IPL 2022: ಲಕ್ನೋ ಸೂಪರ್ ಜೈಂಟ್ಸ್‌ಗೆ ಜಯ; ಮುಂದುವರಿದ ಪಂಜಾಬ್ ಸೋಲಿನ ಸರಣಿ
Team Udayavani, Apr 29, 2022, 11:27 PM IST
ಮುಂಬೈ: ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ರನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದೆ.
ಶುಕ್ರವಾರ ನಡೆದ ಇಬ್ಬರು ಕರ್ನಾಟಕದ ನಾಯಕರ ಪೈಪೋಟಿಯಲ್ಲಿ ರಾಹುಲ್ ಗೆದ್ದರೆ, ಮಾಯಾಂಕ್ ಅಗರ್ವಾಲ್ ಸೋತರು. ಮೊದಲು ಬ್ಯಾಟ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 8 ವಿಕೆಟಿಗೆ 153 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಪಂಜಾಬ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 133 ರನ್ ಗಳಿಸಿತು.
ಪಂಜಾಬ್ ಪರ ಯಾವುದೇ ಬ್ಯಾಟಿಗರು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ನಾಯಕ ಮಾಯಾಂಕ್ 25, ಬೇರ್‌ಸ್ಟೋ 32 ರನ್ ಗಳಿಸಿದ್ದೇ ಉತ್ತಮ ಎನಿಸಿಕೊಳ್ಳುವಂತಹ ಪರಿಸ್ಥಿತಿಯಿತ್ತು! ಲಕ್ನೋ ಬೌಲರ್‌ಗಳು ಸಂಘಟಿತ ಯಶಸ್ಸು ಸಾಧಿಸಿದು. ಮೊಹ್ಸಿನ್ 3, ಚಮೀರ 2, ಕೃಣಾಲ್ ಪಾಂಡ್ಯ 2 ವಿಕೆಟ್ ಕಿತ್ತರು.
ಲಕ್ನೋ ಸಾಧಾರಣ ಮೊತ್ತ: ಮೊದಲು ಬ್ಯಾಟ್ ಮಾಡಿದ ಲಕ್ನೋ ಸಾಧಾರಣ ಮೊತ್ತ ಗಳಿಸಿತು. ಎರಡು ಶತಕ ಬಾರಿಸಿ ಮಿಂಚಿದ್ದ ಕೆ.ಎಲ್.ರಾಹುಲ್ ಈ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡರು. ಕೇವಲ 6 ರನ್ ಮಾಡಿ ರಬಾಡ ಎಸೆತದಲ್ಲಿ ಜಿತೇಶ್‌ಗೆ ಕ್ಯಾಚ್ ನೀಡಿ ವಾಪಸಾದರು. ಕ್ವಿಂಟನ್ ಡಿ ಕಾಕ್-ದೀಪಕ್ ಹೂಡಾ ಸೇರಿಕೊಂಡು ಪವರ್ ಪ್ಲೇ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಆದರೆ ಸ್ಕೋರ್ ಕೇವಲ 39 ರನ್ ಆಗಿತ್ತು. 10ನೇ ಓವರ್ ತನಕವೂ ಇವರ ಜತೆಯಾಟ ಸಾಗಿತು. ಆದರೆ ಬ್ಯಾಟಿಂಗ್ ಅಬ್ಬರದಿಂದೇನೂ ಕೂಡಿರಲಿಲ್ಲ. ದ್ವಿತೀಯ ವಿಕೆಟಿಗೆ 85 ರನ್ ಒಟ್ಟುಗೂಡಿತು.
ಇವರಿಬ್ಬರನ್ನು ಸತತ ಓವರ್‌ಗಳಲ್ಲಿ ಕೆಡವಿದ ಪಂಜಾಬ್ ಮತ್ತೆ ಮೇಲುಗೈ ಸೂಚನೆ ನೀಡಿತು. ಮೊದಲು ಡಿ ಕಾಕ್ ವಿಕೆಟ್ ಬಿತ್ತು. ಬ್ರೇಕ್ ಒದಗಿಸಿದವರು ಸಂದೀಪ್ ಶರ್ಮ. ಡಿ ಕಾಕ್ ಗಳಿಕೆ 37 ಎಸೆತಗಳಿಂದ 46 ರನ್ (4 ಬೌಂಡರಿ, 2 ಸಿಕ್ಸರ್). ಇದು ಲಕ್ನೋ ಸರದಿಯ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿತ್ತು. ಸ್ಕೋರ್ ನೂರರ ಗಡಿ ದಾಟಿದೊಡನೆ ದೀಪಕ್ ಹೂಡಾ ರನೌಟಾದರು. ಹೂಡಾ ಗಳಿಕೆ 28 ಎಸೆತಗಳಿಂದ 34 ರನ್ (1 ಬೌಂಡರಿ, 2 ಸಿಕ್ಸರ್).
