ರಾಜ್ಯದಲ್ಲೂ ತೆಲಂಗಾಣ ಮಾದರಿ ಕ್ರಮ : ಖಾಯಂ ನೌಕರರಿಗೂ “ವಜಾ’ ಶಿಕ್ಷೆ?
Team Udayavani, Apr 11, 2021, 7:30 AM IST
ಬೆಂಗಳೂರು: “ತೆಲಂಗಾಣ ಮಾದರಿ’ಯಲ್ಲಿ ಹೋರಾಟ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ಅದೇ ಮಾದರಿಯಲ್ಲಿ ಕಠಿನ ಕ್ರಮ ಕೈಗೊಳ್ಳಲು ಸರಕಾರ ಚಿಂತನೆ ನಡೆಸಿದ್ದು, ಮುಂದೆ ಖಾಯಂ ನೌಕರರನ್ನೂ ವಜಾಗೊಳಿಸುವ ಸಾಧ್ಯತೆ ಇದೆ. ಸರಕಾರದ ಅಸ್ತ್ರಗಳಿಗೆ ಕೆಲವು ನೌಕರರು ಮಣಿದಂತೆ ಕಂಡುಬಂದಿದ್ದು, ಶನಿವಾರ ಸುಮಾರು 2 ಸಾವಿರ ಬಸ್‌ಗಳು ಸಂಚರಿಸಿವೆ.
ತರಬೇತಿಯ, ಪ್ರೊಬೆಷನರಿ ನೌಕರರ ವಜಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಶನಿವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಎಂಟಿಸಿ ವ್ಯಾಪ್ತಿಯಲ್ಲಿ 55 ವರ್ಷ ಮೇಲ್ಪಟ್ಟ ನೌಕರರು ಫಿಟೆ°ಸ್ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿದ್ದು, ಎ. 12ರ ಗಡುವು ವಿಧಿಸಲಾಗಿದೆ. ಮುಂದೆ ಖಾಯಂ ನೌಕರರ ವಜಾಕ್ಕೆ ಕೈಹಾಕುವ ಸಾಧ್ಯತೆ ಇದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.
ಏನಿದು ತೆಲಂಗಾಣ ಮಾದರಿ?
ತೆಲಂಗಾಣದಲ್ಲಿ ಸುಮಾರು 52 ದಿನ ಸಾರಿಗೆ ನೌಕರರ ಹೋರಾಟ ನಡೆದಿತ್ತು. ಅಂತಿಮವಾಗಿ ಸರಕಾರ ಏಕಕಾಲದಲ್ಲಿ ಸಾವಿರಾರು ಸಾರಿಗೆ ನೌಕರರನ್ನು ವಜಾಗೊಳಿಸಿತು. ಕೊನೆಗೆ ನೌಕರರೇ ಸಂಧಾನಕ್ಕೆ ಬಂದು, ಕರ್ತವ್ಯಕ್ಕೆ ಹಾಜರಾದರು. ಆದರೆ ಬೇಡಿಕೆಗಳು ಈಡೇರಲಿಲ್ಲ.
ಈಗ ಇಲ್ಲೂ ಇಂಥದೇ ತಂತ್ರ ಅನುಸರಿಸಲು ಸರಕಾರ ಚಿಂತನೆ ನಡೆಸಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಅವಕಾಶ ಇದೆ; ಮುಂದುವರಿದ್ರೆ ಕೈಹಾಕ್ತೀವಿ’
ಕೆಎಸ್ಸಾರ್ಟಿಸಿ ಪದವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ ಇಂಥ ಕ್ರಮಕ್ಕೆ ಅವಕಾಶ ಇದೆ. ನೌಕರರ ಕೂಟದ ಹಠಮಾರಿ ಧೋರಣೆ ಮುಂದುವರಿದರೆ, ಖಾಯಂ ನೌಕರರ ವಜಾ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ “ಉದಯವಾಣಿ’ಗೆ ತಿಳಿಸಿದ್ದಾರೆ. ನೌಕರರು ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ರಾಜ್ಯ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
380 ವರ್ಗಾವಣೆ; 334 ವಜಾ
ಕೆಎಸ್ಸಾರ್ಟಿಸಿ ವ್ಯಾಪ್ತಿಯಲ್ಲಿ ಮತ್ತೆ 88 ನೌಕರರನ್ನು ವರ್ಗಾಯಿಸಲಾಗಿದೆ. ಬಿಎಂಟಿಸಿಯಲ್ಲಿ ಶನಿವಾರ 118 ನೌಕರರನ್ನು ವಜಾಗೊಳಿಸಲಾಗಿದೆ. ವಜಾ ಗೊಂಡವರ ಒಟ್ಟು ಸಂಖ್ಯೆ 334ಕ್ಕೆ ಏರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.