ಮುಂದುವರಿದ ಬೆಂಗಳೂರು ಜಯದ ಓಟ; ಸತತ 4ನೇ ಪಂದ್ಯ ಸೋತ ಮುಂಬೈ
ಇಂಡಿಯನ್ಸ್, ಮುಂದುವರಿದ ದುರದೃಷ್ಟ!
Team Udayavani, Apr 9, 2022, 11:22 PM IST
ಪುಣೆ: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ಶನಿವಾರದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಈ ಗೆಲುವಿನಿಂದ ಆರ್‌ಸಿಬಿ ತಾನಾಡಿದ ನಾಲ್ಕು ಪಂದ್ಯಗಳಿಂದ ಮೂರರಲ್ಲಿ ಜಯ ಸಾಧಿಸಿ ಆರಂಕದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಆರಂಭಿಕ ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿ ಅವರ ಭರ್ಜರಿ ಆಟದಿಂದಾಗಿ ಆರ್‌ಸಿಬಿ ತಂಡವು 18.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ಮುಂಬೈ ತಂಡ 6 ವಿಕೆಟಗೆ 151 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು.
ಮುಂಬೈಗೆ ಸತತ 4ನೇ ಸೋಲು
ಮುಂಬೈ ತಂಡದ ನೀರಸ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರಿದಿದೆ. ಬ್ಯಾಟಿಂಗ್, ಬೌಲಿಂಗ್ ವೈಫಲ್ಯ ಅನುಭವಿಸಿದ ಮುಂಬೈಗಿದು ಈ ಋತುವಿನ ಐಪಿಎಲ್‌ನಲ್ಲಿ ಸತತ ನಾಲ್ಕನೇ ಸೋಲು ಆಗಿದೆ. ಐಪಿಎಲ್ ಪ್ರಶಸ್ತಿಯನ್ನು ಹಲವು ಬಾರಿ ಗೆದ್ದಿರುವ ಮುಂಬೈ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಮುಂಬೈಯಂತೆ ಚೆನ್ನೈ ಕೂಡ ನೀರಸವಾಗಿ ಆಡುತ್ತಿದೆ. ಚೆನ್ನೈ ಕೂಡ ಹಲವು ಬಾರಿ ಈ ಪ್ರಶಸ್ತಿಯನ್ನು ಗೆದ್ದಿರುವ ತಂಡ. ಆದರೆ ಈ ಬಾರಿ ಚೆನ್ನೈ ಕೂಡ ಸತತ ನಾಲ್ಕನೇ ಬಾರಿ ಸೋಲನ್ನು ಕಂಡಿದೆ.
ಗೆಲ್ಲಲು ಸುಲಭ ಸವಾಲು ಪಡೆದ ಆರ್‌ಸಿಬಿ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ನಾಯಕ ಫಾ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ಮೊದಲ ವಿಕೆಟಿಗೆ 8.1 ಓವರ್‌ಗಳಲ್ಲಿ 50 ರನ್ ಪೇರಿಸಿದರು. ಈ ಹಂತದಲ್ಲಿ 16 ರನ್ ಗಳಿಸಿದ ಪ್ಲೆಸಿಸ್ ಅವರ ವಿಕೆಟನ್ನು ಉನಾದ್ಕತ್ ಹಾರಿಸಿದರು.
ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿ ಬಿರುಸಿನ ಆಟವಾಡಿ ಮುಂಬೈ ಬೌಲರ್‌ಗಳನ್ನು ದಂಡಿಸಿದರು. ದ್ವಿತೀಯ ವಿಕೆಟಿಗೆ ಸುಮಾರು 9 ಓವರ್ ಆಡಿದ ಅವರಿಬ್ಬರು 80 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವು ಖಚಿತಪಡಿಸಿದರು. ರಾವತ್ ಈ ಜೋಡಿ ಮುರಿದಾಗ ತಂಡ ಗೆಲ್ಲಲು 22 ರನ್ ಬೇಕಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಕೊಹ್ಲಿ ಔಟಾದರೂ ಮ್ಯಾಕ್ಸ್‌ವೆಲ್ ಎರಡು ಬೌಂಡರಿ ಬಾರಿಸಿ ತಂಡದ ಜಯ ಸಾರಿದರು.
ಆರು ಭರ್ಜರಿ ಸಿಕ್ಸರ್ ಬಾರಿಸಿದ್ದ ರಾವತ್ ಒಟ್ಟಾರೆ 47 ಎಸೆತ ಎದುರಿಸಿದ್ದು 2 ಬೌಂಡರಿ ಸಹಿತ 66 ರನ್ ಗಳಿಸಿದರೆ ಕೊಹ್ಲಿ 36 ಎಸೆತಗಳಿಂದ 48 ರನ್ ಹೊಡೆದರು. 5 ಬೌಂಡರಿ ಬಾರಿಸಿದ್ದರು.
