ಧರ್ಮ, ಮನುಷತ್ವ ಹಾಗೂ ವಿಶ್ವಶಾಂತಿ
Team Udayavani, Nov 24, 2020, 6:25 AM IST
ಧರ್ಮ ಮತ್ತು ಮನುಷತ್ವ ಇವೆರಡರೊಳಗೆ ಆಯ್ಕೆಯ ವಿಚಾರ ಬಂದರೆ ಮೊದಲ ಆಯ್ಕೆ ಯಾವುದು ಎಂಬ ಪ್ರಶ್ನೆಗೆ ಸರಿ ಉತ್ತರ ಯಾವುದು? ಧರ್ಮವೋ ಇಲ್ಲಾ ಮನುಷ್ಯ ತ್ವವೋ?.
“Religion is the idea which is raising the brute into man and man in to God” ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಒಬ್ಬ ಮೃಗೀಯನನ್ನು ಮನುಷ್ಯನನ್ನಾಗಿಸಲು ಮತ್ತು ಮನುಷ್ಯನನ್ನು ದೈವತ್ವದೆಡೆಗೆ ಏರಿಸಲು ಇರುವ ಸಾಧನವೇ ಧರ್ಮ ಎಂದು ಇದರ ಅರ್ಥ. ಆದರೆ ಇವತ್ತಿನ ನಾಗರಿಕ ಪ್ರಪಂಚ ಅದ್ಯಾವ ಮಟ್ಟದಲ್ಲಿ ಧರ್ಮವನ್ನು ಹಿಡಿದುಕೊಂಡಿದೆ, ಅರ್ಥೈಸಿ ಕೊಂಡಿದೆ(?) ಎಂದರೆ ಧರ್ಮ ಮತ್ತು ಮನುಷತ್ವದ ಆಯ್ಕೆಯಲ್ಲಿ ಆತ ಮನುಷತ್ವವನ್ನೇ ತೊರೆದು ಧರ್ಮದ ಆಯ್ಕೆ ಮಾಡಬಲ್ಲ ಮತ್ತು ಆತ ಅಂದು ಕೊಂಡಿರುವ ಆ ಧರ್ಮಕ್ಕಾಗಿ ಮನುಷ್ಯತ್ವದಿಂದ ಮೃಗೀಯತ್ವದಡೆಗೂ ಸಾಗಬಲ್ಲ!
ಈ ಮಾತು ಬಾಲಿಶ ಎನ್ನಿಸಬಹುದು. ಆದರೆ ನಿಜಕ್ಕೂ ನಮ್ಮ ಸುತ್ತಣ ಪ್ರಪಂಚವನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ ಇವತ್ತಿನ ಪ್ರಪಂಚ ಅಶಾಂತಿಯ ಕದ ತಟ್ಟಿರುವುದು ಧರ್ಮ ಎಂಬ ವಿಷಯ ವಸ್ತುವಿನಿಂದಲೇ! ಮನುಷ್ಯ ಹೇಗಿರಬೇಕು ಮತ್ತು ಹೇಗಿರಬಾರದು ಎಂಬ ಪಾಠವನ್ನು ಎಲ್ಲ ಧರ್ಮಗಳೂ ಬೋಧಿಸುತ್ತವೆ ಎಂಬುದು ನಿಜ. ಹಾಗೇನೇ ನಂಬಿಕೆಗಳ ಮೇಲೆ ನಿಂತಿರುವ ಜೀವನ ವನ್ನು ಭವಿಷ್ಯದ ಭರವಸೆಗಾಗಿ ಉಜ್ಜೀವನ ಗೊಳಿ ಸಲೂ ಈ ಧರ್ಮದ ಆಶ್ರಯ ಬೇಕು ಎಂಬುದೂ ನಿಜವೇ.
ಧರ್ಮದೊಳಗಿರುವ ವಿಚಾರಗಳೇನು ಕ್ಷುಲ್ಲಕವಾದವುಗಳಲ್ಲ. ಅಲ್ಲಿರುವ ವಿಚಾರಗಳು ಆಗಾಧವಾದವುಗಳೇ. ಆದರೆ ಅದರಲ್ಲಿರುವ ಗೂಢಾರ್ಥ – ಸೂಕ್ಷ್ಮಾರ್ಥಗಳೆಲ್ಲ ಎಲ್ಲರಿಗೂ ಅಷ್ಟು ಸುಲಭದಲ್ಲಿ ನಿಲುಕುವಂತಹುದೇ? ಖಂಡಿತಾ ಇಲ್ಲ.
