4 ವರ್ಷಗಳಿಂದ ಬಿಡುಗಡೆಯಾಗದ ಸಿನೆಮಾ ಸಬ್ಸಿಡಿ
ಸಂಕಷ್ಟದಲ್ಲಿ ತುಳು ಸೇರಿದಂತೆ ಪ್ರಾದೇಶಿಕ ಭಾಷಾ ಸಿನೆಮಾ ರಂಗ
Team Udayavani, Jun 11, 2023, 8:12 AM IST
ಮಂಗಳೂರು: ನಾಲ್ಕು ವರ್ಷಗಳಿಂದ ಕನ್ನಡದ ಜತೆಗೆ ಯಾವುದೇ ಪ್ರಾದೇಶಿಕ ಭಾಷೆಗಳ ಸಿನೆಮಾಗಳಿಗೆ ಸಬ್ಸಿಡಿ ನೀಡುವ ಬಗ್ಗೆ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ತುಳು ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳ ಸಿನೆಮಾ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ.
ಪ್ರತಿ ವರ್ಷವೂ ರಾಜ್ಯದಲ್ಲಿ ಕನ್ನಡವಲ್ಲದೇ ತುಳು, ಕೊಂಕಣಿ, ಕೊಡವ, ಬ್ಯಾರಿ ಸಹಿತ ಹಲವು ಪ್ರಾದೇಶಿಕ ಭಾಷೆಗಳಲ್ಲೂ ಹಲವಾರು ಸಿನೆಮಾಗಳು ನಿರ್ಮಾಣವಾಗುತ್ತಿವೆ.
2018ರಲ್ಲಿ 82 ಸಿನೆಮಾಗಳಿಗೆ ಸಬ್ಸಿಡಿ ಘೋಷಿಸಿದೆ. 2019ರಲ್ಲಿ ಸಿನೆಮಾಗಳ ಪಟ್ಟಿಯಾಗಿದ್ದರೂ ಘೋಷಣೆ ಆಗಿಲ್ಲ. 2020, 2021 ಹಾಗೂ 2022 ರ ಸಿನೆಮಾಗಳ ಆಯ್ಕೆಯೂ ನಡೆದಿಲ್ಲ. ಇದರಿಂದ ಕನ್ನಡವಲ್ಲದೇ ಪ್ರಾದೇಶಿಕ ಚಿತ್ರರಂಗ ಸಿನೆಮಾ ನಿರ್ಮಾಣಕ್ಕೆ ಹಿಂದೆ ಮುಂದೆ ನೋಡುವಂತಾಗಿದೆ.
ಸಬ್ಸಿಡಿ ನೀಡಲು ಹಲವು ಮಾನ ದಂಡಗಳಿದ್ದು, ವಿವಿಧ ವಿಭಾಗ ಗಳಲ್ಲಿ ಸಿನೆಮಾಗಳನ್ನು ಪರಿಗಣಿಸ ಲಾಗುವುದು. ಉದಾಹರಣೆಗೆ ಕಾದಂಬರಿ, ಸಾಹಿತ್ಯ ಕೃತಿಗಳನ್ನು ಆಧರಿಸಿದ ಚಿತ್ರಗಳು, ಅತ್ಯುತ್ತಮ ಚಾರಿತ್ರಿಕ-ಪ್ರವಾಸಿ ತಾಣಗಳ ಚಲನ ಚಿತ್ರಗಳು, ಅತ್ಯುತ್ತಮ ಮಕ್ಕಳ ಚಲನಚಿತ್ರಗಳು- ಹೀಗೆ ಕೆಲವು ವಿಭಾಗಗಳಿವೆ. ಈ ವಿಶೇಷ ವಿಭಾಗಗಳಲ್ಲಿ ಆಯ್ಕೆಯಾದ ಸಿನೆಮಾ ಗಳಿಗೆ 25, 15 ಲಕ್ಷ ರೂ. ಸಬ್ಸಿಡಿ ಸಿಕ್ಕರೆ, ಉಳಿದವುಗಳನ್ನು ಸಾಮಾನ್ಯ ವಿಭಾಗದಡಿ ಪರಿಗಣಿಸಿ 10 ಲಕ್ಷ ರೂ. ಬಿಡುಗಡೆ ಮಾಡಲಾಗುತ್ತದೆ.
