ನಗರ-ಗ್ರಾಮೀಣ ವರ್ಗೀಕರಣವೇ ಬದಲಾಗಬೇಕು


Team Udayavani, Mar 3, 2021, 6:35 AM IST

ನಗರ-ಗ್ರಾಮೀಣ ವರ್ಗೀಕರಣವೇ ಬದಲಾಗಬೇಕು

ಈ ನಗರ ಹಾಗೂ ಗ್ರಾಮೀಣ ಎಂಬ ವರ್ಗೀಕರಣ ಕೇಂದ್ರಿತ ಆಲೋಚನ ಕ್ರಮವನ್ನು ನಿವಾರಿಸದೆ ಭಾರತ ಸರ್ವಾಂಗೀಣ ಅಭಿವೃದ್ಧಿಯಾಗದು ಎಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಡಾ| ಮೋಹನ್‌ ಭಾಗವತ್‌ ಅವರ ನಿಚ್ಚಳವಾದ ನುಡಿ.

ಸಂದರ್ಭ : ಮಣಿಪಾಲಕ್ಕೆ ಆಗಮಿಸಿದ್ದ ಅವರು ಮಣಿಪಾಲ ಸಮೂಹ ಸಂಸ್ಥೆಗಳಿಗೆ ಭೇಟಿ ಕೊಟ್ಟು, ಮಣಿಪಾಲ್‌ ಟೆಕ್ನಾಲಜೀಸ್‌ನ ಯುನಿಟ್‌ 5 ಸಭಾಂಗಣದಲ್ಲಿ ಉದಯವಾಣಿ ಸಂಪಾದಕೀಯ ಬಳಗದೊಂದಿಗೆ ನಡೆದ ಸಂವಾದ.

ಇದು ನಮ್ಮ ಭಾರತ : ಗ್ರಾಮೀಣ ಭಾಗದ ಸುಧಾರಣೆಗೆ ನಿಮ್ಮ ಆಶಯ, ಆಕಾಂಕ್ಷೆ ಏನು ಎಂಬ ಪ್ರಶ್ನೆಗೆ, ನಗರ ಮತ್ತು ಗ್ರಾಮೀಣ ಎಂಬ ವರ್ಗೀಕರಣ ವ್ಯಾಖ್ಯಾನ ಮೊದಲು ಹೋಗಬೇಕು. ಯಾಕೆಂದರೆ, ಈ ವ್ಯಾಖ್ಯಾನವೇ ಹೇಳುವಂತೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದಿಲ್ಲ ಎಂಬ ದೃಷ್ಟಿಕೋನವನ್ನು ಪೋಷಿಸುತ್ತದೆ. ಪ್ರಸ್ತುತ ಮಾನವೀಯ ಭಾವನೆಗಳ ವಿಷಯದಲ್ಲಿ ನಗರವೆಂದರೆ ಋಣಾತ್ಮಕ ಭಾವವಿದೆ. ಗ್ರಾಮೀಣ ಭಾಗದಲ್ಲಿ ಹಣವಿಲ್ಲದಿದ್ದರೂ ಪ್ರೀತಿ, ವಿಶ್ವಾಸ ಹೆಚ್ಚಿರುತ್ತದೆಂಬ ಭಾವನೆಯಿದೆ. ಇದಾವುದೂ ಸರಿಯಲ್ಲ. ಜ್ಞಾನ, ಮಾಹಿತಿ, ಅಭಿವೃದ್ಧಿ ಹಾಗೂ ಪ್ರೀತಿ, ವಿಶ್ವಾಸವೆಂಬುದು ಎಲ್ಲ ಕಡೆಗಳಲ್ಲೂ ಇರಬೇಕು.