ಈ ಮೊದಲು ಆರ್‌ಸಿಬಿ ವಿರುದ್ಧ ತೀವ್ರ ಕುಸಿತದ ಬಳಿಕ ಚೇತರಿಸಿಕೊಂಡ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಸಾಹಸದಿಂದ 6 ವಿಕೆಟಿಗೆ 151 ರನ್ ಪೇರಿಸುವಲ್ಲಿ ಯಶಸ್ವಿಯಾಗಿದೆ. ಮುಂಬೈ ಪವರ್ ಪ್ಲೇ ಬಳಿಕ ಕುಸಿಯುತ್ತ ಹೋದರೆ, ಆರ್‌ಸಿಬಿ ಬೌಲಿಂಗ್ ಡೆತ್ ಓವರ್‌ಗಳಲ್ಲಿ ಚೆಲ್ಲಾಪಿಲ್ಲಿಯಾಯಿತು.
ಡೆತ್ ಓವರ್‌ಗಳಲ್ಲಿ ಸಿಡಿದು ನಿಂತ ಸೂರ್ಯಕುಮಾರ್ ಮುಂಬೈ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಲು ಯಸ್ವಿಯಾದರು. ಸೂರ್ಯಕುಮಾರ್ 37 ಎಸೆತಗಳಿಂದ ಅಜೇಯ 68 ರನ್ ಬಾರಿಸಿದರು. 6 ಪ್ರಚಂಡ ಸಿಕ್ಸರ್, 5 ಬೌಂಡರಿ ಮೂಲಕ ಸಿಡಿದು ನಿಂತರು. ಇದು ಅವರ ಸತತ 2ನೇ ಅರ್ಧ ಶತಕ.
ಸೂರ್ಯಕುಮಾರ್‌ಗೆ ಜೈದೇವ್ ಉನಾದ್ಕತ್ ಉತ್ತಮ ಬೆಂಬಲ ನೀಡಿದರು (ಆಜೇಯ 13). ಈ ಜೋಡಿ ಮುರಿಯದ 7ನೇ ವಿಕೆಟಿಗೆ 41 ಎಸೆತಗಳಿಂದ 72 ರನ್ ರಾಶಿ ಹಾಕಿತು. ಡೆತ್ ಓವರ್‌ಗಳಲ್ಲಿ ಆರ್‌ಸಿಬಿಗೆ ಒಂದೇ ಒಂದು ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ.
ಪವರ್ ಪ್ಲೇಯಲ್ಲಿ ನೋಲಾಸ್ 49 ರನ್ ಮಾಡಿದ ಮುಂಬೈ, ಮಿಡ್ಲ್ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 43 ರನ್ ಗಳಿಸಿತ್ತು. ಡೆತ್ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 59 ರನ್ ಬಾರಿಸಿ ಪಂದ್ಯಕ್ಕೆ ಮರಳಿತು. ಸೂರ್ಯಕುಮಾರ್ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿದರು.
ಪವರ್ ಪ್ಲೇ ಯಶಸ್ಸು
ಪವರ್ ಪ್ಲೇ ತನಕ ಮುಂಬೈ ಬ್ಯಾಟಿಂಗ್ ಚೆನ್ನಾಗಿಯೇ ಇತ್ತು. ಆದರೆ ಅನಂತರ ಒಮ್ಮೆಲೇ ಪವರ್ ಕಳೆದುಕೊಂಡಿತು. ಒಂದರ ಹಿಂದೊಂದರಂತೆ ವಿಕೆಟ್ ಉರುಳುತ್ತ ಹೋದವು.
ರೋಹಿತ್ ಶರ್ಮ-ಇಶಾನ್ ಕಿಶನ್ ಸೇರಿಕೊಂಡು ಪವರ್ ಪ್ಲೇ ಅವಧಿಯನ್ನು ಭರವಸೆಯಿಂದಲೇ ನಿಭಾಯಿಸಿದರು. ವಿಕೆಟ್ ನಷ್ಟವಿಲ್ಲದೆ 49 ರನ್ ಒಟ್ಟುಗೂಡಿತು. ವಿಲ್ಲಿ, ಸಿರಾಜ್, ಹಸರಂಗ ಮತ್ತು ಆಕಾಶ್ ದೀಪ್ ಈ ಜೋಡಿಯನ್ನು ಬೇರ್ಪಡಿಸಲು ವಿಫಲರಾದರು. ಇವರಲ್ಲಿ ಹಸರಂಗ ತುಸು ಹೆಚ್ಚೇ ದಂಡಿಸಿಕೊಂಡರು.
