ಅನಿಶ್ಚಿತತೆ ಪ್ಲೇಗ್ ಇದ್ದಂತೆ : ಜಿ.ಪಂ. ಸಿಇಓಗಳ ಸಭೆಯಲ್ಲಿ ಸಿಎಂ
ಜಿಪಂ. ಹಾಗೂ ಸಿಇಓಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ವ್ಯವಸ್ಥೆ
Team Udayavani, Dec 30, 2021, 7:27 PM IST
ಬೆಂಗಳೂರು : ಮುಂದಿನ ದಿನಗಳಲ್ಲಿ ಜಿಲ್ಲಾಪಂಚಾಯಿತಿ ಹಾಗೂ ಸಿಇಓ ಗಳ ಕಾರ್ಯನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಗುರುವಾರ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಜನೋಪಯೋಗಿ ಸರ್ಕಾರ ಆಗಬೇಕಾದರೆ ಜಿಲ್ಲಾ ಪಂಚಾಯಿತಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದು ಅತಿ ಮುಖ್ಯವಾಗಿದೆ. ನಿಮ್ಮ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯಶೈಲಿಯಿಂದ ನಿಮ್ಮದೇ ಛಾಪನ್ನು ಮೂಡಿಸಿ ಎಂದು ಸಲಹೆ ನೀಡಿದರು.
ತಳಹಂತದಲ್ಲಿ ಯೋಜನೆಗಳ ಅನುಷ್ಠಾನ ಅತಿ ಮುಖ್ಯವಾದುದು. ವಿಕೇಂದ್ರೀಕರಣ ಮೂಲಕ ನಿಮಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ನಿಮ್ಮ ವಿವೇಚನಾಧಿಕಾರವನ್ನು ಜಾಗರೂಕತೆಯಿಂದ ಜನರ ಹಿತಕ್ಕಾಗಿ ಬಳಕೆ ಮಾಡಬೇಕು. ಬಡವರ ಅನುಕೂಲಕ್ಕಾಗಿ ಅಧಿಕಾರಿಗಳು ಕೈಗೊಳ್ಳುವ ತೀರ್ಮಾನಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಅಧಿಕಾರಿಗಳು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು. ಅನಿಶ್ಚಿತತೆ ಪ್ಲೇಗ್ ಇದ್ದಂತೆ. ವಿಳಂಬ ಧೋರಣೆ ಅತ್ಯಂತ ದುಬಾರಿ ಎಂದ ಮುಖ್ಯಮಂತ್ರಿಗಳು, ಅಧಿಕಾರಿಗಳ ವಿಳಂಬ ಧೋರಣೆ ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ. ಜನರ ಸುತ್ತ ಅಭಿವೃದ್ಧಿಯಾಗಬೇಕೇ ಹೊರತು ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಹತ್ತಿರ ಬರುತ್ತಾರೆ ಎಂದರೆ ತಳಹಂತದಲ್ಲಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅರ್ಥ. ಆದ್ದರಿಂದ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸಮಾಡಬೇಕು. ವ್ಯಕ್ತಿಗಳು ವ್ಯವಸ್ಥೆಯನ್ನು ಮುನ್ನಡೆಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ತಳಹಂತದ ಅಧಿಕಾರಿ, ಸಿಬ್ಬಂದಿ ಮೇಲೆ ಹತೋಟಿ ಹೊಂದಿರಬೇಕು. ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಬೇಕು. ಹಳ್ಳಿಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಅಂತೆಯೇ ಸರ್ಕಾರಕ್ಕೆ ಕಾರ್ಯಕ್ರಮ ಅನುಷ್ಠಾನದಲ್ಲಿರುವ ಕಾನೂನು ಸಮಸ್ಯೆಗಳು, ಎದುರಾಗುವ ತೊಡಕುಗಳ ಬಗ್ಗೆ ವರದಿ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶನ ನೀಡಿದರು.
ಎಂಜಿನಿಯರಿಂಗ್ ವಿಭಾಗದ ಮೇಲೆ ಹತೋಟಿ ಹೊಂದಿರಬೇಕು. ಎಂಜಿನಿಯರುಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕುರಿತು ನೀವು ವರದಿ ಸಲ್ಲಿಸಿದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಇಂದಿನ ಸಭೆಯಲ್ಲಿ ನಮ್ಮ ಕಾರ್ಯನಿರ್ವಹಣೆಯ ಕುರಿತು ಆತ್ಮಾವಲೋಕನ ನಡೆಸಿ, ಲೋಪದೋಷಗಳನ್ನು ತಿದ್ದಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಜಲ ಜೀವನ್ ಮಿಷನ್, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮತ್ತಿತರ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಕುರಿತು ತೀವ್ರ ನಿಗಾ ವಹಿಸಬೇಕು. ಇವುಗಳ ಕುರಿತ ಪ್ರಗತಿ ಮಾಹಿತಿಯನ್ನು ಪ್ರತ್ಯೇಕವಾಗಿ ನಿರ್ವಹಿಸಿ ಎಂದು ಸೂಚಿಸಿದರು.
ಇಂದಿನ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಮುಕ್ತವಾಗಿ ನಿಮ್ಮ ಅಭಿಪ್ರಾಯ ತಿಳಿಸಿ. ಮುಂದಿನ ಆಯವ್ಯಯದಲ್ಲಿ ಸೂಕ್ತ ಅಂಶಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ವಿವಿಧ ಯೋಜನೆಗಳಡಿ ಗುತ್ತಿಗೆದಾರರು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಗುಣಮಟ್ಟದ ವಸ್ತುಗಳ ಬಳಕೆ ಹಾಗೂ ಕಾಮಗಾರಿ ಅನುಷ್ಠಾನವನ್ನು ಖಾತರಿಪಡಿಸಿ ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಸಾಕಷ್ಟು ಸಂಖ್ಯೆಯಲ್ಲಿ ಆಗಿದೆ. ಇವುಗಳ ಬಳಕೆಯನ್ನೂ ಜನರು ಮಾಡಿಕೊಳ್ಳುವಂತೆ ಮನವೊಲಿಸಬೇಕು. ಅಂತೆಯೇ ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದರು.
ಸಭೆಯಲ್ಲಿ ಸಚಿವ ಸಂಪುಟದ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.