ರಾಜ್ಯ ಲೋಕಸೇವಾ ಆಯೋಗದ ಪುನಾರಚನೆ ಅನಿವಾರ್ಯ


Team Udayavani, Feb 1, 2021, 6:10 AM IST

ರಾಜ್ಯ ಲೋಕಸೇವಾ ಆಯೋಗದ ಪುನಾರಚನೆ ಅನಿವಾರ್ಯ

ಪ್ರಜಾಸತ್ತೆಯಲ್ಲಿ ಲೋಕಸೇವಾ ಆಯೋಗದ ಬಲವರ್ಧನೆ ಅತೀ ಅಗತ್ಯ. ಅದೊಂದು ವಿಶ್ವಾಸಾರ್ಹ ಸಾಂವಿಧಾನಿಕ ಸಂಸ್ಥೆ ಎಂಬ ಗ್ರಹಿಕೆ ಜನಮನದಲ್ಲಿ ಮೂಡಬೇಕಾಗಿದೆ. ಆ ಪ್ರಯುಕ್ತ ಆಯೋಗದ ಪುನಾರಚನೆ ತುರ್ತಾಗಿ ಆಗಬೇಕಾಗಿದೆ. ತನಿಖೆ ಕಾದಿರಿಸಿ ಪ್ರಸಕ್ತ ಆಯೋಗವನ್ನೇ ಅರ್ಥಾತ್‌ ಅಧ್ಯಕ್ಷ, ಸದಸ್ಯರ ಸೇವೆಯನ್ನು ತತ್‌ಕ್ಷಣದಿಂದಲೇ ರದ್ದುಗೊಳಿಸಿದಲ್ಲಿ ಸರಕಾರದ ಘನತೆ ಹೆಚ್ಚಲಿದೆ.

ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಅಧಿಕಾರಿ ವರ್ಗ ಇದ್ದರೆ ಮಾತ್ರ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಸವಿಯುಣ್ಣಲು ಸಾಧ್ಯ. ಚುನಾಯಿತ ಪ್ರತಿನಿಧಿಗಳ ಸರಕಾರ ರೂಪಿಸುವ ಆಡಳಿತಾತ್ಮಕ ನಿರ್ಧಾರಗಳನ್ನು ಅನುಷ್ಠಾನಿಸುವುದು ಅಧಿಕಾರಿ ವರ್ಗವೇ. ಸರಕಾರದ ನಿರ್ಧಾರ, ಯೋಜನೆಗಳಲ್ಲಿ ಅಡಕವಾದ ಪ್ರಜಾ ಸ್ನೇಹಿ ಹಾಗೂ ಪ್ರಗತಿಪರ ಚಿಂತನೆಗಳನ್ನು ಕ್ರಿಯಾರೂಪಕ್ಕೆ ತರಲು ಕೌಶಲ ಮತ್ತು ಪ್ರಾಮಾಣಿಕತೆಯ ಬೆಸುಗೆಯೊಂದಿಗೆ ಸೇವೆ ನೀಡಲು ಶಕ್ತವಾಗಿರುವ ಅಧಿಕಾರಿ ಮತ್ತು ನೌಕರ ವರ್ಗ ಅತ್ಯವಶ್ಯವಾಗಿದೆ.