ಭಾರತದಲ್ಲಿ ಸುಮಾರು 7,000 ಹಳ್ಳಿಗಳಿವೆ. ಇವುಗಳಲ್ಲಿ 300ನ್ನು ಆಯ್ದುಕೊಂಡು ಗ್ರಾಮ ವಿಕಾಸ ಗತಿವಿಧಿ ಎಂಬ ಸೇವಾ ಪ್ರಕಲ್ಪವನ್ನು ನಡೆಸುತ್ತಿದ್ದೇವೆ. ಗುಜರಾತ್‌ ಮತ್ತು ಮಹಾರಾಷ್ಟ್ರದ ಗಡಿ ಭಾಗದ ಗುಡ್ಡಗಾಡು ಜನರು ಇರುವ ಒಂದು ಗ್ರಾಮದ ಉದಾಹರಣೆ ನೀಡುತ್ತೇನೆ. ನನ್ನ ದೃಷ್ಟಿಯಲ್ಲಿ ಅದೇ ಸಂಪದ್ಭರಿತ ಹಾಗೂ ನಿಜವಾದ ಅಭಿವೃದ್ಧಿಗೊಂಡ ಗ್ರಾಮ, ಸುಗ್ರಾಮ. ಸಂಪದ್ಭರಿತ ಎಂದರೆ ಬ್ಯಾಂಕ್‌ ಖಾತೆ ಇತ್ಯಾದಿ ಎಂದು ಅರ್ಥೈಸಬೇಡಿ. ಅವರಲ್ಲಿದ್ದದ್ದು ಜಮೀನು, ನೀರು, ಕಾಡು. ಅದನ್ನೇ ಸದ್ಬಳಕೆ ಮಾಡಿಕೊಂಡ ಪರಿಣಾಮ ಇಂದು ಉದಾಹರಣೆಯ ಸಾಲಿಗೆ ಸೇರಿದೆ. ಸ್ಥಳೀಯರೇ ಲಭ್ಯವಾಗುತ್ತಿದ್ದ ನೀರನ್ನು ಸರಿಯಾಗಿ ಸಂಗ್ರಹಿಸಿ ಪೈಪ್‌ಲೈನ್‌ ಮೂಲಕ ಅರ್ಥಪೂರ್ಣವಾಗಿ ಬಳಸಲು ಆರಂಭಿಸಿದರು. ಇಂದು 7 ಗ್ರಾಮಗಳಿಗೆ ನೀರು ಪೂರೈಸುವಂತಾಗಿದೆ ಆ ಗ್ರಾಮ. ಸ್ಥಳೀಯರೇ ಸ್ವಯಂಸ್ಫೂರ್ತಿಯಿಂದ ಮಾಡಿದ ಕೆಲಸವಿದು. ಇಂಥ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಇಂದು ಶ್ರೇಷ್ಠ ಗ್ರಾಮವಾಗಿ ಮಾರ್ಪಟ್ಟಿದೆ. ಹಾಗಾಗಿ ಈಶಾನ್ಯ ಏಷ್ಯಾದ ಪ್ರಶಸ್ತಿಯೂ ಸಂದಿದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಅಭಿವೃದ್ಧಿ ಎನ್ನುವುದು ಎಲ್ಲೆಡೆ ಇರಬೇಕು. ಮಾಜಿ ರಾಷ್ಟ್ರಪತಿ ಡಾ| ಅಬ್ದುಲ್‌ ಕಲಾಂ ಅವರು ಪ್ರತಿಪಾದಿಸುತ್ತಿದ್ದ ರೀತಿಯಲ್ಲಿ “ನಗರದ ಸೌಲಭ್ಯ ಹೊಂದಿದ ಗ್ರಾಮೀಣ ಹಳ್ಳಿಗಳು’ ಎಂಬ ಕನಸು ನನಸಾಗಬೇಕು. ಇಂಥ ಅಭಿವೃದ್ಧಿ ನಮ್ಮ ಹಳ್ಳಿಗಳಲ್ಲೂ ಸಾಧ್ಯವಾಗಬೇಕು ಎಂಬುದೇ ನನ್ನ ಆಶಯ ಮತ್ತು ಆಕಾಂಕ್ಷೆ. ಗ್ರಾಮಾಭಿವೃದ್ಧಿಯೂ ಸೇರಿದಂತೆ ದೇಶದ ಪ್ರಗತಿಯಲ್ಲಿ ನಾವೂ ತೊಡಗಿಕೊಂಡಿದ್ದೇವೆ. ಈ ಕಾರ್ಯದಲ್ಲಿ ನಮ್ಮೊಂದಿಗೆ ಎಲ್ಲರೂ ಬರಬೇಕೆಂದೇನೂ ಇಲ್ಲ. ಹಲವು ಬಾರಿ ನಾವೂ ಸಹ ಬೇರೆಯವರೊಂದಿಗೆ ಸಾಗುತ್ತೇವೆ. ಒಟ್ಟೂ ಭಾರತ ಅಭಿವೃದ್ಧಿಯಾಗ ಬೇಕೆಂಬುದು ನಮ್ಮ ಆಶಯ.

