ಸಾಮಾಜಿಕ ನ್ಯಾಯದ ಪರಿಕಲ್ಪನೆ ಒಳ್ಳೆಯದೆ ಆದರೆ…
Team Udayavani, May 31, 2023, 7:34 AM IST
ಬಡವರಿಗೆ ಹಾಗೂ ಅವಕಾಶ ವಂಚಿತರಿಗೆ ಸುಸ್ಥಿರ ಹಾಗೂ ಗೌರವಯುತ ಜೀವನಾಧಾರವನ್ನು ಒದಗಿಸುವ ಜವಾಬ್ದಾರಿ ಇರುವ ಎಲ್ಲ ರಾಷ್ಟ್ರಗಳಲ್ಲಿ ಸಹಜವಾಗಿ ಸಾಮಾಜಿಕ ರಕ್ಷಣೆ ಮತ್ತು ಕಲ್ಯಾಣ ಕ್ರಮಗಳ ಆವಶ್ಯಕತೆಯನ್ನು ಕಂಡುಕೊಳ್ಳಲಾಗಿದೆ. ಹಸಿದವನಿಗೆ ಬದುಕು ಕಟ್ಟಕೊಳ್ಳಲು ಪೂರಕ ಕ್ರಮಗಳನ್ನು ಯೋಚಿಸಿ, ಯೋಜನೆಗಳನ್ನು ಕೈಗೊಳ್ಳಬೇಕಾ ದುದು ಕಲ್ಯಾಣ ರಾಜ್ಯದ ಪರಿಕಲ್ಪನೆಯ ಪ್ರಜಾಪ್ರಭುತ್ವದ ಜವಾಬ್ದಾರಿಯೂ ಹೌದು.
ಹಸಿದವನಿಗೆ ಮೀನು ನೀಡಿದರೆ ಒಂದು ದಿನದ ಹಸಿವನ್ನು ತಣಿಸಿದಂತೆ. ಅವನಿಗೆ ಮೀನು ಹಿಡಿಯುವ ಕಲೆಯನ್ನು ಕಲಿಸಿಕೊಟ್ಟರೆ ಅವನಿಗೆ ಬದುಕು ಕೊಟ್ಟಂತೆ ಎಂಬ ಪ್ರಾಜ್ಞರ ನುಡಿ ನಮಗೆ ದಾರಿದೀಪವಾಗಬೇಕು. ಹಸಿದವನಿಗೆ ಬದುಕು ಕಟ್ಟಿಕೊಳ್ಳುವ ಕಲೆಯನ್ನು ಕಲಿಸಬೇಕಾಗಿದೆ ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಬಡವರಾದರೂ ಸ್ವಾವಲಂಬಿಗಳಾಗಿ, ಸ್ವಾಭಿಮಾನಿ ಗಳಾಗಿ ಬೆಳೆಯುವಂತೆ ಮಾಡಿದಾಗ ಸೇರ್ಪಡೆ ಯುಳ್ಳ ಸುಸ್ಥಿರ ಅಭಿವೃದ್ಧಿ ಸಾಧ್ಯ.
ಇತಿಹಾಸದಿಂದ ಪಾಠ ಕಲಿಯಬೇಕು
ಅತ್ಯಂತ ಸುಂದರ ಮತ್ತು ರಮಣೀಯವಾದ ಪ್ರಕೃತಿ ತಾಣಗಳಿಗೆ ಮತ್ತು ವಿಶ್ವ ಸುಂದರಿಯರ ತಾಣವಾದ ವೆನೆಜುವೆಲಾ ಏಕಾಏಕಿ 1970ರಲ್ಲಿ ಪ್ರಪಂಚದ ಅತ್ಯಂತ 20 ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಸುಲಭವಾಗಿ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಆಸೆಯಿಂದ ಚುನಾವಣ ಕಾಲದಲ್ಲಿ ಅಲ್ಲಿನ ಪಕ್ಷವೊಂದು ಅಧಿಕಾರಕ್ಕೆ ಬಂದಲ್ಲಿ ನಿರುದ್ಯೋಗಿ ಗಳಿಗೆ ಮತ್ತು ಬಡವರಿಗೆ ಪ್ರತೀ ತಿಂಗಳೂ ಸರಕಾರದ ವತಿಯಿಂದ ಮಾಸಾಶನದ ರೂಪದಲ್ಲಿ ಧನಸಹಾಯ ನೀಡುವುದಾಗಿ ಘೋಷಿಸಿತು. ಈ ಆಮಿಷಕ್ಕೆ ಒಳಗಾದ ಜನರು ಆ ಪಕ್ಷವನ್ನು ಬಹುಮತದಿಂದ ಆಯ್ಕೆ ಮಾಡಿದರು. ಮತ್ತೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ಸರಕಾರಿ ನೌಕರರು ಹಾಗೂ ಕಾರ್ಮಿಕರ ಸಂಬಳವನ್ನು ಐದು ಪಟ್ಟು ಹೆಚ್ಚಿಸುವ ಕೊಡುಗೆಗಳನ್ನು ಪ್ರಕಟಿಸಿತು.