ಧೋರಣೆಗಳನ್ನು ರೂಪಿಸುವ ಚುನಾಯಿತ ಸರಕಾರದ ಅವಧಿ ಮುಗಿಯುತ್ತಲೇ, ಜನಪ್ರತಿನಿಧಿಗಳು ತಮ್ಮ ಸ್ಥಾನ ತ್ಯಜಿಸಿ ಸಾಮಾನ್ಯ ಪ್ರಜೆಯಾದರೆ ಸರಕಾರಿ ಅಧಿಕಾರಿ- ನೌಕರ, ಕಾಲಕಾಲಕ್ಕೆ ಬದಲಾಗುವ ರಾಜಕೀಯ ಸ್ಥಿತ್ಯಂತರಗಳಿಗೆ ತಟಸ್ಥನಾಗಿ, ಧೋರಣೆಗಳ ಅನುಷ್ಠಾನದ ಕಾರ್ಯವನ್ನು ಮಾತ್ರ ಮುಂದುವರಿಸುತ್ತಿರುತ್ತಾರೆ. ಇಂತಹ ದೃಢ ನಿಲುವಿಗೆ ಯೋಗ್ಯ ಆಡಳಿತ ವರ್ಗದ ಅಗತ್ಯವಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಆಡಳಿತದ ಮುಖ್ಯ ಸ್ಥಾನದಲ್ಲಿದ್ದ ಅಧಿಕಾರಿಯಲ್ಲಿ ಅಗತ್ಯ ದಕ್ಷತೆ ಇಲ್ಲದೆ ಹೋದರೆ ಅಥವಾ ಮುನ್ನುಗ್ಗುವ ಕಾರ್ಯಕ್ಷಮತೆ ಇಲ್ಲವಾದರೆ ಯಾವುದೇ ಯೋಜನೆ ಅಥವಾ ಕಾನೂನಿನ ಅನುಷ್ಠಾನ ಪರಿಪೂರ್ಣ ಹಾಗೂ ಸಮರ್ಪಕವಾಗಿ ಆಗುವುದಿಲ್ಲ. ಅಂಥ ಅಧಿಕಾರಿಗಳು ಹೇಡಿಯಲ್ಲಿ ಚಂದ್ರಾಯುಧವಿದ್ದಂತೆ ನಿರುಪಯುಕ್ತ.

ನುರಿತ ಹಾಗೂ ದಕ್ಷ ನೌಕರ ವರ್ಗ ಇರಬೇಕೆಂಬುದು ಸಂವಿಧಾನದ ಆಶಯ. ನಮ್ಮ ಸಂವಿಧಾನ ನಿರ್ಮಾತೃಗಳಿಗೆ ಈ ಅರಿವು ಸಾಕಷ್ಟಿತ್ತು. ಆದ ಕಾರಣ ಉತ್ತಮ ಅಧಿಕಾರಿಗಳು ಮತ್ತು ನೌಕರರ ನೇಮಕಾತಿಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆರ್ಟಿಕಲ್‌ 309ರಲ್ಲಿ ಅಧಿಕಾರಿ, ನೌಕರರನ್ನು ನೇಮಕ ಮಾಡಿಕೊಳ್ಳಲು ಸರಕಾರಕ್ಕೆ ಅಧಿಕಾರ ದತ್ತವಾಗಿದೆ. ಹಾಗೆ ನೇಮಕಗೊಂಡಾತ ಆರ್ಟಿಕಲ್‌ 310ರಂತೆ ಅಧಿಕಾರ ವಹಿಸಿಕೊಂಡು ಸಂವಿಧಾನಕ್ಕೆ ತನ್ನ ನಿಷ್ಠೆಯನ್ನು ಲಿಖೀತ ರೂಪದಲ್ಲಿ ಘೋಷಿಸಲು ಬದ್ಧನಾಗಿರುತ್ತಾನೆ. ಆದರೆ ಈ ನೇಮಕಾತಿಯ ಬಗ್ಗೆ ಸ್ವತಂತ್ರ ಪ್ರಾಧಿಕಾರವನ್ನು ಆರ್ಟಿಕಲ್‌ 315ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಅದುವೇ ಲೋಕಸೇವಾ ಆಯೋಗ. ಇದೊಂದು ಅಧಿಕಾರ ಬದ್ಧ ಪರಿಣಿತ ಸಮಿತಿ. ಸರಕಾರ ಹುದ್ದೆಗಳನ್ನು ಸೃಜಿಸುವ ಮುನ್ನ ಆಯೋಗದೊಡನೆ ಸಮಾಲೋಚಿಸತಕ್ಕದೆಂಬ ವಿಧಿ ಇದೆ. ಹಾಗೆಯೇ ಅಗತ್ಯವಿದ್ದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿ ಅರ್ಥಾತ್‌ ಮುಖ್ಯ ನ್ಯಾಯಾಧೀಶರ ಅಭಿಪ್ರಾಯ ಸಂಗ್ರಹಿಸಲೂ ಅವಕಾಶವಿದೆ. ಆಯೋಗವು ಎಲ್ಲ ಹುದ್ದೆಗಳ ಮಾನದಂಡವನ್ನು ನಿಗದಿಗೊಳಿಸುವ ಹಾಗೂ ಅರ್ಹತಾ ಪರೀಕ್ಷೆ ನಡೆಸುವ ಜವಾಬ್ದಾರಿ ಹೊಂದಿದೆ.

