ಸೋನಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಬಿಜೆಪಿ ಸೇರ್ಪಡೆ
Team Udayavani, Nov 24, 2021, 6:20 PM IST
![1-dfdsf](https://www.udayavani.com/wp-content/uploads/2021/11/1-dfdsf-620x413.jpg)
![1-dfdsf](https://www.udayavani.com/wp-content/uploads/2021/11/1-dfdsf-620x413.jpg)
ನವದೆಹಲಿ : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಕ್ಷೇತ್ರ ರಾಯ್ ಬರೇಲಿಯ ಬಂಡಾಯ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅವರು ಬುಧವಾರ ಬಿಜೆಪಿ ಸೇರಿದ್ದಾರೆ.
2022 ರ ವಿಧಾನಸಭಾ ಚುನಾವಣೆ ವೇಳೆ ಉತ್ತರಪ್ರದೇಶದಲ್ಲಿ ಕಳೆದುಹೋದ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಘಟನೆ ಭಾರಿ ಹಿನ್ನಡೆಯಾಗಿದೆ.
ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಲಕ್ನೋದಲ್ಲಿ ಅದಿತಿ ಸಿಂಗ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಇದೆ ವೇಳೆ ಅಜಮ್ ಗಢದ ಬಿಎಸ್ ಪಿ ಶಾಸಕಿ ವಂದನಾ ಸಿಂಹ ಕೂಡ ಬಿಜೆಪಿಗೆ ಸೇರ್ಪಡೆಯಾದರು.
ರಾಯ್ ಬರೇಲಿ ಕ್ಷೇತ್ರದಲ್ಲಿ ಅದಿತಿ ಸಿಂಗ್ ಅವರ ಕುಟುಂಬ ಸುಮಾರು ಮೂರು ದಶಕಗಳಿಂದ ತನ್ನ ಹಿಡಿತವನ್ನು ಹೊಂದಿದ್ದು,ಆಕೆಯ ತಂದೆ, ದಿವಂಗತ ಅಖಿಲೇಶ್ ಸಿಂಗ್, 1993 ರಿಂದ 2007 ರವರೆಗೆ ಕಾಂಗ್ರೆಸ್ ಶಾಸಕರಾಗಿದ್ದರು, 2007 ರಲ್ಲಿ ಕಾಂಗ್ರೆಸ್ ಅವರನ್ನು ಉಚ್ಚಾಟಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2012 ರಲ್ಲಿ ಪೀಸ್ ಪಾರ್ಟಿಯಿಂದ ಗೆಲುವು ಸಾಧಿಸಿದ್ದರು. 2017 ರಲ್ಲಿ ಅದಿತಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಗಮನ ಸೆಳೆದಿದ್ದರು.