ವೋಕಲ್‌ ಫಾರ್‌ ಲೋಕಲ್‌
“ವೋಕಲ್‌ ಫಾರ್‌ ಲೋಕಲ್‌’ ಈಗ ಜನಪ್ರಿಯ ಘೋಷಣೆಯಾಗಿದೆ. ಇದು ಸ್ಥಳೀಯ ಆರ್ಥಿಕತೆಯನ್ನು ಪ್ರೋತ್ಸಾಹಿಸುವಂಥದ್ದು. ನಿಮ್ಮ ಅಭಿಪ್ರಾಯವೇನು ಎಂಬ ಮತ್ತೂಂದು ಪ್ರಶ್ನೆಗೆ, ಖಂಡಿತಾ ಇದು ಸ್ಥಳೀಯ ಆರ್ಥಿಕತೆಗೆ ಇಂಬು ನೀಡುವಂಥದ್ದೇ. ನಾವು ಅದನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಹಾಗೂ ನಿತ್ಯಜೀವನದಲ್ಲಿ ಅನುಸರಿಸಬೇಕು. ಸ್ಥಳೀಯವಾಗಿ ಸಿಗುವ ಉತ್ಪನ್ನಗಳು ಏನೇ ಇರಲಿ, ಅವುಗಳನ್ನು ಖರೀದಿಸಿ ಮತ್ತು ಬಳಸಿ. ಮನೆಗಳಲ್ಲಿ (ಘರ್‌) ಉತ್ಪಾದನೆಯಾದದ್ದು ಮಾರುಕಟ್ಟೆಯಲ್ಲಿ (ಬಜಾರ್‌) ಸಿಗುವಂತಾಗಬೇಕು. ಇದಕ್ಕೆ ಕೌಶಲಾಭಿವೃದ್ಧಿ ಆಗಬೇಕಿದೆ. ನಾವು ಉದ್ಯೋಗಿಗಳಾಗುವ ಬದಲು ಸ್ವಯಂ ಉದ್ಯೋಗಿಗಳಾಗಿ ಇತರರಿಗೆ ಉದ್ಯೋಗ ಕೊಡುವ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು. ನಾವಿದನ್ನು ಹೆಮ್ಮೆಯಿಂದ ಹೇಳುವಂತಾಗಬೇಕು. ಯಾವುದು ಸ್ಥಳೀಯವಾಗಿ ಲಭ್ಯವಿಲ್ಲವೋ ಅವುಗಳು ದೇಸೀ ಮಟ್ಟದಲ್ಲಿ ಲಭ್ಯವಿವೆಯೇ ನೋಡಿ, ಅದಕ್ಕೆ ಪ್ರಾಮುಖ್ಯತೆ ಕೊಡಿ. ಅಲ್ಲೂ ಲಭ್ಯವಿಲ್ಲದಿದ್ದಾಗ ಮಾತ್ರ ಬೇರೆ ದೇಶಗಳದ್ದು ಬಳಸಿ. ಆದರೆ ನಿಮ್ಮ ಷರತ್ತು, ನಿಬಂಧನೆಗಳಿಗೆ ಒಗ್ಗುವಂತಿದ್ದರೆ ಮಾತ್ರ ಬಳಸಿ. ಆ ಕಂಪೆನಿಗಳು ವಿಧಿಸುವ ಷರತ್ತುಗಳಿಗೆ ನೀವು ಒಗ್ಗಿಕೊಳ್ಳಬೇಡಿ. ಇವೆಲ್ಲವನ್ನೂ ನಾವು ಅಕ್ಷರಶಃ ಪಾಲಿಸುತ್ತಾ ಬಂದರೆ, ಸ್ಥಳೀಯ ಉತ್ಪನ್ನಗಳು ಹಾಗೂ ಸ್ಥಳೀಯ ಆರ್ಥಿಕತೆ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ. ಇಂಥದೊಂದು ನಡವಳಿಕೆಯಿಂದ ಸ್ಥಳೀಯ ಎಣ್ಣೆಯಾಗಿರಬಹುದು, ಧಾನ್ಯಗಳಾಗಿರಬಹುದು, ಕರಕುಶಲ ವಸ್ತುಗಳಾಗಿರಬಹುದು-ಎಲ್ಲದಕ್ಕೂ ಬೆಲೆ ಹಾಗೂ ಮೌಲ್ಯವನ್ನು ತಂದುಕೊಡಲು ಸಾಧ್ಯ. ನಾವು ಪಾಲನೆ ಮಾಡದಿದ್ದರೆ ವೋಕಲ್‌ ಫಾರ್‌ ಲೋಕಲ್‌ನ ಆಶಯ ಗಂಟಲಲ್ಲೇ (ಓನ್ಲಿ ವೋಕಲ್‌) ಉಳಿದುಬಿಡುತ್ತದೆ, ಕಾರ್ಯರೂಪಕ್ಕೆ ಬರುವುದಿಲ್ಲ. ಇದು ಬಹಳ ಸ್ಪಷ್ಟ.