ಸಬ್ಸಿಡಿಗೆ ಪ್ರತೀ ಜನವರಿಯಲ್ಲಿ ಅರ್ಜಿ ಆಹ್ವಾನಿಸುತ್ತಿದ್ದು, ನಿಗದಿತ ಮೊತ್ತ ಪಾವತಿಸಿ ಅರ್ಜಿ ಸಲ್ಲಿಸಬೇಕು. ಆಯ್ಕೆ ಸಮಿತಿಗೆ ಸರಕಾರವೇ ಸದಸ್ಯರನ್ನು ನೇಮಿಸಲಿದ್ದು, ಆಯ್ಕೆ ಪ್ರಕ್ರಿಯೆ ಮಾರ್ಚ್‌ನೊಳಗೆ ಮುಗಿಯಬೇಕು. ಮಾರ್ಚ್ ಒಳಗೆ ಈ ಎಲ್ಲ ಪ್ರಕ್ರಿಯೆ ಮುಗಿಯುತ್ತದೆ. ಆದರೆ ನಾಲ್ಕು ವರ್ಷಗಳಿಂದ ಇದು ನಡೆದಿಲ್ಲ. ಇತ್ತೀಚೆಗಷ್ಟೇ ಈ ನಾಲ್ಕೂ ವರ್ಷಗಳ ಸಬ್ಸಿಡಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ವೇಗ ದೊರಕುವುದೋ ಕಾದು ನೋಡಬೇಕಿದೆ.
ಸಬ್ಸಿಡಿ ಯಾಕೆ ಮುಖ್ಯ?
ತುಳು ಸೇರಿದಂತೆ ಪ್ರಾದೇಶಿಕ ಸಿನೆಮಾಗಳಿಗೆ ಪ್ರೇಕ್ಷಕರು ಒಂದು ನಿರ್ದಿಷ್ಟ ಪ್ರದೇಶಕ್ಕಷ್ಟೇ ಸೀಮಿತ. ಉದಾಹರಣೆಗೆ ತುಳು ಚಲನಚಿತ್ರಗಳು ಕರಾವಳಿಯ ಎರಡು ಜಿಲ್ಲೆಗಳು ಬಿಟ್ಟರೆ ಬೇರೆಡೆ ಪ್ರೇಕ್ಷಕರು ಕಡಿಮೆ. ಕೆಲವು ಚಿತ್ರಗಳನ್ನು ಕಷ್ಟಪಟ್ಟು ಮುಂಬಯಿ ಅಥವಾ ಕೊಲ್ಲಿ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಬೇಕೆಂದರೂ ಹರಸಾಹಸ ಪಡಬೇಕು. ಜತೆಗೆ ತುಳು ಸಿನೆಮಾ ನಿರ್ಮಾಪಕರು ಹಾಗೂ ನಿರ್ದೇಶಕರು ಹೇಳುವಂತೆ ಒಟಿಟಿ ಮತ್ತಿತರ ವೇದಿಕೆಗಳಲ್ಲೂ ಪ್ರದರ್ಶನಕ್ಕೆ ಅವಕಾಶ ಕಡಿಮೆ. ಹಾಗಾಗಿ ಆದಾಯ ಮೂಲ ಬಹಳ ಸೀಮಿತ. ಈ ಹಿನ್ನೆಲೆಯಲ್ಲಿ ಸರಕಾರದ ಸಬ್ಸಿಡಿಯೂ ಸಹ ಹಾಕಿದ ಬಂಡವಾಳವನ್ನು ವಾಪಸು ಪಡೆದು, ಹೊಸ ಸಿನೆಮಾ ನಿರ್ಮಿಸುವುದಕ್ಕೆ ಹೂಡಿಕೆ ಮಾಡಲು ಇರುವ ಆದಾಯ ಮೂಲ. ಸರಕಾರದ ಬಿಡುಗಡೆ ವಿಳಂಬದಿಂದ ಆದಾಯಕ್ಕೇ ಖೋತಾ ಬಂದಂತಾಗಿದೆ.
