Nuclear War: ಪರಮಾಣು ಸಮರದಲ್ಲಿ ಬಲಾಡ್ಯ ರಾಷ್ಟ್ರಗಳು
Team Udayavani, Jul 2, 2023, 7:52 AM IST
ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಇಡೀ ವಿಶ್ವದಲ್ಲಿ ಸಮರದ ಛಾಯೆ ಹರಡಿಕೊಂಡಿದೆ. ವರ್ಷಗಳುರುಳಿದಂತೆಯೇ ಪ್ರಪಂಚದ ಬಲಾಡ್ಯ ರಾಷ್ಟ್ರಗಳು ರಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಮ್ಮ ಬತ್ತಳಿಕೆಗೆ ಸೇರ್ಪಡೆಗೊಳಿಸಿಕೊಳ್ಳುತ್ತಿವೆ. ದೇಶದ ರಕ್ಷಣೆ ಮತ್ತು ಭದ್ರತೆಗಾಗಿ ಹೊಸ ಹೊಸ ಯುದ್ಧ ಸಲಕರಣೆಗಳು, ಅಸ್ತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅವುಗಳನ್ನು ಹೊಂದಲು ಜಾಗತಿಕ ಸಮುದಾಯ ಪೈಪೋಟಿಗಿಳಿದಿದ್ದು ಅಗಾಧ ಪ್ರಮಾಣದಲ್ಲಿ ಹಣವನ್ನು ವ್ಯಯಿಸುತ್ತಿದೆ. ಇದರ ಪರಿಣಾಮ ದೇಶಗಳು ಪರಮಾಣು ಶಕ್ತಿ ಪ್ರದರ್ಶನದಲ್ಲಿ ಪರಸ್ಪರ ಸ್ಪರ್ಧೆಗೆ ಬಿದ್ದಿವೆ. ಇದೇ ಪರಿಸ್ಥಿತಿ ಮುಂದುವರಿದದ್ದೇ ಆದಲ್ಲಿ ಮೂರನೇ ವಿಶ್ವಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ದೇಶಗಳ ರಕ್ಷಣ ಕ್ಷೇತ್ರಗಳ ಬಗ್ಗೆ ಸಂಶೋಧನೆ ನಡೆಸುವ ಅಂತಾರಾಷ್ಟ್ರೀಯ ಸಂಸ್ಥೆಯಾದ ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನ ಸಂಸ್ಥೆ (ಎಸ್‌ಐಪಿಆರ್‌ಐ) ವರದಿಯು ಆತಂಕ ವ್ಯಕ್ತಪಡಿಸಿದೆ.
ಏನಿದು ಎಸ್‌ಐಪಿಆರ್‌ಐ ?
ಎಸ್‌ಐಪಿಆರ್‌ಐ ರಕ್ಷಣೆ, ಯುದ್ಧ, ಶಸ್ತ್ರಾಸ್ತ್ರಗಳ ವಿಷಯಗಳಲ್ಲಿ ಸಂಶೋಧನೆ ನಡೆಸುವ ಅಂತಾರಾಷ್ಟ್ರೀಯ ಸ್ವತಂತ್ರ ಸಂಸ್ಥೆ. ರಾಷ್ಟ್ರಗಳ ನಡುವಿನ ರಕ್ಷಣ ವ್ಯವಸ್ಥೆ ಹಾಗೂ ಶಾಂತಿ ಸುವ್ಯವಸ್ಥೆಯ ವಿಚಾರವಾಗಿ ವರದಿಗಳನ್ನು ನೀಡಿ, ಅಗತ್ಯ ನೀತಿಗಳನ್ನು ರೂಪಿಸುವಂತೆ ಜಾಗತಿಕ ಸಮುದಾಯಕ್ಕೆ ಸಲಹೆ ನೀಡುತ್ತದೆ.
