ಅಧಿಕಾರಿಗಳು ಕಣ್ಣುಮುಚ್ಚಿ ಹಾಲು ಕುಡಿದರು !
Team Udayavani, Feb 12, 2021, 3:16 AM IST
ಮಾಡಿದುಣ್ಣೋ ಮಾರಾಯ ಎನ್ನುವ ಬದಲು ಮಾಡಿದವರು ಅವರು, ಅನುಭವಿಸು ನೀನು ಮಾರಾಯಾ ಎನ್ನಬೇಕೇನೋ ಉಡುಪಿ ನಗರ ಪಾರ್ಕಿಂಗ್ ಸ್ಥಿತಿಯಲ್ಲಿ. ಯಾಕೆಂದರೆ, ಹಿಂದಿನ ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳು ಅಕ್ರಮವನ್ನು ಕಂಡೂ ಜಾಣ ಕುರುಡುತನ ಪ್ರದರ್ಶಿಸಿದ್ದಕ್ಕೆ, ಈಗ ನಾಗರಿಕರು ಸಂಕಷ್ಟ ಅನುಭವಿಸುವಂತಾಗಿದೆ. ಪಾರ್ಕಿಂಗ್ ಸಮಸ್ಯೆ ಭೀಕರವಾಗುವಲ್ಲಿ ನಗರಸಭೆಯವರದ್ದೇ ಸಿಂಹಪಾಲಿದೆ.
ಉಡುಪಿ: ನಗರಸಭೆಯ ಕೆಲವು ಅಧಿಕಾರಿಗಳು ಉದ್ದೇಶಪೂರ್ವಕ ವಾಗಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದು ಪಾರ್ಕಿಂಗ್ ಸಮಸ್ಯೆ ಕೈ ಮೀರಿದೆ.
ನಗರಸಭೆಯ ಅಧಿಕಾರಿಗಳೇ ನೀಡುವ ಮಾಹಿತಿಯಂತೆ ಉಡುಪಿ ನಗರದಲ್ಲಿನ ಶೇ. 90ರಷ್ಟು ಕಟ್ಟಡಗಳು ಪಾರ್ಕಿಂಗ್‌ಗೆ ಜಾಗವನ್ನು ಕಲ್ಪಿಸಿಲ್ಲ. ಕಟ್ಟಡಕ್ಕೆ ಅನುಮತಿ ನೀಡುವಾಗ ಆ ಕುರಿತು ಪರಿಶೀಲನೆ ಮಾಡಬೇಕಾದದ್ದು ನಗರಸಭೆ ಅಧಿಕಾರಿಗಳು. ಎಲ್ಲರೂ ಕಣ್ಣುಮುಚ್ಚಿ ಸಹಿ ಹಾಕಿದರು. ಅದರ ಪರಿಣಾಮವಾಗಿ ರಸ್ತೆ ತುಂಬಾ ವಾಹನಗಳು ನಿಲ್ಲುವಂತಾಗಿದೆ.
ಮಾಡಿದುಣ್ಣೋ ಮಾರಾಯ ಎಂಬುದು ಕನ್ನಡದ ಒಂದು ಗಾದೆ. ಇದರರ್ಥ ಎಲ್ಲರಿಗೂ ತಿಳಿದದ್ದೇ. ಆದರೆ, ಉಡುಪಿ ನಗರದ ಪಾರ್ಕಿಂಗ್ ಸಮಸ್ಯೆಯನ್ನು ಗಮನಿಸಿದರೆ ಅದು ಸಂಪೂರ್ಣ ಉಲ್ಟಾ. ಈ ಪ್ರಸಂಗದಲ್ಲಿ ತಪ್ಪು ಮಾಡಿದ್ದು ನಗರಸಭೆ ಅಧಿಕಾರಿಗಳು, ಶಿಕ್ಷೆ ಅನುಭವಿಸುತ್ತಿರುವುದು ನಾಗರಿಕರು! ಆದ್ದರಿಂದ ಇಂದಿನ ಪಾರ್ಕಿಂಗ್ ಸಮಸ್ಯೆಯು ಭೀಕರ ಹಂತ ತಲುಪುವಲ್ಲಿ ನಗರಸಭೆ ಅಧಿಕಾರಿಗಳದ್ದೇ ಸಿಂಹಪಾಲಿದೆ.
