ಕಮಲ ಪಡೆಯ ಗುರಿ “ಟಾರ್ಗೆಟ್ ತೆಲಂಗಾಣ-2023′
ಟಿಆರ್‌ಎಸ್ ವೈಫಲ್ಯ: ಬಿಜೆಪಿಗೆ ವರದಾನ
Team Udayavani, Dec 7, 2020, 7:10 AM IST
ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗದ ಅಮಿತ್ ಶಾ ಹೈದರಾಬಾದ್‌ಗೆ ಸುಮ್ಮನೆ ಕಾಲಿಡಲಿಲ್ಲ. “ಟಾರ್ಗೆಟ್ ತೆಲಂಗಾಣ’ ಗುರಿ ಇಟ್ಟುಕೊಂಡೇ ಭದ್ರವಾದ ಅಡಿಪಾಯ ಹಾಕಲು ಬಂದಿದ್ದರು ಎಂಬುದು ಗ್ರೇಟರ್ ಹೈದರಾ ಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾ ವಣೆಯ ಫಲಿತಾಂಶದಿಂದ ಸಾಬೀತಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನ ಗಳಿಸಿದಾಗ ಅದರಲ್ಲೂ ಇತ್ತೀಚೆಗೆ ನಡೆದ ದುಬ್ಟಾಕ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಅನಂತರವಾದರೂ ಎಚ್ಚೆತ್ತು ಕೊಳ್ಳಬೇಕಿದ್ದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ, ಮುಖ್ಯಮಂತ್ರಿ ಕಲ್ವಕುಂಟ್ಲ ಚಂದ್ರಶೇಖರ ರಾವ್ “ಹೈದರಾಬಾದ್‌ಲೋ ಬಿಜೆಪಿ ಏಮೀ ಜಾದೂ ಚೇಯದು’ (ಹೈದರಾಬಾದ್‌ನಲ್ಲಿ ಬಿಜೆಪಿ ಜಾದೂ ನಡೆಯಲ್ಲ ) ಎಂದು ಮೈ ಮರೆತಿದ್ದಕ್ಕೆ ಬಲ ವಾದ ಪೆಟ್ಟು ತಿನ್ನುವಂತಾಗಿದೆ.
ಇಲ್ಲಿ ಮತ್ತೂಂದು ವಿಷಯ ಗಮನಾರ್ಹ. ದುಬ್ಟಾಕ ವಿಧಾನಸಭೆ ಕ್ಷೇತ್ರದಲ್ಲಿ 2018 ರಲ್ಲಿ ಟಿಆರ್‌ಎಸ್ ಪಕ್ಷದಿಂದ ಗೆದ್ದಿದ್ದ ಮಾಧವನೇನಿ ರಘು ನಂದನರಾವ್ ಕೆ.ಸಿ. ಆರ್. ಜತೆ ವೈಮನಸ್ಯದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪ ಚುನಾವಣೆ ಎದುರಿಸಿದರು. ಟಿಆರ್‌ಎಸ್‌ನ ಸೋಲಿಪೇಟಾ ಸುಜಾತಾ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು. ಅಲ್ಲಿ ಶತಪ್ರಯತ್ನ ಪಟ್ಟರೂ ಕೆಸಿಆರ್‌ಗೆ ರಘು ನಂದನ ರಾವ್ ಗೆಲುವು ತಡೆಯಲಾಗಲಿಲ್ಲ. ಆ ಉಪ ಉಪ ಚುನಾವಣೆಯಲ್ಲಿ ಗೆದ್ದಿದ್ದೇ ಬಿಜೆಪಿಗೆ ಟಿಆರ್‌ಎಸ್ ಬಗ್ಗುಬಡಿಯುವ ಕನಸು ಚಿಗುರೊಡೆ ಯಿತು. ಆಗಲೇ ಗ್ರೇಟರ್ ಹೈದರಾಬಾದ್ ಅಖಾಡಕ್ಕೆ ನೀಲನಕ್ಷೆಯೂ ಸಿದ್ಧವಾಗಿತ್ತು.
