Karnataka: ಮಾತಿನ ಮಲ್ಲಯುದ್ಧಕ್ಕೆ ಕಾಂಗ್ರೆಸ್ ಸರಕಾರದ ಬಜೆಟ್ ಅಧಿವೇಶನ ಸಜ್ಜು
Team Udayavani, Jul 2, 2023, 7:14 AM IST
ಬೆಂಗಳೂರು: ಮುಂಗಾರು ಮಳೆ ವೈಫಲ್ಯದ ಕಾರ್ಮೋಡ, ಚುನಾವಣ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಂತದಲ್ಲಿ ಎದುರಾಗಿರುವ ಸಮಸ್ಯೆ ಗಳು ಹಾಗೂ ಗೊಂದಲಗಳ ನಡುವೆಯೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ 42 ದಿನಗಳ ಕಾಂಗ್ರೆಸ್ ಸರಕಾರದ ಬಜೆಟ್ ಅಧಿವೇಶನ ಸೋಮ ವಾರ, ಜು. 3ರಿಂದ ಆರಂಭವಾಗಲಿದೆ.
ಚುನಾವಣ ಫಲಿತಾಂಶದ ಬಳಿಕ ಕಾಂಗ್ರೆಸ್‌ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸಿ ಸ್ಥಿರತೆಯತ್ತ ಹೆಜ್ಜೆ ಹಾಕಲು ಆರಂಭಿಸುತ್ತಿರು ವಾಗಲೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯ
ಮಂತ್ರಿ ನಡುವೆ ನಡೆದಿದೆ ಎನ್ನಲಾದ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರ ಭಾರೀ ಸದ್ದು ಮಾಡತೊಡಗಿತ್ತು. ಇನ್ನೊಂದೆಡೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರೂ ಬುದ್ಧಿ ಕಲಿಯದ ಬಿಜೆಪಿ ಇದುವರೆಗೂ ಉಭಯ ಸದನಗಳಲ್ಲಿ ವಿಪಕ್ಷ ನಾಯಕರು ಯಾರು ಎಂಬುದನ್ನು ನಿರ್ಧ ರಿಸಲಾಗದ ಸ್ಥಿತಿ ತಲುಪಿದೆ. ಫಲಿತಾಂಶದ ಬಳಿಕ ಬಿಜೆಪಿ ಒಡೆದ ಮನೆಯಾಗಿ ನಾಯಕತ್ವದ ಕೊರತೆ ಎದುರಿಸುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಧಿವೇಶನ ನಡೆಯಲಿದೆ.
ಸೋಮವಾರ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು, ಅನಂತರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ, ಉತ್ತರದ ಬಳಿಕ ಜು. 7ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ.
ಅಧಿವೇಶನಕ್ಕೆ ಮುನ್ನವೇ ಆಡಳಿತಾರೂಢ ಕಾಂಗ್ರೆಸ್, ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಡುವೆ ಗ್ಯಾರಂಟಿ ಯೋಜನೆಗಳ ಜಾರಿ ವಿವಾದ, ವರ್ಗಾವಣೆ, ಹಿಂದಿನ ಸರಕಾರದ ಕೆಲವು ಪ್ರಮುಖ ತಿದ್ದುಪಡಿ ಮಸೂದೆಗಳನ್ನು ರದ್ದುಗೊಳಿಸುವ ಸರಕಾರದ ತೀರ್ಮಾನದ ಬಗ್ಗೆ ವಾಕ್ಸಮರಗಳು ನಡೆದಿರುವುದನ್ನು ಗಮನಿಸಿದರೆ ಉಭಯ ಸದನಗಳಲ್ಲಿ “ಮಾತಿನ ಮಲ್ಲಯುದ್ಧ”ವೇ ನಡೆಯುವ ಸಾಧ್ಯತೆ ಇದೆ.
ಆಡಳಿತ ಪಕ್ಷವಾಗಿ ಬಿಜೆಪಿ 2 ಅವಧಿಗಳಲ್ಲಿಯೂ ಯಶಸ್ವಿಯಾಗಿಲ್ಲ, ವಿಪಕ್ಷದ ಸ್ಥಾನಕ್ಕೆ ಒಳ್ಳೆಯದು ಎಂಬ ವ್ಯಾಖ್ಯಾನಗಳು ಕಮಲ ಪಡೆಯೊಳಗಿನಿಂದಲೇ ಕೇಳಿ ಬರುತ್ತಿವೆ. ಹೀಗಾಗಿ ಬಿಜೆಪಿ ಹೋರಾಟದ ಕಿಚ್ಚುಹಚ್ಚಲು ಸಿದ್ಧವಾಗಿದೆ.