ಅವರವರ ಭಾವಕ್ಕೆ ಅವರವರ ಭಕುತಿಗೆ ಎನ್ನುತ್ತೇ ವಲ್ಲ ಹಾಗೆ. ನಿಜಕ್ಕೂ ಇಲ್ಲಿ ಸಮಸ್ಯೆಯಾ ಗಿರುವುದು ಇದುವೇ. ಕೆಲವರು ತನಗೇನು ಅರ್ಥವಾಗಿದೆಯೋ ಅದನ್ನೇ ಅಂತಿಮ ಸತ್ಯವೆಂದು ಅರಿತು ಮುನ್ನಡೆ ಯುತ್ತಿರುತ್ತಾರೆ. ಮತ್ತೆ ಕೆಲವರು ಇನ್ನೊಬ್ಬರು ಅರುಹಿದ್ದನ್ನೇ ಸತ್ಯವೆನ್ನುತ್ತಾ ಧರ್ಮದ ಪಥ ಹಿಡಿದು ಸಾಗುತ್ತಿರುತ್ತಾರೆ! ಏನೇ ಇರಲಿ ಧರ್ಮದಂತಹ ಗಾಢ ಜ್ಞಾನವನ್ನು ಬಿತ್ತರಿಸಲು ಧರ್ಮದ ಬೋಧಕ ಪ್ರಪಂಚ ಕೂಡ ಬಲಿಷ್ಟ ವಾಗಿಯೇ ಇರಬೇಕಾಗಿ ರುವುದು ಅಗತ್ಯ. ಆದರೆ ಹೆಚ್ಚಿನ ಸಂದರ್ಭದಲ್ಲಿ ಬೋಧಕರೇ ಅಲ್ಪಮತೀಯ ರಾಗಿದ್ದುಕೊಂಡು ತಾನು ಅರ್ಥ ಮಾಡಿಕೊಂಡಿ ದ್ದಷ್ಟನ್ನೇ ಪರಮ ಸತ್ಯವೆಂದು ಪರರಿಗೆ ಬೋಧಿಸು ತ್ತಿರುತ್ತಾರೆ! ಮನುಷತ್ವ ಮತ್ತು ಧರ್ಮದ ಮಧ್ಯೆ ಮನುಷ್ಯತ್ವವೇ ಸರಿ ಎಂದು ಆಯ್ಕೆ ಮಾಡುವ ವರ್ಗವಾದರೆ ಅಂತವರಿಗೆ ಇಂತಹ ಬೋಧನೆ ಅಪಾಯಕಾರಿ ಎನ್ನಿಸದು. ಆದರೆ ಅದೇನಾದರೂ ಧರ್ಮದ ಉಳಿವೇ ಪ್ರಥಮ ಆದ್ಯತೆಯುಳ್ಳದ್ದು, ಮನುಷ್ಯತ್ವ ಆ ಬಳಿಕದ ವಿಚಾರ ಎಂದು ಕುರುಡಾಗಿ ಧರ್ಮವನ್ನು ಹಿಡಿದುಕೊಂಡವರು ಇಂತಹ ಬೋಧನೆಯ ಪ್ರಭಾವದಿಂದ ವಿಕೃತ ಸಮಾಜ ವನ್ನಷ್ಟೇ ನಿರ್ಮಿಸಬಲ್ಲರು!