ಪರಮಾಣು ಶಸ್ತ್ರಾಸ್ತ್ರಗಳ ಮಾಹಿತಿ ಹಂಚಿಕೆ: ಪಾರದರ್ಶಕತೆಯ ಕೊರತೆ
2021ರಲ್ಲಿ ಯುಎನ್‌ಎಸ್‌ಸಿ ಸದಸ್ಯ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವ ಭರವಸೆಯನ್ನು ನೀಡಿದ್ದವು. ಅದಲ್ಲದೇ ಯುದ್ಧ ಸಂದರ್ಭ ಸಂಭವಿಸಿದಲ್ಲಿ ಪರಮಾಣು ಅಸ್ತ್ರಗಳನ್ನು ಉಪಯೋಗಿಸದಂತೆ ಒಪ್ಪಂದಕ್ಕೆ ಬಂದಿದ್ದವು. ಇದರ ನಡುವೆಯೂ ಅಮೆರಿಕ ಮತ್ತು ರಷ್ಯಾ ತಮ್ಮ ಸುಮಾರು 2,000 ಪರಮಾಣು ಅಸ್ತ್ರಗಳನ್ನು ಹೈಲರ್ಟ್‌ನಲ್ಲಿ ಇರಿಸಿಕೊಂಡಿದ್ದವು. ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಹಲವು ದೇಶಗಳು ತಮ್ಮಲ್ಲಿನ ಪರಮಾಣು ಶಸ್ತ್ರಾಸ್ತ್ರಗಳ ಬಗೆಗೆ ಮಾಹಿತಿ ಹಂಚಿಕೊಳ್ಳುವಲ್ಲಿ ಪಾರದರ್ಶಕತೆ ತೋರಿಸಿಲ್ಲ ಎಂದು ಈ ವರದಿ ಹೇಳಿದೆ.
ಪರಮಾಣು ಶಸ್ತ್ರಾಸ್ತ್ರ : ಭಾರತವನ್ನು ಹಿಂದಿಕ್ಕಿದ ಚೀನ, ಪಾಕ್
ಪರಮಾಣು ಶಸ್ತ್ರಾಸ್ತ್ರ ಹಾಗೂ ರಕ್ಷಣ ಸಾಧನಗಳಲ್ಲಿ ಚೀನ ಹಾಗೂ ಪಾಕಿಸ್ಥಾನವು ಭಾರತವನ್ನು ಹಿಂದಿಕ್ಕಿದೆ!. ಹೌದು, ಸ್ವೀಡಿಶ್‌ನ ಚಿಂತಕರ ಚಾವಡಿಯಾಗಿರುವ ಎಸ್‌ಐಪಿಆರ್‌ಐ ನ ಅಂಕಿಅಂಶದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಚೀನವು 60 ಹಾಗೂ ಪಾಕಿಸ್ಥಾನ 5 ಪರಮಾಣು ಶಸ್ತ್ರಾಸ್ತ್ರಗಳನ್ನು ತನ್ನ ರಕ್ಷಣ ಪಡೆಗೆ ಸೇರಿಸಿಕೊಂಡಿದೆ. ಇದೇ ಸಮಯದಲ್ಲಿ ಭಾರತವು ಕೇವಲ 4 ಪರಮಾಣು ಶಸ್ತ್ರಾಸ್ತ್ರಗಳನ್ನು ಮಾತ್ರ ಅಭಿವೃದ್ಧಿ ಪಡಿಸಿದೆ. ಕೇವಲ ಏಷ್ಯಾದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ತೊಡಗಿದ್ದು ಪ್ರಪಂಚವು ಯುದ್ಧದ ಭಯಾನಕ ಸನ್ನಿವೇಶದೆಡೆಗೆ ಹೋಗುತ್ತಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ರಷ್ಯಾ-ಅಮೆರಿಕ ಒಪ್ಪಂದ ರದ್ದು
ಪರಮಾಣು ಅಸ್ತ್ರಗಳಲ್ಲಿ ಮುಂಚೂಣಿಯಲ್ಲಿರುವ ರಷ್ಯಾ ಹಾಗೂ ಅಮೆರಿಕ ದೇಶಗಳು ಈ ಸ್ಪರ್ಧೆಯನ್ನು ನಿಲ್ಲಿಸುವ ಸಂಬಂಧ ನ್ಯೂ ಸ್ಟಾರ್ಟ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಉಕ್ರೇನ್‌ನೊಂದಿಗೆ ಯುದ್ಧ ಆರಂಭಿಸಿದ ಬಳಿಕ ರಷ್ಯಾ ಈ ಒಪ್ಪಂದವನ್ನು ಮುರಿದುಹಾಕಿತ್ತು. ಅಮೆರಿಕ ಹಾಗೂ ರಷ್ಯಾದ ನಡುವೆ ಉಳಿದಿದ್ದ ಏಕೈಕ ಪರಮಾಣು ಒಪ್ಪಂದ ಇದಾಗಿತ್ತು. ಈ ಒಪ್ಪಂದದಲ್ಲಿ ಎರಡೂ ದೇಶಗಳು ತಮ್ಮ ತಮ್ಮ ಪರಮಾಣು ಪರೀಕ್ಷೆಗಳ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದವು. ಇದೇ ಸಮಯದಲ್ಲಿ ತನ್ನ ಪರಮಾಣು ಮಾಹಿತಿಯನ್ನು ಅಮೆರಿಕವು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಷ್ಯಾ ಆರೋಪಿಸಿತ್ತು.
