ಶೀಘ್ರ ಭತ್ತ-ರಾಗಿಗೆ ಖರೀದಿ ಕೇಂದ್ರ ಸ್ಥಾಪಿಸಿ: ಸಿಎಂಗೆ ದಿನೇಶ್ ಗೂಳಿಗೌಡ ಮನವಿ
ಖರೀದಿಗೆ ಇರುವ ಮಿತಿ ತೆಗೆದುಹಾಕಿ; ರೈತರ ಸಂಕಷ್ಟದ ಬಗ್ಗೆ ವಿವರಣೆ
Team Udayavani, Nov 27, 2022, 5:40 PM IST
ಬೆಂಗಳೂರು: 2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಬೆಳೆಯಲಾಗಿರುವ ಭತ್ತ ಮತ್ತು ರಾಗಿಯನ್ನು ಖರೀದಿ ಮಾಡಲು ಖರೀದಿ ಕೇಂದ್ರ ಸ್ಥಾಪನೆ ಹಾಗೂ ಒಬ್ಬ ರೈತರು ಬೆಳೆ ಮಾರಾಟ ಮಾಡಲು ವಿಧಿಸಿರುವ ಮಿತಿಯನ್ನು ತೆಗೆದುಹಾಕಬೇಕು ಎಂದು ಮಂಡ್ಯ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಶಾಸಕ ದಿನೇಶ್ ಗೂಳಿಗೌಡ ಅವರು ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ಈವರೆಗೂ ಖರೀದಿ ಕೇಂದ್ರಗಳ ಸ್ಥಾಪನೆ ಬಗ್ಗೆ ಹಾಗೂ ಬೆಂಬಲ ಬೆಲೆ ದರ ನಿಗದಿಪಡಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಒಬ್ಬ ರೈತನಿಂದ ಇಂತಿಷ್ಟೇ ಕ್ವಿಂಟಾಲ್ ಭತ್ತವನ್ನು ಖರೀದಿ ಮಾಡಬೇಕು ಎಂದು ಮಿತಿಯನ್ನು ನಿಗದಿ ಮಾಡಲಾಗಿದೆ. ಇನ್ನು ನೋಂದಣಿ ಪ್ರಕ್ರಿಯೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನೂ ಖಾತ್ರಿಪಡಿಸಿಲ್ಲ. ಇದರಿಂದ ರೈತಾಪಿ ವರ್ಗ ತುಂಬಾ ಆತಂಕಕ್ಕೀಡಾಗಿದೆ. ತಾವು ಮಧ್ಯಪ್ರವೇಶ ಮಾಡಿ ಶೀಘ್ರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಪತ್ರದಲ್ಲೇನಿದೆ?
2021-22ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸುಮಾರು 98 ಭತ್ತ ಖರೀದಿ ಏಜೆನ್ಸಿ ಮ್ಯಾಪಿಂಗ್ ಮಾಡಿದ ಮಿಲ್‌ಗಳಿಂದ ಖರೀದಿಸಲಾಗಿತ್ತು, ಸುಮಾರು 20 ಲಕ್ಷ ಕ್ವಿಂಟಾಲ್ ಭತ್ತವನ್ನು 75 ಸಾವಿರ ರೈತರಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲಾಗಿತ್ತು.
ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸುಮಾರು 81,459 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಭತ್ತದ ಬೆಳೆಯು ಕಟಾವಿಗೆ ಬಂದಿದ್ದು, ಅಂದಾಜು 50 ಲಕ್ಷ ಕ್ವಿಂಟಾಲ್ ಭತ್ತ ಉತ್ಪಾದನೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು 15-20 ದಿನಗಳಲ್ಲಿ ಭತ್ತ ಕಟಾವಿಗೆ ಬರುತ್ತಿದೆ.
ಸರ್ಕಾರ ಈವರೆಗೂ ಖರೀದಿ ಕೇಂದ್ರಗಳ ಬಗ್ಗೆಯಾಗಲೀ ಹಾಗೂ ಬೆಂಬಲ ಬೆಲೆ ದರ ನಿಗದಿಪಡಿಸುವುದಾಗಲೀ ಒಬ್ಬ ರೈತನಿಂದ ಎಷ್ಟು ಕ್ವಿಂಟಾಲ್ ಭತ್ತವನ್ನು ಖರೀದಿ ಮಾಡಲಾಗುತ್ತದೆ ಎಂಬುದನ್ನು ತಿಳಿಸಿಲ್ಲ. ಅಲ್ಲದೆ, ನೋಂದಣಿ ಪ್ರಾರಂಭ ಯಾವಾಗ ಶುರುವಾಗುತ್ತದೆ ಎಂಬ ಬಗ್ಗೆ ಇನ್ನೂ ಖಾತ್ರಿಪಡಿಸಿಲ್ಲ. ಇದರಿಂದ ರೈತಾಪಿ ವರ್ಗದವರು ಬಹಳವೇ ಆತಂಕಕ್ಕೀಡಾಗಿದ್ದಾರೆ.
ಇನ್ನು ರಾಗಿ ಬೆಳೆಗೆ ಸಂಬಂಧಪಟ್ಟಂತೆ 2001-22ನೇ ಸಾಲನಲ್ಲಿ ಮಂಡ್ಯ ಜಿಲ್ಲೆಯಲ್ಲಿ 30,000 ರೈತರಿಂದ 5 ಲಕ್ಷ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ನೀಡುವ ಮುಖಾಂತರ ಖರೀದಿಸಲಾಗಿತ್ತು. 2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸುಮಾರು 50,000 ಹೆಕ್ಟೇರ್ ವಿಸ್ತೀರ್ಣದಲ್ಲಿ ರಾಗಿ ಬೆಳೆಯಲಾಗಿದೆ. ಹೀಗಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ಕ್ವಿಂಟಾಲ್ ರಾಗಿ ಬೆಳೆಯು ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಇನ್ನೂ ಕೂಡಾ ಖರೀದಿ ಕೇಂದ್ರಗಳನ್ನು ತೆರೆಯದೇ ಇರುವುದರಿಂದ ರಾಗಿ ಬೆಳೆದ ರೈತರು ಆತಂಕಕ್ಕೊಳಗಾಗಿದ್ದಾರೆ.
ಈಗಾಗಲೇ ಬೆಲೆ ಕುಸಿತ ಹಾಗೂ ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ ಬೆಲೆ ಏರಿಕೆಯಾಗಿದೆ. ಜೊತೆಗೆ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರೈತನ ಬದುಕು ದುಸ್ತರವಾಗಿದ್ದಲ್ಲದೆ, ಆತ್ಯಹತ್ಯೆ ಹಾದಿ ಹಿಡಿಯುವಂತಾಗುತ್ತಿದೆ. ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿ ನಷ್ಟದ ದಾರಿ ಹಿಡಿದಿದೆ. ಕೃಷಿ ಕಾರ್ಮಿಕರ ಕೊರತೆಯು ಕೂಡ ತೀವ್ರವಾಗಿ ರೈತರನ್ನು ಕಾಡುತ್ತಿದೆ. ಖಲೀದಿ ಕೆಂದ್ರಗಳನ್ನು ತೆರೆಯುವುದು ವಿಳಂಭವಾದಲ್ಲಿ ಮಧ್ಯವರ್ತಿಗಳ ಕಪಿಮುಷ್ಟಿಗೆ ಸಿಲುಕಿ ರೈತರು ಕಡಿಮೆ ಬೆಲೆಗೆ ಭತ್ತ ಮತ್ತು ರಾಗಿಯನ್ನು ತಮ್ಮ ತುರ್ತು ಅಗತ್ಯತೆಗಳಗೆ ಮಾರಾಟ ಮಾಡಿ ನಷ್ಟಕ್ಕೊಳಗಾಗುತ್ತಾರೆ.
ಆದ್ದರಿಂದ ಸರ್ಕಾರ ಕೂಡಲೇ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಮಂಡ್ಯ ಜಿಲ್ಲೆಯ ಜೊತೆಗೆ ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಹಾಗೂ ಇನ್ನಿತರ ಜಿಲ್ಲೆಗಳಲ್ಲೆ ಕೂಡಲೇ ನೋಂದಣಿ ಕೇಂದ್ರವನ್ನು ಪ್ರಾರಂಭ ಮಾಡಬೇಕು. ಹಾಗೆಯೇ ದರ ಏರಿಕೆ ಮಾಡಬೇಕು. ಕಳೆದ ಬಾರಿ ಇದ್ದಂತಹ ಒಬ್ಬ ರೈತನಿಂದ ಇಂತಿಷ್ಟೇ ಕ್ವಿಂಟಾಲ್ ಖರೀದಿ ಮಾಡಬೇಕು ಎಂಬ ನಿಯಮವನ್ನು ತೆಗೆದುಹಾಕಬೇಕಿದೆ. ರೈತ ಉತ್ಪಾದಿಸಿದ ಎಲ್ಲ ಭತ್ತ ಮತ್ತು ರಾಗಿಯನ್ನು ಖಲೀದಿ ಮಾಡಬೇಕು ಎಂದು ಈ ಭಾಗದ ರೈತರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.