BJPಯ ಮೊದಲನೇ ಮತ್ತು ಎರಡನೇ ಪಟ್ಟಿ ಘೋಷಣೆಯಾದ ಬಳಿಕ ಬಂಡಾಯ, ರಾಜೀನಾಮೆ, ಪಕ್ಷಾಂತರ…


Team Udayavani, Apr 14, 2023, 8:06 AM IST

bjp flag

ಲಕ್ಷ್ಮಣ ಸವದಿ, ನೆಹರೂ ಓಲೇಕಾರ, ಎಂ.ಪಿ.ಕುಮಾರಸ್ವಾಮಿಯಂಥ ನಾಯಕರೇ ಪಕ್ಷ ಬಿಟ್ಟು ಬೇರೊಂದು ಪಕ್ಷ ಕೈಹಿಡಿಯಲು ಮುಂದಾಗಿದ್ದಾರೆ. ಹಾಗಾದರೆ, ಯಾವ ಯಾವ ಕ್ಷೇತ್ರಗಳಲ್ಲಿ ಬಂಡಾಯ ಹೆಚ್ಚಾಗಿದೆ? ಪಕ್ಷಾಂತರ ಮಾಡುತ್ತಿರುವವರು ಎಷ್ಟು ಮಂದಿ?

ಬಿಜೆಪಿಗೆ ರಾಜೀನಾಮೆ : ಲಕ್ಷ್ಮಣ ಸವದಿ, ಅಥಣಿ

ಅಥಣಿ ಟಿಕೆಟ್‌ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ, ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರು, ಶುಕ್ರವಾರ ಬೆಂಗಳೂರಿನಲ್ಲಿ ಬಿಜೆಪಿ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ಸಭಾಪತಿಯವರನ್ನು ಭೇಟಿ ಮಾಡಿ ಪರಿಷತ್‌ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದೇನೆ ಎಂದು ಘೋಷಿಸಿದ್ದಾರೆ. ಪಕ್ಷದ ಚೌಕಟ್ಟಿನಿಂದ ಹೊರ ಬಂದ ಮೇಲೆ ಜನಾಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದರು. ಈ ಮಧ್ಯೆ, ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಬೇಡ ಎಂದು ಮನವಿ ಮಾಡಲು ಸವದಿ ನಿವಾಸಕ್ಕೆ ಬಂದಿದ್ದ ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ| ನೇರ್ಲಿ ಅವರನ್ನು ಸವದಿ ಅಭಿಮಾನಿಗಳು ಘೇರಾವ್‌ ಹಾಕಿ ನಿಂದಿಸಿದ್ದಲ್ಲದೆ, ಅವರ ಕಾರನ್ನು ಗುದ್ದಿ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಪರಿಸ್ಥಿತಿ ಬಿಗಡಾಯಿಸುವುದನ್ನು ಮನಗಂಡ ಲಕ್ಷ್ಮಣ ಸವದಿ ತಕ್ಷಣ ಡಾ| ನೇರ್ಲಿ ಅವರನ್ನು ಸುರಕ್ಷಿತವಾಗಿ ಹೊರ ತಂದು ಅವರ ಕಾರಿನಲ್ಲಿ ಹತ್ತಿಸಿ ಕಳುಹಿಸಿದ್ದಾರೆ. ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರೂ ಸವದಿಯವರ ಮನವೊಲಿಕೆಗೆ ಮುಂದಾದರೂ ಫ‌ಲ ನೀಡಲಿಲ್ಲ. ಈ ಮಧ್ಯೆ, ಸವದಿಯವರಿಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಆಹ್ವಾನ ನೀಡಿವೆ. ವಿಧಾನಪರಿಷತ್‌ ಪ್ರತಿಪಕ್ಷ ಸದಸ್ಯ ಬಿ.ಕೆ.ಹರಿಪ್ರಸಾದ್‌ ನೇರವಾಗಿಯೇ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.