ರಾಷ್ಟ್ರೀಯತೆ-ರಾಷ್ಟ್ರೀಯವಾದಿ
ಒಬ್ಬ ವ್ಯಕ್ತಿ ರಾಜಕೀಯದಲ್ಲಿದ್ದೂ ರಾಷ್ಟ್ರೀಯವಾದಿಯಾಗಿ ರಲು ಸಾಧ್ಯವೇ ಎಂದು ಕೇಳಿದ್ದಕ್ಕೆ, ಖಂಡಿತಾ ಸಾಧ್ಯ. ನ್ಯಾಶನಲಿಸಂ ಎಂಬುದು ನಮ್ಮ ಪ್ರತಿಪಾದನೆಯಲ್ಲ; ಭಾರತದ್ದಲ್ಲ. ನಮಗೆ ಇಸಂಗಳ ಗೊಂದಲ ಬೇಡ. ನಾವು ಕೇವಲ ರಾಷ್ಟ್ರೀಯತೆ ಹಾಗೂ ರಾಷ್ಟ್ರೀಯ ಅಸ್ತಿತ್ವದ ಬಗ್ಗೆ ಮಾತ್ರ ಮಾತನಾಡೋಣ. ವಿಜ್ಞಾನಿ ಸಿ.ವಿ. ರಾಮನ್‌ ಅವರಿಗೆ ನೊಬೆಲ್‌ ಪಾರಿತೋಷಕ ಪ್ರಶಸ್ತಿ ಸಿಕ್ಕಾಗ ನಿಮಗೆ ಏನನ್ನಿಸುತ್ತದೆ ಎಂದು ಕೇಳಿದಾಗ, ನನಗೆ ದುಃಖ ಮತ್ತು ಸಂತೋಷ ಎರಡೂ ಆಗುತ್ತಿದೆ. ನನಗೆ ಈ ಗೌರವ ಸಿಕ್ಕಿದ್ದು ಖುಷಿ. ಆದರೆ ನನ್ನ ಸ್ವತಂತ್ರ ದೇಶದ ಪ್ರಜೆಯಾಗಿ, ಅದರ ಧ್ವಜದ ಕೆಳಗೆ ಈ ಗೌರವ ಸಿಗುತ್ತಿಲ್ಲವಲ್ಲ ಎಂಬ ದುಃಖ ವಿದೆ. ಇದು ರಾಷ್ಟ್ರೀಯ ಮಾನಸಿಕತೆ, ರಾಷ್ಟ್ರೀಯತೆಯಿಂದ ದೇಶಕ್ಕೆ ಲಾಭವಿದೆ. ಸಮಾಜಕ್ಕೆ ಪ್ರಯೋಜನವಿದೆ. ಹಾಗಾಗಿ ರಾಜಕೀಯವೂ ಒಂದು ಕ್ಷೇತ್ರ. ಅದರಲ್ಲಿದ್ದ ಮಾತ್ರಕ್ಕೆ ರಾಷ್ಟ್ರೀಯ ವಾದಿಯಾಗಿರಲು ಸಾಧ್ಯವಿಲ್ಲವೆಂದಲ್ಲ. ಅದು ಸಾಧ್ಯವಿದೆ. ನಮ್ಮ ದೃಷ್ಟಿಕೋನವನ್ನು ಸ್ಪಷ್ಟಪಡಿಸಿಕೊಳ್ಳಬೇಕು ಹಾಗೂ ಸರಿ ಪಡಿಸಿಕೊಳ್ಳಬೇಕು. ಅದು ಸಾಧ್ಯವಾದರೆ ಎಲ್ಲ ಕ್ಷೇತ್ರಗಳಲ್ಲಿದ್ದು ಕೊಂಡೂ ರಾಷ್ಟ್ರೀಯವಾದಿಯಾಗಿರಲು ಸಾಧ್ಯ.