ನಿರ್ದೇಶಕರ ಅಭಿಮತ ಸಕಾಲದಲ್ಲಿ ಬಿಡುಗಡೆಯಾಗಲಿ
“ಪ್ರಾದೇಶಿಕ ಭಾಷೆಗಳ ಸಾಲಿನಲ್ಲಿ ತುಳುವಿನ 3 ಅಥವಾ 5 ಸಿನೆಮಾಕ್ಕೆ ಸಾಮಾನ್ಯವಾಗಿ ಸಬ್ಸಿಡಿ ಸಿಗುತ್ತದೆ. ಆದರೆ 4 ವರ್ಷಗಳಿಂದ ಸಬ್ಸಿಡಿ ಬಿಡುಗಡೆಯಾಗಿಲ್ಲ. ಪ್ರಾದೇಶಿಕ ಭಾಷೆಯ ಕುರಿತಾದ ಆಸಕ್ತಿಯಿಂದ ಸಿನೆಮಾ ಮಾಡಿದವರಿಗೆ ಸಬ್ಸಿಡಿಯೇ ಆಧಾರ. ಇದರ ಸಕಾಲದಲ್ಲಿ ಬಿಡುಗಡೆಗೆ ಸರಕಾರ ವಿಶೇಷ ಆದ್ಯತೆ ನೀಡಬೇಕಿದೆ’ ಎನ್ನುತ್ತಾರೆ ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ.
ಸರಕಾರ ಮನಸ್ಸು ಮಾಡಲಿ
“ತುಳು ಸಹಿತ ಪ್ರಾದೇಶಿಕ ಸಿನೆಮಾಗಳಿಗೆ ಹೆಚ್ಚು ಥಿಯೇಟರ್ ಹಾಗೂ ಪ್ರೇಕ್ಷಕರು ಸಿಗುವುದಿಲ್ಲ. ಟಿವಿ ರೈಟ್ಸ್, ಒಟಿಟಿ ಅವಕಾಶವೂ ಇಲ್ಲ. ಡಬ್-ರಿಮೇಕ್ ಅವಕಾಶವೂ ಇಲ್ಲ. ಪ್ರಾದೇಶಿಕ ಭಾಷೆಯ ಸಿನೆಮಾ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಸಬ್ಸಿಡಿಯು ಬಹುದೊಡ್ಡ ಆಧಾರ. ಅದನ್ನು ನೀಡಲು ಸರಕಾರ ಮನಸ್ಸು ಮಾಡಬೇಕು’ ಎನ್ನುತ್ತಾರೆ ನಟ, ನಿರ್ದೇಶಕ ರೂಪೇಶ್ ಶೆಟ್ಟಿ.
ಸಬ್ಸಿಡಿಯೂ ಇಲ್ಲ-ಮಲ್ಟಿಪ್ಲೆಕ್ಸ್ ಲಾಭವೂ ಇಲ್ಲ!
ತುಳು ಸಿನೆಮಾ ಕ್ಷೇತ್ರ ಹಲವು ಸಮಸ್ಯೆಗಳಲ್ಲಿ ಸಿಲುಕಿದೆ. ತುಳು ಸಿನೆಮಾಕ್ಕೆ ಸಿಂಗಲ್ ಥಿಯೇಟರ್‌ಗಳೇ ಸಿಗುತ್ತಿಲ್ಲ. ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲ ವಾರ 50-50 ಪ್ರಮಾಣದಲ್ಲಿ ಹಣ ನಿಗದಿ ಮಾಡಿದರೆ, ಎರಡನೇ ವಾರ ಅದು 60 ಶೇ. ಮಲ್ಟಿಪ್ಲೆಕ್ಸ್ ಹಾಗೂ 40 ಶೇ. ಸಿನೆಮಾದವರಿಗೆ, ಮೂರನೇ ವಾರ ಶೇ. 70 ಹಾಗೂ ಶೇ. 30 ಎಂಬ ಅನುಪಾತವಿರುತ್ತದೆ. ಕನ್ನಡ ಸಹಿತ ಉಳಿದ ಸಿನೆಮಾಕ್ಕೆ ಮಾತ್ರ 50-50 ಹಣ ನಿಗದಿಯಾಗಿದ್ದರೆ, ತುಳುವಿಗೆ ಮಾತ್ರ ತಾರತಮ್ಯ ಮಾಡಲಾಗುತ್ತಿದೆ. ಇದರ ಜತೆಗೆ ಸಬ್ಸಿಡಿಯೂ ಸಿಗುತ್ತಿಲ್ಲ ಎಂಬುದು ನೋವು ತರುತ್ತಿದೆ ಎನ್ನುತ್ತಾರೆ ನಿರ್ದೇಶಕ ದೇವದಾಸ್ ಕಾಪಿಕಾಡ್.