ಜೆಡಿಎಸ್‌ನತ್ತ ಪಯಣ?: ಎನ್‌.ಆರ್‌.ಸಂತೋಷ್‌, ಅರಸೀಕೆರೆ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಂಬಂಧಿ, ಅರಸೀಕೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎನ್‌.ಆರ್‌.ಸಂತೋಷ್‌, ಜೆಡಿಎಸ್‌ನತ್ತ ವಾಲುವ ಸಾಧ್ಯತೆ ಇದೆ. ಕುಟುಂಬ ಸದಸ್ಯರು, ಕಾರ್ಯಕರ್ತರ ಸಭೆ ನಡೆಸಿದ ಸಂತೋಷ್‌ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿದರು. ಅಲ್ಲದೆ, ಈಗೀಗಲೇ ಕ್ಷೇತ್ರಾದ್ಯಂತ ಓಡಾಡಿ ಪಕ್ಷ ಕಟ್ಟಿದ್ದೇನೆ. ಚುನಾವಣೆಗೆ ಸಿದ್ಧತೆ ನಡೆಸಿದ್ದೇನೆ. ಹೀಗಾಗಿ, ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು. ಏ.17ರಂದು ನಾಮಪತ್ರ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ. ಮೂಲಗಳ ಪ್ರಕಾರ, ಸಂತೋಷ್‌ ಜೆಡಿಎಸ್‌ನತ್ತ ವಾಲುವ ಸಾಧ್ಯತೆ ಇದೆ. ಇಲ್ಲಿ ಶಾಸಕರಾಗಿದ್ದ ಶಿವಲಿಂಗೇಗೌಡರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಹೋಗಿದ್ದು, ಪಕ್ಷಕ್ಕೆ ಬಲಿಷ್ಠ ಅಭ್ಯರ್ಥಿಯ ಕೊರತೆ ಇದೆ. ಹೀಗಾಗಿ, ಜೆಡಿಎಸ್‌ನಿಂದ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಸಿ.ಟಿ.ರವಿ ವಿರುದ್ಧ ಕೆಂಡ: ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ

ಮೂಡಿಗೆರೆ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್‌ ಕೈತಪ್ಪುತ್ತಿದ್ದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಗೆ ತೆರಳಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಟಿಕೆಟ್‌ ಕೈತಪ್ಪಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಬಂಡಾಯವಾಗಿ ಸ್ಪರ್ಧೆ ಮಾಡುವುದಾಗಿ ಎಂ.ಪಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ರಾಜೀನಾಮೆ, ಸ್ಪರ್ಧೆ ಖಚಿತ: ಸೊಗಡು ಶಿವಣ್ಣ, ತುಮಕೂರು ನಗರ

ತುಮಕೂರು ನಗರ ಟಿಕೆಟ್‌ ಕೈತಪ್ಪಿರುವ ಹಿನ್ನೆಲೆಯಲ್ಲಿ  ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಸೊಗಡು ಶಿವಣ್ಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಅವರಿಗೆ ಇ-ಮೇಲ್‌ ಮೂಲಕ ಪತ್ರ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಶತಃಸಿದ್ಧ ಎಂದೂ ಘೋಷಿಸಿದ್ದಾರೆ. ಏ.20ರ ಒಳಗೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದಿರುವ ಅವರು, ಪಕ್ಷೇತರನಾಗಿ ಸ್ಪರ್ಧಿಸಬೇಕೇ? ಅಥವಾ ಯಾವುದಾದರೂ ಪಕ್ಷಕ್ಕೆ ಸೇರಬೇಕೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಕಟಿಸುತ್ತೇನೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಜೆಡಿಎಸ್‌ ಸೇರುವ ಬಗ್ಗೆ ಕಾದು ನೋಡಿ ಎಂದಷ್ಟೇ ಉತ್ತರಿಸಿದ್ದಾರೆ.

