ಪಡುಕೋಣೆ: ಇನ್ನೂ ಮಂಜೂರಾಗದ ಹೊಸ ಕಿರು ಸೇತುವೆ
Team Udayavani, Apr 6, 2021, 3:15 AM IST
ನಾಡ: ಹಡವು ಗ್ರಾಮದ ಪಡುಕೋಣೆ – ಅತ್ತಿಕೋಣೆ ಸಂಪರ್ಕಿಸುವ ಕಿರು ಸೇತುವೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕುಸಿದು ಬಿದ್ದಿದೆ. ಇದಕ್ಕೆ ಊರವರೇ ಮಣ್ಣು ಹಾಕಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದು, ಆದರೆ ಇದು ಮಳೆಗಾಲದಲ್ಲಿ ಕೊಚ್ಚಿಕೊಂಡು ಹೋಗುವ ಭೀತಿ ಎದುರಾಗಿದ್ದು, ಹೊಸದಾಗಿ ಕಿರು ಸೇತುವೆ ಮಾಡಿಕೊಡಬೇಕು ಎನ್ನುವ ಒತ್ತಾಯ ಇಲ್ಲಿನ ಜನರದ್ದಾಗಿದೆ.
ನಾಡ ಗ್ರಾ.ಪಂ. ವ್ಯಾಪ್ತಿಯ ಹಡವು ಗ್ರಾಮದ ಪಡುಕೋಣೆ ಶ್ರೀ ಮಹಾವಿಷ್ಣು ದೇವಸ್ಥಾನ ಬಳಿಯಿಂದ ಅತ್ತಿಕೋಣೆ ಕಡೆಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಇದಾಗಿದ್ದು, ಕಳೆದ ವರ್ಷದ ಡಿ. 24 ರಂದು ಮುರಿದು ಬಿದ್ದಿತ್ತು.
ಆಗ ಸಂಪರ್ಕವೇ ಕಡಿತಗೊಂಡಿತ್ತು. ಆಗ ಸ್ಥಳೀಯ ಸುಮಾರು 50 ಮಂದಿ ಸೇರಿ ಸಂಪೂರ್ಣ ಮುರಿದು ಬಿದ್ದ ಸೇತುವೆ ನಿರ್ಮಿಸಿದ್ದ ಸೇತುವೆ ಜಾಗದಲ್ಲಿಯೇ ಮಣ್ಣು ಹಾಕಿ, ಬದುವಿನ ರೀತಿ ನಿರ್ಮಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
30 ವರ್ಷದ ಹಿಂದಿನ ಸೇತುವೆ
ಏಕಾಏಕಿ ಮುರಿದು ಬಿದ್ದ ಪಡುಕೋಣೆಯ ಈ ಕಿರು ಸೇತುವೆಯು ಸುಮಾರು 37 ವರ್ಷಗಳ ಹಿಂದೆ ನಿರ್ಮಾಣಗೊಂಡಿತ್ತು. ಇಲ್ಲಿನ ಜನರು ಹೇಳುವ ಪ್ರಕಾರ ಈ ಸೇತುವೆಯು 1981 ರಲ್ಲಿ ನಿರ್ಮಾಣಗೊಂಡಿದೆ. ತುಂಬಾ ಹಳೆಯದಾದ ಕಾರಣ ಶಿಥಿಲಗೊಂಡು ಕುಸಿದು ಬಿದ್ದಿದೆ.
