ಯುಗಾದಿ ದಿನ ಅದ್ದೂರಿ ಧಾರ್ಮಿಕ ದಿನಾಚರಣೆ: ಕೊಳಗೇರಿ ಜನರಿಗೆ ಬೇವು-ಬೆಲ್ಲ
Team Udayavani, Mar 31, 2022, 6:44 PM IST
ಬೆಂಗಳೂರು: ಯುಗಾದಿ ದಿನವನ್ನ ಧಾರ್ಮಿಕ ಮತ್ತು ದತ್ತಿ ಇಲಾಖೆಯ ದಿನ “ಧಾರ್ಮಿಕ ದಿನ” ವನ್ನಾಗಿ ಆಚರಿಸಲು ನಿರ್ಧರಿಸಿರುವ ನಿಟ್ಟಿನಲ್ಲಿ, ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಶೇಷವಾಗಿ ಆಚರಿಸಬೇಕು. ಅಲ್ಲದೇ, ಕೊಳಗೇರಿ ಮತ್ತು ಹಿಂದುಳಿದ ಪ್ರದೇಶದ ಜನರಿಗೆ ಬೇವು – ಬೆಲ್ಲ ಮತ್ತು ಪ್ರಸಾದವನ್ನು ವಿತರಿಸುವಂತೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದರು.
ಧಾರ್ಮಿಕ ದಿನ ವಿಶೇಷ ಆಚರಣೆ
ಧಾರ್ಮಿಕ ದಿನವನ್ನು ಆಯಾ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಶೇಷವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಮೂರು ಪ್ರಮುಖ ದೇವಸ್ಥಾನಗಳಲ್ಲಿ ಆ ದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಅಲ್ಲದೆ, ಬೇರೆ ದೇವಸ್ಥಾನಗಳೂ ಕೂಡಾ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ಪಂಚಾಂಗ ಶ್ರವಣ, ಹರಿಕಥೆ, ಹಿಂದೂ ಧರ್ಮ ಮತ್ತು ಸಂಸ್ಕೃತಿಗಳ ಬಗ್ಗೆ ವಿಶೇಷ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಸಿದ್ದತೆ ನಡೆಸಬೇಕು. ರಾಜ್ಯದ ಅಭ್ಯದಯಕ್ಕೆ ವಿಶೇಷ ಪೂಜೆ, ವಿಶೇಷ ಹೋಮಗಳನ್ನು ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇವು-ಬೆಲ್ಲ ಮತ್ತು ಪ್ರಸಾದ
ರಾಜ್ಯದ ಪ್ರಮುಖ ದೇವಸ್ಥಾನಗಳ ಸಮೀಪದಲ್ಲಿರುವ ಕೊಳಗೇರಿ ಪ್ರದೇಶಗಳು ಮತ್ತು ಹಿಂದುಳಿದ ಪ್ರದೇಶಗಳ ಜನರಿಗೆ ದೇವಸ್ಥಾನದ ವತಿಯಿಂದ ಬೇವು-ಬೆಲ್ಲ ಮತ್ತು ಪ್ರಸಾದವನ್ನು ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಹಿಂದುಳಿದ ಜನರ ಮುಖದಲ್ಲೂ ಹಬ್ಬದ ದಿನದಂದು ಮಂದಹಾಸ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯತತ್ಪರರಾಗಬೇಕು ಎಂದು ಸೂಚನೆ ನೀಡಿದರು.
ಬೆಂಗಳೂರಿನ ಮೂರು ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮ
ಬೆಂಗಳೂರಿನ ದೊಡ್ಡಗಣಪತಿ, ಬನಶಂಕರಿ ಹಾಗೂ ಕಾಡುಮಲ್ಲೇಶ್ವರ ದೇವಸ್ಥಾನಗಳಲ್ಲಿ ಸಾಂಸ್ಕೃತಿಕ ಕಣ್ಮನ ಸೆಳೆಯುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೊಡ್ಡಗಣಪತಿ ದೇವಸ್ಥಾನದಲ್ಲಿ ಬೆಳಗಿನ ಪೂಜೆ ಮತ್ತು ಪಂಚಾಂಗ ಶ್ರವಣ. ಬನಶಂಕರಿ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಮತ್ತು ಭಜನೆ ಹಾಗೂ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ಯುಗಾದಿ ಹಿಂದೂಗಳ ಹೊಸ ವರ್ಷ. ಈ ದಿನವನ್ನ “ಧಾರ್ಮಿಕ ದಿನ” ಎಂದು ವಿಶೇಷವಾಗಿ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ. ಈ ಮೂಲಕ ಜನಸಾಮಾನ್ಯರ ಸಹಭಾಗಿತ್ವವನ್ನು ಹೆಚ್ಚಿಸುವುದು ಹಾಗೂ ಅವರಲ್ಲಿ ಹಿಂದೂ ಪರಂಪರೆಯ ಮತ್ತು ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಗುರಿಯಾಗಿದೆ.
ಶ್ರೀಮತಿ ಶಶಿಕಲಾ ಅ ಜೊಲ್ಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.