ಇದೀಗ ಟಿಆರ್‌ಎಸ್ ಶಾಸಕರಾಗಿದ್ದ ನೋಮುಲ ನರಸಿಂಹಯ್ಯ ನಿಧನದಿಂದ ತೆರವಾಗಿರುವ ನಾಗಾರ್ಜುನ ಸಾಗರ್ ಕ್ಷೇತ್ರದ ಉಪ ಚುನಾವಣೆಗೂ ಬಿಜೆಪಿ ಸಜ್ಜಾಗುತ್ತಿದೆ. ಗ್ರೇಟರ್ ಹೈದರಾಬಾದ್ ಚುನಾವಣೆಯಲ್ಲಿನ ಗೆಲುವು ಒಂದು ರೀತಿಯಲ್ಲಿ ಬಿಜೆಪಿಗೆ “ಟಾರ್ಗೆಟ್ ತೆಲಂಗಾಣ-2023’ಕ್ಕೆ ಗೇಟ್ ವೇ ಆಗಿ ಪರಿಣಮಿಸಿದೆ. ಬಿಜೆಪಿ ಗೆಲುವಿಗೆ ಕೆ. ಚಂದ್ರಶೇಖರ್ ರಾವ್ ಸ್ವಯಂಕೃತ ಅಪರಾಧ ಕಾರಣ ಎನ್ನಬಹುದು.
ತೆಲಂಗಾಣದಲ್ಲಿ ಕೆಸಿಆರ್ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸದ ಬಗ್ಗೆ ಪ್ರಮುಖವಾಗಿ ಉದ್ಯೋಗ ಸೃಷ್ಟಿ ಹಾಗೂ ವಸತಿ ಕಲ್ಪಿಸುವ ವಿಚಾರದಲ್ಲಿ ಹೈದರಾಬಾದ್ ಜನತೆ ತೀರಾ ಆಕ್ರೋಶಗೊಂಡಿದ್ದರು. ಮುಖ್ಯಮಂತ್ರಿಯಾದ ನಂತರ ಬದಲಾದ ಕೆಸಿಆರ್ ಧೋರಣೆ ಬಗ್ಗೆಯೂ ಜನತೆಯಲ್ಲಿ ಆಕ್ರೋಶವಿತ್ತು. ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ ಎಂಬ ಆರೋ ಪವೂ ಇತ್ತು. ಬೆಂಗಳೂರಿ ನಲ್ಲಿ ಫ್ರೀಡಂ ಪಾರ್ಕ್ ಇದ್ದಂತೆ ಹೈದರಾಬಾದ್‌ನಲ್ಲಿ ನಾಗರಿಕರು, ಕಾರ್ಮಿಕ ಸಂಘಟನೆಗಳು, ಸಂಘ-ಸಂಸ್ಥೆಗಳು, ಯುವಸಮೂಹ ಹಕ್ಕುಗಳಿಗಾಗಿ ಹೋರಾಟ ಮಾಡಲು ಇರುವ “ಧರಣಾ ಚೌಕ್’ ಸ್ಥಳಾಂತರ ವಿಚಾರದಲ್ಲೂ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಟಿಆರ್‌ಎಸ್ ಬಿಟ್ಟು ಬಿಜೆಪಿಗೆ ಬಂದವರು ಈ ಎಲ್ಲದರ ಬಗ್ಗೆ ವರಿಷ್ಠರಿಗೆ ಮಾಹಿತಿಯನ್ನೂ ನೀಡಿದ್ದರು. ಆಡಳಿತ ವಿರೋಧಿ ಅಲೆಯನ್ನು ಮತಗಳಾಗಿ ಪರಿವರ್ತಿಸಿ ಕೊಳ್ಳುವಲ್ಲಿ ಅಮಿತ್ ಶಾ ತಂತ್ರಗಾರಿಕೆ ಯಶಸ್ವಿಯಾಗಿದೆ. ಇವೆಲ್ಲದರ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರದಲ್ಲಿ ಬಳಸಿದ “ಹಿಂದುತ್ವ’ ಹಾಗೂ “ಭಾಗ್ಯನಗರ’ ಘೋಷಣೆ ಅಸ್ತ್ರ ಬಿಜೆಪಿಗೆ ಹೊಸ ಮತಬ್ಯಾಂಕ್ ಸೃಷ್ಟಿಸಿದೆ. ವಿವಾದಾತ್ಮಕ ಹೇಳಿಕೆಗಳ ಮೂಲಕ “ಫೈರ್ ಬ್ರಾಂಡ್’ ಎಂದೇ ಬಿಂಬಿತವಾಗಿರುವ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡೀ ಸಂಜಯ್ ಕುಮಾರ್, ಕೇಂದ್ರ ಸಚಿವ ಕಿಶನ್ ರೆಡ್ಡಿ ಕೇಂದ್ರ ನಾಯಕರು ರೂಪಿಸಿದ ಕಾರ್ಯತಂತ್ರಕ್ಕೆ ತಕ್ಕಂತೆ ವೇದಿಕೆ ಸೃಷ್ಟಿಸಿ ಗೆಲುವಿನ ರೂವಾರಿಗಳೆನಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಪಾತ್ರವೂ ಗೆಲುವಿನ ಮೆಟ್ಟಲು ಹತ್ತಿಸಲು ಇಲ್ಲಿ ಸಹಕಾರಿಯಾಗಿದೆ.
2016 ರಲ್ಲಿ 4 ಸ್ಥಾನ ಗಳಿಸಿದ್ದ ಬಿಜೆಪಿ 48 ಸ್ಥಾನಗಳಿಗೆ ಬಲ ಹೆಚ್ಚಿಸಿಕೊಂಡಿರುವುದು ಹಾಗೂ ಮತಗಳಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಸುಲಭದ ಮಾತಲ್ಲ. ಅಧಿಕಾರಕ್ಕೆ ಬರದಿರಬಹುದು. ಆದರೆ ಬಿಜೆಪಿಯ ವೇಗ ವಿರೋಧಿ ಪಕ್ಷಗಳಿಗಳಂತೂ ಎಚ್ಚರಿಕೆಯ ಪಾಠ. ಇಲ್ಲಿ ಚುನಾವಣೆ ಸಂದರ್ಭದಲ್ಲಿ ಬೈದಾಡಿಕೊಂಡಿದ್ದ ಟಿಆರ್‌ಎಸ್ ಹಾಗೂ ಎಐಎಂಐಎಂ ಜತೆಗೂಡಿ ಅಧಿಕಾರ ಹಿಡಿಯಬಹುದು. ಇದರಿಂದ ಬಿಜೆಪಿಗೆ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ಮತ್ತೂಂದು ಅಸ್ತ್ರ ಸಿಕ್ಕಂತಾಗುತ್ತದೆ. ಇತ್ತ¤ ಬಿಜೆಪಿ ಜತೆ ಕೂಡಿಕೆಯೂ ಕಷ್ಟ, ಅತ್ತ ಎಐಎಂಐಎಂ ಜತೆ ಹೋದರೂ ಬಿಜೆಪಿಗೆ ಆಹಾರವಾಗುವ ಸ್ಥಿತಿಯಲ್ಲಿ ಟಿಆರ್‌ಎಸ್ ಸಿಲುಕಿಕೊಂಡಿದೆ.
ಗ್ರೇಟರ್ ಹೈದರಾಬಾದ್‌ನ 150 ಸ್ಥಾನಗಳ ಪೈಕಿ 106 ರಲ್ಲಿ ಸ್ಪರ್ಧೆ ಮಾಡಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಒಂದರಲ್ಲೂ ಜಯಗಳಿಸದೆ ಎಲ್ಲೆಡೆ ಠೇವಣಿ ಕಳೆದುಕೊಂಡಿದೆ. ಇದು ಟಿಡಿಪಿ ಪಾಲಿಗೆ ಹೀನಾಯ ಸೋಲು. ಆಂಧ್ರಪ್ರದೇಶ ವಿಭಜನೆ ನಂತರ ಕುಸಿತ ಕಂಡ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸುವ ಭರವಸೆಯೇನೂ ಇರಲಿಲ್ಲ. ಹೀಗಾಗಿ, 2016ರಲ್ಲಿ ಗೆದ್ದಿದ್ದ ಎರಡು ಸ್ಥಾನ ಉಳಿಸಿಕೊಂಡಿದೆ. ರಾಜ್ಯ ವಿಭಜನೆ ಮಾಡಿದ ಕಾಂಗ್ರೆಸ್ ತೀರ್ಮಾನದ ಬಗ್ಗೆ ಅಲ್ಲಿನ ಜನತೆಗೆ ಇರುವ ಕೋಪ ಇನ್ನೂ ಕಡಿಮೆಯಾಗಿಲ್ಲ ಎಂಬುದು ಸತ್ಯ.
2018ರಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆದ್ದಿತ್ತು. ಘೋಷಮಹಲ್ ಕ್ಷೇತ್ರದಿಂದ ಟಿ.ರಾಜಾಸಿಂಗ್ ಗೆಲುವು ಸಾಧಿಸಿದ್ದರು. ಇದೀಗ ದಬ್ಟಾಕ ಉಪ ಚುನಾವಣೆ ಗೆಲುವು ಅನಂತರ ಎರಡಕ್ಕೆ ಏರಿದೆ. ನಾಗಾರ್ಜುನ ಸಾಗರ ಕ್ಷೇತ್ರದ ಉಪ ಚುನಾವಣೆ ಯಲ್ಲೂ ತಂತ್ರಗಾರಿಕೆಗೆ ಮುಂದಾಗಿದೆ.