ಉ.ಕೊರಿಯಾದಿಂದ ಸತತ ಅಣ್ವಸ್ತ್ರ ಪರೀಕ್ಷೆ
ಕಳೆದೆರಡು ದಶಕಗಳಿಂದೀಚೆಗೆ ಉತ್ತರ ಕೊರಿಯಾ ನಿರಂತರವಾಗಿ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ಯನ್ನು ನಡೆಸುತ್ತಲೇ ಬಂದಿದ್ದು ಜಾಗತಿಕ ಸಮು ದಾಯಕ್ಕೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದೆ. ತನ್ನ ಶತ್ರು ರಾಷ್ಟ್ರವಾಗಿರುವ ನೆರೆಯ ದಕ್ಷಿಣ ಕೊರಿಯಾಕ್ಕೆ ಬೆಂಬಲವಾಗಿ ನಿಂತಿರುವ ಅಮೆರಿಕದ ವಿರುದ್ಧ ತಿರುಗಿ ಬಿದ್ದಿರುವ ಉತ್ತರ ಕೊರಿಯಾ ಜಾಗತಿಕ ಸಮುದಾಯದ ತೀವ್ರ ಪ್ರತಿರೋಧದ ಹೊರತಾಗಿಯೂ ಪರಮಾಣು ಶಸ್ತ್ರಾಸ್ತ್ರಗಳ ಪ್ರಯೋಗವನ್ನು ಮುಂದುವರಿಸಿದೆ. ಉತ್ತರ ಕೊರಿಯಾದ ಈ ನಡೆ ಕೇವಲ ದಕ್ಷಿಣ ಕೊರಿಯಾ, ಜಪಾನ್, ಅಮೆರಿಕ ಮಾತ್ರವಲ್ಲದೆ ಇಡೀ ವಿಶ್ವ ಸಮುದಾಯದ ಆತಂಕಕ್ಕೆ ಕಾರಣವಾಗಿದೆ.
ಈ ಸಂಬಂಧ ನಿರಂತರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಎಚ್ಚರಿಕೆ ನೀಡುತ್ತಲೇ ಬಂದಿದ್ದರೂ ಉತ್ತರ ಕೊರಿಯಾ ಮಾತ್ರ ಜಿದ್ದಿಗೆ ಬಿದ್ದಂತೆ ಪರಮಾಣು ಶಸ್ತ್ರಾಸ್ತ್ರಗಳನ್ನು ತನ್ನ ಬತ್ತಳಿಕೆಗೆ ಸೇರ್ಪಡೆ ಗೊಳಿಸಿಕೊಳ್ಳುತ್ತಲೇ ಬಂದಿದೆ.