ಪವರ್ ಪ್ಲೇ ಮುಗಿದೊಡನೆ ಹರ್ಷಲ್ ಪಟೇಲ್ ದಾಳಿಗೆ ಇಳಿದರು. ದ್ವಿತೀಯ ಎಸೆತದಲ್ಲೇ ರೋಹಿತ್ ಶರ್ಮ ಅವರನ್ನು ಕಾಟ್ ಆ್ಯಂಡ್ ಬೌಲ್ಡ್ ಮೂಲಕ ವಾಪಸ್ ಕಳುಹಿಸಿದರು. ರೋಹಿತ್ ಗಳಿಕೆ 15 ಎಸೆತಗಳಿಂದ 26 ರನ್ (4 ಬೌಂಡರಿ, 1 ಸಿಕ್ಸರ್).
9ನೇ ಓವರ್‌ನಲ್ಲಿ ಹಸರಂಗ ದ್ವಿತೀಯ ಬ್ರೇಕ್ ಒದಗಿಸಿದರು. “ಮರಿ ಎಬಿಡಿ’ ಡಿವಾಲ್ಡ್ (8) ಬ್ರೇವಿಸ್ ಲೆಗ್ ಬಿಫೋರ್ ಬಲೆಗೆ ಬಿದ್ದರು. ಅನಂತರದ ಓವರ್‌ನಲ್ಲಿ ಆಕಾಶ್ ದೀಪ್ ಮುಂಬೈಗೆ ಬಲವಾದ ಆಘಾತವಿಕ್ಕಿದರು. ದ್ವಿತೀಯ ಎಸೆತದಲ್ಲಿ ಇಶಾನ್ ಕಿಶನ್ ವಿಕೆಟ್ ಕಿತ್ತರು. 5ನೇ ಎಸೆತದಲ್ಲಿ ತಿಲಕ್ ವರ್ಮ ರನೌಟಾದರು. ರೋಹಿತ್ ಅವರಂತೆ ಇಶಾನ್ ಕಿಶನ್ ಗಳಿಕೆಯೂ 26 ರನ್ (28 ಎಸೆತ, 3 ಬೌಂಡರಿ). ಹಿಂದಿನ ಪಂದ್ಯಗಳಲ್ಲಿ ಮಿಂಚಿದ ತಿಲಕ್ ಇಲ್ಲಿ ಖಾತೆ ತೆರೆಯುವ ಮೊದಲೇ ರನೌಟ್ ಸಂಕಟಕ್ಕೆ ಸಿಲುಕಿದರು. ಮ್ಯಾಕ್ಸ್‌ವೆಲ್ ಅವರ ಡೈವಿಂಗ್ ಹಿಟ್ ಇಲ್ಲಿ ಮ್ಯಾಜಿಕ್ ಮಾಡಿತ್ತು. 10 ಓವರ್ ಮುಕ್ತಾಯಕ್ಕೆ ಮುಂಬೈ 62 ರನ್ನಿಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಕೈರನ್ ಪೊಲಾರ್ಡ್ ಅವರನ್ನು ಗೋಲ್ಡನ್ ಡಕ್‌ಗೆ ಕೆಡವಿದ ಹಸರಂಗ ಆರ್‌ಸಿಬಿಗೆ ಬಿಗ್ ವಿಕೆಟ್ ಒಂದನ್ನು ತಂದಿತ್ತರು. ಮೊದಲ ಸಲ ಆಡಲಿಳಿದ ರಮಣ್‌ದೀಪ್ ಕ್ಲಿಕ್ ಆಗಲಿಲ್ಲ. ಆರೇ ರನ್ನಿಗೆ ಆಟ ಮುಗಿಸಿದರು. 15 ಓವರ್ ಮುಕ್ತಾಯಕ್ಕೆ ಮುಂಬೈ 92 ರನ್ನಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಟದಲ್ಲಿತ್ತು. ಈ ಹಂತದಲ್ಲಿ ಜತೆಗೂಡಿದ ಸೂರ್ಯಕುಮಾರ್ ಯಾದವ್-ಜೈದೇವ್ ಉನಾದ್ಕತ್ ಸೇರಿಕೊಂಡು ತಂಡವನ್ನು ದೊಡ್ಡ ಕುಸಿತದಿಂದ ಪಾರುಮಾಡಿದರು.
