ಪೈಪ್‌ಲೈನ್ ದುರಸ್ತಿ: ರಾ.ಹೆ. ಇಲಾಖೆಗೆ ಮನವಿಗೆ ನಿರ್ಣಯ
Team Udayavani, Mar 19, 2021, 4:00 AM IST
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಭೂಸ್ವಾಧೀನ ಪಡಿಸಿಕೊಂಡಿರುವ ಜಾಗದಲ್ಲಿ ರಸ್ತೆ ವಿಸ್ತರಣೆ ಸಂದರ್ಭ ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗುವ ಸಂಭವವಿರುವುದರಿಂದ ಸದ್ರಿ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿಗೆ ಅನುದಾನ ಕೋರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲು ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಗ್ರಾ.ಪಂ.ನ ನೂತನ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿಯ ನೀರಕಟ್ಟೆ ಎಂಬಲ್ಲಿ ರಸ್ತೆ ವಿಸ್ತರಣೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಭೂಸ್ವಾಧೀನ ಮಾಡಿದ್ದಾರೆ. ಇಲ್ಲಿ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್‌ಲೈನ್ ಸಂಪೂರ್ಣ ಹಾನಿಗೊಳ್ಳುವ ಸಂಭವವಿದೆ. ಸದ್ರಿ ಪೈಪ್‌ಲೈನ್ ದುರಸ್ತಿಗೆ ಗ್ರಾ.ಪಂ.ನಿಂದ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ. ಈ ಹಿಂದೆ ಟಪಾಲುಕೊಟ್ಟಿಗೆ ಎಂಬಲ್ಲಿಯೂ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಪೈಪ್‌ಲೈನ್ ಸಂಪೂರ್ಣ ಹಾನಿಗೊಂಡಿದ್ದರೂ ಈ ತನಕ ದುರಸ್ತಿ ಮಾಡಿಕೊಟ್ಟಿರುವುದಿಲ್ಲ. ಆದ್ದರಿಂದ ಹಿಂದೆ ಅರ್ಧದಲ್ಲಿ ಉಳಿಕೆಯಾದ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು ಭೂಸ್ವಾಧೀನಗೊಂಡ ಸ್ಥಳದಲ್ಲಿರುವ ಪೈಪ್‌ಲೈನ್ ದುರಸ್ತಿಗೂ ಅನುದಾನ ಮಂಜೂರು ಗೊಳಿಸಬೇಕೆಂದು ಕೋರಿ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿ ಸಲಾಯಿತು.
ಹಿಂದೂ ರುದ್ರಭೂಮಿಗೆ ಸ್ಥಳ
ನೀರಕಟ್ಟೆಯಲ್ಲಿ ಹಿಂದೂ ರುದ್ರ ಭೂಮಿಗೆ ಸ್ಥಳ ಕಾಯ್ದಿರಿಸುವ ಬಗ್ಗೆ ತಹಶೀಲ್ದಾರ್‌ಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣ ಯಿಸಲಾಯಿತು. ಉಪಾಧ್ಯಕ್ಷೆ ಸುಮಿತಾ, ಸದಸ್ಯರಾದ ಮೋನಪ್ಪ ಗೌಡ, ಅರ್ಪಿತಾ ಎಸ್.ವಿ., ವಿಮಲಾ, ಪ್ರಸಿಲ್ಲಾ ಡಿ’ಸೋಜ, ನಝೀರ್ ಬೆದ್ರೋಡಿ, ಉಮೇಶ ಓಡ್ರಪಾಲು, ಮಾಧವ, ಗಂಗಾಧರ ಕೆ.ಎಸ್., ಯಶೋದಾ, ಸಂತೋಷ್ ಪಿ., ಗಂಗಾಧರ ಪಿ.ಎನ್., ಭಾಗೀರಥಿ, ರತ್ನ ಸೂಕ್ತ ಸಲಹೆ ಸೂಚನೆ ನೀಡಿದರು. ಪಿಡಿಒ ಪ್ರವೀಣ್ ಕುಮಾರ್ ಡಿ. ಸ್ವಾಗತಿಸಿ, ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು.
ಗ್ರಾ.ಪಂ.ರಸ್ತೆಯಾಗಿಸಲು ಮನವಿ
ನೆಕ್ಕರಾಜೆ-ಕಣಿಯ ರಸ್ತೆಯನ್ನು ಗ್ರಾ.ಪಂ.ರಸ್ತೆಯನ್ನಾಗಿ ಮಾಡಿ ಕಾಂಕ್ರೀಟ್ ಮಾಡುವಂತೆ ಕೋರಿ ಆ ಭಾಗದ ಗ್ರಾಮಸ್ಥರಿಂದ ಬಂದ ಅರ್ಜಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸದ್ರಿ ರಸ್ತೆಯನ್ನು ಗ್ರಾ.ಪಂ.ರಸ್ತೆಯನ್ನಾಗಿ ಸೇರ್ಪಡೆಗೊಳಿಸಲು 18 ಅಡಿ ಅಗಲಕ್ಕೆ ರಸ್ತೆಗೆ ಜಾಗ ಬಿಟ್ಟುಕೊಡಬೇಕಾಗುತ್ತದೆ. ವರ್ಗ ಸ್ಥಳದಲ್ಲಿ ರಸ್ತೆ ಬಂದಲ್ಲಿ ಅಗತ್ಯ ಜಾಗವನ್ನು ಸಂಬಂಧಪಟ್ಟ ಜಾಗದವರು ಗ್ರಾ.ಪಂ.ಗೆ ಬಿಟ್ಟುಕೊಡಬೇಕೆಂದು ಅಭಿಪ್ರಾಯಿಸಿದ ಸಭೆ, ಸದ್ರಿ ರಸ್ತೆಯ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.