ಉಡುಪಿಯಲ್ಲಿ ಇಂದು ಶ್ರೀಕೃಷ್ಣಾಷ್ಟಮಿ ಸಂಭ್ರಮ
ಡೋಲು ಉತ್ಸವ ಸಹಿತ ದಿನಪೂರ್ತಿ ವಿಶೇಷ ಕಾರ್ಯಕ್ರಮ ; ನಾಳೆ ಶ್ರೀಕೃಷ್ಣ ಲೀಲೋತ್ಸವ
Team Udayavani, Aug 26, 2024, 1:16 AM IST
ಉಡುಪಿ: ಕೃಷ್ಣನಗರಿಯಲ್ಲಿ ಈ ಬಾರಿ ಮಾಸೋತ್ಸವ ಆಚರಣೆ ಮೂಲಕ ಶ್ರೀ ಕೃಷ್ಣಾಷ್ಟಮಿಗೆ ವಿಶೇಷ ಮೆರಗು ನೀಡಲಾಗಿತ್ತು. ಆ.1ರಿಂದಲೇ ಇದಕ್ಕೆ ಚಾಲನೆ ದೊರೆತಿತ್ತು. ಈಗ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದ್ದು, ಶ್ರೀಕೃಷ್ಣ ಮಠದಲ್ಲಿ ಆ.26ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಆ.27ರಂದು ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಆಚರಣೆ ಜರಗಲಿದೆ.
ಶ್ರೀಕೃಷ್ಣಮಠಕ್ಕೆ ಹೂವಿನ ಅಲಂಕಾರ, ದೇವರಿಗೆ ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಪೂರ್ತಿ ನಡೆಯಲಿವೆ. ಶ್ರೀಕೃಷ್ಣ ಮಠದಲ್ಲಿ ಸೋಮವಾರ ಬೆಳಗ್ಗೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದ ಬಳಿಕ ರಾತ್ರಿ ಪೂಜೆ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಮುಹೂರ್ತ ಮಾಡಲಿದ್ದಾರೆ. ಶ್ರೀಗಳು ಸಹಿತ ಭಕ್ತರು, ಶಿಷ್ಯ ವರ್ಗ ಏಕಾದಶಿಯಂತೆ ನಿರ್ಜಲ ಉಪವಾಸವಿದ್ದು ಕೃಷ್ಣಾಷ್ಟಮಿ ವ್ರತ ಆಚರಿಸುವರು. ಆದ್ದರಿಂದ ರಾತ್ರಿಯೂ ಅರ್ಚನೆ, ಮಹಾಪೂಜೆಯನ್ನು ನಡೆಸುವ ಶ್ರೀಗಳು ಬೆಳಗ್ಗೆ ಮುಹೂರ್ತ ಮಾಡಿದ ಲಡ್ಡುಗಳನ್ನು ಶ್ರೀಕೃಷ್ಣನಿಗೆ ನಿವೇದಿಸುವರು.
ಶ್ರೀ ಕೃಷ್ಣ ದೇವರ ದರ್ಶನಕ್ಕೆ ಎಂದಿನಂತೆ ವ್ಯವಸ್ಥೆ ಇರಲಿದೆ. ವಸಂತ ಮಂಟಪದಲ್ಲಿ ಡೋಲು ಉತ್ಸವ ನಡೆಯಲಿದೆ. ಸಂಕಲ್ಪ ಸಹಿತ ಶ್ರೀ ಕೃಷ್ಣನ ತೊಟ್ಟಿಲು ತೂಗಲು ಅವಕಾಶ ಮಾಡಲಾಗಿದೆ.
ದಿನವಿಡೀ ಕಾರ್ಯಕ್ರಮ
ಜನ್ಮಾಷ್ಟಮಿ ಪ್ರಯುಕ್ತ ದಿನಪೂರ್ತಿ ಮುದ್ದುಕೃಷ್ಣ ವೇಷ ಸ್ಪರ್ಧೆ ರಾಜಾಂಗಣ, ಗೀತಾಮಂದಿರ ಹಾಗೂ ಪುತ್ತಿಗೆ ಮಠದಲ್ಲಿ ನಡೆಯಲಿದೆ. ಭಜನೆ, ನೃತ್ಯ, 108 ಕಲಾವಿದರಿಂದ ಕೊಳಲು ವಾದನ, ಯಕ್ಷಗಾನ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಪಾದರು ಸಂದೇಶ ನೀಡಲಿದ್ದಾರೆ.
ನಾಳೆ ವಿಟ್ಲಪಿಂಡಿ
ಆ. 27ರಂದು ರಥಬೀದಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ. ದ್ವಾದಶಿಯಂತೆ ಮಂಗಳವಾರ ಮುಂಜಾನೆ ಎಲ್ಲ ವಿಧಗಳ ಪೂಜೆಗಳನ್ನು ಶ್ರೀಪಾದರು ನೆರವೇರಿಸುವರು. ಬೆಳಗ್ಗೆ 11ರಿಂದ ಅನ್ನ ಸಂತರ್ಪಣೆ ಆರಂಭಗೊಳ್ಳಲಿದ್ದು, ರಾಜಾಂಗಣದ ಉಪ್ಪರಿಗೆ, ಭೋಜನ ಶಾಲೆ, ಅನ್ನಬ್ರಹ್ಮದಲ್ಲಿ ಸಾವಿರಾರು ಭಕ್ತರಿಗೆ ಕೃಷ್ಣ ಪ್ರಸಾದ ವಿತರಣೆಗೆ ತಯಾರಿ ನಡೆದಿದೆ.