ಎಸ್‌ಐಪಿಆರ್‌ಐನ ಪ್ರಕಾರ 2022ರಲ್ಲಿ ಪ್ರಪಂಚದಲ್ಲಿ ರಾಷ್ಟ್ರಗಳು ರಕ್ಷಣ ಸಲಕರಣೆಗಳ ಮೇಲೆ ವ್ಯಯಿಸುವ ವೆಚ್ಚದಲ್ಲಿ ಶೇ.3.7ರಷ್ಟು ಏರಿಕೆಯಾಗಿದ್ದು, 2,240 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. 2013-22ರ ವರೆಗೆ ಜಾಗತಿಕವಾಗಿ ಶೇ.19ರಷ್ಟು ಏರಿಕೆಯನ್ನು ಕಂಡಿದೆ. ರಷ್ಯಾ – ಉಕ್ರೇನ್‌ನ ಯುದ್ಧವು ಇದಕ್ಕೆ ಕಾರಣ ಎಂದು ಹೇಳಿದೆ.
ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಮುಂಚೂಣಿ ಯಲ್ಲಿರುವ ಅಮೆರಿಕ, ರಷ್ಯಾ
ರಕ್ಷಣ ಸಲಕರಣೆಗಳ ರಫ್ತಿನಲ್ಲಿ ಕಳೆದ ಕೆಲವು ದಶಕಗಳಿಂದ ಅಮೆರಿಕ ಹಾಗೂ ರಷ್ಯಾ ದೊಡ್ಡ ರಾಷ್ಟ್ರಗಳಾಗಿ ಹೊರಹೊಮ್ಮಿವೆ. 2018-2022ರ ವರೆಗೆ ಅಮೆರಿಕ ಜಾಗತಿಕ ರಫ್ತಿನಲ್ಲಿ ಶೇ.40ರಷ್ಟು ಪಾಲನ್ನು ಹೊಂದಿದೆ. ಇದರ ನಡುವೆ ರಷ್ಯಾ ಶಸ್ತ್ರಾಸ್ತ ರಫ್ತಿನಲ್ಲಿ ಶೇ. 32ರಷ್ಟು ಇಳಿಕೆಯನ್ನು ಕಂಡಿದ್ದು, ಜಾಗತಿಕ ಪಾಲುದಾರಿಕೆಯು ಶೇ.22ರಿಂದ ಶೇ.16ಕ್ಕೆ ಇಳಿದಿದೆ. ರಷ್ಯಾದ ಅತೀ ದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ದೇಶ ಭಾರತ. ಆದರೆ 2013-2022ರ ವರೆಗಿನ ಅವಧಿಯಲ್ಲಿ ರಷ್ಯಾ ಭಾರತಕ್ಕೆ ರಫ್ತು ಮಾಡಿದ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಶೇ.37 ರಷ್ಟು ಇಳಿಕೆಯಾಗಿದೆ. ಅಲ್ಲದೇ ಚೀನ ಮತ್ತು ಈಜಿಪ್ಟ್ ದೇಶಗಳ ರಫ್ತಿನಲ್ಲಿ ಏರಿಕೆ ಕಂಡಿದೆ.
ಪರಮಾಣು ಶಸ್ತ್ರಾಸ್ತ್ರಗಳು!
