ಅಕ್ರಮವಾಗಿ ರೆಮ್ ಡಿಸಿವಿಯರ್ ಇಂಜೆಕ್ಷನ್ ಮಾರಾಟ : ಸ್ಟಾಫ್ ನರ್ಸ್ ಸೇರಿ ಮೂವರ ಬಂಧನ
Team Udayavani, Apr 23, 2021, 8:47 PM IST
ಕಲಬುರಗಿ: ಕೋವಿಡ್ ಸೋಂಕಿತರಿಗೆ ಜೀವ ರಕ್ಷಕವಾಗಿರುವ ರೆಮ್ ಡಿಸಿವಿಯರ್ ಚಚ್ಚುಮದ್ದುಗಳನ್ನು ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಲಬುರಗಿ ನಗರ ಪೊಲೀಸರು ಪತ್ತೆ ಹೆಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಓರ್ವ ಸ್ಟಾಫ್ ನರ್ಸ್, ಎಕ್ಸರೇ ಟೆಕ್ನಿಷಯನ್ ಮತ್ತು ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ.
ರೆಮ್-ಡಿಸಿವಿಯರ್ ಇಂಜೆಕ್ಷನ್‍ಗೆ ಬೇಡಿಕೆ ಹೆಚ್ಚಾದಂತೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ ‘ಎ’ ಉಪವಿಭಾಗದ ರೌಡಿ ನಿಗ್ರಹ ತಂಡ ಖಚಿತ ಮಾಹಿತಿಯೊಂದಿಗೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ಮಾಡಿ ಮೂವರನ್ನು ಬಂಧಿಸಿದೆ.
ನಗರದ ಬಿಗ್ ಬಜಾರ್ ಸಮೀಪ ನಾಗಲೇಕರ್ ಡಯಾಗ್ನೋಸ್ಟಿಕ್ ಮತ್ತು ಅಥರ್ವ ಚೆಸ್ಟ್ ಕ್ಲಿನಿಕ್‍ನಲ್ಲಿ ಎಕ್ಸರೇ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಜೇವರ್ಗಿ ತಾಲೂಕಿನ ಭೀಮಾಶಂಕರ ಅರಬೋಳ ಮತ್ತು ಸಿದ್ಧಗಂಗಾ ಮೆಡಿಕಲ್ಸ್ ಶಾಪ್‍ನ ಕೆಲಸಗಾರ, ಅಫಜಲಪುರ ತಾಲೂಕಿನ ಅಂಕಲಗಾ ಗ್ರಾಮದ ಲಕ್ಷ್ಮಿಕಾಂತ ಮುಲಗೆ ಎಂಬುವರನ್ನು ಬಂಧಿಸಲಾಗಿದೆ. ಇವರಿಂದ 12 ರೆಮ್‍ಡಿಸಿವಿಯರ್ ಇಂಜೆಕ್ಷನ್ ಮತ್ತು 2 ಮೊಬೈಲ್‍ಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ :ಬೆಳಗಾವಿ: ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕರು ಸಾವು
ಅದೇ ರೀತಿ ಎಸ್‍ಟಿಬಿಟಿ ಕ್ರಾಸ್ ಸಮೀಪ ಸ್ಟಾಫ್‍ನರ್ಸ್ ಆಗಿ ಕೆಲಸ ಮಾಡುವ ಕಲಬುರಗಿ ನಗರದ ಖಮರ್ ಕಾಲೋನಿಯ ನಿವಾಸಿ ಜಿಲಾನಿಖಾನ್ ಖಾಜಾಖಾನ್ ಎಂಬಾತನನ್ನು ಬಂಧಿಸಲಾಗಿದೆ.
ಇತನಿಂದ 2 ರೆಮ್‍ಡಿಸಿವಿಯರ್ ಇಂಜೆಕ್ಷನ್ ಮತ್ತು 1 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಈ ಆರೋಪಿಗಳು ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಇರುವ ತಮ್ಮ ಪರಿಚಯಸ್ಥರಿಂದ ಈ ಇಂಜೆಕ್ಷನ್ ಖರೀದಿಸಿ, ಖಾಸಗಿ ಬಸ್‍ಗಳ ಮೂಲಕ ಕಲಬುರಗಿಗೆ ತರಿಸಿಕೊಳ್ಳುತ್ತಿದ್ದರು. ಒಂದೊಂದು ಇಂಜೆಕ್ಷನ್ ಅನ್ನು 20-25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತ ಎನ್.ಸತೀಶ ಕುಮಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.