ನಮ್ಮನ್ನು ಬದುಕಿಸಿದ್ದೇ ಆ ಫೋನ್ ಕರೆ : ಪ್ರವಾಹದಲ್ಲಿ ಬದುಕುಳಿದವರ ಕಥೆ
Team Udayavani, Feb 9, 2021, 7:15 AM IST
ಜೋಶಿಮಠ: “ನಾವು ಜೀವದ ಆಸೆ ಬಿಟ್ಟೇ ಬಿಟ್ಟಿದ್ದೆವು. ಇಂಥದ್ದೊಂದು ದುರಂತ ಅಂತ್ಯ ಕಾಣುತ್ತಿದ್ದೇವಲ್ಲಾ ಎಂಬ ದುಃಖ ಮನದ ತುಂಬಾ ಆವರಿಸಿ, ಕಣ್ಣೀರಾಗಿ ಹರಿಯತೊಡಗಿತ್ತು. ಅಷ್ಟರಲ್ಲಿ ನಮ್ಮಲ್ಲೊಬ್ಬರ ಕೈಯ್ಯಲ್ಲಿದ್ದ ಮೊಬೈಲ್ ಫೋನ್‌ನಲ್ಲಿ ಕಂಡ ನೆಟ್ವರ್ಕ್‌ನ ರೇಖೆ ನಮ್ಮ “ಭವಿಷ್ಯ ರೇಖೆ’ಯನ್ನೇ ಬದಲಿಸಿಬಿಟ್ಟಿತ್ತು…’
ಉತ್ತರಾಖಂಡದಲ್ಲಿ ರವಿವಾರ ಸಂಭವಿಸಿದ ನೀರ್ಗಲ್ಲುಗಳ ಸುನಾಮಿಯಲ್ಲಿ ಅದೃಷ್ಟವಶಾತ್ ಬದುಕುಳಿದ ಕಾರ್ಮಿಕರು ಆಡಿರುವ ಮಾತುಗಳಿವು. ನೀರ್ಗಲ್ಲಿನ ಪ್ರವಾಹದಲ್ಲಿ ಸಿಲುಕೊಂಡ ಹಾಗೂ ಐಟಿಬಿಪಿ ಯೋಧರು ತಮ್ಮನ್ನು ರಕ್ಷಿಸಿದ ಕ್ಷಣಗಳನ್ನು ಈ ಕಾರ್ಮಿಕರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜತೆಗೆ ತಾವು ಮರುಜನ್ಮ ಪಡೆದಿದ್ದಕ್ಕಾಗಿ ಯೋಧರಿಗೆ ಧನ್ಯವಾದ ಹೇಳಿದ್ದಾರೆ.
ಕ್ಷಣಮಾತ್ರದಲ್ಲಿ ಎಲ್ಲವೂ ಬದಲಾಯಿತು: ಚಮೋಲಿ ಜಿಲ್ಲೆಯ ತಪೋವನದ ಭೂಮಿಯ ಡಿಯ ಸುರಂಗದಲ್ಲಿ ಕಾಮಗಾರಿ ನಡೆಯುತ್ತಿತ್ತು. ನಾವು ಕೆಲಸ ಮಾಡುತ್ತಿದ್ದ ಸ್ಥಳದಿಂದ ತಲೆಎತ್ತಿ ನೋಡಿದಾಗ, ಎತ್ತರದ ಪ್ರದೇಶದಲ್ಲಿ ನಿಂತಿದ್ದ ಜನರು ದೂರದಿಂದ ನಮ್ಮನ್ನು ಕೂಗುತ್ತಿದ್ದರು. ಸುರಂಗದಿಂದ ಹೊರಗೋಡಿ ಬರುವಂತೆ ಸೂಚಿಸುತ್ತಿದ್ದರು. ನಮಗೆ ಏನಾಯಿತೆಂದೇ ಅರ್ಥವಾಗಲಿಲ್ಲ. ಅವರೇಕೆ ಹೀಗೆ ಕೂಗುತ್ತಿದ್ದಾರೆ ಎಂದು ಯೋಚಿಸುವಷ್ಟರಲ್ಲಿ, ಭಾರೀ ಪ್ರಮಾಣದ ಕೆಸರು ತುಂಬಿದ್ದ ನೀರು ಏಕಾಏಕಿ ನುಗ್ಗಿ ಬಂತು. ಆಗ ನಾವು ಸುರಂಗದಲ್ಲಿ 300 ಅಡಿ ಆಳದಲ್ಲಿದ್ದೆವು. ಕ್ಷಣ ಮಾತ್ರದಲ್ಲಿ ಪ್ರವಾಹ ನುಗ್ಗಿದ್ದರಿಂದ ನಾವೆಲ್ಲರೂ ಅಲ್ಲೇ ಟ್ರ್ಯಾಪ್ ಆದೆವು. ಸುರಂಗದ ಮೇಲ್ಭಾಗದ ರಾಡ್ಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಬಿಟ್ಟರೆ ನಮಗೆ ಬೇರೆ ದಾರಿಯೇ ಇರಲಿಲ್ಲ. ನಮ್ಮಲ್ಲಿ ಕೆಲವರು ಕೊಚ್ಚಿ ಹೋದರೆ, ಇನ್ನು ಕೆಲವರು ರಾಡ್‌ಗಳನ್ನು ಬಿಗಿಯಾಗಿ ಅಪ್ಪಿಕೊಂಡು ಹಲವು ಗಂಟೆಗಳ ಕಾಲ ಅಲ್ಲೇ ಕಳೆದೆವು.
ಭರವಸೆಯ ಬೆಳಕು ಮೂಡಿತು: ಬದುಕುವ ಎಲ್ಲ ಆಸೆಯೂ ಕಮರಿಹೋಗಿತ್ತು. ಭರವಸೆ ಕಳೆದುಕೊಂಡೆವು. ತತ್‌ಕ್ಷಣ ಎಲ್ಲಿಂದಲೋ ಸಣ್ಣ ಪ್ರಮಾಣದ ಬೆಳಕಿನ ಕಿರಣವೊಂದು ತೂರಿ ಬಂತು. ಆ ಬೆಳಕಿನೊಂದಿಗೇ ಉಸಿರಾಡಲು ಸ್ವಲ್ಪ ಗಾಳಿಯೂ ದೊರೆಯಿತು. ಅದೇ ಸಮಯದಲ್ಲಿ ನಮ್ಮಲ್ಲಿ ಒಬ್ಬನ ಮೊಬೈಲ್‌ನಲ್ಲಿ ದಿಢೀರೆಂದು ನೆಟ್‌ವರ್ಕ್ ಲಭ್ಯವಾಯಿತು. ಸ್ವಲ್ಪವೂ ತಡ ಮಾಡದೇ ಅವನು ನಮ್ಮ ಜನರಲ್ ಮ್ಯಾನೇಜರ್‌ಗೆ ಕರೆ ಮಾಡಿ, ನಮ್ಮ ಪರಿಸ್ಥಿತಿಯನ್ನು, ನಾವಿರುವ ಸ್ಥಳದ ಮಾಹಿತಿ ನೀಡಿದ. ಇದಾದ ಸ್ವಲ್ಪ ಹೊತ್ತಲ್ಲೇ ಐಟಿಬಿಪಿ ಯೋಧರು ಸುರಂಗದ ಒಂದು ಬದಿಯಲ್ಲಿ ಗುಂಡಿಯ ಮೂಲಕ ನಮ್ಮನ್ನು ಒಬ್ಬೊಬ್ಬರನ್ನಾಗಿ ಮೇಲೆತ್ತಿದರು. ನಮ್ಮ ಜೀವ ರಕ್ಷಿಸಿದ ಯೋಧರಿಗೆ ನಾವೆಂದಿಗೂ ಚಿರಋಣಿ ಎನ್ನುತ್ತಾರೆ ಕಾರ್ಮಿಕರಾದ ಲಾಲ್ ಬಹಾದೂರ್, ನೇಪಾಲ ಮೂಲದ ಬಸಂತ್, ವಿನೋದ್ ಸಿಂಗ್ ಪವಾರ್ ಮತ್ತಿತರರು. ಈ ಕಾರ್ಮಿಕರು ಬೆಳಗ್ಗೆ 10ರಿಂದ ಸಂಜೆ ಸುಮಾರು 5 ಗಂಟೆಯವರೆಗೂ ಸುರಂಗದೊಳಗೆ ಸಿಲುಕಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇವರೆಲ್ಲರೂ ಐಟಿ ಬಿಪಿಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರಂಗದೊಳಕ್ಕೆ ಹೋಗಲು ಹರಸಾಹಸ
ಚಮೋಲಿ ಜಿಲ್ಲೆಯ ಸುರಂಗದೊಳಗೆ ಭಾರೀ ಪ್ರಮಾಣದ ಕೆಸರು ತುಂಬಿಕೊಂಡಿದ್ದು, ಯಂತ್ರಗಳ ಸಹಾಯದಿಂದ ಅದನ್ನು ತೆರವುಗೊಳಿಸಲು ಯತ್ನಿಸಲಾಗುತ್ತಿದೆ. ಆದರೆ ಸುರಂಗದಲ್ಲಿ 100 ಮೀಟರ್‌ಗಿಂತ ಒಳಕ್ಕೆ ಪ್ರವೇಶಿಸಲು ರಕ್ಷಣ ಕಾರ್ಯಕರ್ತರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭಿವೃದ್ಧಿಯ ಹೆಸರಲ್ಲಿ ನಾಶ ಕೊನೆಯಾಗಲಿ
ಚಿಪ್ಕೋ ಚಳವಳಿಯ ತೊಟ್ಟಿಲಾದ ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ನೀರ್ಗಲ್ಲು ಸ್ಫೋಟದಿಂದ ಆದ ಅನಾಹುತವು ಚಳವಳಿಯ ನಾಯಕ ಚಂದಿ ಪ್ರಸಾದ್ ಭಟ್‌ರನ್ನು ಕೆರಳಿಸಿದೆ. ಅಭಿವೃದ್ಧಿಯ ಹೆಸರಲ್ಲಿ ಹಿಮಾಲಯದ ಜೀವ ವೈವಿಧ್ಯಕ್ಕೆ ಉಂಟುಮಾಡುತ್ತಿರುವ ಹಾನಿಯನ್ನು ಕೂಡಲೇ ನಿಲ್ಲಿಸಿ. ರವಿವಾರದ ಘಟನೆಯು ನಮಗೆಲ್ಲರಿಗೂ ಎಚ್ಚರಿಕೆಯ ಕರೆ ಗಂಟೆ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಪರಿಸರವಾದ ಚಂದಿ ಪ್ರಸಾದ್ ಹೇಳಿದ್ದಾರೆ. ರಿಷಿ ಗಂಗಾ ಹೈಡೆಲ್ ಪ್ರಾಜೆಕ್ಟ್ನಂತಹ ಯೋಜನೆಗಳಿಗೆ ಪರಿ ಸರ ಅನುಮತಿಯನ್ನೇ ನೀಡಬಾರದಿತ್ತು. ಈ ಯೋಜನೆಯ ಪ್ರತಿಕೂಲ ಪರಿಣಾಮದ ಕುರಿತು ನಾನು 2010ರಲ್ಲೇ ಅಂದಿನ ಪರಿಸರ ಸಚಿವರಿಗೆ ಪತ್ರ ಬರೆದಿದ್ದೆ. ನನ್ನ ಅಂದಿನ ಸಲಹೆಯನ್ನು ಪರಿಗಣಿಸಿದ್ದರೆ, ಈಗ ಇಷ್ಟೊಂದು ಜೀವ ಹಾನಿ ಆಗುತ್ತಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
ಮೋದಿ ನೇತೃತ್ವದಲ್ಲಿ ಸಭೆ
ಉತ್ತರಾ ಖಂಡದ ನೀರ್ಗಲ್ಲು ಸ್ಫೋಟಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉತ್ತರಾಖಂಡದ ಎಲ್ಲ ಸಂಸದರೂ ಭಾಗವಹಿಸಿದ್ದರು. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಇದರಲ್ಲಿ ಪಾಲ್ಗೊಂಡಿದ್ದರು. ಇನ್ನೊಂದೆಡೆ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೂ ಸಭೆ ನಡೆಸಿ, ಹರಿದ್ವಾರದಲ್ಲಿ ರಾಜ್ಯ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸುವುದಾಗಿಯೂ ಹೇಳಿದ್ದಾರೆ.
ನೀರ್ಗಲ್ಲು ಒಡೆದು ದುರಂತ
ನೀರ್ಗಲ್ಲುಗಳ ಒಡೆಯುವಿಕೆಯಿಂದ ಈ ಪ್ರವಾಹವು ಉಂಟಾಗಿರಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ಡಿಆರ್‌ಡಿಒ ವಿಜ್ಞಾನಿಗಳು ಹೇಳಿದ್ದಾರೆ. ಪ್ರಮುಖವಾದ ಬೃಹತ್ ನೀರ್ಗಲ್ಲಿ ನಲ್ಲಿ ನೇತಾಡುತ್ತಿದ್ದ ಮತ್ತೂಂದು ನೀರ್ಗಲ್ಲು, ಅಲ್ಲಿಂದ ಬೇರ್ಪಟ್ಟು ಕಣಿವೆಯಿಂದ ಇಳಿದುದಿರಬಹುದು. ಕಣಿವೆಯಲ್ಲಿ ಅದು ಸ್ಫೋಟಗೊಂಡು ನದಿಗೆ ಸೇರಿ ಪ್ರವಾಹವಾಗಿ ಉಕ್ಕಿ ಹರಿದಿರಲೂ ಬಹುದು ಎಂದೂ ಅವರು ಅಂದಾಜಿಸಿದ್ದಾರೆ. ಇನ್ನೊಂದೆಡೆ, ಶಿಖರದಿಂದ ಏಕಾಏಕಿ ಲಕ್ಷಗಟ್ಟಲೆ ಟನ್ ಹಿಮವು ಕುಸಿದು ದುರಂತ ಸಂಭವಿಸಿರಬಹುದು ಎಂದು ಸಿಎಂ ರಾವತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.