ತೆಲೆ ಪಕ್ಷಕ್ಕೆ ನೆಹರೂ ಓಲೇಕಾರ:ನೆಹರೂ ಓಲೇಕಾರ, ಹಾವೇರಿ

ಹಾವೇರಿ ಮೀಸಲು ಕ್ಷೇತ್ರದಿಂದ ನೆಹರೂ ಓಲೇಕಾರ ಅವರಿಗೆ ಟಿಕೆಟ್‌ ಕೈತಪ್ಪಿದ್ದು, ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜತೆಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಹಾವೇರಿಯ ಸಿದ್ದಪ್ಪ ವೃತ್ತದಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆಗೆ ನಡೆಸಿದ ನೆಹರೂ ಓಲೇಕಾರ, ಟಿಕೆಟ್‌ ತಪ್ಪಲು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕಾರಣ ಎಂದು ಆರೋಪಿಸಿದರು. ಅಲ್ಲದೆ. ಪಕ್ಷಕ್ಕೆ ರಾಜೀನಾಮೆ ನೀಡಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಜೆಡಿಎಸ್‌ಗೆ ಹೋಗುತ್ತೇನೆ ಎಂದರು. ನೆಹರು ಓಲೇಕಾರ ಅವರಿಗೆ ಟಿಕೆಟ್‌ ತಪ್ಪಿಸಿರುವುದನ್ನು ಖಂಡಿಸಿ ನಗರದ ಹೊಸಮನಿ ಸಿದ್ದಪ್ಪ ಸರ್ಕಲ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ನೂರಾರು ಬೆಂಬಲಿಗರು, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಭಾವಚಿತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ನತ್ತ ನಾಗಮಾರಪಳ್ಳಿ:ಸೂರ್ಯಕಾಂತ ನಾಗಮಾರಪಳ್ಳಿ, ಬೀದರ

ಬೀದರ ಕ್ಷೇತ್ರದಲ್ಲಿ ಹಿಂದುತ್ವವಾದಿ ಈಶ್ವರಸಿಂಗ್‌ ಠಾಕೂರ್‌ಗೆ ಬಿಜೆಪಿ ಟಿಕೆಟ್‌ ಒಲಿದಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿಗೆ ಟಿಕೆಟ್‌ ತಪ್ಪಿದೆ. ಹೀಗಾಗಿ ನಾಗಮಾರಪಳ್ಳಿ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಉಪಚುನಾವಣೆ ಸೇರಿ ಸತತ ಮೂರು ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಸೂರ್ಯಕಾಂತ್‌ಗೆ ಈ ಚುನಾವಣೆ ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕೆ “ಮಾಡು ಇಲ್ಲವೇ ಮಡಿ” ಎನ್ನುವಂತಾಗಿದೆ. ಹೀಗಾಗಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಜೆಡಿಎಸ್‌ ಸೇರ್ಪಡೆ ಕುರಿತು ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಜತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಏ.14ರಂದು ಬೆಂಬಲಿಗರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಘೋಷಿಸಿದ್ದಾರೆ. ಸದ್ಯ ಜೆಡಿಎಸ್‌ನಿಂದ ರಮೇಶ ಪಾಟೀಲ ಸೋಲಪುರ್‌ಗೆ ಟಿಕೆಟ್‌ ನೀಡಲಾಗಿದ್ದು, ಒಂದೊಮ್ಮೆ ನಾಗಮಾರಪಳ್ಳಿ ಪಕ್ಷಕ್ಕೆ ಸೇರಿದರೆ ಇಲ್ಲಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಇದೆ.

ರೆಡ್ಡಿ ಪಕ್ಷದಿಂದ ಸ್ಪರ್ಧೆ?: ಗೂಳಿಹಟ್ಟಿ ಶೇಖರ್‌, ಹೊಸದುರ್ಗ

ಬಿಜೆಪಿ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಗುರುವಾರ ರಾತ್ರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶಿರಸಿಯ ಕಚೇರಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದ್ದು, ಹೊಸದುರ್ಗ ಕ್ಷೇತ್ರದಲ್ಲಿ ಪಕ್ಷೇತರ ಅಥವಾ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಹೊಸದುರ್ಗ ಬಿಜೆಪಿ ಟಿಕೆಟ್‌ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್‌. ಲಿಂಗಮೂರ್ತಿ ಅವರಿಗೆ ನೀಡಿರುವ ಹಿನ್ನೆಲೆಯಲ್ಲಿ ಗೂಳಿಹಟ್ಟಿ ಶೇಖರ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈಗಾಗಲೇ ಜನಾರ್ದನ ರೆಡ್ಡಿ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಈ ನಡುವೆ ಗೂಳಿಹಟ್ಟಿ ಶೇಖರ್‌ ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ.