ಅರ್‌ಎಸ್‌ಎಸ್‌ ಮತ್ತು ಆಧುನಿಕತೆ
ಆರ್‌ಎಸ್‌ಎಸ್‌ ಆಧುನೀಕರಣದ ವಿರೋಧಿಯೇ? ಎಂಬ ಪ್ರಶ್ನೆಗೆ, ಆಧುನಿಕತೆ ಎನ್ನುವುದು ನಿರಂತರವಾದುದು. ಸಮಾಜ ಮುಂದಕ್ಕೆ ಚಲಿಸುತ್ತಲೇ ಇರುತ್ತದೆ. ನಾವೂ ಚಲಿಸುತ್ತಲೇ ಇರಬೇಕು. ಹೊಸ ಹೊಸ ವಿಚಾರಗಳು ಬಂದಾಗಲೆಲ್ಲ ಅದಕ್ಕೆ ಕಿವಿಗೊಡಬೇಕು. ಆದರೆ ಅನುಸರಿಸುವ ಮೊದಲು ನಮ್ಮ ನೆಲೆಯಲ್ಲಿ ಅದರ ಅಗತ್ಯ ಮತ್ತು ಪ್ರಸ್ತುತತೆಯನ್ನು ಪ್ರಶ್ನಿಸಿಕೊಳ್ಳಬೇಕು. ಒಂದುವೇಳೆ ಅಗತ್ಯ, ಪ್ರಸ್ತುತತೆ ಹಾಗೂ ಪ್ರಯೋಜಕವಾಗಿದ್ದರೆ ಸ್ವೀಕಾರಾರ್ಹವೇ. ಆದರೆ ಹಳೆಯದ್ದು ಹಾಗೂ ಹೊಸತರ ಆಯ್ಕೆಯ ಸಂದರ್ಭದಲ್ಲಿ ಎಚ್ಚರ ತೀರಾ ಅವಶ್ಯ. ನಾವು ಯಾಕಾಗಿ ಅದನ್ನು ಸ್ವೀಕರಿಸುತ್ತೇವೆ ಹಾಗೂ ಎಷ್ಟು ಸ್ವೀಕರಿಸುತ್ತೇವೆ ಎಂಬ ಅರಿವು ನಮ್ಮೊಳಗಿರದಿದ್ದರೆ ಅನಾಹುತವಾಗುತ್ತದೆ. ಅದೇ ಅಂಧಾನುಕರಣೆ. ಅದು ಖಂಡಿತಾ ಒಳ್ಳೆಯದಲ್ಲ. ಮರವೊಂದು ಎಷ್ಟೇ ಬೆಳೆದರೂ ಅದರ ಬೇರುಗಳು ಗಟ್ಟಿಯಾಗಿದ್ದರೆ ಮಾತ್ರ ದೀರ್ಘಾಯುಷ್ಯ. ನಮ್ಮದೂ ಅಷ್ಟೇ. ನಾವೂ ಮೂಲ ವಿಚಾರವನ್ನು (ನಮ್ಮ ಬೇರುಗಳನ್ನು) ಬಿಟ್ಟುಕೊಡದೆ ಸ್ವ-ಅಭಿಪ್ರಾಯನಿಷ್ಠೆಯಿಂದ ಆಧುನಿಕತೆಯನ್ನು ಸ್ವೀಕರಿಸುವುದರಲ್ಲಿ ಅಪಾಯವಿಲ್ಲ. ಸ್ಮಾರ್ಟ್‌ ಸಿಟಿ ಕಲ್ಪನೆಯನ್ನೇ ತೆಗೆದುಕೊಳ್ಳಿ. ಅದು ಅಮೆರಿಕಕ್ಕೆ ಪ್ರಸ್ತುತವಾಗಿರಬಹುದು.