ಆರ್‌ಸಿಬಿ ಬೌಲಿಂಗ್ ಆಕ್ರಮಣದ ವೇಳೆ ಮೊಹಮ್ಮದ್ ಸಿರಾಜ್ ದುಬಾರಿಯಾಗಿ ಗೋಚರಿಸಿದರು. ಇವರ 4 ಓವರ್‌ನಲ್ಲಿ 51 ರನ್ ಸೋರಿ ಹೋಯಿತು.
ಡೇವಿಡ್ ವಿಲ್ಲಿ 2 ಓವರ್‌ಗಳಲ್ಲಿ ಕೇವಲ ಎಂಟೇ ರನ್ ನೀಡಿದರೂ ಇವರಿಗೆ ಪೂರ್ತಿ ಕೋಟಾ ನೀಡದಿದ್ದುದು ಅಚ್ಚರಿಯಾಗಿ ಕಂಡಿತು.
ಮುಂಬೈ ಇಂಡಿಯನ್ಸ್
ಇಶಾನ್ ಕಿಶನ್ ಸಿ ಸಿರಾಜ್ ಬಿ ಆಕಾಶ್ 26
ರೋಹಿತ್ ಶರ್ಮ ಸಿ ಮತ್ತು ಬಿ ಪಟೇಲ್ 26
ಡಿವಾಲ್ಡ್ ಬ್ರೇವಿಸ್ ಎಲ್‌ಬಿಡಬ್ಲ್ಯು ಹಸರಂಗ 8
ಸೂರ್ಯಕುಮಾರ್ ಯಾದವ್ ಔಟಾಗದೆ 68
ತಿಲಕ್ ವರ್ಮ ರನೌಟ್ 0
ಕೈರನ್ ಪೊಲಾರ್ಡ್ ಎಲ್‌ಬಿಡಬ್ಲ್ಯು 0
ರಮಣದೀಪ್ ಸಿಂಗ್ ಸಿ ಕಾರ್ತಿಕ್ ಬಿ ಪಟೇಲ್ 6
ಜೈದೇವ್ ಉನಾದ್ಕತ್ ಔಟಾಗದೆ 13
ಇತರ 4
ಒಟ್ಟು (6 ವಿಕೆಟಿಗೆ) 151
ವಿಕೆಟ್ ಪತನ: 1-50, 2-60, 3-62, 4-62, 5-62, 6-79.
ಬೌಲಿಂಗ್:
ಡೆವೀಡ್ ವಿಲ್ಲಿ 2-0-8-0
ಮೊಹಮ್ಮದ್ ಸಿರಾಜ್ 4-0-51-0
ವನಿಂದು ಹಸರಂಗ 4-0-28-2
ಆಕಾಶ್‌ದೀಪ್ 4-1-21-1
ಹರ್ಷಲ್ ಪಟೇಲ್ 4-0-23-2
ಶಬಾಜ್ ಅಹ್ಮದ್ 2-0-19-0
ರಾಯಲ್ ಚಾಲೆಂಜರ್ ಬೆಂಗಳೂರು
ಫಾ ಡು ಪ್ಲೆಸಿಸ್ ಸಿ ಯಾದವ್ ಬಿ ಉನಾದ್ಕತ್ 16
ಅನುಜ್ ರಾವತ್ ರನೌಟ್ 66
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಬ್ರೆವಿಸ್ 48
ದಿನೇಶ್ ಕಾರ್ತಿಕ್ ಔಟಾಗದೆ 7
ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 8
ಇತರ: 7
ಒಟ್ಟು (18.3 ಓವರ್‌ಗಳಲ್ಲಿ 3 ವಿಕೆಟಿಗೆ) 152
ವಿಕೆಟ್ ಪತನ: 1-50, 2-130, 3-144
ಬೌಲಿಂಗ್:
ಬಾಸಿಲ್ ಥಂಪಿ 4-1-29-0
ಜಯದೇವ್ ಉನಾದ್ಕತ್ 4-0-30-1
ಜಸ್‌ಪ್ರೀತ್ ಬುಮ್ರಾ 4-0-31-0
ಮುರುಗನ್ ಅಶ್ವಿನ್ 3-0-26-0
ಕೈರನ್ ಪೋಲಾರ್ಡ್ 3-0-24-0
ಡಿವಾಲ್ಡ್ ಬ್ರೆವಿಸ್ 0.3-0-8-1
ಪಂದ್ಯಶ್ರೇಷ್ಠ: ಅನುಜ್ ರಾವತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.