13 ರನ್ನಿಗೆ ಬಿತ್ತು 5 ವಿಕೆಟ್: ಡಿ ಕಾಕ್-ಹೂಡಾ ಪೆವಿಲಿಯನ್ ಸೇರಿದೊಡನೆ ಲಕ್ನೋ ತೀವ್ರ ಕುಸಿತಕ್ಕೆ ಸಿಲುಕಿತು. ಒಂದಕ್ಕೆ 98 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ರಾಹುಲ್ ಬಳಗ 111ಕ್ಕೆ ತಲುಪುವಷ್ಟರಲ್ಲಿ 6 ವಿಕೆಟ್ ಉರುಳಿಸಿಕೊಂಡು ಒತ್ತಡಕ್ಕೊಳಗಾಯಿತು. ಕೃಣಾಲ್ ಪಾಂಡ್ಯ, ಮಾರ್ಕಸ್ ಸ್ಟಾಯಿನಿಸ್, ಆಯುಷ್ ಬದೋನಿ ಅಗ್ಗಕ್ಕೆ ಔಟಾದರು. ಈ ಮೂವರಿಂದ ಒಟ್ಟುಗೂಡಿದ್ದು ಬರೀ 12 ರನ್. ವೇಗಿ ಕ್ಯಾಗಿಸೊ ರಬಾಡ ಲಕ್ನೋ ಮಧ್ಯಮ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿದ್ದರು.
ಡೆತ್ ಓವರ್‌ನಲ್ಲಿ ಜೇಸನ್ ಹೋಲ್ಡರ್‌ಗೆ ಸಿಡಿಯುವ ಅವಕಾಶವಿತ್ತು. ಚಹರ್ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಇಂಥದೊಂದು ಸೂಚನೆ ನೀಡಿದರು. ಆದರೆ ಮುಂದಿನ ಎಸೆತದಲ್ಲೇ ಔಟ್ ಆದರು. ಅನಂತರ ಬಂದ ಚಮೀರ ಕೂಡ ಮುನ್ನುಗ್ಗಿ ಬಾರಿಸತೊಡಗಿದರು. ರಬಾಡ ಎಸೆತಗಳಿಗೆ ಬಡಬಡನೆ 2 ಸಿಕ್ಸರ್ ಎತ್ತಿದರು. 3ನೇ ಎಸೆತದಲ್ಲಿ ಕ್ಯಾಚ್ ನೀಡಿ ವಾಪಸಾದರು. 38 ರನ್ನಿಗೆ 4 ವಿಕೆಟ್ ಉರುಳಿಸಿದ ಕ್ಯಾಗಿಸೊ ರಬಾಡ ಪಂಜಾಬ್‌ನ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ರಾಹುಲ್ ಚಹರ್ 2 ವಿಕೆಟ್ ಕೆಡವಿದರು. ಆರ್ಷದೀಪ್ ಸಿಂಗ್, ಸಂದೀಪ್ ಶರ್ಮ ಬಿಗಿ ಬೌಲಿಂಗ್ ಮೂಲಕ ಗಮನ ಸೆಳೆದರು.
ಸಂಕ್ಷಿಪ್ತ ಸ್ಕೋರ್: ಲಕ್ನೋ 20 ಓವರ್, 153/8 (ಕ್ವಿಂಟನ್ ಡಿ ಕಾಕ್ 46, ಕ್ಯಾಗಿಸೊ ರಬಾಡ 38ಕ್ಕೆ 4, ರಾಹುಲ್ ಚಹರ್ 30ಕ್ಕೆ 2). ಪಂಜಾಬ್ 20 ಓವರ್ 133/8 (ಬೇರ್‌ಸ್ಟೊ 32, ಮೊಹ್ಸಿನ್ ಖಾನ್ 24ಕ್ಕೆ 3, ಕೃಣಾಲ್ 11ಕ್ಕೆ 2).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.