ದಂಡ ವಿಧಿಸುವಿಕೆಯೂ ಇಲ್ಲ
ನಗರ ಯೋಜನೆಯ ನಿಯಮಗಳ ಪ್ರಕಾರ ಎಲ್ಲ ವಾಣಿಜ್ಯ ಕಟ್ಟಡಗಳ (ಅಂತಸ್ತುಗಳ)ಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಬೇಕು. ಇದು ಕಡ್ಡಾಯ. ಒಂದುವೇಳೆ ಸ್ಥಳಾವಕಾಶ ಕಲ್ಪಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಅನುಮತಿ ನಿರಾಕರಿಸಲೂ ಅವಕಾಶವಿದೆ. ಆದರೆ ಹಲವು ವರ್ಷಗಳಿಂದ ಅಧಿಕಾರಿಗಳು ಅದನ್ನು ಪಾಲಿಸಿಯೇ ಇಲ್ಲ. ಅಕ್ರಮಗಳು ನಡೆಯುತ್ತಿದ್ದರೂ ಬೆಕ್ಕಿನಂತೆ ಕಣ್ಣು ಮುಚ್ಚಿ ಅಧಿಕಾರಿಗಳು ಹಾಲು ಕುಡಿದರು ಎಂಬುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಟೀಕೆ.
ಡೋರ್ ನಂಬರ್
ವಾಸ್ತವವಾಗಿ ನಿಯಮದ ಪ್ರಕಾರ, ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್‌ಗೆ ಮೀಸಲಿಡಬೇಕಾದ ಸ್ಥಳವನ್ನು ಬೇರೆ ಉದ್ದೇಶಕ್ಕೆ, ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಅದನ್ನು ಮಾನ್ಯ ಮಾಡುವಂತಿಲ್ಲ. ಜತೆಗೆ ಅದಕ್ಕೆ ಡೋರ್ ನಂಬರ್ ನೀಡುವಂತಿಲ್ಲ. ವಿಚಿತ್ರವೆಂದರೆ ಅಧಿಕಾರಿಗಳು ಹಣಕ್ಕಾಗಿ ಡೋರ್ ನಂಬರ್ ನೀಡುವ ಮೂಲಕ ಅಕ್ರಮವನ್ನು ಬೆಂಬಲಿಸಿದರು. ಅದರಂತೆ ಮಳಿಗೆಯವರು ನಗರಸಭೆಗೆ ತೆರಿಗೆಯನ್ನೂ ಕಟ್ಟ ತೊಡಗಿದರು. ಈಗ ಅದನ್ನು ಸರಿಪಡಿಸುವುದು ಹೇಗೆ ಎಂಬ ಸಂಕಷ್ಟದಲ್ಲಿ ನಗರಸಭೆ ಸಿಲುಕಿಕೊಂಡಿದೆ.
ವಾಣಿಜ್ಯ ಸಂಕೀರ್ಣದವರಿಗೂ ಸ್ಥಳವಿಲ್ಲ
ವಾಣಿಜ್ಯ ಸಂಕೀರ್ಣಕ್ಕೆ ಬರುವ ಗ್ರಾಹಕರು ಬಿಡಿ, ಆಯಾ ಸಂಕೀರ್ಣದಲ್ಲಿನ ಮಳಿಗೆಯ ಮಾಲಕರು ಹಾಗೂ ಸಿಬಂದಿಗಾದರೂ ಆ ಸಂಕೀರ್ಣದಲ್ಲಿ ವಾಹನ ನಿಲ್ಲಿಸಲು ಅವಕಾಶ ಇರಬೇಕಿತ್ತು. ಆಗಲಾದರೂ ಸಾರ್ವಜನಿಕ ಸ್ಥಳದ ಮೇಲೆ ಒತ್ತಡ ಕಡಿಮೆಯಾಗುತ್ತಿತ್ತು. ಅದನ್ನೂ ಮಾಡಿಲ್ಲ. ಅವುಗಳೂ ರಸ್ತೆಗಳ ಮೇಲೆ ನಿಲ್ಲಬೇಕಾದ ಸ್ಥಿತಿ ಇದೆ. ಅಕ್ರಮ ಹಣಕ್ಕಾಗಿ ನಿಯಮ ಉಲ್ಲಂಘನೆಯನ್ನೂ ಕೆಲವು ಅಧಿಕಾರಿಗಳು ಮಾನ್ಯ ಮಾಡಿದ್ದರಿಂದ ಈ ಸ್ಥಿತಿ ಉದ್ಭವಿಸಿದೆ. ಇದರೊಂದಿಗೆ ಜನ ಪ್ರತಿ ನಿಧಿಗಳೂ ಕ್ರಮ ಕೈಗೊಳ್ಳುವ ಮೊದಲು ಇಡೀ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಎಲ್ಲ ದರ ಪರಿಣಾಮ ಈ ಪರಿಸ್ಥಿತಿ ಕೈ ಮೀರಿ ಹೋಗಿದೆ.
