RCB ಗೆ ಬೇಕಿದೆ ಸತತ ಎರಡು ಗೆಲುವು
ಇಂದು ಹೈದರಾಬಾದ್ ಎದುರಾಳಿ ಗುಜರಾತ್ ವಿರುದ್ಧ ಕೊನೆಯ ಲೀಗ್ ಪಂದ್ಯ
Team Udayavani, May 18, 2023, 7:18 AM IST
ಹೈದರಾಬಾದ್: ಇನ್ನೇನು ನಿರ್ಗಮನದ ಬಾಗಿಲಿಗೆ ಬಂತು ಎನ್ನುವಾಗಲೇ ಆರ್‌ಸಿಬಿಗೆ ಪುನರ್ಜನ್ಮ ವೊಂದು ಲಭಿಸಿದೆ. ಪ್ಲೇ ಆಫ್ ರೇಸ್‌ನಲ್ಲಿ ತಾನೂ ಇದ್ದೇನೆ ಎಂಬ ಸೂಚನೆಯೊಂದನ್ನು ರವಾನಿಸಿದೆ. ಇದಕ್ಕಾಗಿ ಮಾಡಬೇಕಾದುದು ಇಷ್ಟೇ- ಮುಂದಿ ನೆರಡೂ ಪಂದ್ಯಗಳನ್ನು ಗೆಲ್ಲುವುದು. ಆಗ ದ್ವಿತೀಯ ಸ್ಥಾನಕ್ಕೆ ಲಗ್ಗೆ ಹಾಕುವ ಅವಕಾಶವೊಂದು ಬೆಂಗಳೂರು ತಂಡಕ್ಕೆ ಲಭಿಸಲಿದೆ. ಆದರೆ ಒಂದನ್ನು ಸೋತರೂ ಮುನ್ನಡೆಯ ಹಾದಿ ಕೊನೆಗೊಳ್ಳಲಿದೆ.
ಈ ನಿಟ್ಟಿನಲ್ಲಿ ಗುರುವಾರ ಸನ್‌ರೈಸರ್ ಹೈದರಾಬಾದ್ ವಿರುದ್ಧ ಮಹತ್ವದ ಪಂದ್ಯವೊಂದನ್ನು ಆರ್‌ಸಿಬಿ ಆಡಲಿದೆ. ಹೈದರಾಬಾದ್ ಈಗಾಗಲೇ ಹೊರಬಿದ್ದಿರುವ ತಂಡ. ಇಲ್ಲಿ ಗೆದ್ದರೆ ಐಡನ್ ಮಾರ್ಕ್‌ರಮ್ ಪಡೆಗೆ ಯಾವ ಲಾಭವೂ ಇಲ್ಲ. ಆದರೆ ತವರಿನ ಪಂದ್ಯವಾದ್ದರಿಂದ ಒಂದಿಷ್ಟು ಗೌರವ ಸಂಪಾದಿಸಬಹುದು. ಹಾಗೆಯೇ ಆರ್‌ಸಿಬಿ ದಾರಿಗೆ ಮುಳ್ಳಾಗಬಹುದು.
ಆರ್‌ಸಿಬಿಯ ಕೊನೆಯ ಲೀಗ್ ಎದುರಾಳಿ, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್. ಈ ಪಂದ್ಯ ಮೇ 21ರಂದು “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಹೀಗೆ, ಈಗಾಗಲೇ ಕೂಟದಿಂದ ನಿರ್ಗ ಮಿಸಿದ ಹಾಗೂ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದ ತಂಡಗಳೆದುರು ರಾಯಲ್ ಚಾಲೆಂಜರ್ ಅದೃಷ್ಟ ಪರೀಕ್ಷೆಗೆ ಇಳಿಯಬೇಕಿದೆ. ಆರ್‌ಸಿಬಿ ಮುನ್ನಡೆಗೆ ಉಳಿದ ಪಂದ್ಯಗಳ ಫಲಿತಾಂಶವೂ ನಿರ್ಣಾಯಕವಾಗಲಿದೆ. ಆದರೆ ಉಳಿದವರ ಹಂಗಿನಿಂದ ದೂರ ವಾಗಬೇಕಾದರೆ ಎರಡನ್ನೂ ಗೆದ್ದು ಬರುವುದು ಸುರಕ್ಷಿತ.
ಆರ್‌ಸಿಬಿಗೆ ವರದಾನ
ಅಸ್ಥಿರ ನಿರ್ವಹಣೆ ನೀಡುತ್ತಲೇ ಬಂದ ಆರ್‌ಸಿಬಿಗೆ ವರವಾಗಿ ಪರಿಣಮಿಸಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಾಧಿ ಸಿದ ಅಮೋಘ ಗೆಲುವು. ಇದನ್ನು ಡು ಪ್ಲೆಸಿಸ್ ಪಡೆ 112 ರನ್ನುಗಳ ಬೃಹತ್ ಅಂತರದಿಂದ ಜಯಿಸಿತ್ತು. ಆರ್‌ಸಿಬಿಯ 171ಕ್ಕೆ ಉತ್ತರವಾಗಿ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದ್ದ ಸಂಜು ಸ್ಯಾಮ್ಸನ್ ಬಳಗ 10.3 ಓವರ್‌ಗಳಲ್ಲಿ ಜುಜುಬಿ 59ಕ್ಕೆ ಉದುರಿತ್ತು. ಇದರಿಂದ ಮೈನಸ್‌ನಲ್ಲಿದ್ದ ಆರ್‌ಸಿಬಿಯ ರನ್‌ರೇಟ್ ಪ್ಲಸ್‌ಗೆ ಏರಿತ್ತು.