ನಮಗೆ ಅದು ಅಗತ್ಯವೇ? ಇಲ್ಲಿಗೆ ಅದು ಹೊಂದಿಕೊಳ್ಳುತ್ತದೆಯೇ ಎಂದು ಪರಿಶೀಲಿಸಬೇಕು. ಅದನ್ನು ಮಾಡದೆ ಅಲ್ಲಿ ಆಗುತ್ತಿದೆ ಎಂದುಕೊಂಡು ಇಲ್ಲಿಗೆ ಅನ್ವಯಿಸುವುದು ಸರಿಯಾದುದಲ್ಲ. ಸ್ವ ಪ್ರಮಾಣವೇ (ಸ್ವ ಪರಿಶೀಲನೆ) ಅತೀ ಮುಖ್ಯ. ಮರದ ಬೇರು ಆಳವಾಗಿದ್ದರೆ ಮರವೂ ಗಟ್ಟಿಯಾಗಿರುತ್ತದೆಯಲ್ಲ? ಹಾಗೆಯೇ ಬದುಕು, ಸಮಾಜ ಸಹ. ಹಾಗಾಗಿ ಆರೆಸ್ಸೆಸ್‌ ಆಧುನೀಕರಣಕ್ಕೆ ವಿರೋಧವಲ್ಲ. ಅದರ ಉಪಯುಕ್ತತೆ ಕುರಿತು ಚಿಂತನೆ ನಡೆಸಿ ಅದು ಉತ್ತಮವೆಂದರೆ ಬಳಸಿಕೊಳ್ಳುತ್ತೇವೆ, ಉತ್ತಮವಿಲ್ಲದಿದ್ದರೆ ಬಿಡುತ್ತೇವೆ.

ಗುರೂಜಿ ಮತ್ತು ಭಾಗ್ವತ್‌ಜಿ !
1969ರ ಡಿಸೆಂಬರ್‌ ಕೊನೆಯ ವಾರದಲ್ಲಿ ಉಡುಪಿಯಲ್ಲಿ ಐತಿಹಾಸಿಕ ಸಮ್ಮೇಳನವೊಂದು ಸಂಪನ್ನಗೊಂಡಿತ್ತು. ಅದು ಶ್ರೀಕೃಷ್ಣ ಮಠದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಎರಡನೆಯ ಪರ್ಯಾಯ ಪೂಜಾವಧಿ. ಉಡುಪಿಯಲ್ಲಿ ಕರ್ನಾಟಕ ಪ್ರಾಂತ ಮಟ್ಟದ ವಿಶ್ವ ಹಿಂದೂ ಪರಿಷತ್‌ ಸಮ್ಮೇಳನ. ಈ ಸಮ್ಮೇಳನದಲ್ಲಿ ಎರಡು ದಿನ ಪೂರ್ತಿ ಇದ್ದು ಅದರ ಪ್ರತಿಯೊಂದು ಘಟನೆಯನ್ನೂ ಕೂಲಂಕಷವಾಗಿ ನೋಡಿದವರು ಆರೆಸ್ಸೆಸ್‌ನ ಎರಡನೆಯ ಸರಸಂಘ ಚಾಲಕ ಗುರೂಜಿ ಗೋಳವಲ್ಕರ್‌. ಸುಮಾರು 15,000 ಜನರು ಸೇರಿದ್ದು ಐತಿಹಾಸಿಕವಾಗಿತ್ತು. ಆಗ “ಉದಯವಾಣಿ’ ದಿನಪತ್ರಿಕೆಯನ್ನು ಹುಟ್ಟುಹಾಕುವ ಯೋಜನೆಯನ್ನು ಮಣಿಪಾಲದ ಟಿ. ಮೋಹನದಾಸ ಪೈ ಮತ್ತು ಟಿ. ಸತೀಶ್‌ ಯು. ಪೈಯವರು ಹಾಕಿಕೊಂಡಿದ್ದರು.

