ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು: ಸಿದ್ದರಾಮಯ್ಯ
ದುಷ್ಟ ಭಸ್ಮಾಸುರನ ಕೈಗೆ ಈಗಲೆ ಬರೆ ಹಾಕಬೇಕು...ಶಾ ವಿರುದ್ಧ ಆಕ್ರೋಶ
Team Udayavani, Dec 31, 2022, 3:40 PM IST
ಬೆಂಗಳೂರು: ಕರ್ನಾಟಕ ಹಾಲು ಮಹಾ ಮಂಡಳ ಗುಜರಾತ್ ಜೊತೆಗೂಡಬೇಕೆಂಬ ಬಯಕೆಯನ್ನು ಅಮಿತ್ ಶಾ ವ್ಯಕ್ತಪಡಿಸಿದ್ದು, ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ನಮ್ಮ ಬ್ಯಾಂಕುಗಳನ್ನು ಕಿತ್ತುಕೊಂಡು ನಮ್ಮ ಆರ್ಥಿಕತೆಯನ್ನು ನಾಶಮಾಡಲೆತ್ನಿಸಿದ ಬಿಜೆಪಿಯವರು ಈಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ. ಈ ದುಷ್ಟ ಭಸ್ಮಾಸುರನ ಕೈಗೆ ಈಗಲೆ ಬರೆ ಹಾಕದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬಿಜೆಪಿಯವರು ಬೀದಿಪಾಲು ಮಾಡಿಬಿಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು 20000 ಕೋಟಿ ರೂಪಾಯಿಗಳ ವರೆಗೆ ಹಾಲಿನ ವಹಿವಾಟು ಮಾಡುತ್ತಾರೆ. ಈ ಲಕ್ಷಾಂತರ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೆ ಹಾಲಿನಿಂದ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ- ಬರೆ ಮುಂತಾದವುಗಳೆಲ್ಲ ಹಾಲಿನಿಂದಲೆ ಬರಬೇಕು. ಇಂಥ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ ಎಂದಿದ್ದಾರೆ.
ಅವರ ಕಣ್ಣು ಬಿದ್ದ ಕಡೆ, ಅವರು ಕಾಲು ಇಟ್ಟ ಕಡೆ ಎಲ್ಲವೂ ಸರ್ವನಾಶವಾಗುತ್ತದೆ. ಇವರಿಗಾಗಿಯೆ ಹಗಲಿರುಳು ದುಡಿಯುತ್ತಿರುವ ಅಮಿತ್ ಶಾ, ಮೋದಿ ಮುಂತಾದವರೆಲ್ಲ ಥರ ಥರದ ಸುಳ್ಳುಗಳ, ಮುಳ್ಳಿನ ಟೋಪಿಯನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತೊಡಿಸಲು ತರುತ್ತಿದ್ದಾರೆ. ನಮಗೆ ಆಕ್ಸಿಜನ್ನು ಕೊಡದೆ ಕೋವಿಡ್ ಸಮಯದಲ್ಲಿ ಮಾಡಿದ ಪಾಪವನ್ನು