ಸದ್ಯ ಇಡೀ ವಿಶ್ವದಲ್ಲಿ 12,512 ಪರಮಾಣು ಶಸ್ತ್ರಾಸ್ತ್ರಗಳಿವೆ. ಇವುಗಳಲ್ಲಿ ಸುಮಾರು 9,576 ಶಸ್ತ್ರಾಸ್ತ್ರಗಳು ದಾಳಿ ನಡೆಸಲು ಸನ್ನದ್ಧ ಸ್ಥಿತಿಯಲ್ಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ 86 ಪರಮಾಣು ಅಸ್ತ್ರಗಳು ವಿವಿಧ ರಾಷ್ಟ್ರಗಳ ಸೇನಾ ಬತ್ತಳಿಕೆಗೆ ಸೇರ್ಪಡೆಯಾಗಿವೆ. ಆದರೆ ಶೀತಲ ಸಮರದ ಬಳಿಕ ವಿಶ್ವದಲ್ಲಿ ಪರಮಾಣು ಅಸ್ತ್ರಗಳ ಅಭಿವೃದ್ಧಿ ಹಿನ್ನಡೆಯನ್ನು ಕಂಡಿದೆ. ಇದರ ಹೊರತಾಗಿಯೂ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾದ ಚೀನವು ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೆಚ್ಚಿಸುತ್ತಲೇ ಬರುತ್ತಿದೆ. ಎಸ್‌ಐಪಿಆರ್‌ಐ ಅಂಕಿಅಂಶದ ಪ್ರಕಾರ ಪ್ರಪಂಚದ ಶೇ. 90ರಷ್ಟು ಪರಮಾಣು ಶಸ್ತ್ರಾಸ್ತ್ರಗಳು ರಷ್ಯಾ ಹಾಗೂ ಅಮೆರಿಕದ ಬಳಿಯಿವೆ. ಅದಲ್ಲದೇ ಪ್ರಪಂಚದಲ್ಲಿರುವ 12,512 ಪರಮಾಣು ಶಸ್ತ್ರಾಸ್ತ್ರಗಳ ಪೈಕಿ 3,844ರಷ್ಟು ಶಸ್ತ್ರಾಸ್ತ್ರಗಳನ್ನು ಕ್ಷಿಪಣಿಗಳು ಹಾಗೂ ಯುದ್ಧವಿಮಾನಗಳಲ್ಲಿ ಅಳವಡಿಸಲಾಗಿದೆ.
– ರಷ್ಯಾ, ಅಮೆರಿಕದ ಬಳಿ ಇವೆ ವಿಶ್ವದ ಶೇ. 90ರಷ್ಟು ಪರಮಾಣು ಶಸ್ತ್ರಾಸ್ತ್ರಗಳು
– ಕ್ಷಿಪ್ರಗತಿಯಲ್ಲಿ ಅಣ್ವಸ್ತ್ರಗಳನ್ನು ಬತ್ತಳಿಕೆಗೆ ಸೇರಿಸಿಕೊಂಡು ಮೂರನೇ ಸ್ಥಾನದಲ್ಲಿದೆ ಚೀನ
– ಆರ್ಥಿಕವಾಗಿ ದಿವಾಳಿಯಾಗಿದ್ದರೂ ಪಾಕಿಸ್ಥಾನದ ಬಳಿಯಿದೆ 170 ಅಣ್ವಸ್ತ್ರ
ಶಸ್ತ್ರಾಸ್ತ್ರಗಳ ಆಮದಿನಲ್ಲಿ ಭಾರತದ್ದೇ ಅಗ್ರಸ್ಥಾನ !
ವಿವಿಧ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ
ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಆದರೆ ಅಂಕಿಅಂಶದ ಪ್ರಕಾರ 2013-2022ರಲ್ಲಿ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ.11ರಷ್ಟು ಕಡಿಮೆಯಾಗಿದೆ. ಇನ್ನು ಚೀನದಿಂದ ರಕ್ಷಣ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪಾಕಿಸ್ಥಾನವು ಇದೇ ಸಮಯದಲ್ಲಿ ಶೇ.14ರಷ್ಟು ಏರಿಕೆಯನ್ನು ಕಂಡಿದೆ.
ಹಿರೋಶಿಮಾ ಪರಮಾಣು ಬಾಂಬ್ ದಾಳಿ
ಪರಮಾಣು ಬಾಂಬ್‌ನ ದಾಳಿಯ ತೀವ್ರತೆಗೆ ಸಾಕ್ಷಿಯಾಗಿ ಹಿರೋಶಿಮಾ ಇಂದು ನಮ್ಮ ಕಣ್ಣ ಮುಂದಿದೆ. 1945ರ ಆಗಸ್ಟ್ 6 ರಂದು ಅಮೆರಿಕವು ಜಪಾನ್‌ನ ಹಿರೋಶಿಮಾದ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಿತ್ತು. ಹಿರೋಶಿಮಾದ ಮೇಲೆ ಬಿದ್ದ ಈ ಬಾಂಬ್‌ನ ತೂಕ 15 ಕಿಲೋ ಟನ್. ಇದರ ಪರಿಣಾಮ ಅಂದಾಜು 1.46 ಲಕ್ಷಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರು.
~ ವಿಧಾತ್ರಿ ಭಟ್, ಉಪ್ಪುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.