ಪೂರ್ವಗ್ರಹ ರಹಿತ ಕಣ್ಣಿನಲ್ಲಿ ನೋಡಿದ್ದೇ ಆದರೆ ನಮ್ಮ ಮಧ್ಯೆ ನಿಂತಿರುವ ಧರ್ಮಗಳೆಲ್ಲ ಬರೇ ಅಕ್ಷರಗಳ ಜೋಡಣೆಗಳಷ್ಟೇ ಅಲ್ಲವೇ! ಮತ್ತು ಆ ಅಕ್ಷರಗಳನ್ನು ಜೋಡಣೆಗೊಳಿಸಿದವರು ನಮ್ಮೆಲ್ಲರಿ ಗಿಂತ ಬುದ್ಧಿವಂತರು ಇಲ್ಲವೇ ದೈವತ್ವ ವನ್ನೇ ಮೈಗೂ ಡಿ ಸಿಕೊಂಡವರು ಎಂಬುದು. ಅದು ನಾವು ನಂಬಿ ಬಂದಿರುವ ನಂಬಿಕೆಗಳಷ್ಟೇ ತಾನೇ!? ಅದೇನೇ ಇರಲಿ ಒಟ್ಟಿನಲ್ಲಿ ಅದರ ಮೇಲಣ ನಂಬಿಕೆಗಳ ಪಯಣಕ್ಕೆ ಹೆಚ್ಚು ಕಡಿಮೆ ಇಂದು ಸಾವಿರ ವರ್ಷಗಳೇ ಸಂದು ಹೋಗಿವೆ. ಆಸ್ತಿಕರು ಮತ್ತು ನಾಸ್ತಿಕರು ಎಂಬ ವೈರುಧ್ಯಗಳ ಹುಟ್ಟಿಗೆ ಕಾರಣವಾದ ಈ ಧರ್ಮ ಬಳಿಕದ ಹಾದಿಯಲ್ಲಿ ನನ್ನ ದೇವರೇ ಮೇಲು ನನ್ನ ದೇವರೇ ಸತ್ಯ ಎಂಬಲ್ಲಿ ಯವರೆಗೂ ಸಂಘರ್ಷದ ಕಿಚ್ಚನ್ನು ತಂದು ನಿಲ್ಲಿಸಿದೆ ಎಂಬುದಂತೂ ಸತ್ಯ. ಧರ್ಮವನ್ನು ಸರಿಯಾಗಿ, ಆಳವಾಗಿ ಅಭ್ಯಸಿಸಿದರೆ ಸಂಘರ್ಷ ಗಳಿಗೆ ಧರ್ಮ ಕಾರಣವಲ್ಲ ಎಂದೆನ್ನಿಸಬಹು ದಾದರೂ ಸದ್ಯದ ಪರಿಸ್ಥಿತಿಯಲ್ಲಿ ನೋಡಿದರೆ ಸಮಾಜದ ಇಂತಹ ಸಂಘರ್ಷಕ್ಕೆ ಇಂದು ಚಾಲ್ತಿ ಯಲ್ಲಿರುವ ಧರ್ಮ ಪ್ರಚಾರವೇ ಕಾರಣ ಎಂಬುದನ್ನು ಅಲ್ಲಗಳೆಯುವ ಹಾಗಿಲ್ಲ.
ಧರ್ಮಾನುಯಾಯಿಯು ಎಲ್ಲಿ ಎಡವಿರುವುದು ಗೊತ್ತೇ? ಧರ್ಮ ಸೂಕ್ಷ್ಮತೆಯೊಂದನ್ನು ಗಮನಿಸಿ. ಅಧರ್ಮೀಯನನ್ನು ನಾಶಮಾಡಲು ಧರ್ಮವು ಕರೆ ಕೊಡುತ್ತದೆ. ಅಂದರೆ ಮನುಷ್ಯನಾಗಿದ್ದುಕೊಂಡು ಇನ್ನೊಂದು ಮಾನವ ಜೀವವನ್ನು ಬಲಿ ತೆಗೆದುಕೊ ಎಂದು ಧರ್ಮ ಹೇಳುತ್ತಿದೆಯೇ? ಧರ್ಮವನ್ನು ಕುರುಡಾಗಿ ಅರ್ಥೈಸಿಕೊಂಡರೆ ಇದಕ್ಕೆ ಹೌದು ಎಂದಷ್ಟೇ ಉತ್ತರ. ಆದರೆ ಧರ್ಮದ ಜತೆಗೆ ಮನುಷತ್ವವನ್ನು ಹಿಡಿದುಕೊಂಡು ಸೂಕ್ಷ್ಮವಾಗಿ ಧರ್ಮವನ್ನು ಅರಿಯುವ ಪ್ರಯತ್ನ ಮಾಡಿದರೆ ಇಲ್ಲಿ ಬೇರೆಯದೇ ಅರ್ಥವನ್ನು ಕಾಣಬಹುದು.
