ಠಾಣಾ ಮಟ್ಟದಲ್ಲಿಯೂ ಸಾಮಾಜಿಕ ಜಾಲತಾಣ ನಿಗಾ
ಸಾಮಾಜಿಕ ಜಾಲತಾಣ ದುರುಪಯೋಗ ತಡೆಗೆ ಸ್ಥಳೀಯ ಪೊಲೀಸ್ ಕಣ್ಗಾವಲು
Team Udayavani, Apr 16, 2023, 6:45 AM IST
ಮಂಗಳೂರು: ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಹೆಚ್ಚಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲಿಯೂ “ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್” ಮಾದರಿಯಲ್ಲಿ ತಜ್ಞ ಸಿಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಮಾಜಿಕ ಜಾಲ ತಾಣ ನಿಗಾ ಘಟಕವನ್ನು ಸಬ್ ಡಿವಿಷನ್ ಹಂತಕ್ಕೆ ಇತ್ತೀಚೆಗೆ ವಿಸ್ತರಿಸಲಾಗಿತ್ತು. ಇದೀಗ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಠಾಣೆಗಳ ಮಟ್ಟಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಎಲ್ಲ ಠಾಣೆಗಳಿಗೂ ಲ್ಯಾಪ್‌ಟಾಪ್
ಪ್ರತಿಯೊಂದು ಪೊಲೀಸ್ ಠಾಣೆಗಳಿಗೂ ಈಗಾಗಲೇ ಲ್ಯಾಪ್‌ಟಾಪ್ ಒದಗಿಸಲಾಗಿದೆ. ಅಗತ್ಯವಿರುವ ತಂತ್ರಜ್ಞಾನದ ಮಾಹಿತಿ ಇರುವ ಸಿಬಂದಿ ಕೂಡ ಲಭ್ಯರಿದ್ದಾರೆ. ಎಂಜಿನಿಯರಿಂಗ್, ಬಿಸಿಎ ಮೊದಲಾದ ತಾಂತ್ರಿಕ ಶಿಕ್ಷಣ ಪಡೆದವರನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ| ವಿಕ್ರಮ್ ಅಮಟೆ ತಿಳಿಸಿದ್ದಾರೆ.
ಚುನಾವಣೆ ವೇಳೆ ಘಟಕ ಚುರುಕು
ಸದ್ಯ ಚುನಾವಣೆ ನಡೆಯುತ್ತಿರುವುದರಿಂದ ಇದೇ ಅವಧಿಯಲ್ಲಿ ಠಾಣೆಗಳ ಮಟ್ಟದಲ್ಲಿಯೂ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ವಿಭಾಗ ಕ್ರಿಯಾಶೀಲಗೊಳ್ಳಲಿದೆ. ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ
ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಾನಿಟರಿಂಗ್ ಸೆಲ್ ಇದೆ. ಆದಾಗ್ಯೂ ಪೊಲೀಸ್ ಇಲಾಖೆ ಕೂಡ ವಿಶೇಷ ನಿಗಾ ಇಡಲಿದೆ. ಚುನಾವಣೆ ಮುಗಿದ ಅನಂತರವೂ ಇದು ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತದೆ. ಅದಕ್ಕೆ ಪೂರಕವಾಗಿ ವ್ಯವಸ್ಥೆಗಳನ್ನು ಅಳವಡಿಸಿ ಕೊಳ್ಳ ಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಸಿಬಂದಿಯೇ ತಂತ್ರಜ್ಞರು
ಪೊಲೀಸ್ ಇಲಾಖೆಯಲ್ಲಿಯೂ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಹಿನ್ನೆಲೆಯವರಿದ್ದು ಅವರಲ್ಲಿ ಕೆಲವರನ್ನು ಆಯ್ಕೆ ಮಾಡಿ ಅವರಿಗೆ ತಜ್ಞರಿಂದ ತರಬೇತಿ ನೀಡಿ ಅಣಿಗೊಳಿಸಲಾಗುತ್ತಿದೆ. ಪ್ರತೀ ಠಾಣೆಯಿಂದ ಇಬ್ಬರು ಸಿಬಂದಿಯನ್ನು ಆಯ್ಕೆ ಮಾಡಲಾಗುತ್ತದೆ. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯ 14 ಪೊಲೀಸ್ ಠಾಣೆಗಳಿದ್ದು ಮೊದಲ ಹಂತದಲ್ಲಿ ಒಟ್ಟು 14 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ಮುಂದಿನ ಹಂತದಲ್ಲಿ ಮತ್ತೆ 14 ಮಂದಿಯನ್ನು ಆಯ್ಕೆ ಮಾಡಿ ವಿವಿಧ ಹಂತಗಳಲ್ಲಿ ತರಬೇತಿ ನಡೆಯಲಿದೆ.
ಕೆಲವು ಅಪರಾಧ ಚಟುವಟಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್, ಚರ್ಚೆ ಮೊದಲಾದವುಗಳು ಕೂಡ ಕಾರಣವಾಗುತ್ತವೆ. ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಮೇಲೆ ಸ್ಥಳೀಯವಾಗಿಯೂ ನಿಗಾ ಇಡುವುದು ಅಗತ್ಯ. ಸುಳ್ಳು ಸುದ್ದಿ, ವದಂತಿ, ಕೋಮುದ್ವೇಷ ಮೊದಲಾದವುಗಳನ್ನು ಹರಡಿಸುವವರ ಮೇಲೆ ಪರಿಣಾಮಕಾರಿಯಾಗಿ ನಿಗಾ ಇಡಲಾಗುವುದು. ಇದಕ್ಕೆ ಪೂರಕವಾಗಿ ಸ್ಥಳೀಯ ಠಾಣೆಯ ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಯಾರು ಕೂಡ ದುರುಪಯೋಗ ಮಾಡಬಾರದು.
– ಡಾ| ವಿಕ್ರಮ್ ಅಮಟೆ, ಪೊಲೀಸ್ ವರಿಷ್ಠಾಧಿಕಾರಿ, ದ.ಕ. ಜಿಲ್ಲೆ
~ ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.