ಮೊದಲಿನಿಂದಲೂ ಪ್ರತ್ಯೇಕ ರಾಜ್ಯದ ಹೋರಾಟದ ಮುಂಚೂಣಿಯಲ್ಲಿದ್ದುಕೊಂಡೇ ರಾಜಕೀಯ ಅಸ್ತಿತ್ವ ಗಳಿಸಿಕೊಂಡವರು ಕೆ. ಚಂದ್ರಶೇಖರ್ ರಾವ್. ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿ ಅನಂತರ ತೆಲುಗುದೇಶಂ ಸೇರಿ ಅನಂತರ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷ ಸ್ಥಾಪಿಸಿ ಪ್ರತ್ಯೇಕ ರಾಜ್ಯ ವಿಭಜನೆ ಅನಂತರ ಮೇಡಕ್ ಜಿಲ್ಲೆ ಗಜ್ವಾಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯೂ ಆದರು.
ಇದೀಗ ಕೆ. ಚಂದ್ರಶೇಖರ್ ರಾವ್ ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳ ಬಲವರ್ಧನೆಗೆ ಹೊಸರಂಗ ಕಟ್ಟುವ ಮಾತನಾಡುತ್ತಿದ್ದಾರೆ. ಈ ಬಗ್ಗೆ ಸಭೆ ನಿಗದಿ ಮಾಡಿ, ಜೆಡಿಎಸ್‌ಗೂ ಆಹ್ವಾನ ನೀಡಿದ್ದು, ಎಚ್‌ಡಿಕೆ ಹೋಗಲಿದ್ದಾರೆ.
ಕನ್ನಡಿಗರ ಕಮಾಲ್
ದಕ್ಷಿಣ ಭಾರತದಲ್ಲಿ ನೆಲೆಯೂರಲು “ಕರ್ನಾಟಕ ಗೇಟ್ ವೇ’ ಮಾಡಿಕೊಂಡಿದ್ದ ಬಿಜೆಪಿ ಇದೀಗ ತೆಲಂಗಾಣ ಅನಂತರ ಆಂಧ್ರಪ್ರದೇಶ, ಕೇರಳ ರಾಜ್ಯಗಳತ್ತ ದೃಷ್ಟಿ ನೆಟ್ಟಿದೆ. ಕರ್ನಾಟಕದ ಆಯ್ದ ನಾಯಕರಿಗೆ ಹೊಣೆಗಾರಿಕೆ ನೀಡುವ ಮೂಲಕ “ಟ್ರಯಲ್’ ಮಾಡುತ್ತಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ, ಸಚಿವರಾದ ಈಶ್ವರಪ್ಪ, ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ತೇಜಸ್ವಿ ಸೂರ್ಯ ಆಕ್ರಮಣಕಾರಿ ಪ್ರಚಾರ ಶೈಲಿಯಲ್ಲಿ ಯುವ ಮತದಾರರನ್ನು ಆಕರ್ಷಿ ಸಿದರು. ಪ್ರಮುಖವಾಗಿ ಕರ್ನಾ ಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಒಟ್ಟಾರೆ ಚುನಾ ವಣೆಯ ಸಹ ಉಸ್ತುವಾರಿಯಾಗಿದ್ದರು. ಮಲ್ಕಾಜ್‌ಗಿರಿ ಲೋಕಸಭೆ ಕ್ಷೇತ್ರದ ಹೊಣೆಗಾರಿಕೆಯೂ ವಹಿಸಿಕೊಂಡಿದ್ದರು. ಈ ಪ್ರದೇ ಶ ದಲ್ಲೂ ಬಿಜೆ ಪಿಗೆ ಹೆಚ್ಚು ಸ್ಥಾನ ಲಭಿ ಸಿದೆ. ಇವರ ಜತೆಗೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರಿಗೂ ಸಿಕಂದ ರಾಬಾದ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಹೊಣೆ ಗಾರಿಕೆ ನೀಡಲಾಗಿತ್ತು. ಆ ವ್ಯಾಪ್ತಿಯ ಏಳು ವಿಧಾನ ಸಭೆ ಕ್ಷೇತ್ರದ 34 ವಾರ್ಡ್ ಗಳ ಪೈಕಿ 14 ವಾರ್ಡ್ ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತೆಲುಗು ಭಾಷೆ ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜಕಾರಣದ ಪಟ್ಟು ಅರಿತಿದ್ದ ಈ ಇಬ್ಬರೂ ಅಲ್ಲೂ ಬಿಜೆಪಿಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಧಾ ಕರ್ ಜವಾಬ್ದಾರಿ ವಹಿಸಿದ್ದ ಹಲವು ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ.
– ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.