ಹೈದರಾಬಾದ್ ವಿರುದ್ಧವೂ ಬೆಂಗಳೂರು ಇದೇ ಜೋಶ್ ತೋರಬೇಕಿದೆ. ಇದು ಪ್ರಸಕ್ತ ಋತುವಿನಲ್ಲಿ ಇತ್ತಂಡಗಳ ನಡುವಿನ ಮೊದಲ ಮುಖಾಮುಖೀ.
ಇಂದಿಗೂ ಆರ್‌ಸಿಬಿ ಕೇವಲ ಮೂವರು ಬ್ಯಾಟರ್‌ಗಳನ್ನು ನೆಚ್ಚಿಕೊಂಡಿ ರುವ ತಂಡ. ಡು ಪ್ಲೆಸಿಸ್, ಕೊಹ್ಲಿ, ಮ್ಯಾಕ್ಸ್ ವೆಲ್ ಬಿಟ್ಟರೆ ಬೇರೆಯವರು ದೊಡ್ಡ ಮೊತ್ತ ಪೇರಿಸಿದ ನಿದರ್ಶನ ಇಲ್ಲವೇ ಇಲ್ಲ ಎನ್ನಬಹುದು. ಈ ಮೂವರಲ್ಲಿ ಕ್ರೀಸ್ ಆಕ್ರಮಿಸಿಕೊಂಡು ಬ್ಯಾಟ್ ಬೀಸುವುದು ಇಬ್ಬರು ಮಾತ್ರ. ಸದ್ಯ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಸರದಿ. ಇವರಿಬ್ಬರೂ ಸತತ 2 ಪಂದ್ಯಗಳಲ್ಲಿ ಅರ್ಧ ಶತಕ ಹೊಡೆದಿದ್ದಾರೆ. ಕೊಹ್ಲಿ ಸತತ 2 ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ. ಮುಂಬೈ ವಿರುದ್ಧ ಒಂದು, ರಾಜಸ್ಥಾನ್ ವಿರುದ್ಧ 18 ರನ್ ಮಾಡಿ ನಿರ್ಗಮಿಸಿದ್ದಾರೆ. ಈ ಮೂವರು ಒಟ್ಟಿಗೇ ಸಿಡಿದು ನಿಲ್ಲುವುದನ್ನು ಕಾಣಬೇಕಿದೆ.
ನಾಯಕ ಡು ಪ್ಲೆಸಿಸ್ 12 ಪಂದ್ಯ ಗಳಿಂದ ಸರ್ವಾಧಿಕ 631 ರನ್ ಪೇರಿ ಸಿದ ಹೆಗ್ಗಳಿಕೆ ಹೊಂದಿದ್ದಾರೆ. ಕೊಹ್ಲಿ ಖಾತೆಯಲ್ಲಿ 438 ರನ್ ಇದೆ. ಮ್ಯಾಕ್ಸ್ ವೆಲ್ ಮಿಂಚಿನ ಗತಿಯ ಆಟದ ಮೂಲಕ 5 ಅರ್ಧ ಶತಕ ಬಾರಿಸಿದ್ದಾರೆ.
ಆದರೆ ಬೌಲಿಂಗ್‌ನಲ್ಲಿ ಅಷ್ಟೇನೂ ಘಾತಕವಾಗಿಲ್ಲದ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು ಅವರದೇ ಜೈಪುರ ಅಂಗಳದಲ್ಲಿ 59 ರನ್ನಿಗೆ ಹೊಡೆದುರುಳಿಸಿದ್ದು ಅಚ್ಚರಿಯಾಗಿ ಕಾಣುತ್ತದೆ. ಪಾರ್ನೆಲ್,ಬ್ರೇಸ್‌ವೆಲ್, ಕಣ್ì ಶರ್ಮ, ಸಿರಾಜ್, ಮ್ಯಾಕ್ಸ್ ವೆಲ್ ಸೇರಿಕೊಂಡು ರಾಜಸ್ಥಾನಕ್ಕೆ ಬಿಸಿ ಮುಟ್ಟಿಸಿದರು. ಇದರಿಂದ ಸತತ 2 ಪಂದ್ಯಗಳಲ್ಲಿ ಸೋಲುಂಡಿದ್ದ ಆರ್‌ಸಿಬಿ ಗೆಲುವಿನ ಟ್ರ್ಯಾಕ್ ಏರಿತು. ಮುಂದಿ ನೆರಡು ಪಂದ್ಯಗಳಲ್ಲೂ ಇದೇ ಲಯದಲ್ಲಿ ಸಾಗಬೇಕಿದೆ.
ಹೈದರಾಬಾದ್ ಎರಡೂ ವಿಭಾಗ ಗಳಲ್ಲಿ ಸ್ಟಾರ್ ಆಟಗಾರರನ್ನು ಹೊಂದಿದ ತಂಡ. ಆದರೆ ಯಾರಿಂದಲೂ ಛಾತಿಗೆ ತಕ್ಕ ಪ್ರದರ್ಶನ ಹೊರಹೊಮ್ಮಲಿಲ್ಲ. ಐಡನ್ ಮಾರ್ಕ್‌ರಮ್ ನಾಯಕತ್ವವೂ ಪರಿಣಾಮಕಾರಿ ಆಗಿರಲಿಲ್ಲ. ಹೀಗಾಗಿ ಯಾವ ಫಲಿತಾಂಶವನ್ನು ಕಾಣಬೇಕಿತ್ತೋ ಅದನ್ನೇ ಕಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.