ರಾಜ್ಯದಲ್ಲಿ ಇನ್ನೂ ಎರಡು ದಿನ ಚಳಿ ವಾತಾವರಣ
Team Udayavani, Dec 27, 2022, 10:15 PM IST
ಬೆಂಗಳೂರು: ಶ್ರೀಲಂಕಾದ ಕರಾವಳಿ ಭಾಗದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಇನ್ನೂ 2 ದಿನ ಚಳಿಯ ವಾತಾವರಣ ಮುಂದುವರಿಯಲಿದೆ.
ಶ್ರೀಲಂಕಾದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದೆ. ಪರಿಣಾಮ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆಯ ಜತೆಗೆ ಚಳಿಯೂ ಹೆಚ್ಚಾಗಿದೆ. ಕರಾವಳಿ, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ. ಡಿ.29ರ ಬಳಿಕ ರಾಜ್ಯಾದ್ಯಂತ ಚಳಿಯ ಪ್ರಮಾಣ ಕಡಿಮೆಯಾಗಲಿದೆ. ಮುಂದಿನ 48 ಗಂಟೆಗಳ ಕಾಲ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಗರಿಷ್ಠ 28 ಹಾಗೂ ಕನಿಷ್ಠ 17 ಡಿ.ಸೆ. ಉಷ್ಣಾಂಶ ದಾಖಲಾಗಲಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆ: ಮಂಗಳವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆ ಸಾಧಾರಣ ಮಳೆಯಾಗಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿದಿದೆ. ಬೀದರ್‌ನಲ್ಲಿ 15 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ 19.8, ಮಂಗಳೂರು 23, ಬಳ್ಳಾರಿ 18.2, ದಾವಣಗೆರೆಯಲ್ಲಿ 15.8, ಮೈಸೂರಿನಲ್ಲಿ 18.4, ವಿಜಯಪುರ 16.6, ಚಿಂತಾಮಣಿ 18.7, ಹಾಸನ 13.4, ಧಾರವಾಡದಲ್ಲಿ 19.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ.
ತಡವಾಗಿ ಚಳಿ ಆರಂಭ: ಕಳೆದ ಸಾಲಿಗೆ ಹೋಲಿಸಿದರೆ ವಾಡಿಕೆಯಂತೆ ನವೆಂಬರ್ ಅಂತ್ಯದಿಂದ ಚಳಿ ಪ್ರಾರಂಭವಾಗಬೇಕಿತ್ತು. ಆದರೆ ವಾಯುಭಾರ ಕುಸಿತದಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ.
ಪರಿಣಾಮ ಡಿಸೆಂಬರ್ ಅಂತ್ಯವಾದರೂ ಚಳಿ ಪ್ರವೇಶಿಸಿಲ್ಲ. ವಾತಾವರಣ ಸಹಜ ಸ್ಥಿತಿಗೆ ಬಂದ ಬಳಿಕ ಪ್ರತಿ ವರ್ಷದಂತೆ ಚಳಿ ಆರಂಭವಾಗಲಿದೆ. ಜನವರಿಯಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.