ಸಿಮ್ ಹ್ಯಾಕ್ : ಮಣಿಪಾಲದವರ ನಂಬರ್ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್
Team Udayavani, Mar 4, 2021, 7:40 AM IST
ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸದ್ದು ಮಾಡಿದ್ದ ಎಟಿಎಂ ಸ್ಕಿಮ್ಮಿಂಗ್ ಪ್ರಕರಣ ಇನ್ನೂ ವಿಸ್ತರಣೆಯಾಗುತ್ತಲೇ ಇದೆ. ಹೊಸ ಹೊಸ ದೂರುಗಳು ದಾಖಲಾಗುತ್ತಿವೆ. ಈ ಮಧ್ಯೆಯೇ ಮೊಬೈಲ್ ಸಿಮ್ ಹ್ಯಾಕ್ ಅಥವಾ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ.
ಹದಿನೈದು ವರ್ಷಗಳಿಂದ ಬಳಸುತ್ತಿದ್ದª ವ್ಯಕ್ತಿಯೋರ್ವರ ಸಿಮ್ ನಂಬರ್ ಕೆಲವೇ ದಿನಗಳ ಅಂತರದಲ್ಲಿ ಬಿಹಾರದಲ್ಲಿ ಬೇರೆ ವ್ಯಕ್ತಿಯ ಬಳಿಯಿತ್ತು. ಘಟನೆ ನಡೆದಿದ್ದು ಹೀಗೆ.
ಫೆ. 6ರ ಶನಿವಾರ ಅಪರಾಹ್ನ ಮಣಿಪಾಲದ ಯೋಗೀಶ್ ಶೆಟ್ಟಿ ಅವರು ಬಳಸುತ್ತಿದ್ದ ಬಿಎಸ್‌ಎನ್‌ಎಲ್ ಮೊಬೈಲ್ ಸಂಖ್ಯೆಯು ಹಠಾತ್ ಆಗಿ ನಿಸ್ತೇಜಗೊಂಡಿತು (ಡೆಡ್). ಕರೆಗಳ ಆಗಮನ, ನಿರ್ಗಮನ ಸ್ಥಗಿತವಾಯಿತು. ಕೂಡಲೇ ಅವರು ಮಣಿಪಾಲದಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಗೆ ತೆರಳಿ ಮಾಹಿತಿ ನೀಡಿದರು. ಅದಾಗಲೇ ಅವರ ಕಚೇರಿ ಸಮಯ ಮುಗಿಯುತ್ತಾ ಬಂದಿದ್ದರಿಂದ, ಸಿಮ್ ಪರಿಶೀಲಿಸಿದ ಸಿಬಂದಿ ಹಳೆ ಸಿಮ್ ಆಗಿರುವ ಕಾರಣಕ್ಕೆ ಈ ರೀತಿಯಾಗಿರಬಹುದು. ಸೋಮವಾರ ಬಂದು ಹೊಸ ಸಿಮ್ ತೆಗೆದುಕೊಳ್ಳುವಂತೆ ಸೂಚಿಸಿದರು. ಅದರಂತೆ ಸೋಮವಾರ ಹೊಸ ಸಿಮ್ ದೊರೆತು ಕಾರ್ಯಾರಂಭವನ್ನೂ ಮಾಡಿತು.
ಮತ್ತೆ ಸ್ಥಗಿತ!
ಹೊಸ ಸಿಮ್ ಪಡೆದ 4 ದಿನಗಳಲ್ಲಷ್ಟೇ ಅವರ ಖುಷಿ ಮಾಯವಾಗಿತ್ತು. ಕಾರಣ “ನಿಮ್ಮ ಬಿಎಸ್‌ಎನ್‌ಎಲ್ ಮೊಬೈಲ್ ಸಂಖ್ಯೆಯು ಬಿಹಾರದ ಝಾರ್ಖಂಡ್‌ನಲ್ಲಿ ಪೋರ್ಟ್ ಆಗಿದೆ. ಧನ್ಯವಾದಗಳು’ ಎಂಬ ಸಂದೇಶ ಬಂದಿತು. ಆ ಬಳಿಕ ಮತ್ತೆ ಮೊಬೈಲ್ ಸ್ಥಗಿತಗೊಂಡಿತು. ಘಟನೆಯ ಬಗ್ಗೆ ಬಿಎಸ್‌ಎನ್‌ಎಲ್ ಕಸ್ಟಮರ್ ಕೇರ್‌ಗೆ ಮಾಹಿತಿ ನೀಡಲಾಯಿತಾದರೂ ಸ್ಪಷ್ಟ ಉತ್ತರ ಸಿಗಲಿಲ್ಲ. ಕೊನೆಗೆ ಮತ್ತೆ ಮಣಿಪಾಲದ ಬಿಎಸ್‌ಎನ್‌ಎಲ್ ಕಚೇರಿಗೆ ತೆರಳಿ ವಿಷಯ ತಿಳಿಸಿದರು. ಆದರೂ ಸಮಸ್ಯೆ ಪರಿಹಾರವಾಗಲಿಲ್ಲ. ತಟ್ಟನೇ ಪೋರ್ಟ್ ಬಗ್ಗೆ ಬಂದ ಕೊನೆಯ ಸಂದೇಶ ತೋರಿಸಿದರು. ಏರ್‌ಟೆಲ್ ಮೊಬೈಲ್ ಸಂಖ್ಯೆಗೆ ಪೋರ್ಟ್ ಮಾಡಲಾಗಿದೆ ಎಂಬ ಉತ್ತರ ಸಿಬಂದಿಯಿಂದ ಸಿಕ್ಕಿತು. ಅನಂತರ ಅವರು ಸೀದಾ ತೆರಳಿದ್ದು, ಮಣಿಪಾಲದಲ್ಲಿರುವ ಏರ್‌ಟೆಲ್ ಕಚೇರಿಗೆ. ಅಲ್ಲಿ ಪರಿಶೀಲಿಸಿದಾಗ ನಿಮ್ಮ ಬಿಎಸ್‌ಎನ್‌ಎಲ್ ಸಿಮ್ ಬಿಹಾರದಲ್ಲಿ ಏರ್‌ಟೆಲ್ ಸಿಮ್‌ಗೆ ಪೋರ್ಟ್ ಆಗಿದ್ದು, ಆಶುತೋಷ್ ಎಂಬವರು ಬಳಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ರೀಚಾರ್ಜ್ ಆಗಲಿದೆ ಎಂಬ ಮಾಹಿತಿ ಬಂದಿತು. ಕೂಡಲೇ ಬ್ಯಾಂಕ್‌ಗೆ ತೆರಳಿದ ಅವರು ವಿವಿಧ ಅಕೌಂಟ್‌ಗಳಿಗೆ ನೀಡಿರುವ ನಂಬರ್ ಅನ್ನು ನಿಷ್ಕ್ರಿಯಗೊಳಿಸಲು ಸೂಚಿಸಿದರು. ಆದರೆ ಯೋಗೀಶ್ ಏರ್‌ಟೆಲ್ ಸಿಮ್‌ಗೆ ಪೋರ್ಟ್ ಮಾಡಿರಲಿಲ್ಲ. ಆದರೂ ಅದು ಬಿಹಾರಕ್ಕೆ ಹೇಗೆ ವಲಸೆ ಹೋಯಿತೆಂಬುದು ನಿಗೂಢವಾಗಿದೆ.
ಪೊಲೀಸರಿಗೆ ದೂರು
ಘಟನೆಯ ಬಗ್ಗೆ ಮಣಿಪಾಲದ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಪ್ರಾಥಮಿಕ ಮಾಹಿತಿಯಂತೆ ಯೋಗೀಶ್ ಶೆಟ್ಟಿ ಅವರ ಮೊಬೈಲ್ ನಿಷ್ಕ್ರಿಯಗೊಂಡ ದಿನದಂದು ಅವರ ಆಧಾರ್ ಕಾರ್ಡ್ ಹಾಗೂ ಫೋಟೋದ ನಕಲಿ ಮಾಹಿತಿ ನೀಡಿ ಮಂಗಳೂರಿನ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಸಿಮ್ ಪಡೆದು ಅದನ್ನು ಏರ್‌ಟೆಲ್‌ಗೆ ಪೋರ್ಟ್ ಮಾಡಲಾಗಿತ್ತು.
ಕೆಲವೇ ದಿನಗಳ ಬಳಿಕ ಇವರಿಗೂ ಹಳೆಯ ಸಂಖ್ಯೆ ಲಭಿಸಿದಾಗ ಸಹಜವಾಗಿ ಪೋರ್ಟ್ ಆದ ಬಗ್ಗೆ ಸಂದೇಶ ಬಂದಿದ್ದು, ಸಿಮ್ ಹ್ಯಾಕ್ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸರು ಬಿಎಸ್‌ಎನ್‌ಎಲ್ ಕಚೇರಿಗೆ ನೋಟಿಸ್ ನೀಡಿದ್ದಾರೆ. ಸದ್ಯಕ್ಕೆ ಮೊಬೈಲ್ ಆಕ್ಟಿವೇಟ್ ಮಾಡದಂತೆ ಪೊಲೀಸರು ಮೊಬೈಲ್ ಕಂಪೆನಿಗೆ ಸೂಚಿಸಿದ್ದಾರೆ.
ತನಿಖೆ ಪ್ರಗತಿಯಲ್ಲಿ
ಈ ರೀತಿಯ ಪ್ರಕರಣ ಇದೇ ಮೊದಲ ಬಾರಿಗೆ ಬಂದಿದೆ. ದೂರವಾಣಿ ಸಂಸ್ಥೆಯ ತಾಂತ್ರಿಕ ಕಾರಣದಿಂದ ಆದ ದೋಷವೋ ಅಥವಾ ವಂಚನೆ ಉದ್ದೇಶವೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
-ರಾಜಶೇಖರ ವಂದಲಿ,ಪಿಎಸ್‌ಐ, ಮಣಿಪಾಲ ಠಾಣೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.