ತಂತ್ರ- ಪ್ರತಿತಂತ್ರ
ಭರ್ಜರಿ ಗೆಲುವು ಪಡೆದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್, ವಿಪಕ್ಷಗಳು ವಿಶೇಷವಾಗಿ ಬಿಜೆಪಿಯನ್ನು ಸದನದ ಒಳಗೂ ಮಣಿಸುವ ನಿಟ್ಟಿನಲ್ಲಿ ತಂತ್ರಗಳನ್ನು ರೂಪಿಸುತ್ತಿದೆ. ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಹಗರಣಗಳ ಹೂರಣ ಹೊರತೆಗೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಗುಟುರು ಹಾಕಿರುವುದು ಹಲವು ಮಾಜಿ ಸಚಿವರ ನಿದ್ರಾಭಂಗಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಗೊಂದಲಗಳನ್ನೇ ಮುಂದಿಟ್ಟುಕೊಂಡು “ವಚನ ಭ್ರಷ್ಟ’ ಸರಕಾರವೆಂದು ಬಿಂಬಿಸಿ ಸಾರ್ವಜನಿಕರ ಅನುಕಂಪ ಗಿಟ್ಟಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಹಿಂದಿನ ಸರಕಾರದ ಹಗರಣಗಳ ತನಿಖೆಗೆ ಎಸ್‌ಐಟಿ ರಚಿಸುವ ಪ್ರಸ್ತಾವನೆ ಬಗ್ಗೆ ಚರ್ಚಿಸತೊಡಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಅರ್ಕಾವತಿ ರೀಡೂ ಬಗ್ಗೆಯೂ ತನಿಖೆಯಾಗಲಿ ಎಂದು ತಾಕೀತು ಮಾಡುವ ಮೂಲಕ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ. ಆದರೆ ಬಿಜೆಪಿಯ ಒಡಕಿನ ಲಾಭ ಪಡೆಯಲು ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ.
ಈ ಬಾರಿ ವಿಧಾನಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಬಂದವರಲ್ಲಿ ಘಟಾನುಘಟಿಗಳೇ ಇದ್ದಾರೆ. ಹಲವು ಹಿರಿಯ ತಲೆಗಳು, ಅನುಭವಿಗಳೂ ಸೇರಿದ್ದಾರೆ. ಸರಕಾರವನ್ನು ಸಮರ್ಥನೆ ಮಾಡಿಕೊಳ್ಳಲು ಸಾಕಷ್ಟು ಮಂದಿ ಸಂಸದೀಯ ಪಟುಗಳಿದ್ದಾರೆ. ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಅತ್ಯಂತ ದುರ್ಬಲವಾಗಿ ಕಾಣುತ್ತಿದೆ. ಒಬ್ಬರನ್ನು ಕಂಡರೆ ಮತ್ತೂಬ್ಬರಿಗೆ ಆಗುವುದಿಲ್ಲ, ಒಬ್ಬ ನಾಯಕನ ಮಾತನ್ನು ಮತ್ತೂಬ್ಬರು ಕೇಳುವುದಿಲ್ಲ, ನಾಯಕತ್ವವೇ ಧೂಳೀಪಟವಾದಂತೆ ಕಾಣುತ್ತಿದೆ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂಬುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ. ಇಂತಹ ಸ್ಥಿತಿಯಲ್ಲಿ ಬಿಜೆಪಿ ಪ್ರಬಲ ವಿಪಕ್ಷವಾಗಿ ಹೋರಾಡುವುದೇ ಎಂಬ ಅನುಮಾನ ಮೂಡಿದೆ.
ಸರಕಾರದ ಕೈಯಲ್ಲಿರುವ ಅಸ್ತ್ರಗಳೇನು?
ಸ್ವತಃ ಸಿಎಂ ಹೇಳಿರುವಂತೆ ನಾಲ್ಕು ವೈದ್ಯಕೀಯ ಕಾಲೇಜುಗಳ ನಿರ್ಮಾಣ ಕಾಮಗಾರಿ, ವೈದ್ಯಕೀಯ ಉಪಕರಣಗಳ ಖರೀದಿ, ಕೊರೊನಾ ವೇಳೆ ಔಷಧ ಹಾಗೂ ಮತ್ತಿತರ ಉಪಕರಣಗಳ ಖರೀದಿ, ಚಾಮರಾಜನಗರ ಆಮ್ಲಜನಕ ದುರಂತ, ಪಿಎಸ್‌ಐ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣ ಸಹಿತ ಕೆಲವು ಪ್ರಮುಖ ಇಲಾಖೆಗಳ ಹಗರಣಗಳ ಪಟ್ಟಿ ಸಿದ್ಧಪಡಿಸಿಕೊಂಡು ತನಿಖಾಸ್ತ್ರ ಪ್ರಯೋಗಿಸಲು ಸರಕಾರ ಮುಂದಾಗಿದೆ.