ಮೋದಿ ಸರ್ಕಾರವೆ ಹೊರಬೇಕು. ನಮ್ಮನ್ನು ದೋಚಲು ಬಿಜೆಪಿಯವರು ಸಿದ್ಧಪಡಿಸಿಕೊಂಡಿರುವ ವಿಷದ ಟೋಪಿಯಲ್ಲಿ ಹಿಂದೂ-ಮುಸ್ಲಿಂ ದ್ವೇಷ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಎಂಬ ಕಡ್ಡಾಯವಾದ ಮೂರು ಮುಳ್ಳುಗಳು ಇರುತ್ತವೆ. ಜನರು ಎಚ್ಚರ ವಹಿಸಬೇಕು. ಈ ಮಾತುಗಳನ್ನೆ ಮಂತ್ರದಂತೆ ಹೇಳಿ ಅಧಿಕಾರಕ್ಕೆ ಬಂದು ದೇಶದ ಜನರ ರಕ್ತವನ್ನು ಪ್ರತಿ ಹನಿಯನ್ನೂ ಹೀರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿಯವರ ರಾಷ್ಟ್ರ ಪ್ರೇಮವೆಂದರೆ ಅದು ಅಂಬಾನಿ, ಅದಾನಿಗಳಂಥ ಬಂಡವಾಳಿಗರಿಗೆ ಇಡೀ ದೇಶವನ್ನು ಲೂಟಿ ಹೊಡೆಯಲು ಲೈಸೆನ್ಸ್ ಕೊಡುವುದು ಎಂದರ್ಥ ಹಾಗೂ ರಾಷ್ಟ್ರಪ್ರೇಮವೆಂದರೆ ಮನುವಾದಿ ಸಿದ್ಧಾಂತವನ್ನು ಜಾರಿಗೆ ತಂದು ಬುದ್ಧ, ಬಸವಣ್ಣ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಕುವೆಂಪು ಮುಂತಾದ ಮಹನೀಯರ ವಿಚಾರಗಳನ್ನು ಮೂಟೆ ಕಟ್ಟಿ ಮೂಲೆಗೆ ಎಸೆದು ಭಾರತವನ್ನು ಮತ್ತೆ ಕೆಲವರೆ ನಿಯಂತ್ರಿಸಬೇಕು ಎಂಬುದಾಗಿದೆ. ನಾವೀಗ ಕೂಡಲೆ ಬಿಜೆಪಿಯ ವಿದೂಷಕ ಸುಳ್ಳರನ್ನು ಕರ್ನಾಟಕದಿಂದ ತೊಲಗಿಸಿ ನಾಡನ್ನು ಉಳಿಸಿಕೊಳ್ಳಬೇಕಾಗಿದೆ. ನಿಮ್ಮ ಸುಳ್ಳಿಗೆ ನಾವು ಬಲಿಯಾಗುವುದಿಲ್ಲ ಎಂದು ಕೂಗಿ ಹೇಳಬೇಕಾಗಿದೆ. ನಮ್ಮ ರೈತರ ಏಳಿಗೆಯಾಗಬೇಕಾಗಿದೆ. ಅದಕ್ಕಾಗಿ ಅವರ ಹಾಲಿಗೆ ಬೆಲೆ ಬೇಕು. ಬೆಳೆದ ತರಕಾರಿ, ಹಣ್ಣು, ಹತ್ತಿ, ಕಬ್ಬು, ಭತ್ತ, ರಾಗಿ ಸೇರಿದಂತೆ ಎಲ್ಲ ಬೆಳೆಗಳಿಗೆ, ಉತ್ಪನ್ನಗಳಿಗೆ ಉತ್ತಮ ಬೆಲೆ ಬೇಕು. ಅವರು ಬೆಳೆದಿದ್ದನ್ನು ಕೊಂಡುಕೊಳ್ಳುವ ವ್ಯವಸ್ಥೆ ಬೇಕು. ಕೊಳ್ಳುವ ಗ್ರಾಹಕರ ಜೇಬಿನಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು. ನಗರಗಳ ಜನರಿಗೂ ವಸ್ತುಗಳು ದುಬಾರಿಯಾಗದ ರೀತಿಯಲ್ಲಿ ವಸ್ತುಗಳು ಸಿಗಬೇಕು ಎಂದಿದ್ದಾರೆ.