ಪ್ರಾದೇಶಿಕ ಸಿನೆಮಾಕ್ಕೆ ಸಬ್ಸಿಡಿ ಕಡ್ಡಾಯ ಸಿಗಲಿ
ಪ್ರಾದೇಶಿಕ ಭಾಷೆಯ ಸಂರಕ್ಷಣೆಯ ಉದ್ದೇಶದಿಂದ ತುಳು, ಕೊಂಕಣಿ, ಕೊಡವ, ಬ್ಯಾರಿ, ಲಂಬಾಣಿ ಭಾಷೆಯಲ್ಲಿ ಬರುವ ಎಲ್ಲ ಪ್ರಾದೇಶಿಕ ಸಿನೆಮಾಗಳಿಗೂ ಸರಕಾರ ಸಬ್ಸಿಡಿ ಕಡ್ಡಾಯವಾಗಿ ನೀಡಬೇಕು. ಭಾಷೆಯ ಪ್ರೀತಿಯಿಂದ ಸಿನೆಮಾ ಮಾಡಿದವರಿಗೆ ಸರಕಾರ ಆಧಾರವಾಗಿ ನಿಲ್ಲಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಸರಕಾರದ ಗಮನಸೆಳೆಯಬೇಕು.
– ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ನಿರ್ದೇಶಕರು, ತುಳು ಸಿನೆಮಾ
ಪ್ರಾದೇಶಿಕ ಭಾಷೆಗಳಿಗೆ ನಿರ್ದಿಷ್ಟತೆ ಇಲ್ಲ
ಸದ್ಯದ ಸಬ್ಸಿಡಿ ನೀತಿಯಲ್ಲಿ ಒಟ್ಟೂ ಆಯ್ಕೆ ಮಾಡುವ ಚಿತ್ರಗಳಲ್ಲಿ ಪ್ರಾದೇಶಿಕ ಭಾಷೆಗಳ ಚಿತ್ರಗಳು ಇಂತಿಷ್ಟು ಪರಿಗಣಿಸಬೇಕು ಎಂಬ ನಿರ್ದಿಷ್ಟತೆ ಇಲ್ಲ. ಹಾಗಾಗಿ ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು ಹೊರತುಪಡಿಸಿದಂತೆ ಉಳಿದ ಪ್ರಾದೇಶಿಕ ಚಿತ್ರಗಳ ಆಯ್ಕೆಯ ಮರ್ಜಿ ಆಯ್ಕೆ ಸಮಿತಿ ಸದಸ್ಯರಿಗೆ ಸಂಬಂಧಿಸಿದ್ದಾಗಿರುತ್ತದೆ. ಸಿಕ್ಕರೆ ಸಿಗಬಹುದು, ಇಲ್ಲವೇ ಸಿಗದಿದ್ದರೂ ಇರಬಹುದು ಎಂಬ ಅನಿಶ್ಚಿತತೆಯಿದೆ. ಇದರಿಂದ ಪ್ರತಿವರ್ಷವೂ ಹತ್ತಾರು ಸಿನೆಮಾ ಬಿಡುಗಡೆ ಮಾಡುವ ತುಳುವಿನಂಥ ಚಿತ್ರರಂಗಕ್ಕೆ ಅನ್ಯಾಯವಾಗುತ್ತಿದೆ. ನಿರ್ದಿಷ್ಟ ಸಂಖ್ಯೆಯನ್ನು ನಿಗದಿಪಡಿಸಿದರೆ, ಅದರಿಂದ ಹೆಚ್ಚು ಅನುಕೂಲವಾಗಿದೆ. ಸಬ್ಸಿಡಿ ನೀತಿ ಪರಿಷ್ಕರಣೆಯಲ್ಲಿ ಈ ಅಂಶವೂ ಪ್ರಸ್ತಾವವಿದ್ದು, ಸರಕಾರಿ ಆದೇಶದಲ್ಲಿ ಯಾವ ರೂಪ ಪಡೆದು ಜಾರಿಯಾಗುತ್ತದೋ ಕಾದು ನೋಡಬೇಕಿದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.