ಬಗೆಹರಿಯಲಿ ರೈತರು-ಕೇಂದ್ರದ ನಡುವಿನ ಬಿಕ್ಕಟ್ಟು
Team Udayavani, Jan 22, 2021, 7:30 AM IST
ಮೂರು ಕೃಷಿ ಕಾಯ್ದೆಗಳ ವಿಚಾರದಲ್ಲಿ ಕೆಲವು ತಿಂಗಳುಗಳಿಂದ ಕೇಂದ್ರ ಹಾಗೂ ರೈತರ ನಡುವೆ ಜಟಿಲವಾಗುತ್ತಾ ಬಂದಿದ್ದ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದುವರೆಗೂ ಈ ವಿಚಾರದಲ್ಲಿ ಕೇಂದ್ರ ಹಾಗೂ ರೈತ ಸಂಘಟನೆಗಳ ನಡುವೆ 10 ಬಾರಿ ಸಭೆ ನಡೆದಿದ್ದು, ಯಾವ ಸಭೆಯೂ ಫಲಪ್ರದವಾಗಿಲ್ಲ.
ಬುಧವಾರ ನಡೆದ 10ನೇ ಸುತ್ತಿನ ಸಭೆಯಲ್ಲಿ ಕೇಂದ್ರ ಸರಕಾರ ಒಂದೂವರೆ ವರ್ಷದವರೆಗೆ ಮೂರು ಕೃಷಿ ಕಾಯ್ದೆಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವವಿರಿಸಿತ್ತು. ಈ ನಿರ್ಣಯವನ್ನು ರೈತ ಸಂಘಟನೆಗಳು ಒಪ್ಪಿಕೊಳ್ಳಬಹುದೆಂಬ ನಿರೀಕ್ಷೆಯಿತ್ತಾದರೂ ಕೇಂದ್ರದ ಈ ಪ್ರಸ್ತಾವವನ್ನೂ ಅವು ನಿರಾಕರಿಸಿವೆ.
“ನೀ ಕೊಡೆ, ನಾ ಬಿಡೆ’ ಎನ್ನುವಂತಾಗಿರುವ ಈ ಬಿಕ್ಕಟ್ಟು, ಬೇಗನೇ ತಾರ್ಕಿಕ ಅಂತ್ಯ ಕಾಣಲೇಬೇಕಿದೆ. ಆದಾಗ್ಯೂ ಕೇಂದ್ರ ಸರಕಾರ, ಈ ಕಾಯ್ದೆಗಳ ಜಾರಿಯನ್ನು ಮುಂದೂಡಲು ಸಿದ್ಧವಿದೆಯೇ ಹೊರತು, ರದ್ದು ಮಾಡಲು ಮುಂದಾಗುವ ಇರಾದೆಯಲ್ಲಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಕೃಷಿ ಕಾಯ್ದೆಗಳು ರೈತ ಸ್ನೇಹಿಯಾಗಿವೆ, ದೇಶದ ಕೃಷಿ ವಲಯವನ್ನೂ ಆಮೂಲಾಗ್ರವಾಗಿ ಬದಲಿಸಲಿವೆ ಎನ್ನುವ ವಾದಕ್ಕೆ ಅದು ಬದ್ಧವಾಗಿ ನಿಂತಿದೆ.