ಬಿಜೆಪಿ ಸರ್ಕಾರವು ಲಂಚವಿಲ್ಲದೆ ಯಾವ ಅಧಿಕಾರಿಗೂ ಹುದ್ದೆ ಕೊಡುತ್ತಿಲ್ಲ. ತಾಲ್ಲೂಕಾಫೀಸು, ಪೊಲೀಸ್ ಸ್ಟೇಷನ್ನು ಸೇರಿದಂತೆ ಯಾವ ಕಚೇರಿಗೆ ಹೋದರೂ ಬಡ ಬಗ್ಗರ, ರೈತರ ಕೆಲಸಗಳು ಆಗುತ್ತಿಲ್ಲ. ರೈತರು ಇದರಿಂದ ಬೇಸತ್ತು ಹೋಗಿದ್ದಾರೆ. ಸರ್ಕಾರದ ಯಾವುದೇ ಕಾಮಗಾರಿಗಳಲ್ಲಿ ಕನಿಷ್ಠ 40 ಪರ್ಸೆಂಟ್ ಲಂಚ ನಡೆಯುತ್ತಿದೆ ಎಂದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹೇಮಾವತಿ ನಾಲೆಗೆ ಸಂಬಂಧಿಸಿದ ನೂರಾರು ಕೋಟಿ ಕಾಮಗಾರಿಯ ಅನೇಕ ಬಾಬತ್ತುಗಳಲ್ಲಿ ಒಂದು ರೂಪಾಯಿಯ ಕೆಲಸವೂ ನಡೆದಿಲ್ಲ. ಆದರೆ ಬಿಲ್ಲು ಮಾಡಿ ನುಂಗಿ ಹಾಕಲಾಗಿದೆ. ಇದರಲ್ಲಿ ಶೇ.80-100 ಪರ್ಸೆಂಟ್ ಕಮಿಷನ್ ನಡೆದಿದೆ. ನಿನ್ನೆ ಕೂಡ ತುಮಕೂರಿನ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತ ಕೃಷ್ಣಾ ಮೇಲ್ದಂಡೆ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ರಸ್ತೆ, ಸೇತುವೆ, ಶಿಕ್ಷಣ ಎಲ್ಲದರಲ್ಲೂ ನುಂಗಿ ನೀರು ಕುಡಿಯಲಾಗುತ್ತಿದೆ. ಇಷ್ಟಿದ್ದರೂ ಯಾವ ಲಜ್ಜೆ ನಾಚಿಕೆ, ಮರ್ಯಾದೆ ಇಲ್ಲದೆ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತಾನಾಡುತ್ತಾರೆ. ಇದಕ್ಕಿಂತ ವಿದೂಷಕತನ ಬೇರೆ ಯಾವುದಿದೆ? ಎಂದು ಪ್ರಶ್ನಿಸಿದ್ದಾರೆ.
ಇದರ ಜೊತೆಗೆ ಬಿಜೆಪಿಯವರು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ. ಭಯೋತ್ಪಾದನೆಯ ಪಿತೃಗಳೇ ಬಿಜೆಪಿಯವರು. ನಾವು ಗಾಂಧೀಜಿಯನ್ನು ಕಳೆದುಕೊಂಡೆವು. ಬಸವಣ್ಣನವರನ್ನು ಕಳೆದುಕೊಂಡೆವು. ಕಲ್ಬುರ್ಗಿಯವರನ್ನು, ಗೌರಿ ಲಂಕೇಶರನ್ನು ಕಳೆದುಕೊಂಡೆವು. ನಮ್ಮದೇ ಪಕ್ಷದ ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಕಳೆದುಕೊಂಡೆವು. ಆದರೆ ಬಿಜೆಪಿಯವರು ಭಯೋತ್ಪಾದಕರನ್ನು ವಿಮಾನದಲ್ಲಿ ಕೂರಿಸಿಕೊಂಡು ಕಂದಹಾರ್ ಗೆ ಬಿಟ್ಟು ಬಂದರು. ತಾಲಿಬಾನ್ ಗೆ ಗೋಧಿ, ಔಷಧ, ಧಾನ್ಯಗಳು, ಹಣಕಾಸಿನ ನೆರವು ಇವನ್ನೆಲ್ಲ ಮಾಡುತ್ತಿದ್ದಾರೆ. ತಾಲಿಬಾನಿಗಳು ಹೆಣ್ಣು ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗಬಾರದೆಂದು ಕಾನೂನು ತಂದಿದ್ದಾರೆ. ಆರ್ ಎಸ್ ಸ್ಸಿನ ಮೋಹನ ಭಾಗವತರು ಸಹ ಹೆಣ್ಣು ಮಕ್ಕಳು ಮನೆ ಕೆಲಸ ಮಾತ್ರ ಮಾಡಬೇಕು, ಹೊರಗಡೆ ಹೋಗಬಾರದು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಸರ್ಕಾರ ಇದ್ದಾಗ ಪಿಎಫ್‍ಐ ಮೇಲಿನ ಕೇಸುಗಳನ್ನು ವಾಪಸ್ಸು ತೆಗೆದುಕೊಂಡರು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ನಾನು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ತರಿಸಿಕೊಂಡಿದ್ದೇನೆ. ಸರ್ಕಾರವೆ ನೀಡಿರುವ ಉತ್ತರದಲ್ಲಿ ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ಸು ತೆಗೆದುಕೊಂಡ ಒಂದೆ ಒಂದು ದಾಖಲೆಯನ್ನೂ ನೀಡಿಲ್ಲ. ಇದಾದ ಮೇಲೆ ಮತ್ತೊಮ್ಮೆ ಪತ್ರ ಬರೆದು ಪಿಎಫ್‍ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ವಿರೋಧ ಪಕ್ಷದ ನಾಯಕನಾಗಿ ಕೇಳಿದ್ದೇನೆ.
ಕಳೆದ 6 ತಿಂಗಳಿಂದ ಮಾಹಿತಿಯನ್ನೆ ಕೊಡದೆ ಕಡತವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಟ್ಟುಕೊಂಡು ಕೂತಿದ್ದಾರೆ. ಆದರೂ ನಾಚಿಕೆಯೇ ಇಲ್ಲದ ನಿರ್ಲಜ್ಜ ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ ಎಂದಿದ್ದಾರೆ.
ಇದೇ ಬಿಜೆಪಿಯೆ ಎಸ್‍ಡಿಪಿಐ ಜೊತೆ ಹಲವಾರು ಕಡೆ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದೆ. ಇಷ್ಟಿದ್ದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಚುನಾವಣೆ ಹತ್ತಿರ ಬರುತ್ತಿದೆ. ಅಂಬಾನಿ, ಅದಾನಿಗಳ ರಾಯಭಾರಿಗಳು ಇನ್ನು ಮುಂದೆ ಕರ್ನಾಟಕಕ್ಕೆ ಬರುತ್ತಾರೆ. ಜನರಿಗೆ ಮುಳ್ಳಿನ ಟೋಪಿ ತೊಡಿಸಿ ಚಿನ್ನದ ಕಿರೀಟವೆನ್ನುತ್ತಾರೆ. ಜನರು ಜಾಗ್ರತೆ ವಹಿಸದಿದ್ದರೆ ನಾಡು ಶಾಶ್ವತವಾಗಿ ಕುಸಿದು ಹೋಗಲಿದೆ ಎಂದಿದ್ದಾರೆ.
ಕರ್ನಾಟಕದ ಯುವಕರು, ಬುದ್ಧಿವಂತರು ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು ಕರ್ನಾಟಕವನ್ನು ಈ ಪೀಡೆಗಳಿಂದ ಮುಕ್ತಗೊಳಿಸಬೇಕು. ನವ ಕರ್ನಾಟಕ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಬೇಕು. ಮತ್ತೊಮ್ಮೆ ಹೇಳುತ್ತೇನೆ. ಸ್ವಾಭಿಮಾನ, ಸ್ವಾತಂತ್ರ್ಯ ಅಭಿವೃದ್ಧಿ ನಮ್ಮ ಗುರಿಯಾಗಬೇಕೊ ಅಥವಾ ಮನುವಾದಕ್ಕೆ, ಗುಜರಾತಿನ ಕಾರ್ಪೊರೇಟ್ ಬಂಡವಾಳಿರಿಗೆ ಗುಲಾಮರಾಗುವುದು ನಮ್ಮ ಆಯ್ಕೆಯೊ ಎಂದು ತೀರ್ಮಾನಿಸಬೇಕಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.