ಅಂತ್ಯಸಂಸ್ಕಾರಕ್ಕೆ ಪರದಾಟ: ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಉಂಟಾಗಿರುವ ಸ್ಥಿತಿಯೇ ದಿಲ್ಲಿಯಲ್ಲೂ ಸೃಷ್ಟಿಯಾಗಿದೆ. ಅಲ್ಲಿನ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಹಾಸಿಗೆಗಳು ಲಭ್ಯವಿರದ ಕಾರಣ, ಒಂದೇ ಹಾಸಿಗೆಯಲ್ಲಿ ಇಬ್ಬಿಬ್ಬರು ಕೊರೊನಾ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ! ಅಲ್ಲಿನ ಚಿತಾಗಾರಗಳಲ್ಲಿ ಹಾಗೂ ಶ್ಮಶಾನಗಳಲ್ಲಿ ಕೊರೊನಾದಿಂದ ಸೋಂಕಿತರ ಶವಗಳ ಅಂತ್ಯ ಸಂಸ್ಕಾರಕ್ಕೂ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ 13 ದಿನಗಳಲ್ಲಿ 409 ಜನರು ಸಾವನ್ನಪ್ಪಿರುವುದು ಇದಕ್ಕೆ ಕಾರಣ. ಪ್ರತೀ ದಿನ 50ರಿಂದ 60 ಜನರ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಾಯಕರಿಗೆ ಸೋಂಕು: ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್‌ಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಕಾಂಗ್ರೆಸ್ ನಾಯಕರಾದ ರಣದೀಪ್ ಸುಜೇìವಾಲ, ಶಿರೋಮಣಿ ಅಕಾಲಿದಳದ ನಾಯಕಿ ಹರ್‌ಸಿಮ್ರತ್ ಕೌರ್ ಬಾದಲ್ ಅವರಿಗೂ ಸೋಂಕು ದೃಢಪಟ್ಟಿದೆ. ಮತ್ತೂಂದೆಡೆ, ಪಶ್ಚಿಮ ಬಂಗಾಲದ ಕಣದಲ್ಲಿದ್ದ ಐವರು ಅಭ್ಯರ್ಥಿಗಳಿಗೆ ಕೊರೊನಾ ತಗುಲಿದ್ದು ಈ ಪೈಕಿ ಮೂವರು ತೃಣಮೂಲ ಕಾಂಗ್ರೆಸಿಗೆ ಸೇರಿದವರಾಗಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್ ಪಿಯ ತಲಾ ಒಬ್ಬರಿಗೆ ಸೋಂಕು ತಗಲಿದೆ.
ಆಸ್ಪತ್ರೆ ಕಟ್ಟಲು ಡಿಆರ್ ಡಿಒಗೆ ಸೂಚನೆ: ಲಕ್ನೋದಲ್ಲಿ ಒಟ್ಟು 600 ಹಾಸಿಗೆ ಸಾಮರ್ಥ್ಯದ ಎರಡು ಕೋವಿಡ್ ಆಸ್ಪತ್ರೆಗಳನ್ನು ಕಟ್ಟಲು ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್ ಡಿಒ) ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಲಕ್ನೋದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ತಲಾ 250ರಿಂದ 300 ಹಾಸಿಗೆ ಸಾಮರ್ಥ್ಯದ ಎರಡು ಆಸ್ಪತ್ರೆಗಳು ನಿರ್ಮಾಣವಾಗಲಿವೆ ಎಂದು ಹೇಳಲಾಗಿದೆ.
ಭಾಗವತ್ ಬಿಡುಗಡೆ: ಕೊರೊನಾ ವೈರಸ್ ದೃಢಪಟ್ಟಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಆಸ್ಪತ್ರೆಯಿಂದ ಶುಕ್ರವಾರ ಡಿಸಾcರ್ಜ್ ಮಾಡಲಾಗಿದೆ. ಎ.9ರಂದು ಅವರಿಗೆ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.