ಸಾರಿಗೆ ನೌಕರರ ಮುಷ್ಕರ: ಪ್ರತಿಷ್ಠೆ ಬೇಡ; ಜನಹಿತವೇ ಮುಖ್ಯ
Team Udayavani, Apr 8, 2021, 6:10 AM IST
ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಬುಧವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ. ವೇತನ ಆಯೋಗದ ಶಿಫಾರಸು ಜಾರಿ ಸಹಿತ 9ಕ್ಕೂ ಅಧಿಕ ಬೇಡಿಕೆಗಳನ್ನು ಮುಂದಿಟ್ಟು ಕಳೆದ ವರ್ಷದ ಡಿಸೆಂಬರ್‌ನಲ್ಲಿಯೇ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆ ಬಳಿಕ ಸರಕಾರ ಮತ್ತು ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳ ನಡುವೆ ನಡೆದ ಮಾತುಕತೆಯ ವೇಳೆ ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಹುತೇಕ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ನೌಕರರು ಮುಷ್ಕರ ವಾಪಸು ಪಡೆದಿದ್ದರು. ಆದರೆ ಡಿಸಿಎಂ ನೀಡಿರುವ ಭರವಸೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳ್ಳದ ಹಿನ್ನೆಲೆಯಲ್ಲಿ ಅದರಲ್ಲೂ ಆರನೇ ವೇತನ ಆಯೋಗದ ಶಿಫಾರಸು ಜಾರಿ ವಿಚಾರದಲ್ಲಿ ಸರಕಾರ ಸ್ಪಷ್ಟ ನಿರ್ಧಾರಕ್ಕೆ ಬರದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಈಗ ಮತ್ತೆ ಮುಷ್ಕರದ ಹಾದಿ ಹಿಡಿದಿದ್ದಾರೆ.
ಸಾರಿಗೆ ನೌಕರರ ವೇತನದಲ್ಲಿ ಶೇ. 8ರಷ್ಟು ಹೆಚ್ಚಳ ಮಾಡಲು ಸರಕಾರ ಸಮ್ಮತಿಸಿದೆಯಾದರೂ ಸದ್ಯ ರಾಜ್ಯದಲ್ಲಿ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಸಂಬಂಧ ಈಗಲೇ ಅಧಿಕೃತ ಆದೇಶ ಹೊರಡಿಸಲು ಸಾಧ್ಯವಿಲ್ಲ. ಒಂದು ವೇಳೆ ಆಯೋಗ ಒಪ್ಪಿಗೆ ನೀಡಿದಲ್ಲಿ ಇದಕ್ಕೂ ತಾನು ಸಿದ್ಧ ಎಂದು ಸರಕಾರ ಭರವಸೆ ನೀಡಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸರಕಾರ ಕೇವಲ ಭರವಸೆಯ ಮೂಲಕವಷ್ಟೇ ನಮ್ಮನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದೆ. ಆರನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸುವವರೆಗೆ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ನೌಕರರ ಸಂಘ ಘಂಟಾಘೋಷವಾಗಿ ಸಾರಿದೆ. ಈ ಮಧ್ಯೆ ಸರಕಾರ ಮುಷ್ಕರ ನಿರತ ಸಾರಿಗೆ ನೌಕರರ ಕಳೆದ ತಿಂಗಳ ವೇತನವನ್ನು ತಡೆಹಿಡಿಯುವ ಮತ್ತು ಮುಷ್ಕರವನ್ನು ಮುಂದುವರಿಸಿದಲ್ಲಿ ಎಸ್ಮಾ ಜಾರಿಗೊಳಿಸಲು ಗಂಭೀರ ಚಿಂತನೆ ನಡೆಸಿದೆ.
ಸರಕಾರ ಮತ್ತು ಸಾರಿಗೆ ನೌಕರರ ಈ ಹಗ್ಗಜಗ್ಗಾಟದಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಸರಕಾರಿ ಬಸ್‌ಗಳನ್ನೇ ಅವಲಂಬಿಸಿರುವ ಜಿಲ್ಲೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ವ್ಯಾಪಕ ಅಡಚಣೆ ಉಂಟಾಗಿದೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರ ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳ ಓಡಾಟಕ್ಕೆ ತಾತ್ಕಾಲಿಕ ಅನುಮತಿಯನ್ನು ನೀಡಿದೆ. ಆದರೆ ಈ ವ್ಯವಸ್ಥೆ ಎಲ್ಲ ಕಡೆಯಲ್ಲೂ ಸಮಾನವಾಗಿ ಸಿಗುತ್ತಿಲ್ಲ.
ಒಂದೆಡೆಯಿಂದ ಕೊರೊನಾ ಸೋಂಕಿನ ಎರಡನೇ ಅಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಿಸುತ್ತಿರುವುದರಿಂದ ಜನರ ವಲಸೆ ಪ್ರಮಾಣವೂ ಹೆಚ್ಚಾಗಿದೆ. ಇದರ ನಡುವೆಯೇ ಸಾರಿಗೆ ನೌಕರರು ಮುಷ್ಕರದ ಹಾದಿ ಹಿಡಿದಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರ ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವುದರಿಂದ ಸಾರಿಗೆ ನೌಕರರು ಈ ಸಮಸ್ಯೆಯನ್ನು ಇನ್ನಷ್ಟು ಮುಂದಕ್ಕೊಯ್ಯದೆ ಸರಕಾರದೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಸರಕಾರ ಕೂಡ ತನ್ನ ಇತಿಮಿತಿಯೊಳಗೆ ಸಾರಿಗೆ ನೌಕರರ ಕಾರ್ಯಸಾಧುವಾದ ಬೇಡಿಕೆಗಳನ್ನು ಈಡೇರಿಸಲು ಮೀನಮೇಷ ಎಣಿಸಬಾರದು. ಈ ವಿಚಾರದಲ್ಲಿ ಸರಕಾರ ಮತ್ತು ಸಾರಿಗೆ ನೌಕರರು ಪ್ರತಿಷ್ಠೆಯನ್ನು ಬದಿಗಿರಿಸಿ ಜನಹಿತವನ್ನು ಗಮನದಲ್ಲಿರಿಸಿ ನಿರ್ಧಾರಕ್ಕೆ ಬರುವುದು ಈಗಿನ ತುರ್ತು ಅವಶ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.