ಆಯೋಗದ ಅಧ್ಯಕ್ಷ ಹಾಗೂ ಸದಸ್ಯರನ್ನು ಸರಕಾರದ ಶಿಫಾರಸಿನಂತೆ ಸಂದರ್ಭಾನುಸಾರ ಕೇಂದ್ರ ಆಯೋಗಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯ ಆಯೋಗಕ್ಕೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಅಧ್ಯಕ್ಷನಾಗಲು ಯಾ ಸದಸ್ಯನಾಗಲು ಯಾವ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿಲ್ಲ. ಆದರೆ ಆರ್ಟಿಕಲ್‌ 316ರಲ್ಲಿ ಅಡಕವಾದ ಮಾರ್ಗಸೂಚಿಯಂತೆ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಸೇವೆಯಲ್ಲಿ ಕನಿಷ್ಠ ಹತ್ತು ವರ್ಷಗಳ ಅನುಭವವುಳ್ಳವರನ್ನು ನೇಮಕ ಮಾಡ‌ಬಹುದಾಗಿದೆ. ಇದು ಐಎಎಸ್‌, ಐಪಿಎಸ್‌, ಐಎಫ್ ಎಸ್‌ ಹಾಗೂ ಕೇಂದ್ರ ಮತ್ತು ರಾಜ್ಯ ಸೇವೆಗಳಲ್ಲಿದ್ದ ಎಂಜಿನಿಯರ್‌ಗಳನ್ನು ನೇಮಕ ಮಾಡಲು ಅನುವು ಮಾಡಿಕೊಡುತ್ತದೆ. ತನ್ಮೂಲಕ ಈ ನುರಿತ ಹಾಗೂ ಪರಿಣಿತರು ಸರಕಾರಿ ಸೇವೆಗೆ ಬರತಕ್ಕ ವ್ಯಕ್ತಿಗಳ ಅರ್ಹತೆಯನ್ನು ನಿಗದಿಗೊಳಿಸಿ, ಸೂಕ್ತ ವ್ಯಕ್ತಿಗಳನ್ನೇ ಆಯ್ಕೆ ಮಾಡಬೇಕೆಂಬ ಆಯೋಗದ ಉದ್ದೇಶವನ್ನು ಕಾರ್ಯಗತಗೊಳಿಸಲು ಸಹಾಯಕವಾಗುತ್ತಾರೆ ಎಂಬುದು ಉದ್ದೇಶ. ಉಳಿದ ಸದಸ್ಯರನ್ನು ಸಮಾಜದ ಯೋಗ್ಯ ಹಾಗೂ ಗಣ್ಯ ವ್ಯಕ್ತಿಗಳ ಮೂಲಕ ಭರ್ತಿಮಾಡಲು ಅವಕಾಶ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಸಾರ್ವಜನಿಕ ನೇಮಕಾತಿಗೆ ಸಂಬಂಧಿಸಿ, ದೋಷರಹಿತವಾದ ಆಯ್ಕೆ ಪ್ರಕ್ರಿಯೆ ನಡೆಯಬೇಕೆಂಬುದು ಆಶಯ.

