ವಾರಾಹಿ ಕಾಮಗಾರಿ: ನಗರಕ್ಕೆ ನೀರು ಸರಬರಾಜು ವ್ಯತ್ಯಯ
Team Udayavani, Mar 29, 2021, 5:40 AM IST
ಉಡುಪಿ: ವಾರಾಹಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಇದರಿಂದ ನಗರದ ಹಲವೆಡೆಗಳಲ್ಲಿ ನೀರು ಸರಬರಾಜು ವ್ಯತ್ಯಯವಾಗುತ್ತಿದೆ.
ಬಜೆ ಡ್ಯಾಂ ಬಳಿ ಪಂಪಿಂಗ್ ಪೈಪ್ ಸೋರಿಕೆ ಇದ್ದುದರಿಂದ 3 ದಿನಗಳ ಕಾಲ ನೀರು ವ್ಯತ್ಯಯ ಉಂಟಾಗಿತ್ತು. ಈಗ ನಿರಂತರವಾಗಿ ಸರಬರಾಜು ಆಗುತ್ತಿದ್ದರೂ ಕೆಲವೆಡೆ ನೀರಿನ ಒತ್ತಡ ಕಡಿಮೆ ಇರುವುದರಿಂದ ಸಮಸ್ಯೆಯಾಗಿದೆ.
ವಾಲ್ ಆಫ್ ನಿಂದ ವ್ಯತ್ಯಯ
ಕಳೆದ ಮೂರು ದಿನಗಳಿಂದ ನಗರದ ವಿವಿಧೆಡೆ ನೀರಿನ ಸಮಸ್ಯೆ ಕಂಡುಬರುತ್ತಿದೆ. ಬಜೆ ಡ್ಯಾಂ ಬಳಿಯ ಪೈಪ್ ಲೀಕೇಜ್ ಒಂದು ಕಾರಣವಾದರೆ ವಾರಾಹಿ ಕಾಮಗಾರಿ ನಡೆಯುತ್ತಿರುವುದರಿಂದ ಪೈಪ್‌ಲೈನ್ ಕಾಮಗಾರಿ ನಡೆಸುವ ವೇಳೆ ನಗರಸಭೆ ನೀರು ಸರಬರಾಜು ಮಾಡುವ ವಾಲ್‌ಗಳನ್ನು ಆಫ್ ಮಾಡುತ್ತಿರುವುದರಿಂದಲೂ ಹಲವೆಡೆ ವ್ಯತ್ಯಯ ಉಂಟಾಗುತ್ತಿದೆ.
ಕೆಲವೆಡೆ ವಾರಾಹಿ ನೀರು!
ಈಗಾಗಲೇ ಮಣಿಪಾಲ, ಸರಳೇಬೆಟ್ಟು, ಪೆರಂಪಳ್ಳಿ, ಸಗ್ರಿ, ಚಿಟ್ಪಾಡಿಗಳಲ್ಲಿ ವಾರಾಹಿ ಪೈಪ್‌ಲೈನ್ ಹಾಕಲಾಗುತ್ತಿದೆ. ಪೈಪ್ ಹಾಕಿದ ಕಡೆಗಳಲ್ಲಿ ವಾರಾಹಿ ನೀರು ಸರಬರಾಜು ಮಾಡಬಾರದಾಗಿ ನಗರಸಭೆ ತಿಳಿಸಿದ್ದರೂ ಕೆಲವೆಡೆ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಜನರು ನಗರಸಭೆಯ ನೀರಿನ ಮೀಟರ್ ಆಫ್ ಮಾಡಿ ವಾರಾಹಿ ನೀರು ಉಪಯೋಗಿಸುತ್ತಿದ್ದಾರೆ. ವಾರಾಹಿ ಪೈಪ್‌ಲೈನ್ ಸಂಪರ್ಕ ಪೂರ್ಣವಾಗದ ಹೊರತು ನೀರು ಬಿಡಬಾರದು ಎಂದು ತಿಳಿಸಿದ್ದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾರೆ.
ಬಜೆ ಡ್ಯಾಂ ಬಳಿಯ ಪಂಪಿಂಗ್ ಪೈಪ್ ಸೋರಿಕೆ ಇದ್ದ ಕಾರಣ ಕಳೆದ 3 ದಿನಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಈಗ ಆ ಸಮಸ್ಯೆ ನಿವಾರಣೆಯಾಗಿದೆ. ಮತ್ತೂಂದೆಡೆ ವಾರಾಹಿ ಕಾಮಗಾರಿ ನಡೆಯುತ್ತಿರುವುದ ರಿಂದಲೂ ಕೆಲವೆಡೆ ತಾಂತ್ರಿಕ ಕಾರಣಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಉಡುಪಿ ನಗರಸಭೆಯ ಎಇಇ ಮೋಹನ್‌ರಾಜ್ ತಿಳಿಸಿದ್ದಾರೆ.
ಬಜೆ ಡ್ಯಾಮ್ ನೀರಿನ ಮಟ್ಟ : ರಘುಪತಿ ಭಟ್ ಪರಿಶೀಲನೆ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾ.ಪಂ.ಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಶಿರೂರು ಡ್ಯಾಮ್ ಹಾಗೂ ಬಜೆ ಡ್ಯಾಮ್‌ಗೆ ಶಾಸಕ ಕೆ. ರಘುಪತಿ ಭಟ್ ಅವರು ನಗರಸಭೆಯ ಅಧಿಕಾರಿಗಳೊಂದಿಗೆ ರವಿವಾರ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ನೀರಿನ ಮಟ್ಟ ಇಳಿಕೆಯಾಗುತ್ತಿರುವುದರಿಂದ ಮುಂದೆ ನೀರಿನ ಪಂಪಿಂಗ್ ಹಾಗೂ ನೀರಿನ ಪೂರೈಕೆಗೆ ಬೇಕಾಗುವ ಪೂರ್ವ ತಯಾರಿ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ…, ಪೌರಾಯುಕ್ತ ಉದಯ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ರಾಜ್, ಅಭಿಯಂತರ ದುರ್ಗಾಪ್ರಸಾದ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.