PM ಮೋದಿ-ಬೈಡೆನ್ ಮಹತ್ವದ “ಐದು ಚರ್ಚೆ”
-ಮೋದಿಯ ಐತಿಹಾಸಿಕ ಅಮೆರಿಕದ ಪ್ರವಾಸದ ವೇಳೆ ಮಹತ್ವದ ಮಾತುಕತೆ
Team Udayavani, Jun 18, 2023, 7:21 AM IST
ವಾಷಿಂಗ್ಟನ್/ನ್ಯೂಯಾರ್ಕ್: ಬಹುನಿರೀಕ್ಷಿತ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಅಮೆರಿಕ ಪ್ರವಾಸ ಜೂ.21ರಿಂದ ಶುರುವಾಗಲಿದೆ. ಮೊದಲು ವಿಶ್ವಸಂಸ್ಥೆಯ ಯೋಗದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಅಧ್ಯಕ್ಷ ಜೋ ಬೈಡೆನ್‌ರನ್ನು ಭೇಟಿಯಾಗುತ್ತಾರೆ. ಈ ವೇಳೆ ಆರೋಗ್ಯ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಕ್ಷೇತ್ರ, ಶಿಕ್ಷಣ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ವೃದ್ಧಿಯಾಗುವ ರೀತಿಯಲ್ಲಿ ಚರ್ಚೆಗಳು ನಡೆಯಲಿವೆ ಎಂದು ಅಮೆರಿಕದಲ್ಲಿ ಇರುವ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಈ ಮಾಹಿತಿ ನೀಡಿದ್ದಾರೆ. ಸಮಗ್ರ ಮಾತುಕತೆಯ ಬಳಿಕ ಇಬ್ಬರು ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಲಿದ್ದಾರೆ ಎಂದು “ಪಿಟಿಐ’ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೈಗೆ ಎಟುಕಬಹುದಾದ ಔಷಧಗಳು, ಲಸಿಕೆಗಳು, ಸಂಶೋಧನೆ, ವಿವಿಧ ಕ್ಷೇತ್ರಗಳಲ್ಲಿ ತರಬೇತಿಗಳ ಬಗ್ಗೆ ಪ್ರಧಾನಿ ಮೋದಿ, ಅಧ್ಯಕ್ಷ ಬೈಡೆನ್ ಮಾತುಕತೆ ನಡೆಸಲಿದ್ದಾರೆ. ತಾಂತ್ರಿಕ ಕ್ಷೇತ್ರದಲ್ಲಿ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವಿಸ್ತರಿಸುವ ಬಗ್ಗೆ ಪರಾಮರ್ಶೆ ನಡೆಯಲಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸೌರ ವಿದ್ಯುತ್ ಪ್ರಧಾನವಾಗಿ ಚರ್ಚಿಸಲಾಗುತ್ತದೆ. ಇದಲ್ಲದೆ ಬ್ಯಾಟರಿ ತಂತ್ರಜ್ಞಾನ, ಹೈಡ್ರೋಜನ್ ಕ್ಷೇತ್ರ ಮುನ್ನೆಲೆಗೆ ಬರಲಿದೆ.
ಶಿಕ್ಷಣ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವೃದ್ಧಿಸಲಿದೆ ಎಂದು ಹೇಳಿದ ತರಣ್‌ಜಿತ್ ಸಿಂಗ್ ಸಂಧು, ಸದ್ಯ ಅಮೆರಿಕದಲ್ಲಿ ಎರಡು ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಪೈಕಿ ಮೂರನೇ ಎರಡರಷ್ಟು ಮಂದಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ (ಸ್ಟೆಮ್) ಕ್ಷೇತ್ರಕ್ಕೆ ಸೇರಿದವರು ಎಂದರು.
ಪ್ರಧಾನಿ ಮೋದಿ ಅವರಿಗೆ ಭರಪೂರ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯ-ಅಮೆರಿಕನ್ ಸಮುದಾಯ ಅವರಿಗೆ ಭರಪೂರ ಸ್ವಾಗತ ಕೋರಿದೆ. ಟೈಮ್ಸ್ ಸ್ಕೇರ್‌ನಿಂದ ಹಿಡಿದು ನಯಾಗರಾ ಫಾಲ್ಸ್‌ವರೆಗೂ, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಹವಾಯ್‌ವರಗೆ ಭಾರತೀಯ-ಅಮೆರಿಕನ್ ಸಮುದಾಯದವರು ಪ್ರಧಾನಿ ಮೋದಿ ಅವರಿಗೆ ಸ್ವಾಗತ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಮತ್ತು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುತ್ತಾ ವಿಡಿಯೊ ಸಂದೇಶಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಭಾರತೀಯ-ಅಮೆರಿಕನ್ ಸಮುದಾಯದ ಪ್ರಮುಖ ನಾಯಕ ಡಾ. ಸಂಜಯ್ ಗುಪ್ತ ಸೇರಿದಂತೆ ಅಮೆರಿಕದ ಭಾರತೀಯ ಸಂಸದರು ಪ್ರಧಾನಿ ಮೋದಿ ಅವರನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. “ನಿಮಗಾಗಿ ಅಮೆರಿಕ ಎದುರು ನೋಡುತ್ತಿದೆ’ ಎಂದು ಸಂದೇಶಗಳನ್ನು ಕಳುಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.