ಪಕ್ಷೇತರನಾಗಿ ಸ್ಪರ್ಧೆ: ಸುರೇಶಗೌಡ ಪಾಟೀಲ, ಬ್ಯಾಡಗಿ

ಬಿಜೆಪಿ ಟಿಕೆಟ್‌ ತಪ್ಪಿದ ಬೆನ್ನಲ್ಲೇ ಬಂಡಾಯದ ಬಾವುಟ ಹಾರಿಸಿರುವ ಬ್ಯಾಡಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಟಿಕೆಟ್‌ ಹಂಚಿಕೆ ಬದಲಾವಣೆ ಮಾಡುವಂತೆ ಏ.20ರವರೆಗೂ ವರಿಷ್ಠರಿಗೆ ಗಡುವು ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, 2008ರಲ್ಲಿ ಬ್ಯಾಡಗಿ ಮತಕ್ಷೇತ್ರದ ಶಾಸಕನಾಗಿ ಕಳಂಕರಹಿತ ಉತ್ತಮ ಆಡಳಿತ ನೀಡಿದ್ದೇನೆ. ಆದರೆ, 2013ರಲ್ಲಿ ಬಿಜೆಪಿ-ಕೆಜೆಪಿ ಗೊಂದಲದಲ್ಲಿ ನಾನು ಸ್ಪರ್ಧಿಸಲಿಲ್ಲ. ಬ್ಯಾಡಗಿ ಕ್ಷೇತ್ರದಲ್ಲಿ ಹಾಲಿ ಶಾಸಕರ ಕಾರ್ಯವೈಖರಿ ಸರಿ ಇಲ್ಲ. ಹೀಗಾಗಿ, ಅವರನ್ನು ಬದಲಾವಣೆ ಮಾಡಬೇಕು ಎಂದು ಅಗ್ರಹಿಸಿದ್ದಾರೆ.

ರಾಜೀನಾಮೆ ನಿರ್ಧಾರ: ಸೋಮನಗೌಡ ಪಾಟೀಲ, ಬಸವನಗೌಡ ಬಾಗೇವಾಡಿ

ಬಸವನಬಾಗೇವಾಡಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಸಿಗದ್ದರಿಂದ ಸೋಮನಗೌಡ (ಅಪ್ಪುಗೌಡ) ಪಾಟೀಲ (ಮನಗೂಳಿ) ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಏ.14ರಂದು ಸಂಜೆ 4ಕ್ಕೆ ಸ್ವಗ್ರಾಮ ಮನಗೂಳಿಯಲ್ಲಿ ಬೆಂಬಲಿಗರ ಸಭೆ ಕರೆದಿದ್ದು, ಬಳಿಕ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಬುಧವಾರ ಸಂಜೆ 4 ಗಂಟೆವರೆಗೂ ನನ್ನ ಹೆಸರು ಎರಡನೇ ಪಟ್ಟಿಯಲ್ಲಿತ್ತು. ಕೊನೆ ಗಳಿಗೆಯಲ್ಲಿ ಬದಲಾವಣೆಯಾಗಿ ಕೈತಪ್ಪಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಅಪ್ಪುಗೌಡ ಅವರಿಗೆ ಟಿಕೆಟ್‌ ಕೈತಪ್ಪಿರುವುದರಿಂದ ಮನಗೂಳಿ ಪಪಂ 12 ಜನ ಬಿಜೆಪಿ ಸದಸ್ಯರು ವರಿಷ್ಠರ ವಿರುದ್ಧ ಬಂಡೆದ್ದು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ: ಶಶಿಕಾಂತ ನಾಯಕ, ಹುಕ್ಕೇರಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಶಶಿಕಾಂತ ನಾಯಕ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಹುಕ್ಕೇರಿ ಮತಕ್ಷೇತ್ರದಿಂದ ಟಿಕೆಟ್‌ ನೀಡದಿರುವುದು ಹಾಗೂ ಕತ್ತಿ  ಕುಟುಂಬದ ಕಿರುಕುಳದಿಂದ ಬೇಸತ್ತು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ. ಉಮೇಶ ಕತ್ತಿ ನಿಧನ ಬಳಿಕ ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಬಳಿಯೂ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದೆ. ಆದರೆ ನನಗೆ ಅನ್ಯಾಯ ಮಾಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ರಾಜೀನಾಮೆಗೂ ನನಗೂ ಸಂಬಂಧವಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದರು.