ಮಧ್ಯಾಹ್ನ 3ಕ್ಕೆ ರಥಬೀದಿಯಲ್ಲಿ ಸ್ವರ್ಣರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಮತ್ತು ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳನ್ನು ನವರತ್ನ ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುತ್ತದೆ. ಈ ಸಂದರ್ಭ ಗುರ್ಜಿಗಳಿಗೆ ಹಾಕಿರುವ ಮೊಸರು ಕುಡಿಕೆಯನ್ನು ಕೃಷ್ಣಮಠದ ಗೋವಳರು ಒಡೆಯುತ್ತಾರೆ. ಪರ್ಯಾಯ ಶ್ರೀಪಾದರು ಚಕ್ಕುಲಿ, ಉಂಡೆ ಪ್ರಸಾದವನ್ನು ಮೆರವಣಿಗೆ ವೇಳೆ ಭಕ್ತರಿಗೆ ವಿತರಿಸುತ್ತಾರೆ. ಅನಂತರ ಮೃಣ್ಮಯ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಗುತ್ತದೆ. ಹುಲಿವೇಷ ಸಹಿತ ವಿವಿಧ ವೇಷಧಾರಿಗಳ ಕುಣಿತ ವಿಶೇಷವಾಗಿರಲಿದೆ.
ಇಂದು ಮಧ್ಯರಾತ್ರಿ
12.07ಕ್ಕೆ ಕೃಷ್ಣಾರ್ಘ್ಯ ಪ್ರದಾನ
ಶ್ರೀಕೃಷ್ಣಮಠದಲ್ಲಿ ಸೋಮವಾರ ರಾತ್ರಿ ಚಂದ್ರೋದಯದ ವೇಳೆ 12.07ಕ್ಕೆ ಕೃಷ್ಣಾರ್ಘ್ಯ ಪ್ರದಾನ ನೆರವೇರಲಿದೆ. ಶ್ರೀಪಾದರು ಅರ್ಘ್ಯ ಪ್ರದಾನ ಮಾಡಿದ ಬಳಿಕ ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಶ್ರೀಕೃಷ್ಣನ ಮೃಣ್ಮಯ ಮೂರ್ತಿ
ಉಡುಪಿ: ಶ್ರೀಕೃಷ್ಣಮಠದ ವಿಟ್ಲಪಿಂಡಿ ಉತ್ಸವದಲ್ಲಿ ಪೂಜೆಗೊಳ್ಳುವ ಶ್ರೀಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿ ಸಿದ್ಧಗೊಂಡಿದೆ. ಸುಮಾರು 9 ಇಂಚು ಎತ್ತರದ ವಿಗ್ರಹವನ್ನು ಕಲಾವಿದ ಸೋಮನಾಥ ಅವರು ಒಂದು ವಾರದಲ್ಲಿ ನಿರ್ಮಿಸಿದ್ದಾರೆ.
ಶ್ರೀಕೃಷ್ಣ ನೀಲಶ್ಯಾಮವರ್ಣದವನಾದ ಕಾರಣ ಕಪ್ಪು ಬಣ್ಣವನ್ನು ವಿಗ್ರಹಕ್ಕೆ ಕೊಡಲಾಗಿದೆ. ಸೋಮನಾಥರು ಸುಮಾರು 25 ವರ್ಷಗಳಿಂದ ವಿಗ್ರಹವನ್ನು ರಚಿಸುತ್ತಿದ್ದಾರೆ. ಇವರು ಗಣಪತಿ ತಯಾರಿಸುವ ಕಲಾವಿದರೂ ಆಗಿದ್ದಾರೆ.
ದಕ್ಷಿಣ ಕನ್ನಡದಲ್ಲೂ ಕೃಷ್ಣಾಷ್ಟಮಿ ಸಡಗರ
ಮಂಗಳೂರು: ನಾಡಿನೆಲ್ಲೆಡೆ ಸೋಮವಾರ (ಆ.26) ಶ್ರೀಕೃಷ್ಣ ಜನ್ಮಾಷ್ಟಮಿ ಭಕ್ತಿ ಸಂಭ್ರಮದಿಂದ ನಡೆಯಲಿದೆ. ಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಇತರ ಆಲಯದಲ್ಲಿಯೂ ಭಕ್ತ ಸಂಭ್ರಮದ ಆಚರಣೆ ನಡೆಯಲಿದೆ. ಮನೆಗಳಲ್ಲಿಯೂ ಈ ನಿಟ್ಟಿನಲ್ಲಿ ತಯಾರಿ ನಡೆಸಲಾಗಿದೆ.
ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಜತೆಗೆ ವಿವಿಧ ಕಡೆಗಳಲ್ಲಿ ಕೃಷ್ಣವೇಷ ಸ್ಪರ್ಧೆ, ಮೊಸರುಕುಡಿಕೆ, ದೇವಸ್ಥಾನಗಳಲ್ಲಿ ರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಇತ್ಯಾದಿ ನಡೆಯಲಿದೆ.
ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆ.26ರಂದು ಬೆಳಗ್ಗೆ 10.30ಕ್ಕೆ ನಗರದ ಹಂಪನಕಟ್ಟೆ ನಂದಿನಿ ಸಭಾಭವನ ಸರಕಾರಿ ನೌಕರರ ಸಂಘದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತಿ ಹಮ್ಮಿಕೊಳ್ಳಲಾಗಿದೆ.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು.
ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿರುವರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.