ಹೌದು ಧರ್ಮದ ಇಂತಹ ಸೂಕ್ಷ್ಮ ಸಂದರ್ಭಗಳು ಬಂದಾಗ ಒಂದಾ ನಾವು ಕಣ್ಣು ಮುಚ್ಚಿ ಮನುಷತ್ವವನ್ನು ಹಿಡಿಯಬೇಕು ಇಲ್ಲವೇ ಧರ್ಮವನ್ನು ಆಳವಾಗಿ ಮನುಷತ್ವದ ನೆಲೆಯಲ್ಲೇ ಅರ್ಥೈಸಿ ಕೊಳ್ಳುವ ಪ್ರಯತ್ನ ಮಾಡಬೇಕು. ಇಲ್ಲಿ ಅಧರ್ಮೀಯನನ್ನು ನಾಶ ಮಾಡಬೇಕು ಎಂಬುದನ್ನು ಕೊಲ್ಲು ಎಂಬುದಕ್ಕೆ ಕೊನೆಗೊಳಿಸುವುದು ಬಿಟ್ಟು ಬದಲಾಯಿಸು ಎಂಬುದಾಗಿ ಪರಿವರ್ತಿಸಿದರೆ ಅರ್ಧದಷ್ಟು ಅಶಾಂತಿ ಕಡಿಮೆಯಾದೀತು! ಹಾಗೇನೆ ನಮ್ಮ ಧರ್ಮವೇ ಸತ್ಯ ನಮ್ಮ ಧರ್ಮವೊಂದೇ ಅಂತಿಮ ಎಂದು ಯೋಚಿಸುವುದು ಬಿಟ್ಟು ನಮ್ಮ ಧರ್ಮ ಕೂಡ ಸತ್ಯವೇ ಎಂದು ಅರ್ಥೈಸುವಂತಾದರೆ ಆವಾಗ ಧರ್ಮದ ಆಕ್ರಮಣ ಕೊನೆಯಾಗಬಹುದು. ಇಲ್ಲಿ ಬದಲಾಯಿಸು ಎಂದರೆ ತನ್ನ ಧರ್ಮಕ್ಕೆ ಮತಾಂತರಿಸು ಎಂದರ್ಥವಲ್ಲ. ಬದಲಾಗಿ ಅವರವರು ನಂಬಿದ ಧರ್ಮವನ್ನು ಶ್ರದ್ಧೆಯಿಂದ ಮನುಷತ್ವದ ನೆಲೆಯಿಂದ ಪಾಲಿಸುವಂತೆ ಅಧರ್ಮೀಯನನ್ನು ಧರ್ಮೀಯನನ್ನಾಗಿ ಬದಲಾಯಿಸು ಎಂಬರ್ಥ. ಒಟ್ಟಿನಲ್ಲಿ ಅಧರ್ಮವನ್ನು ನಾಶ ಮಾಡೆಂದು ಧರ್ಮ ಕರೆ ಕೊಡುತ್ತಿದೆಯೇ ಹೊರತು ಅಧರ್ಮೀಯನನ್ನು ನಾಶ ಮಾಡೆಂದಲ್ಲ. ಇರುವ ಎಲ್ಲ ಧರ್ಮಕ್ಕಿಂತಲೂ ಪ್ರೀತಿ ಸಹಬಾಳ್ವೆಯಿಂದ ಬಾಳು ಎಂದೆನ್ನುವ ಮನುಷ್ಯ ಧರ್ಮವೇ ಮೇಲು ಅಲ್ಲವೇ ಈ ಜಗದಲ್ಲಿ? ಈ ಜಾಗೃತ ಮನಸ್ಸು ನಮ್ಮೆಲ್ಲರ ದಾಗಬೇಕು. ಅಧರ್ಮ ನಾಶವಾದರೆ ಅಧರ್ಮೀ ಯನ ಅಸ್ತಿತ್ವ ತನ್ನಿಂತಾನೆ ನಾಶವಾಗುತ್ತದೆ ಎಂಬುದನ್ನು ಅರಿಯಲು ಧರ್ಮ ಪಾಂಡಿತ್ಯ ಬೇಕೆ!? ಯದಾ ಯದಾಹೀ ಧರ್ಮಸ್ಯ ಗ್ಲಾನೀರ್ಭ ವತಿ ಭಾರತ… ಎಂಬ ಶ್ರೀಕೃಷ್ಣನ ಉವಾಚವಿರುವುದು ಕೂಡ ಅಧರ್ಮದ ನಾಶಕ್ಕಾಗಿಯೇ. ಹುಟ್ಟು ಸಾವುಗಳು ದೈವೇಚ್ಚೆ ಎಂದು ಅರುಹುವ ಧರ್ಮವು ಕೊಲ್ಲುವ ಕೆಲಸಕ್ಕೆ ಮನುಷ್ಯನನ್ನು ಎಂದೂ ನಿಯೋಜಿಸದು! ಅದು ನಮ್ಮ ಅರ್ಥೈಸುವಿಕೆಯ ದೋಷವೇ ಹೊರತು ಧರ್ಮದ್ದಲ್ಲ. ಎಲ್ಲೋ ಕಾಣದ ಲೋಕದ ಐಶ್ವರ್ಯಕ್ಕಾಗಿ, ಮದಿರೆ, ಮಾನಿನಿಯರ ಜತೆಗಿನ ನಂಟಿಗಾಗಿ ಇಂದಿನ ಮನುಷ್ಯ ಜೀವನವನ್ನು ನರಕದ ಕೂಪದಲ್ಲಿ ತೇಲಾಡಿಸುವುದು, ಪರರಿಗೆ ನೋವನ್ನು ನೀಡುತ್ತಿರುವುದು ಸದ್ಧರ್ಮದ ಬೋಧನೆಯಂತೂ ಖಂಡಿತಾ ಅಲ್ಲ.
‘Darkness cannot drive out darkness, only light can do that. Hate cannot drive out hate, only love can do that’’- ಇದು ಮಾರ್ಟಿನ್ ಲೂಥರ್ ಕಿಂಗ್‌ರ ಅರ್ಥ ಪೂರ್ಣ ಮಾತು, ಮಾನವೀಯತೆಗೊಂದು ಹೇಳಿ ಮಾಡಿಸಿದ ಪಾಠದಂತಿದೆ. ಜೀವ ಜಂತುಗಳಲ್ಲಿ ಬುದ್ಧಿ ಇರುವ ಜೀವಿ ಮನುಷ್ಯ. ಹೇಗೆ ಬದುಕಬೇಕು ಎಂಬುದನ್ನು ವಿಶ್ಲೇಷಿಸುವುದು ಕಷ್ಟವಾದರೂ ಹೇಗೆ ಬದುಕಬಾರದು ಎಂಬುದನ್ನಂತೂ ಖಂಡಿತ ವಿಶ್ಲೇಷಿ ಸಬಹುದು. ಇನ್ನೊಬ್ಬರಿಗೆ ನೋವನ್ನು ನೀಡದೆ, ಪರೋಪಕಾರ ಮಾಡದಿದ್ದರೂ ಪರೋ ಪದ್ರವವ ಮಾಡದೆ ಪರಸ್ಪರ ಪ್ರೀತಿಯಿಂದ ನಾವೆಲ್ಲ ಮನುಷ್ಯ ಕುಲದ ಬಂಧುಗಳು ಎಂದು ಸ್ಮರಿಸಿಕೊಳ್ಳುತ್ತಾ ಬಾಳಲು ಧರ್ಮದ ಆಳವಾದ ಪಾಠದ ಅಗತ್ಯವೇನು ಇಲ್ಲ. ಬದಲಾಗಿ ಜೀವನದ ಸಾಗುವಿಕೆ ಯಲ್ಲಿ ದೊರೆಯುವ ಸಾಮಾನ್ಯ ಪಾಠವೇ ಸಾಕಾ ದೀತು. ಕತ್ತಲೆ ಓಡಿಸಲು ಬೆಳಕಿನ ಅನಿವಾರ್ಯತೆ ಹೇಗೆ ಅವಶ್ಯವೋ ಹಾಗೆಯೇ ಇಂದಿನ ಅಶಾಂತಿ ಯನ್ನು ಹೋಗಲಾ ಡಿಸಲು ಮನುಷತ್ವದ ಅವಶ್ಯ ವಾಗಿದೆ. “ವಸುದೈವ ಕುಟುಂಬಕಂ’ ಎಂಬುದು ಮಾನವೀ ಯತೆಯ ಪಾಲಿಗೆ ಧರ್ಮವೇ ನೀಡಿದ ಪಾಠ.
ಕೊನೇ ಮಾತು
ಅತಿಯಾದರೆ ಅಮೃತವೂ ವಿಷವಾಗುವುದು ಎಂದೆನ್ನುತ್ತದೆ ಋಷಿವಾಕ್ಯ. ಧರ್ಮದ ವಿಚಾರದಲ್ಲೂ ಇದು ಸತ್ಯ ಎಂದೆನ್ನಿ ಸುತ್ತದೆ. ಧರ್ಮ ಎಂಬ ವಿಚಾರದ ಅಮಲು ಅತಿಯಾಗಿರುವುದರಿಂದಲೇ ಸಾವಿರ ಸಮಸ್ಯೆಗಳ ಕೂಪದೊಳಗೆ ಈ ಪ್ರಪಂಚ ನಲುಗುತ್ತಿರುವುದು!
– ಪ್ರಸಾದ್ ಕುಮಾರ್, ಮಾರ್ನಬೈಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.