ಕಂಟೆಂಟ್ ಮೇಲೆ ಕಣ್ಣು : ಸೋಶಿಯಲ್ ಮೀಡಿಯಾ, ಒಟಿಟಿಗಳಿಗೆ ಅಂಕುಶ
Team Udayavani, Feb 26, 2021, 7:30 AM IST
ಹೊಸದಿಲ್ಲಿ : ಸಾಮಾಜಿಕ ಜಾಲತಾಣಗಳು, ಒಟಿಟಿ ವೇದಿಕೆಗಳು, ಹೊಸ ಸುದ್ದಿ ವೆಬ್‌ಸೈಟ್ಗಳ ಮೇಲೆ ಕೇಂದ್ರ ಸರಕಾರ ನಿರ್ಬಂಧ ಹೇರಲು ಮುಂದಾಗಿದೆ.
ಈ ಸಂಬಂಧ ಗುರುವಾರ ನಿಯಮಾವಳಿಗಳ ಕರಡನ್ನು ಹೊರಡಿಸಿದೆ. ಕೇಂದ್ರದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾಬ್ಡೇಕರ್ ಪತ್ರಿಕಾಗೋಷ್ಠಿ ನಡೆಸಿ ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಪೋಸ್ಟ್‌ವೊಂದರ ಸಂಬಂಧ ಲೀಗಲ್ ನೋಟಿಸ್ ನೀಡಿದ 36 ತಾಸುಗಳ ಒಳಗೆ ಅದನ್ನು ತೆಗೆದುಹಾಕಬೇಕು ಎಂಬುದನ್ನು ಈ ನಿಯಮಾವಳಿಯಲ್ಲಿ ಸೇರಿಸಲಾಗಿದೆ.
2011ರಲ್ಲಿ ಇದ್ದ ನಿಯಮಾವಳಿಗಳನ್ನು ಬದಿಗೆ ಸರಿಸಿ ಈ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಇವು ಜಾರಿಯಾಗಲಿವೆ.
ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ಬಿಗಿ ನಿಯಮಗಳು ಅನ್ವಯವಾಗಲಿವೆ. ಒಟಿಟಿ ಮತ್ತು ಸುದ್ದಿ ವೆಬ್‌ಸೈಟ್ ಗಳು ಈ ನಿಯಮಗಳ ಅಡಿಯಲ್ಲಿ ಬರಲಿವೆ. ಸಾಮಾಜಿಕ ಜಾಲತಾಣಗಳು ಇನ್ನು ಮುಂದೆ ಮಾಹಿತಿ ಪ್ರಸಾರ ವ್ಯವಸ್ಥೆಯಂತೆ ಪರಿಗಣನೆಯಾಗಲಿದ್ದು, ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು
ಈ ನಿಯಮಗಳು ಹೆಚ್ಚು ಅನ್ವಯವಾಗುವುದು ಸಾಮಾಜಿಕ ಜಾಲತಾಣಗಳಿಗೆ. ಇವು ತಮ್ಮ ಖಾಸಗಿ ನಿಯಮಾವಳಿಯಲ್ಲಿ ಬಳಕೆದಾರರಿಗೆ ನಾವು ಮಾನಹಾನಿ, ಅಶ್ಲೀಲ, ಸುಳ್ಳು ಮಾಲಕತ್ವ, ದಾರಿ ತಪ್ಪಿಸುವ ವಿಚಾರಗಳನ್ನು ಪ್ರಸಾರ ಮಾಡುವುದಿಲ್ಲ, ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಬೇಕು. ಇದಕ್ಕಾಗಿ ಜನರು ನೀಡುವ ದೂರು ಸ್ವೀಕರಿಸಲು ದೂರು ಪರಿಹಾರ ವ್ಯವಸ್ಥೆ ರೂಪಿಸಬೇಕು. ದೂರು ಸ್ವೀಕರಿಸಿದ 24 ತಾಸುಗಳ ಒಳಗೆ ಬಳಕೆದಾರನಿಗೆ ಸ್ವೀಕೃತಿ ಪತ್ರ ನೀಡಿ, 15 ದಿನಗಳಲ್ಲಿ ಸಮಸ್ಯೆ ಬಗೆಹರಿಸಬೇಕು. ಸರಕಾರಗಳು ಅಥವಾ ಕೋರ್ಟ್ಗಳು ಯಾವುದಾದರೂ ಪೋಸ್ಟ್ ತೆಗೆದುಹಾಕುವಂತೆ ಆದೇಶಿಸಿದರೆ ಪಾಲಿಸಬೇಕು.
ಜತೆಗೆ ಸ್ವಯಂ ನಿಯಂತ್ರಣ, ಸ್ವಯಂ ನೀತಿ ನಿರೂಪಣ ಸಂಸ್ಥೆಯಿಂದ ನಿಯಂತ್ರಣ ಮತ್ತು ಸರಕಾರಿ ನಿಗಾ ವ್ಯವಸ್ಥೆ ಎಂಬ ಮೂರು ಹಂತಗಳ ನಿಯಂತ್ರಣ ವ್ಯವಸ್ಥೆ ಇರಲಿದೆ.