ನರಿಬೋಳ ಜೆಡಿಎಸ್‌ಗೆ

ಕಲಬುರಗಿ: ಜೇವರ್ಗಿ ಬಿಜೆಪಿ ಟಿಕೆಟ್‌ ವಂಚಿತ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್‌ ಸೇರ್ಪಡೆಯಾಗಿ ಬಳಿಕ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅದೇ ರೀತಿ ಅಫಜಲಪುರದಲ್ಲಿ ಬಿಜೆಪಿ ಟಿಕೆಟ್‌ ವಂಚಿತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಲೀಕಯ್ಯ ಗುತ್ತೇದಾರ ಅವರ ಸಹೋದರ ಜಿಪಂ ಮಾಜಿ ಅಧ್ಯಕ್ಷ ನಿತಿನ್‌ ಗುತ್ತೇದಾರ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಕಲಬುರಗಿ ಉತ್ತರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಿವಕಾಂತ ಮಹಾಜನ್‌ ಅವರಿಗೆ ಟಿಕೆಟ್‌ ದೊರಕದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.

19ಕ್ಕೆ ಪಕ್ಷೇತರನಾಗಿ ನಾಮಪತ್ರ

ರಾಣಿಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಆರ್‌.ಶಂಕರ ಅವರು ಏ.19ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಬಿಜೆಪಿಗೆ ನಾನು ಸಹಾಯ ಮಾಡಿದ್ದರಿಂದಲೇ ಸರ್ಕಾರ ರಚಿಸಲು ಸಾಧ್ಯವಾಗಿತ್ತು. ಆದರೂ, ನನ್ನ ಕೈಬಿಟ್ಟಿದ್ದಾರೆ.  ಸಭಾಧ್ಯಕ್ಷ ಹೊರಟ್ಟಿ ಅವರನ್ನು ಭೇಟಿಯಾಗಿ ವಿಪ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಏ.19ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಆರ್‌. ಶಂಕರ್‌ ತಿಳಿಸಿದ್ದಾರೆ.

 

ಟಾಪ್ ನ್ಯೂಸ್

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

Priyank-Kharghe

ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್‌

Will Rohit retire after the Sydney Test?

Rohit Sharma; ಸಿಡ್ನಿ ಟೆಸ್ಟ್‌  ಬಳಿಕ ರೋಹಿತ್‌ ವಿದಾಯ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Priyank-Kharghe

ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್‌

vidhana-Soudha

Officers Promotion: ಹೊಸ ವರ್ಷಕ್ಕೆ 153 ಅಧಿಕಾರಿಗಳಿಗೆ ಭಡ್ತಿ ಭಾಗ್ಯ

Nikhil-JDS

New Office Bearers: ಜೆಡಿಎಸ್‌ಗೆ ಹೊಸ ರಾಜ್ಯಾಧ್ಯಕ್ಷ ಜತೆಗೆ ಮೂರು ಕಾರ್ಯಾಧ್ಯಕ್ಷ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.