ಹೊಸ ಸೇತುವೆಗೆ ಬೇಡಿಕೆ
ಈ ಭಾಗದಲ್ಲಿ 100 ಕ್ಕೂ ಮಿಕ್ಕಿ ಮನೆಗಳಿದ್ದು, 250 ಕ್ಕೂ ಹೆಚ್ಚು ಮಂದಿ ಸಂಚರಿಸಲು ಈ ಕಿರು ಸೇತುವೆಯನ್ನೇ ಆಶ್ರಯಿಸಿದ್ದಾರೆ. ಪ್ರತಿ ನಿತ್ಯ ಹಾಲಿನ ಡೈರಿಗೆ ಹೋಗಲು, ಶಾಲಾ- ಕಾಲೇಜು, ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗಲು ಜನ ಇದೇ ಮಾರ್ಗವಾಗಿ ಸಂಚರಿಸಬೇಕು. ಮಳೆಗಾಲದಲ್ಲಿ ಸಂಪರ್ಕ ಕಡಿತಗೊಂಡರೆ ಬಹಳಷ್ಟು ಸಮಸ್ಯೆಯಾಗಲಿದ್ದು, ಅದಕ್ಕೂ ಮೊದಲು ಈ ಹೊಸ ಕಿರು ಸೇತುವೆಯನ್ನು ನಿರ್ಮಿಸಿಕೊಡಬೇಕು. ಈ ಬಗ್ಗೆ ಶಾಸಕರು, ಜಿ.ಪಂ., ತಾ.ಪಂ. ಸದಸ್ಯರು, ಗ್ರಾ.ಪಂ. ಗಮಬನಹರಿಸಬೇಕು ಎನ್ನುವುದಾಗಿ ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಚ್ಚಿ ಹೋಗುವ ಭೀತಿ
ಈಗ ಊರವರೇ ತಾತ್ಕಾಲಿಕವಾಗಿ ಹೊಳೆಗೆ ಮಣ್ಣು ಹಾಕಿ ಬದುವಿನ ರೀತಿಯಲ್ಲಿ ಸಂಚರಿಸಲು ಅನುಕೂಲವಾಗುವಂತೆ ಕಿರು ಸೇತುವೆಯನ್ನು ನಿರ್ಮಿಸಿದ್ದರು. ಆದರೆ ಇದು ಮಣ್ಣು ಹಾಕಿದ್ದರಿಂದ ಹೊಳೆ ನೀರು ಕೆಳಕ್ಕೆ ಹರಿದು ಹೋಗುತ್ತಿಲ್ಲ. ಕಟ್ಟ ಕಟ್ಟಿದ ರೀತಿಯಂತಾಗಿದೆ. ಈಗ ಹೊಳೆಯಲ್ಲಿ ನೀರಿನ ಹರಿವು ಅಷ್ಟೇನು ಇಲ್ಲದಿದ್ದರಿಂದ ಸಮಸ್ಯೆಯಾಗಿಲ್ಲ. ಆದರೆ ಮಳೆಗಾಲದಲ್ಲಿ ಇದು ಹೊಳೆ ನೀರಿನ ಹರಿವಿಗೂ ತೊಂದರೆಯಾಗಲಿದ್ದು, ಮಾತ್ರವಲ್ಲದೆ ಇದರಿಂದ ಈ ತಾತ್ಕಾಲಿಕ ಕಿರು ಸೇತುವೆ ಕೊಚ್ಚಿಕೊಂಡು ಹೋಗಿ ರಸ್ತೆ ಸಂಪರ್ಕವೇ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಕಿರು ಸೇತುವೆಗೆ ಪ್ರಯತ್ನ
ಪಡುಕೋಣೆ – ಹಡವು ಸಂಪರ್ಕಿಸುವ ಕಿರು ಸೇತುವೆ ಬಗ್ಗೆ ಅಲ್ಲಿನ ಗ್ರಾಮಸ್ಥರು ಈ ಮೊದಲೇ ಬೇಡಿಕೆ ಸಲ್ಲಿಸಿದ್ದರೆ, ಅನುದಾನಕ್ಕೆ ಪ್ರಯತ್ನಿಸಬಹುದಿತ್ತು. ಆದರೆ ಈಗ ಅವಧಿ ಮುಗಿದಿದ್ದು, ಇನ್ನು ಕಷ್ಟ. ಮುಂದಿನ ಸಾಲಿನಲ್ಲಿ ಕಿರು ಸೇತುವೆಗೆ ಪ್ರಯತ್ನಿಸಲಾಗುವುದು.
-ಜಗದೀಶ ಪೂಜಾರಿ, ತಾ.ಪಂ. ಸದಸ್ಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.