ಸಂದೇಶದ ಮೂಲ ಹೇಳಬೇಕು
ಕೇಂದ್ರ ಸರಕಾರ ಮತ್ತು ವಾಟ್ಸ್‌ಆ್ಯಪ್ ನಡುವೆ “ಸಂದೇಶದ ಮೂಲ’ದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ವಾಟ್ಸ್ ಆ್ಯಪ್ ಸಂಸ್ಥೆ ಯಾವುದೇ ಕಾರಣಕ್ಕೂ ಬಳಕೆದಾರನ ಖಾಸಗಿ ಮಾಹಿತಿ ನೀಡುವುದಿಲ್ಲ ಎಂದು ವಾದಿಸುತ್ತಿದೆ. ಇದಕ್ಕೆ ಸಂಬಂಧಿಸಿ ಕರಡು ನೀತಿಯಲ್ಲಿ ಪ್ರಸ್ತಾವಿಸಲಾಗಿದೆ. ಇನ್ನು ಮುಂದೆ ಸಂದೇಶ ಅಥವಾ ಪೋಸ್ಟ್ ಹಾಕುವ ಮೂಲ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲೇಬೇಕು.
ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ, ದೇಶದ ಭದ್ರತೆಗೆ ಅಪಾಯ ತಂದೊಡ್ಡುವ, ಸ್ನೇಹಿ ದೇಶಗಳ ಜತೆಗಿನ ಬಾಂಧವ್ಯಕ್ಕೆ ಧಕ್ಕೆ ತರುವಂಥ ಸಂದೇಶ ಮಾಡುವವರ ಬಗ್ಗೆ ಅಪರಾಧದ ಪತ್ತೆ, ವಿಚಾರಣೆ, ಶಿಕ್ಷೆ ಸಂದರ್ಭದಲ್ಲಿ ಮಾಹಿತಿ ನೀಡಬೇಕು. ಅತ್ಯಾಚಾರ, ಲೈಂಗಿಕ ಕಿರುಕುಳ ನೀಡುವಂಥ ಅಂಶಗಳು ಅಥವಾ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಅಪರಾಧಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸಾರ ಮಾಡುವಂಥವರ ಮಾಹಿತಿ ಒದಗಿಸಬೇಕು.
ಒಟಿಟಿ ಮೇಲೆ ನಿಗಾ
ದೇಶದಲ್ಲಿ ಇದುವರೆಗೆ ಒಟಿಟಿಗಳ ಮೇಲೆ ನಿಗಾ ವ್ಯವಸ್ಥೆ ಇರಲಿಲ್ಲ. ಈಗ ಇದಕ್ಕೂ ನಿಯಮ ರೂಪಿಸಲಾಗಿದೆ. ಯಾವ ಕಂಟೆಂಟ್ ಅನ್ನು ಯಾರು ನೋಡಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಐದು ರೀತಿಯ ವಯಸ್ಸಿನ ಅಂತರದ ಮೇರೆಗೆ ಕೆಟಗರಿ ಮಾಡಲಾಗಿದೆ. “ಯು(ಯೂನಿವರ್ಸಲ್)’, ಯು/ಎ (7+), ಯು/ಎ (13+), ಯು/ಎ (16+) ಮತ್ತು ಎ (ಅಡಲ್ಟ್) ಎಂದು ವರ್ಗೀಕರಣ ಮಾಡಲಾಗಿದೆ. ಇದಕ್ಕಾಗಿ ಮೊಬೈಲ್‌ಗಳಲ್ಲಿ ಪೇರೆಂಟಲ್ ಕಂಟ್ರೋಲ್ ಅಳವಡಿಸಿಕೊಂಡು, ಕಾರ್ಯಕ್ರಮಗಳನ್ನು ಲಾಕ್ ಮಾಡಬೇಕು.
ಇನ್ನು ಮುಂದೆ ಸರಳವಾಗಿ ನ್ಯೂಸ್ ವೆಬ್ಸೈಟ್ ಆರಂಭಿಸಲು ಸಾಧ್ಯವಿಲ್ಲ. ಇದಕ್ಕೂ ಕೇಂದ್ರ ಸರಕಾರ ನಿಯಮ ತಂದಿದೆ. ಪ್ರಸ್ ಕೌನ್ಸಿಲ್ ಆಫ್ ಇಂಡಿಯಾದ ಪತ್ರಿಕೋದ್ಯಮ ನೀತಿ ಸಂಹಿತೆಗಳ ಆಧಾರದಲ್ಲಿ ಆರಂಭಿಸಬಹುದು. ಇದಕ್ಕೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯಿಂದ ನೋಂದಣಿ ಮಾಡಿಸಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.