2008ರ ಚುನಾವಣೆಯಲ್ಲಂತೂ ಬೆಲೆಯೇರಿಕೆ ಇಲ್ಲದ ಆಹಾರ ಸರಬರಾಜು ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಿಸಿದ ಪಕ್ಷ ಅಧಿಕಾರಕ್ಕೆ ಬಂದ ಅನಂತರ ಸರಕಾರವೇ ಎಲ್ಲ ಆಹಾರ ಸಾಮಗ್ರಿಗಳ ಬೆಲೆಯನ್ನು ನಿಗದಿಪಡಿಸಿತು. ಸರಕಾರ ನಿರ್ಧರಿಸಿದ ಬೆಲೆಗೆ ದೈನಂದಿನ ವಸ್ತುಗಳನ್ನು ಮತ್ತು ಆಹಾರವನ್ನು ಸರಬರಾಜು ಮಾಡಲಾಗದೇ ಅನೇಕ ವ್ಯಾಪಾರಿಗಳು ದಿವಾಳಿಯಾದರು. ಅಲ್ಲಿನ ಉದ್ಯಮಗಳು ಸಾರಾಸಗಟಾಗಿ ಮುಚ್ಚುತ್ತಾ ಹೋಗಿ ಮುಚ್ಚಿ ಆಹಾರ ಉತ್ಪನ್ನಗಳೊಂದಿಗೆ ಸಾಮಾನ್ಯ ವಸ್ತುಗಳನ್ನು ಕೂಡ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದಂತಹ ದಯನೀಯ ಸ್ಥಿತಿಗೆ ವೆನೆಜುವೆಲಾ ತಲುಪಿತು. ಇಷ್ಟಾದರೂ ದೇಶದ ಜನರು ಯಾವುದೇ ಕೆಲಸ ಮಾಡದೇ ಸರಕಾರ ಕೊಡುವ ಉಚಿತ ಸವಲತ್ತುಗಳನ್ನೇ ಬಳಸಿಕೊಂಡು ಜೀವನವನ್ನು ನಡೆಸತೊಡಗಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆ ಇದ್ದಕ್ಕಿದ್ದಂತೆಯೇ ಬಿದ್ದುಹೋದಾಗ ಅದಕ್ಕೆ ತಲೆಕೆಡಿಸಿಕೊಳ್ಳದ ವೆನೆಜುವೆಲಾ ಯಥೇತ್ಛವಾಗಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಟ್ಟ ಕಾರಣ ಹಣದುಬ್ಬರ ಬಂದೆರಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ನಗದಿಗೆ ಬೆಲೆಯೇ ಇಲ್ಲದಾಗಿ ಹೋಯಿತು.
2018ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಉಚಿತ ಸಬ್ಸಿಡಿ ಎಲ್ಲವೂ ನಿಂತುಹೋಯಿತು. ಆಹಾರದ ಕೊರತೆಯೊಂದಿಗೆ ಆಲಸೀ ಬದುಕಿಗೆ
ಹೊಂದಿಕೊಂಡ ಸಮಾಜದಲ್ಲಿ ಲೂಟಿ, ದರೋಡೆ ಸಾಮಾನ್ಯವಾಗಿ ಬಿಟ್ಟಿತು. ಯಾವ ದೇಶದಲ್ಲಿ ಪೆಟ್ರೋಲ್, ಡೀಸೆಲ್ ನೀರಿಗಿಂತ ಅಗ್ಗವಾಗಿತ್ತೋ ಅದೇ ದೇಶ ಇಂದು ಹತ್ತು ಲೀಟರ್ ಪೆಟ್ರೋಲ್‌ಗೆ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವಂತಹ ದುಃಸ್ಥಿತಿಗೆ ಬಂದು ತಲುಪಿದೆ.
