ಹೊಸ ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ವೃಥಾ ರಾಜಕೀಯ ಸಲ್ಲದು
Team Udayavani, May 25, 2023, 5:09 AM IST
ದೇಶದ ನೂತನ ಸಂಸತ್ ಭವನ ಉದ್ಘಾಟನೆಗೆ ಸಿದ್ಧವಾಗಿದ್ದು, ಇದೇ ರವಿವಾರ ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕಟ್ಟಡ ಉದ್ಘಾಟನೆ ನಡೆಸಲಿದ್ದು, ಇದಕ್ಕೆ ವಿಪಕ್ಷಗಳ ಕಡೆಯಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಕಾಂಗ್ರೆಸ್ ನೇತೃತ್ವದಲ್ಲಿ 20 ರಾಜಕೀಯ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿವೆ.
ಸಾಮಾನ್ಯವಾಗಿ ಇಂಥ ಕಟ್ಟಡಗಳನ್ನು ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಯವರೇ ಉದ್ಘಾಟನೆ ಮಾಡಬೇಕು. ಆದರೆ ಈಗ ಪ್ರಧಾನಿಯವರು ಉದ್ಘಾಟನೆ ನಡೆಸುತ್ತಿದ್ದಾರೆ. ಪ್ರಧಾನಿಯವರು ಸರಕಾರದ ಮುಖ್ಯಸ್ಥರೇ ಹೊರತು, ದೇಶದ ಮುಖ್ಯಸ್ಥರಲ್ಲ. ಹೀಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಲೇ ಲೋಕಾರ್ಪಣೆ ಮಾಡಿಸಬೇಕಿತ್ತು ಎಂಬುದು ವಿಪಕ್ಷಗಳ ನಿಲುವು.
ಈ ವಿಚಾರದಲ್ಲಿ ವಿಪಕ್ಷಗಳು ವೃಥಾ ರಾಜಕಾರಣ ಮಾಡುತ್ತಿವೆ ಎಂಬುದು ಬಿಜೆಪಿ ಆರೋಪ. ಈ ಹಿಂದೆಯೂ ಸಂಸತ್‌ನ ಕೆಲವು ವಿಭಾಗಗಳು ಮತ್ತು ಗ್ರಂಥಾಲಯವನ್ನು ಆಗಿನ ಪ್ರಧಾನಿಗಳೇ ಉದ್ಘಾಟನೆ ಮಾಡಿದ್ದರು. ಈಗೇಕೆ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ.
ಆದರೆ ಉದ್ಘಾಟನೆ ವಿಚಾರದಲ್ಲಿ ಈ ಮಟ್ಟದ ವಿವಾದ ಏರ್ಪಡುವುದು ಬೇಕಾಗಿರಲಿಲ್ಲ. ಸಂಸತ್ ಎಂಬುದು ಪ್ರಜಾಪ್ರಭುತ್ವವನ್ನು ಕಾಪಾಡುವ ಪವಿತ್ರ ಸ್ಥಳವಾಗಿದ್ದು, ಇದರಲ್ಲಿ ಎಲ್ಲರ ಒಳಗೊಳ್ಳುವಿಕೆ ತೀರಾ ಮುಖ್ಯ. ಅಲ್ಲದೆ ಈ ಕಟ್ಟಡ ಕೇವಲ ಈಗ ಇರುವ ಹಾಲಿ ಸರಕಾರದ್ದು, ಮುಂದಿನ ಸರಕಾರದ್ದಲ್ಲ ಎನ್ನುವಂಥದ್ದಲ್ಲ. ಎಲ್ಲ ಪಕ್ಷಗಳಿಗೂ ಸೇರಿದ್ದೇ ಆಗಿದೆ. ಇಲ್ಲಿ ಆಡಳಿತ ಮತ್ತು ವಿಪಕ್ಷಗಳ ನಾಯಕರು ಕುಳಿತು ಚರ್ಚೆ ನಡೆಸಬೇಕಾಗಿತ್ತು. ಎದ್ದಿರುವ ವಿವಾದವನ್ನು ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಆಡಳಿತ ಮತ್ತು ವಿಪಕ್ಷಗಳ ಪಟ್ಟಿನಿಂದಾಗಿ, ಇಡೀ ಕಾರ್ಯಕ್ರಮ ರಾಜಕೀಯಕರಣಗೊಂಡಿದೆ ಎಂದರೆ ತಪ್ಪಾಗಲಾರದು.
ಕಟ್ಟಡ ಕಟ್ಟುವ ಹೊಣೆ ಸರಕಾರದ್ದೇ ಆದರೂ ಇಡೀ ಸಂಸತ್‌ನ ಜವಾಬ್ದಾರಿ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಪತಿಗಳಿಗೆ ಬರುತ್ತದೆ. ಕಾರ್ಯಕ್ರಮವನ್ನು ಆಯೋಜನೆ ಮಾಡುವುದಕ್ಕಿಂತ ಮೊದಲು ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲರೊಂದಿಗೆ ಕುಳಿತು ಮಾತನಾಡಬಹುದಾಗಿತ್ತು. ಉದ್ಘಾಟನ ಕಾರ್ಯಕ್ರಮವನ್ನು ಎಲ್ಲರೊಂದಿಗೆ ಸೇರಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಈ ವಿಚಾರದಲ್ಲಾದರೂ ನಾವೆಲ್ಲರೂ ರಾಜಕೀಯ ಬದಿಗೊತ್ತಿದ್ದೇವೆ ಎಂಬುದಾದರೂ ಬಹಿರಂಗವಾಗುತ್ತಿತ್ತು. ಆದರೆ ಇಂಥ ಒಂದು ಸದವಕಾಶ ಈ ವಿಚಾರದಲ್ಲಿ ತಪ್ಪಿದಂತಾಗಿದೆ.
ಈಗಲೂ ಕಾಲ ಮಿಂಚಿಲ್ಲ. ಇಡೀ ಪ್ರಕರಣದಲ್ಲಿ ರಾಜಕೀಯವನ್ನು ಬದಿಗೊತ್ತಿ, ಆಡಳಿತ ಮತ್ತು ವಿಪಕ್ಷಗಳು ಒಟ್ಟಾಗಿ ಕುಳಿತು ವಿವಾದ ಬಗೆಹರಿಸಿಕೊಳ್ಳಬೇಕು. ವಿನಾಕಾರಣ ರಾಷ್ಟ್ರಪತಿಗಳ ಹೆಸರನ್ನು ಈ ವಿಚಾರದಲ್ಲಿ ಎಳೆದು ತರುವುದನ್ನು ನಿಲ್ಲಿಸಬೇಕು. ಯಾರ ರಾಜಕೀಯಕ್ಕೂ ದೇಶದ ಪ್ರಥಮ ಪ್ರಜೆಯ ಹೆಸರು ಬಳಕೆಯಾಗಬಾರದು. ಹಾಗೆಯೇ ಎಲ್ಲರಿಗೂ ಒಪ್ಪಿಗೆಯಾಗುವಂಥ ನಿರ್ಧಾರಕ್ಕೆ ಬರಲು ಕೇಂದ್ರ ಸರಕಾರ ಮತ್ತು ಸ್ಪೀಕರ್ ಪ್ರಯತ್ನಿಸಬೇಕು. ಸಂಸತ್‌ನ ಉದ್ಘಾಟನೆ ವಿಚಾರದಲ್ಲಿ ವೃಥಾ ವಿವಾದ ಸಲ್ಲದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.