ಕೊನೆಗೂ ಹೊಸ ಷರತ್ತು
ತನ್ನ ತಪ್ಪಿನಿಂದ ಎಚ್ಚೆತ್ತಿರುವ ನಗರಸಭೆ ಇತ್ತೀಚೆಗೆ ಒಂದು ವರ್ಷದಿಂದ ವಾಣಿಜ್ಯ ಸಂಕೀರ್ಣಕ್ಕೆ ಅನುಮತಿ ನೀಡುವ ಮೊದಲು ಸಂಬಂಧಪಟ್ಟವರಿಂದ ಅಫಿಡವಿಟ್ ಪಡೆಯುತ್ತಿದೆ. ಅದರಲ್ಲಿ ಒಂದುವೇಳೆ ಪಾರ್ಕಿಂಗ್ ಸ್ಥಳವನ್ನು ಅನ್ಯ ಉದ್ದೇಶಕ್ಕೆ ಬಳಸುವುದಾದರೆ ಯಾವಾಗಲಾದರೂ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಬಹುದು ಎಂಬುದೂ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಇದು ಪ್ರತ್ಯಕ್ಷ ಅನುಭವ
ದಿನೇ ದಿನೆ ಮನುಷ್ಯರಿಗಿಂತ ವಾಹನಗಳೇ ಹೆಚ್ಚಾಗುತ್ತಿವೆ. ಒಂದು ಮನೆಯ ನಾಲ್ಕು ಜನರು ನಾಲ್ಕು ಗಾಡಿಯಲ್ಲಿ ನಗರಕ್ಕೆ ತೆರಳಿ ಎಲ್ಲೆಂದರಲ್ಲಿ ನಿಲ್ಲಿಸಿದರೆ ಉಳಿದವರ ಪಾಡೇನು? ನಾನೂ ಒಂದೆರಡು ಬಾರಿ ಕಾರು ಚಲಾಯಿಸಿಕೊಂಡು ನಗರದ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು ಸಾಕಾಗಿ, ಆಟೋ ರಿಕ್ಷಾ ಬಳಸಲಾರಂಭಿಸಿದ ಪ್ರಮೇಯವೂ ಇದೆ. ಬಿಪಿ, ಮಧುಮೇಹ ಪರೀಕ್ಷೆಗೆಂದು ಆದರ್ಶ ಆಸ್ಪತ್ರೆಗೆ ಹೋಗಿ ವಾಹನ ಪಾರ್ಕಿಂಗ್‌ಗಾಗಿ ಸ್ಥಳ ಹುಡುಕಿ ಕೆಲವರಿಂದ ಬೈಸಿಕೊಂಡು ಬರುವಷ್ಟರಲ್ಲಿ ಬಿಪಿ, ಶುಗರ್ ಎರಡೂ ನಿಯಂತ್ರಣ ಮೀರಿ ಹೋಗಿತ್ತು. ಹಾಗಾಗಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿರುವಂಥ ಆಸ್ಪತ್ರೆ,ಅಂಗಡಿಗಳಿಗೆ ಮಾತ್ರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
-ರಾಜಶ್ರೀ ಸುಧಾರಾಮ, ಅಜ್ಜರಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.