ಕೂತು ಉಣ್ಣವವನಿಗೆಕುಡಿಕೆ ಹೊನ್ನು ಸಾಲದು
ಕೂತು ತಿನ್ನುವವರಿಗೆ ಕುಡಿಕೆ ಹೊನ್ನು ಸಾಲದು ಎನ್ನುವ ಗಾದೆ ಮಾತು ಅಕ್ಷರಶಃ ಸತ್ಯ ಎಂದು ವೆನೆಜುವೆಲಾ ಆರ್ಥಿಕತೆಯ ದಿವಾಳಿತನದಿಂದ ನಾವು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯು ಏನಾದರೊಂದು ದೈಹಿಕ ಶ್ರಮದ ಮೂಲಕ ಸಂಪಾದನೆ ಮಾಡಿ ಜೀವನ ನಡೆಸಬೇಕು. ಸೋಮಾರಿಯಾಗಿ ಕಾಲಕಳೆಯದೆ ಕಷ್ಟಪಟ್ಟು ದುಡಿದು ಬದುಕುವುದರಿಂದ ಹಣ ಸಂಪಾದನೆ ಸಾಧ್ಯ. ಎಷ್ಟೇ ಹಣವಿದ್ದರೂ ಅದನ್ನು ಮರುತುಂಬದೆ ಬರಿಯ ಖರ್ಚು ಮಾಡುತ್ತಾ ಹೋದರೆ ಅದು ಖಾಲಿಯಾಗಬೇಕಲ್ಲವೇ? ಇದನ್ನರಿತ ನಮ್ಮ ಪೂರ್ವಜರು ಎಚ್ಚರಿಕೆಯ ರೂಪದಲ್ಲಿ “ಕೂತು ತಿಂದರೆ ಕುಡಿಕೆ ಹೊನ್ನು ಸಾಲದು’ ಎಂದರು. ಹನ್ನೆರಡನೆಯ ಶತಮಾನದಲ್ಲಿಯೇ ಶಿವಶರಣರು ಕಾಯಕವೇ ಕೈಲಾಸ, ಎಂದು ದುಡಿಮೆಯ ಮಹತ್ವವನ್ನು ಸಾರಿದರು.
ಉಚಿತ ಭಾಗ್ಯಗಳ ಮಾಯಾಲೋಕ
ಜನಪ್ರಿಯ ಯೋಜನೆಗಳನ್ನು ಘೋಷಿಸಿ ಮತಗಳಿಸುವ ಭರವಸೆಗಳು ಆಮಿಷಗಳಾಗಿ ಜನಸಾಮಾನ್ಯರು ಉಚಿತ ಭಾಗ್ಯಗಳ ಮಾಯಾಲೋಕದ ಬಂಧಿಗಳಾಗುತ್ತಾರೆ. ಇದರಿಂದಾಗಿ ಸಾರ್ವಜನಿಕ ಸಂಪನ್ಮೂಲಗಳ ಅಪವ್ಯಯ ಒಂದೆಡೆಯಾದರೆ ದೀರ್ಫಾವಧಿ ಪರಿಣಾಮ ಬೀರಬಲ್ಲ ಅಗತ್ಯ ಅಭಿವೃದ್ಧಿ ಸೌಕರ್ಯಗಳಿಗೆ ಸಂಪನ್ಮೂಲಗಳ ಕೊರತೆಯಾ
ಗುತ್ತದೆ. ಜನಪ್ರಿಯ ಯೋಜನೆಗಳಿಂದಾಗಿ ಅತ್ಯಗತ್ಯವಾಗಿ ಬೇಕಿರುವ ಸಾಮಾಜಿಕ ಅಭಿವೃದ್ಧಿ ವಲಯಕ್ಕೆ ಹಣಕಾಸಿನ ಮುಗ್ಗಟ್ಟು ಉಂಟಾಗುತ್ತಿದೆ. ಉಚಿತ ಕೊಡುಗೆಗಳಿಂದಾಗಿ ಅರ್ಥವ್ಯವಸ್ಥೆಯು ಕಳೆದುಕೊಳ್ಳುವ ಸಂಪನ್ಮೂಲ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾಗುವ ಹಣದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿರುವುದು ಸಮಯೋಚಿತವಾದುದು.
ಸಮಾನ ಅವಕಾಶಗಳು ಲಭಿಸಲಿ
ಭಾರತೀಯ ಅಸಮಾನತೆಯ ಕುರಿತು 2023ರ ಆಕ್ಸ್‌ಫ್ಯಾಮ… ವರದಿಯು ಸಾಂದರ್ಭಿಕ ವೀಕ್ಷಣಾ ಶಕ್ತಿಯನ್ನು ಹೊಂದಿರುವ ಯಾರಿಗಾದರೂ ಆಶ್ಚರ್ಯವಾಗುವುದಿಲ್ಲ. ಟ್ರಾಫಿಕ್ ಜಂಕ್ಷನ್‌ನಲ್ಲಿ ಭಿಕ್ಷುಕರಿಂದ ಸುತ್ತುವರಿದ ಐಷಾರಾಮಿ ಕಾರುಗಳು, ಹವಾನಿಯಂತ್ರಿತ ಕಾರುಗಳಲ್ಲಿ ಕುಳಿತು ತಮ್ಮ ಐಪ್ಯಾಡ್‌ಗಳಲ್ಲಿ ಮಗ್ನರಾಗಿರುವವರ ಗಮನಸೆಳೆ
ಯಲು ಹತಾಶ ಪ್ರಯತ್ನ ಮಾಡುವ ಅಗ್ಗದ ಆಟಿಕೆಗಳು ಮತ್ತು ಕಡಲೆಕಾಯಿ ಮಾರಾಟಗಾರರನ್ನು ಗಮನಿಸಿದಾಗ ದೇಶದ ಆರ್ಥಿಕ ಅಸಮಾನತೆಯ ಚಿತ್ರಣದ ಅನಾವರಣವಾಗುತ್ತದೆ. ಮನೆಯ ಒಡೆಯನ ವೇತನ ಹೆಚ್ಚಿಸುವ ಯೋಜನೆ ಜಾರಿಯಾಗಬೇಕಿದೆ. ಅಂತೆಯೇ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯತ್ತ ಗಮನಹರಿಸಬೇಕಿದೆ.
ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸೇರ್ಪಡೆಯಾಗದೆ ಅಂಚಿಗೆ ತಳ್ಳಲ್ಪಟ್ಟ ವರ್ಗದ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕ, ಸಾಮಾಜಿಕ ಅಂತರ ಕಡಿಮೆ ಮಾಡಲು ತತ್‌ಕ್ಷಣಕ್ಕೆ ಹೊಳೆಯುವ ಯೋಜನೆ ಉಚಿತ ಭಾಗ್ಯಗಳು. ಅಲ್ಪಾವಧಿ ಖುಷಿ ನೀಡುವ ಉಚಿತಗಳ ಆಮಿಷಕ್ಕೆ ಒಳಗಾಗಿ ದೀರ್ಘಾವಧಿ ಬೆಳವಣಿಗೆಯ ಚಿಂತನೆ ಗೌಣವಾಗದಿರಲಿ. ಮಾರುಕಟ್ಟೆಯು ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದಕ್ಕಾಗಿ ಕಾಯುವ ಬದಲು ಅಸಮಾನತೆಯನ್ನು ತಗ್ಗಿಸಿ ಸಮಾನ ಅವಕಾಶವನ್ನು ಕಲ್ಪಿಸುವ ಮೂಲಕ ಜನಸಾಮಾ
ನ್ಯರೂ ಅಭಿವೃದ್ಧಿಯ ಫಲವನ್ನು ಉಣ್ಣುವಂತಾ ಗಬೇಕು.
ಉತ್ಪಾದಕತೆ ಹಾಗೂ ಉದ್ಯೋಗ ಸೃಷ್ಟಿಗೆ ಇರಲಿ ಆದ್ಯತೆ
ಅಲ್ಪಕಾಲಿಕ ಶಮನ ನೀಡುವ ಉಚಿತ ಭಾಗ್ಯಗಳು ಅರ್ಹ ಫಲಾನುಭವಿಗಳನ್ನು ತಲುಪಲಿ ಹಾಗೂ ಜನ ಸಾಮಾನ್ಯರ ಕ್ರಿಯಾಶೀಲತೆಗೆ ಅಡ್ಡಿಯಾಗದಿರಲಿ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಯೋಜನೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥಶಾಸ್ತ್ರ ನಮಗೆ ತಿಳಿಸುತ್ತದೆ. ಭಾರತ ಈಗ ಜನಸಂಖ್ಯಾ ಹೆಚ್ಚಳದೊಂದಿಗೆ ಬಹುಮುಖ್ಯ ಅವಕಾಶ ಮತ್ತು ಸವಾಲನ್ನು ತನ್ನದಾಗಿಸಿಕೊಂಡಿದೆ. ಕೆಲಸ ಮಾಡುವ ಪ್ರಾಯ ಹಾಗೂ ಸಾಮರ್ಥ್ಯ ಇರುವ ವಿಪುಲ ಯುವಜನತೆಯ ಸದ್ಬಳಕೆ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ. ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿರುವ ದೇಶದ ಸರ್ವಾಂಗೀಣ ಪ್ರಗತಿಗೆ ಆಧುನಿಕ ಶಿಕ್ಷಣ ಹಾಗೂ ಕೌಶಲವರ್ಧನೆ ಅತ್ಯಗತ್ಯ. ದೇಶದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು, ಲಭ್ಯ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಭಾರತೀಯರ ಬದುಕು ಸಹನೀಯವಾಗಿರಲು ಸಾಧ್ಯ.
ಡಾ| ಎ.ಜಯ ಕುಮಾರ ಶೆಟ್ಟಿ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.