ಜತೆಗೆ ಚುನಾವಣೆ ವೇಳೆ ವಾಗ್ಧಾನ ಮಾಡಿದಂತೆ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಮತ್ತು ಹಣ ಪಾವತಿಯೊಂದಿಗೆ ಅನುಷ್ಠಾನ, ಗೃಹಲಕ್ಷ್ಮಿಗೆ ಅರ್ಜಿ ಆಹ್ವಾನಿಸಿರುವುದು ಸರಕಾರದ ಸಾಧನೆಗಳ ಪಟ್ಟಿಯಲ್ಲಿವೆ.
ವಿಪಕ್ಷಗಳ ಬಳಿ ಇರುವ ಪ್ರತ್ಯಸ್ತ್ರಗಳು?
ಇದಕ್ಕೆ ಪ್ರತಿಯಾಗಿ ಬಿಜೆಪಿ, ಜೆಡಿಎಸ್ ಗ್ಯಾರಂಟಿ ಯೋಜನೆಗಳ ಗೊಂದಲ, ವಿದ್ಯುತ್ ದರ ಹೆಚ್ಚಳ ವಿವಾದ, ಪಠ್ಯ ಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು, ವರ್ಗಾವಣೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ- ಕಮಿಷನ್ ಆರೋಪಗಳನ್ನು ತನ್ನ ಬತ್ತಳಿಕೆಯಲ್ಲಿಟ್ಟುಕೊಂಡಿವೆ.
ಎಚ್‌ಡಿಕೆ ಹೋರಾಟ ವಿಭಿನ್ನ
ಜೆಡಿಎಸ್‌ಗೆ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ತೀವ್ರ ಹತಾಶೆಗೆ ಒಳಗಾಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರಕಾರ ರಚನೆಯಾದ ದಿನದಿಂದಲೂ ಸಿಎಂ- ಡಿಸಿಎಂ ವಿರುದ್ಧ ಚಾಟಿ ಬೀಸುತ್ತಲೇ ಇದ್ದಾರೆ. ಹತ್ತಾರು ಟ್ವೀಟ್‌ಗಳ ಮೂಲಕ ಸರಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಈ ಬಾರಿ ಕಲಾಪಕ್ಕೆ ನಿತ್ಯ ಹಾಜರಾಗಿ ಸರಕಾರದ ವಿರುದ್ಧ ತಮ್ಮದೇ ರೀತಿಯಲ್ಲಿ ಹೋರಾಡಲು ಸಜ್ಜಾಗಿದ್ದಾರೆ. ಇದಕ್ಕೂ ಒಂದು ಕಾರಣವಿದೆ. ಪ್ರಮುಖ ವಿಪಕ್ಷ ಬಿಜೆಪಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಸನ ಗೌಡ ಪಾಟೀಲ್ ಯತ್ನಾಳ್, ಆರ್. ಅಶೋಕ್, ಡಾ| ಅಶ್ವತ್ಥನಾರಾಯಣ, ಸುನಿಲ್ ಕುಮಾರ್ ಹೊರತುಪಡಿಸಿದರೆ ಸರಕಾರದ ವಿರುದ್ಧ ಮುಗಿಬೀಳುವ ಮುಖಗಳಿಲ್ಲ ಎಂಬುದು ಗೊತ್ತಾಗಿರುವುದರಿಂದಲೇ ಈ ಅವಕಾಶ ಬಳಸಿಕೊಳ್ಳಲು ಎಚ್‌ಡಿಕೆ ನಿರ್ಧರಿಸಿದ್ಧಾರೆ.
ಖಾದರ್‌ಗೆ ಅಗ್ನಿಪರೀಕ್ಷೆ
ಕಾಂಗ್ರೆಸ್‌ನಲ್ಲಿ ಹಲವು ಹಿರಿತಲೆಗಳಿದ್ದರೂ ಯು.ಟಿ. ಖಾದರ್ ಮೇಲೆ ಹಲವು ನಿರೀಕ್ಷೆಗಳನ್ನು ಇರಿಸಿಕೊಂಡು ವಿಧಾನಸಭೆ ಸ್ಪೀಕರ್ ಪಟ್ಟ ಕಟ್ಟಲಾಗಿದೆ. ವಾಸ್ತವವಾಗಿ ಇದು ಅವರಿಗೆ ಮೊದಲ ಅಧಿವೇಶನ ಆಗಿರುವುದರಿಂದ ಒಂದು ರೀತಿಯ ಅಗ್ನಿಪರೀಕ್ಷೆ. ಇದುವರೆಗೆ ಅವರು ಸದಸ್ಯರ ಸ್ಥಾನದಲ್ಲಿ ಕುಳಿತು ಸಭಾಧ್ಯಕ್ಷರತ್ತ ನೋಡುತ್ತಿದ್ದರು. ಈಗ ಅವರು ಸಭಾಧ್ಯಕ್ಷ ಪೀಠದಲ್ಲಿ ಕುಳಿತು ಇಡೀ ಸದನದ ಮೇಲೆ ಕಣ್ಣಿಡಬೇಕಾಗಿದೆ. ಆಡಳಿತ-ವಿಪಕ್ಷವೆಂಬ ತಾರತಮ್ಯ ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಚಿತ್ತದಿಂದ ಸದನ ನಡೆಸುವ ಜವಾಬ್ದಾರಿ ಖಾದರ್ ಮೇಲಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಠಾತ್ ರದ್ದು !
ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ (ವಿಪಕ್ಷ ನಾಯಕ)ನ ಆಯ್ಕೆಗಾಗಿ ರವಿವಾರ ಕರೆಯಲಾಗಿದ್ದ ಶಾಸಕರ ಸಭೆಯನ್ನು ಹಠಾತ್ ರದ್ದುಪಡಿಸ ಲಾಗಿದೆ. ಸೋಮವಾರ ಆರಂಭ ವಾಗಲಿರುವ ಅಧಿವೇಶನ ಹಿನ್ನೆಲೆ ಯಲ್ಲಿ ಎರಡೂ ಸದನಗಳ ವಿಪಕ್ಷ ನಾಯಕರ ಆಯ್ಕೆಗೆ ಶಾಸಕರ ಸಭೆ ನಿಗದಿಯಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬೊಮ್ಮಾಯಿ ರವಿವಾರದ ಸಭೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಶಾಸಕರ ಸಭೆ ದಿಢೀರ್ ರದ್ದಾಗಿರುವುದು ಅಚ್ಚರಿ ಮೂಡಿಸಿದೆ. ಪಕ್ಷದ ಕಚೇರಿಯಿಂದ ಎಲ್ಲ ಶಾಸಕರಿಗೂ ಈ ಸಂಬಂಧ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿದೆ.
ಉಭಯ ಸದನಗಳ ವಿಪಕ್ಷ ನಾಯಕರ ಆಯ್ಕೆಯನ್ನು ದಿಲ್ಲಿಯಲ್ಲೇ ಸಭೆ ನಡೆಸಿ ಘೋಷಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್‌ವೈ ಅವರಿಗೆ ತುರ್ತು ಕರೆ ಮಾಡಿ ದಿಲ್ಲಿಗೆ ಬರುವಂತೆ ಸೂಚಿಸಲಾಗಿದ್ದು, ಬೆಳಗ್ಗೆ 11 ಗಂಟೆಗೆ ಅವರು ದಿಲ್ಲಿಗೆ ತೆರಳಲಿ¨ªಾರೆ. ಈ ಬೆಳವಣಿಗೆಯೊಂದಿಗೆ ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಲವರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಗಳಿವೆ. ಈ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಮುಂಚೂಣಿಯಲ್ಲಿವೆ.
ಜು. 20ರಿಂದ ಸಂಸತ್ ಅಧಿವೇಶನ
ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನ ಜು. 20ರಿಂದ ಆ. 11ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಇದೇ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ ಆಗುವ ನಿರೀಕ್ಷೆ ಇದೆ. ಈಗಾಗಲೇ 17 ವಿಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಎಲ್ಲ ರೀತಿಯಿಂದ ಹಣಿಯಲು ಸಿದ್ಧತೆ ಮಾಡಿಕೊಂಡಿವೆ. ಹಾಗಾಗಿ ಸಮಾನ ನಾಗರಿಕ ಸಂಹಿತೆ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಬಹುದು. ಜತೆಗೆ ಮಣಿಪುರ ಹಿಂಸಾಚಾರ, ದಿಲ್ಲಿಯ ರಾಷ್ಟ್ರ ರಾಜಧಾನಿ ಪ್ರದೇಶ ಸರಕಾರ (ತಿದ್ದುಪಡಿ) ಅಧ್ಯಾದೇಶ ಕೂಡ ಭಾರೀ ಚರ್ಚೆಗೆ ಗ್ರಾಸವಾಗಬಹುದು.
ಈಗಿನ ಅಂದಾಜಿನ ಪ್ರಕಾರ ಆರಂಭದಲ್ಲಿ ಅಧಿವೇಶನ ಹಳೆಯ ಭವನದಲ್ಲೇ ನಡೆಯಲಿದೆ. ಅನಂತರ ಹೊಸ ಭವನಕ್ಕೆ ಸ್ಥಳಾಂತರಗೊಳ್ಳಲಿದೆ.
ಎಂ.ಎನ್. ಗುರುಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು