![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 8, 2021, 7:15 AM IST
ಬೆಂಗಳೂರು: ಸರಕಾರ ಮತ್ತು ಸಾರಿಗೆ ನೌಕರರ ನಡುವಿನ ಪ್ರತಿಷ್ಠೆ ಬುಧವಾರ ಮತ್ತಷ್ಟು ತಾರಕಕ್ಕೇರಿದೆ. ಹಠಕ್ಕೆ ಬಿದ್ದಿರುವ ಸರಕಾರ, ವೇತನ ತಡೆಹಿಡಿಯುವುದರ ಜತೆಗೆ ಕೆಲಸಕ್ಕೆ ಹಾಜರಾಗದ ತರಬೇತಿ ನೌಕರರನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ. ಅತ್ತ ಎರಡನೇ ದಿನದಿಂದ ಮುಷ್ಕರ ತೀವ್ರಗೊಳಿಸಲು ಸಂಘಟನೆ ತೀರ್ಮಾನಿಸಿದೆ. ಮುಷ್ಕರ ಇನ್ನೂ ಕೆಲವು ದಿನಗಳು ಮುಂದುವರಿಯುವ ಸಾಧ್ಯತೆ ಇದ್ದು, ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ.
ಒಂದೆಡೆ ಅನಿಯಮಿತವಾಗಿ ಅನಿರ್ದಿಷ್ಟಾವಧಿ ಕಾಲ ಖಾಸಗಿ ವಾಹನಗಳ ಕಾರ್ಯಾಚರಣೆಗೆ ಸರಕಾರ ಸಿದ್ಧತೆ ಮಾಡಿ ಕೊಳ್ಳುತ್ತಿದೆ. ಮತ್ತೂಂದೆಡೆ ನೌಕರರನ್ನು ಮಣಿಸಲು ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಈ ಪೈಕಿ ಬುಧವಾರ ಸಂಜೆ ಸಾರಿಗೆ ನಿಗಮಗಳ ಉನ್ನತ ಅಧಿಕಾರಿಗಳು ಸಭೆ ನಡೆಸಿ, ಕರ್ತವ್ಯಕ್ಕೆ ಹಾಜರಾಗದ ತರಬೇತಿ ನೌಕರರನ್ನು ಕೈಬಿಡಲು ಚಿಂತನೆ ನಡೆಸಿದ್ದಾರೆ.
ಹಬ್ಬದ ಹೊಸ್ತಿಲಲ್ಲೇ ಮುಷ್ಕರ ನಿರತ ಸಾರಿಗೆ ನೌಕರರ ವೇತನ ತಡೆಹಿಡಿಯಲು ನಿರ್ಧರಿಸಿದ್ದು, ಇದು ಬಿಎಂಟಿಸಿಯ ಸುಮಾರು 25 ಸಾವಿರ ಚಾಲನಾ ಸಿಬಂದಿ ಮೇಲೆ ಪರಿಣಾಮ ಬೀರಲಿದೆ. ಖಾಸಗಿ ವಾಹನಗಳ ಕಾರ್ಯಾ ಚರಣೆಗೆ ಅಡ್ಡಿ ಉಂಟು
ಮಾಡಿದರೆ ಎಸ್ಮಾ ಜಾರಿಯ ಎಚ್ಚರಿಕೆಯನ್ನೂ ಸರಕಾರ ನೀಡಿದೆ.
ಈ ನಡುವೆ ನೌಕರರ ಹೋರಾಟಕ್ಕೆ ರಾಜ್ಯ ರೈತ ಸಂಘ ಹಾಗೂ ಎಐಟಿಯುಸಿ ಬೆಂಬಲ ಸೂಚಿಸಿವೆ.
ಪ್ರಯಾಣಿಕರು ಹೈರಾಣು
ಇಬ್ಬರ ನಡುವಿನ ಹಗ್ಗಜಗ್ಗಾಟದಿಂದ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ. ಮೊದಲ ದಿನ ಸರಕಾರ ಮತ್ತು ಕೂಟದ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ. ರಾಜ್ಯಾದ್ಯಂತ ಸುಮಾರು 23 ಸಾವಿರಕ್ಕೂ ಅಧಿಕ ಬಸ್‌ಗಳ ಪೈಕಿ ರಸ್ತೆಗಿಳಿದಿದ್ದು ಬೆರಳೆಣಿಕೆಯಷ್ಟು ಮಾತ್ರ. ರಾತ್ರಿ ಬಸ್‌ಗಳು, ರೈಲುಗಳಲ್ಲಿ ನಗರಗಳಿಗೆ ಬಂದಿಳಿದವರು ನಸುಕಿನಲ್ಲಿ ಗೂಡು ಸೇರಲು ಹರಸಾಹಸ ಪಡಬೇಕಾಯಿತು.