ಉದಯವಾಣಿ 1970ರ ಜನವರಿ 1ರಂದು ಹೊರಬರುವುದೆಂದು ನಿಗದಿಯಾಗಿತ್ತು. ಒಂದು ವಾರದ ಹಿಂದೆ ನಡೆದ ಉಡುಪಿಯ ಸಮ್ಮೇಳನದಲ್ಲಿ ಎರಡೂ ದಿನ ಸಾವಿರಾರು ಪ್ರಾಯೋಗಿಕ ಸಂಚಿಕೆಯನ್ನು ವಿತರಿಸಲಾಗಿತ್ತು. ಗುರೂಜಿ ಗೋಳ್ವಲ್ಕರ್‌ ಅವರು ಆಗ “ಪತ್ರಿಕಾ ಮಾಧ್ಯಮವು ಸಮಾಜದ ಸಮಗ್ರ ಏಳಿಗೆಯ ಗುರಿಯನ್ನು ಹೊಂದಿರಬೇಕು. ಉದಯವಾಣಿ ಯಶಸ್ವಿ ಯಾಗಿ ಈ ಸೇವೆಯನ್ನು ನಡೆಸುತ್ತ ಹೊರ ಹೊಮ್ಮಲಿ’ ಎಂದು ಆಶಿಸಿದ್ದರು. ಈಗ 50 ಸಂವತ್ಸರಗಳು ಕಳೆದಿವೆ. ಸುವರ್ಣ ಮಹೋತ್ಸವದ ಸಡಗರದಲ್ಲಿ ಉದಯವಾಣಿ ಇದೆ. ಈ ಸಂದರ್ಭ ಆರೆಸ್ಸೆಸ್‌ನ ಆರನೆಯ ಸರಸಂಘ ಚಾಲಕ ಡಾ| ಮೋಹನ್‌ ಭಾಗವತ್‌ಜಿಯವರು ಮಣಿಪಾಲಕ್ಕೆ ಆಗಮಿಸಿ ಉದಯವಾಣಿ ಸಂಪಾದ ಕೀಯ ಬಳಗದ ಜತೆ ಸಂವಾದ ನಡೆಸಿರುವುದು ಸ್ಮರಣೀಯ ಘಟನೆ.

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ಕಚ್ಚಾ ಸಾಮಗ್ರಿಗಳು ಉತ್ತಮವಾಗಿದ್ದರೆ ಉತ್ಪನ್ನವೂ ಉತ್ತಮವಿರುತ್ತದೆ. ಸಂಘದ ಸ್ಥಾಪಕ ಡಾ| ಕೇಶವಬಲಿರಾಂ ಹೆಡಗೇವಾರ್‌ ಅವರು ದೇಶಕ್ಕಾಗಿ ಜೀವನವನ್ನು ಪೂರ್ಣ ಮುಡುಪಾಗಿಟ್ಟರು. ಅವರು ರಾಜಕೀಯ ಶಿಕ್ಷಣದಲ್ಲಿಯೂ (ಆಗ ಕಾಂಗ್ರೆಸ್‌ ಪ್ರಧಾನ ರಾಜಕೀಯ ಚಟುವಟಿಕೆಯ ಕೇಂದ್ರವಾಗಿದ್ದು ಅದರಲ್ಲಿ ಸಕ್ರಿಯರಾಗಿದ್ದರು) ಸಮಾಜ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದರು. ಒಬ್ಬ ಉತ್ತಮ ವ್ಯಕ್ತಿ ನಿರ್ಮಾಣವಾಗಬೇಕಾದರೆ ಸಮಾಜದ ಗುಣಮಟ್ಟ ಅಗತ್ಯವಿದೆ.