ರಾಜ್ಯದ ಲೋಕಸೇವಾ ಆಯೋಗ ಆರಂಭದ ಕೆಲವು ದಶಕಗಳ ಕಾಲ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಿತ್ತು. ಆದರೆ 1998ರ ಅನಂತರ ಆಯೋಗದ ಬಗ್ಗೆ ಗುರುತರ ಆರೋಪಗಳು ಕೇಳಿಬರಲಾರಂಭಿಸಿದವು. ಆ ಬಾರಿಯ ಪತ್ರಾಂಕಿತ ಹುದ್ದೆಗ‌ಳ ನೇಮಕಾತಿಯಲ್ಲಾದ ಗೋಲ್‌ಮಾಲ್‌, ತದನಂತರ ನಡೆದ ಕಾನೂನು ಸಮರ, ಈ ನೆಪದಲ್ಲಿ ಸರಕಾರದ ಮೂಲಕ ನಡೆದ ನೇರ ನೇಮಕಾತಿ ಸೃಷ್ಟಿಸಿದ ಅವಾಂತರಗಳು, ಈಗ ಆಯೋಗದಿಂದ ನಡೆಸಲ್ಪಡುವ ಪರೀಕ್ಷಾ ಪ್ರಶ್ನೆಪತ್ರಿಕೆಯ ಉತ್ತರಗಳೇ ಸೋರಿಕೆಯಾಗಿರುವುದು..ಹೀಗೆ ಆಯೋಗ ಸಂಪೂರ್ಣ ಹಗರಣಮಯವಾಗಿದೆ. ಈಗ ಬೆಳಕಿಗೆ ಬಂದಿರುವ ಹಗರಣದಲ್ಲಿ ಕಚೇರಿಯ ಗುಮಾಸ್ತನೋರ್ವ ಶಾಮೀಲಾಗಿರುವುದನ್ನು ಮೇಲ್ನೋಟಕ್ಕೆ ಪತ್ತೆ ಹಚ್ಚಲಾಗಿದ್ದರೂ ಇದರ ಹಿಂದೆ ವಿಸ್ತೃತ ಜಾಲವಿರುವುದನ್ನು ತಳ್ಳಿ ಹಾಕುವಂತಿಲ್ಲ. ಆಯೋಗದಲ್ಲಿ ಕಟ್ಟುನಿಟ್ಟಿನ ಶಿಸ್ತು ಪಾಲನೆಯಾಗುತ್ತಿದ್ದರೆ ಆಯೋಗಕ್ಕೆ ಹೊಂದಿಕೊಂಡಿರುವ ಕಚೇರಿ ನೌಕರರು ಇಂಥ ದುರ್ನಡತೆಯ ಸಾಹಸಕ್ಕಿಳಿಯಲು ಸಾಧ್ಯವೇ?

ಆಯೋಗದ ಘನತೆ, ಗೌರವವನ್ನು ಕಾಪಾಡಬಲ್ಲ ಅಧ್ಯಕ್ಷ, ಸದಸ್ಯರ ನೇಮಕಾತಿಯ ಜವಾಬ್ದಾರಿ ಸರಕಾರದ ಮೇಲಿದೆ. ಹಂಗು ಮತ್ತು ಅದನ್ನೇ ಸೃಜಿಸುವ ಅವಕಾಶ ಪ್ರಜಾಸತ್ತೆಯ ದೋಷವೆಂದೇ ಹೇಳಬೇಕು. ಸರಕಾರ ಶಿಫಾರಸು ಮಾಡಿದಂತೆ ರಾಜ್ಯಪಾಲರು ಆಯೋಗದ ಅಧ್ಯಕ್ಷ, ಸದಸ್ಯರ ನೇಮಕಾತಿ ಮಾಡುವುದು ವಾಡಿಕೆ. ಸರಕಾರ ತನ್ನ ಶಿಫಾರಸನ್ನು ವಿವೇಚನೆಯಂತೆ ಮಾಡುವುದು ರೂಢಿ. ಪ್ರಕ್ರಿಯೆ ನಿಶ್ಚಿತ ಫ‌ಲ ನೀಡದಿದ್ದರೆ ವಿವೇಚನೆಯಲ್ಲಿ ದೋಷವಿದೆ ಎಂಬ ಸುಲಭ ತೀರ್ಮಾನಕ್ಕೆ ಬರಬಹುದು. ವಿವೇಚನಾಧಿಕಾರವುಳ್ಳವರು ನಿಷ್ಪಕ್ಷಪಾತವಾಗಿ, ನ್ಯಾಯಯುತವಾಗಿ, ಸಾರ್ವಜನಿಕ ಹಿತಾಸಕ್ತಿಯಿಂದ ವಿವೇಚನೆಯನ್ನು ಬಳಸಬೇಕೆಂಬುದು ಸಂವಿಧಾನದ ಆಶಯ. ಕರ್ನಾಟಕ ಸರಕಾರ ಹಾಲಿ ಆಯೋಗವನ್ನು ರದ್ದುಪಡಿಸಿ, ಹೊಸ ಆಯೋಗ ರಚಿಸುವ ಕಾಲಕ್ಕೆ ಅತ್ಯಂತ ನ್ಯಾಯಯುತವಾಗಿ ತನ್ನ ವಿವೇಚನಾಧಿಕಾರವನ್ನು ಬಳಸಿಕೊಳ್ಳಬೇಕಿದೆ.

– ಬೇಳೂರು ರಾಘವ ಶೆಟ್ಟಿ, ಸಾಲಿಗ್ರಾಮ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.