ವಿಶೇಷ ರೈಲು ಸೇವೆಗೆ ಮನವಿ
ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಎ. 9 ಮತ್ತು 10ರಂದು 9 ಹೆಚ್ಚುವರಿ ರೈಲು ಹಾಗೂ ಬೆಂಗಳೂರು-ಮೈಸೂರು ನಡುವೆ ಒತ್ತಡಕ್ಕೆ ಅನುಗುಣವಾಗಿ ಇಂಟರ್‌ಸಿಟಿ ಒದಗಿಸಲು ರಾಜ್ಯ ಸರಕಾರ ರೈಲ್ವೇಗೆ ಮನವಿ ಮಾಡಿದೆ.
17 ಕೋ.ರೂ. ನಷ್ಟ!
ಮುಷ್ಕರದಿಂದ ಮೊದಲ ದಿನ ಅಂದರೆ ಬುಧವಾರ ನಾಲ್ಕೂ ನಿಗಮಗಳು ಸೇರಿ 17 ಕೋಟಿ ರೂ. ನಷ್ಟ ಉಂಟಾಗಿದೆ. ಕೆಎಸ್ಸಾರ್ಟಿಸಿಗೆ 7 ಕೋಟಿ, ಬಿಎಂಟಿಸಿಗೆ 3 ಕೋಟಿ, ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ ತಲಾ 3.5 ಕೋಟಿ ರೂ. ಆದಾಯ ನಷ್ಟ ಆಗಿದೆ.
ಮಣಿಯದ ನೌಕರರು
ಇದಾವುದಕ್ಕೂ ಮಣಿಯದ ಸಾರಿಗೆ ನೌಕರರು, ಮುಷ್ಕರ ಮುಂದುವರಿಸುವುದರ ಜತೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್, “ಯಾವುದೇ ಕಾರಣಕ್ಕೂ ಮುಷ್ಕರ ಕೈಬಿಡುವುದಿಲ್ಲ. ಸರಕಾರ ನಮ್ಮ ಬೇಡಿಕೆ ಈಡೇರಿಸಲೇಬೇಕು. ನಾಳೆ ಇನ್ನೂ ದೊಡ್ಡಮಟ್ಟದಲ್ಲಿ ಮುಷ್ಕರ ನಡೆಯಲಿದೆ. ಎ. 10 ಮತ್ತು 11ರಂದು ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಸಭೆ ನಡೆಸಲಾಗುವುದು. ಮುಂದಿನ ಹೋರಾಟಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಅಷ್ಟಕ್ಕೂ ನಮಗೆ ಹೋರಾಟ ಮಾಡಲೇ ಬೇಕೆಂಬ ಹಠ ಇಲ್ಲ. 6ನೇ ವೇತನ ಆಯೋಗ ಜಾರಿಯಾದರೆ ಒಂದು ಗಂಟೆ ಯಲ್ಲಿ ಮುಷ್ಕರ ಕೈಬಿಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಕರಾವಳಿಗೆ ತಟ್ಟದ ಬಿಸಿ
ಕರಾವಳಿಯಲ್ಲಿಯೂ ಸರಕಾರಿ ಬಸ್‌ಗಳ ಓಡಾಟ ಸಂಪೂರ್ಣ ಸ್ಥಗಿತವಾಗಿತ್ತು. ಆದರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳ ಓಡಾಟ ಇರುವುದರಿಂದ ಪ್ರಯಾಣಿಕರಿಗೆ ಕೆಎಸ್ಸಾರ್ಟಿಸಿ ಬಸ್ ಮುಷ್ಕರದ ಬಿಸಿ ತಟ್ಟಲಿಲ್ಲ. ಧರ್ಮಸ್ಥಳ, ಸುಬ್ರಹ್ಮಣ್ಯ ಮೊದಲಾದ ಕ್ಷೇತ್ರಗಳಿಗೆ ಮಂಗಳವಾರ ಬಂದು ಉಳಿದುಕೊಂಡಿದ್ದ ದೂರದ ಊರುಗಳ ಜನರು ಊರಿಗೆ ಮರಳಲು ಪರದಾಡಿದರು.
ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಲವು ಪರ್ಯಾಯ ಕ್ರಮ ಕೈಗೊಳ್ಳ ಲಾಗಿದ್ದು ಸಾರ್ವಜನಿಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಬಾರದು.
– ಲಕ್ಷ್ಮಣ ಸವದಿ, ಸಾರಿಗೆ ಸಚಿವ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.