ಗಾಂಧೀಜಿ, ತಿಲಕರು, ಸಾವರ್ಕರ್‌ ಎಲ್ಲರೊಂದಿಗೂ ಚರ್ಚಿಸಿದರು. ಆ ಬಳಿಕ ಆರ್‌ ಎಸ್‌ ಎಸ್‌ ಸ್ಥಾಪನೆಗೆ ಮುಂದಾದರು. ಆರ್‌ಎಸ್‌ಎಸ್‌ನ ಪರಮ ಕರ್ತವ್ಯವೇ ವ್ಯಕ್ತಿತ್ವಗಳನ್ನು ರೂಪಿಸುವುದು. ಅದೇ ಪರಮ ಗುರಿ. ನಾವೆಲ್ಲೂ ಬೋಧಿಸುವುದಿಲ್ಲ.

ಆದರೆ ನಮ್ಮ ಆಚರಣೆಯಿಂದಲೇ ವ್ಯಕ್ತಿಗಳು-ವ್ಯಕ್ತಿತ್ವಗಳು ನಿರ್ಮಾಣವಾಗುತ್ತವೆ. ಆ ಬಳಿಕ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುತ್ತಾರೆ. ಅದು ರಾಜಕೀಯ, ಕಲೆ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲೂ ಸ್ವಯಂ ಸೇವಕರಿದ್ದಾರೆ. ವ್ಯಕ್ತಿತ್ವವೆಂಬುದು ಮಾದರಿ ಎನ್ನುವ ಹಾಗೆ ನಿರ್ಮಾಣವಾದರೆ ಅಂಥ ವ್ಯಕ್ತಿಗಳಿಂದ ನಿರ್ಮಾಣವಾಗುವ ಸಮಾಜವೂ ಚೆನ್ನಾಗಿಯೇ ಇರಬಲ್ಲದು.

ಆರ್‌ಎಸ್‌ಎಸ್‌ ಯಾವುದೇ ಸರಕಾರದ ಅನುದಾನವಿಲ್ಲದೆ ಸಾವಿರಾರು ಸೇವಾ ಪ್ರಕಲ್ಪಗಳನ್ನು ನಡೆಸಿಕೊಂಡು ಬರುತ್ತಿದೆ. ಇತ್ತೀಚೆಗೆ ಕೊರೊನಾ ಕಾಲಘಟ್ಟದಲ್ಲಿ ಸಂಘದ ಕಾರ್ಯಕರ್ತರು ವಿವಿಧ ಸಂಘಟನೆಗಳ ಮೂಲಕ ಸೇವಾ ಕಾರ್ಯ ನಡೆಸಿದರು.

ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಾಜ ಅದನ್ನು ಮಾನ್ಯ ಮಾಡುತ್ತದೆ ಎಂಬುದಕ್ಕೆ ಇದೇ ಸ್ಪಷ್ಟ ಉದಾಹರಣೆ. ವಿದೇಶಗಳಲ್ಲೂ ಸಂಘದ ಸ್ವಯಂಸೇವಕರು ಹಿಂದೂ ಸ್ವಯಂಸೇವಕ ಸಂಘದ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ದಾನಿಗಳು ಬಂದು ನಿಮಗೇನು ಬೇಕು ಹೇಳಿ ಕೊಡುತ್ತೇವೆ ಎನ್ನುತ್ತಾರೆ. ಆಗ ನಾವು ಏನನ್ನೂ ಕೇಳುವುದಿಲ್ಲ. ಬದಲಾಗಿ ನಮ್ಮ ಕಾರ್ಯಗಳನ್ನು ಪರಿಚಯಿಸುತ್ತೇವೆ. ಆ ಬಳಿಕ ಅವರೇ ನಿರ್ಧರಿಸುತ್ತಾರೆ.

– ಡಾ| ಮೋಹನ್‌ ಭಾಗವತ್‌ ಸರಸಂಘಚಾಲಕರು, ಆರೆಸ್ಸೆಸ್‌.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.