ಈ ಕಾಯ್ದೆಗಳ ಮೂಲಕ ಕೇಂದ್ರವು ಎಪಿಎಂಸಿಯ ಹೊರಗೂ ರೈತರು ತಮ್ಮ ಬೆಳೆಗಳ ಮಾರಾಟಕ್ಕೆ ಅವಕಾಶ, ಅಂತಾರಾಜ್ಯ ಮಾರಾಟಕ್ಕೆ ಇದ್ದ ತಡೆ ತೆರವು, ಆನ್‌ಲೈನ್ ವ್ಯಾಪಾರಕ್ಕೆ ವ್ಯವಸ್ಥೆಯಂಥ ವಿನೂತನ ಕ್ರಮಗಳಿಗೆ ಮುಂದಾಗಿದೆ. ಆದರೆ ಇದರಿಂದಾಗಿ ಎಪಿಎಂಸಿ ನಗಣ್ಯವಾಗುತ್ತದೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದಾಗುತ್ತದೆ, ರೈತರು ಬಂಡವಾಳಶಾಹಿಗಳ ಕಪಿ ಮುಷ್ಠಿಗೆ ಸಿಲುಕುತ್ತಾರೆ ಎನ್ನುವುದು ರೈತ ಸಂಘಟನೆಗಳ ವಾದ. ಕೇಂದ್ರವು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ನಿಲ್ಲುವುದಿಲ್ಲ ಎಂದು ಪದೇ ಪದೆ ಹೇಳುತ್ತಲೇ ಇದೆ. ಆದರೆ ಇದನ್ನು ಕಾನೂನಿನ ರೂಪದಲ್ಲಿ ಖಾತರಿ ಪಡಿಸಿ ಎನ್ನುವುದು ರೈತರ ವಾದ. ಈಗ ಈ ಮೂರೂ ಕಾಯ್ದೆಗಳನ್ನು ಪೂರ್ಣವಾಗಿ ರದ್ದು ಮಾಡಲೇಬೇಕು ಎನ್ನುವ ಕೂಗು ಅಧಿಕವಾಗಿದೆ.
ಹಾಗೆಂದು ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಹಾಗೂ ಕೃಷಿ ಸೇವೆ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳನ್ನು ಏಕಾಏಕಿ ತೆಗೆದುಹಾಕಬೇಕು ಎನ್ನುವುದೂ ತರವಲ್ಲ. ಅದರಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸಗಳಾಗಲಿ, ಕೇಂದ್ರವೂ ಬೆಂಬಲ ಬೆಲೆ ವ್ಯವಸ್ಥೆಗೆ ಖಾತರಿ ನೀಡುವಂಥ ಕಾನೂನನ್ನು ಜಾರಿ ಮಾಡಲಿ. ಆಗ ರೈತರ ಆತಂಕ ಶಮನವಾಗಬಹುದು. ಮಾತುಕತೆಯೇ ಪರಿಹಾರಕ್ಕೆ ಮುಖ್ಯ ಹಾದಿ. ಆರೋಪ-ಪ್ರತ್ಯಾರೋಪಗಳಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಈ ಪ್ರತಿಭಟನೆಗಳು ರಾಜಕೀಯ ಸ್ವರೂಪದಿಂದ ಕೂಡಿದೆ ಎನ್ನುವುದೋ, ಖಲಿಸ್ಥಾನಿ ಬೆಂಬಲಿಗರು ಈ ಹೋರಾಟದ ಭಾಗವಾಗಿದ್ದಾರೆ ಎನ್ನುವ ಹೇಳಿಕೆಗಳೆಲ್ಲ ಪರಿಸ್ಥಿತಿ ಹದಗೆಡುವುದಕ್ಕೆ ಕಾರಣವಾಗುತ್ತಿದೆ. ಇನ್ನೊಂದೆಡೆ ವಿಪಕ್ಷಗಳೂ ಕೂಡ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಲೇ ಇರುವುದರಿಂದ ಪರಿಸ್ಥಿತಿ ಕಗ್ಗಂಟಾಗುತ್ತಲೇ ಬಂದಿದೆ. ವಿಪಕ್ಷಗಳೂ ಬೆಂಕಿ ಬಿದ್ದ ಮನೆಯಲ್ಲಿ ಹಿಡಿಯುವ ಕೆಲಸ ಬಿಟ್ಟು, ಪ್ರಾಮಾಣಿಕತೆಯಿಂದ ಈ ವಿಷಯವನ್ನು ನಿಭಾಯಿಸುವಂತಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.