ಕಣ್ಣರಿಯದಿದ್ದರೇನು, ಕರುಳರಿಯದೆ..?
ಅಪಾರ್ಟ್‌ಮೆಂಟ್‌ಗೆ ಹೋಗಿ ಸೆಕ್ಯುರಿಟಿಯನ್ನು ವಿಚಾರಿಸಿದಾಗ, ನಂಬಲಾಗದಂಥ ಸುದ್ದಿ ಗೊತ್ತಾಯಿತು: ರಾಯರು ಈ ಜಗತ್ತಿನ ಪರಿವೆಯಿಲ್ಲದೆ ಹೆಂಡತಿಯ ಎದುರು ಕುಳಿತು ಬಿಟ್ಟಿದ್ದರು!
Team Udayavani, Jul 2, 2023, 7:30 AM IST
“ಸ್ವಂತ ಮನೆ ಹೊಂದಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಆದರೆ ಇವತ್ತಿನ ಅನಿಶ್ಚಿತ, ವೇಗದ, ದುಬಾರಿ ಖರ್ಚಿನ ಬದುಕಿನಲ್ಲಿ ತಮ್ಮ ಇಷ್ಟದ ಏರಿಯಾದಲ್ಲಿ ಸೈಟ್ ತಗೊಂಡು ಮನೆ ಕಟ್ಟಿಸುವುದು ಕಷ್ಟ. ಅದರ ಬದಲು ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲಾಟ್ ತಗೊಳ್ಳುವುದು ಸುಲಭ. ಶ್ರೀಮಂತರು, ಮಧ್ಯಮ ವರ್ಗದವರು ಮತ್ತು ಬಡವರನ್ನು ಗಮನದಲ್ಲಿಟ್ಟುಕೊಂಡೇ ನಮ್ಮ ಕಂಪನಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದೆ. ಎಲ್ಲ ವರ್ಗದ ಗ್ರಾಹಕರನ್ನೂ ಸಮಾನ ದೃಷ್ಟಿಯಿಂದ ನೋಡಬೇಕು ಎಂಬುದು ನಮ್ಮ ಧ್ಯೇಯ ಎಂದು ವಿಶ್ವಾಸ್ ಗ್ರೂಪ್‌ನವರು ಹೀಗೆ ಘೋಷಿಸಿದ್ದು ಮಾತ್ರವಲ್ಲ; ನುಡಿದಂತೆಯೇ ನಡೆದುಕೊಂಡರು. ಪರಿಣಾಮ, ಎಲ್ಲ ವರ್ಗದ ಜನರೂ ಒಂದೆಡೆ ಸೇರಿ ಚರ್ಚಿಸಲು, ಕಷ್ಟ-ಸುಖ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಲು ಸಾಧ್ಯವಾಯಿತು. ತಂತಮ್ಮ ಆಸಕ್ತಿ, ವಯಸ್ಸು, ಅಭಿರುಚಿಗೆ ಹೊಂದುವಂಥವರ ಪ್ರತ್ಯೇಕ ಗುಂಪುಗಳೂ ಆದವು.
8 ಜನರಿದ್ದ ನಮ್ಮ ಗೆಳೆಯರ ಬಳಗಕ್ಕೆ ತಿಮ್ಮರಾಯಪ್ಪನವರು ಜತೆಯಾದದ್ದು ಈ ಸಂದರ್ಭದಲ್ಲಿಯೇ. ಅವರು ತಮ್ಮನ್ನು ಪರಿಚಯಿಸಿಕೊಂಡ ರೀತಿಯೇ ಭಿನ್ನವಾಗಿತ್ತು. “ನಾನೊಬ್ಬ ನಿವೃತ್ತ ಸರಕಾರಿ ನೌಕರ. ಎರಡು ತಿಂಗಳ ಹಿಂದಷ್ಟೇ ಫ್ಲಾಟ್ ತಗೊಂಡೆ.ಜೀವನದಲ್ಲಿ ಖುಷಿಗಿಂತ ಕಷ್ಟವನ್ನೇ ಜಾಸ್ತಿ ನೋಡಿದ್ದೀನಿ. ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡೆ. ಐದು ವರ್ಷಗಳ ಅನಂತರ ನೌಕರಿ ಪರ್ಮನೆಂಟ್ ಆಯ್ತು. ಮುಂದೆ ಭಡ್ತಿಗಳು ಸಿಗುತ್ತಾ ಹೋದವು. ನನ್ನ ಸುತ್ತಲೂ ಇದ್ದವರು, “ಒಂದೈವತ್ ಸಾವ್ರ ಕೊಟ್ರೆ ನಿಮಗೆ ಡಾಕ್ಟರೆಟ್ ಕೂಡ ಸಿಗುತ್ತೆ’ ಅಂದರು. ಎಲ್ಲರ ಮಾತುಗಳಿಗೂ ಒಪ್ಪಿಕೊಂಡು ಡಾಕ್ಟರೆಟ್ ಪಡೆಯಲು ಕಾಸು ಕೊಟ್ಟೆ. ಆದರೆ ನಮಗೆ ಪಿಎಚ್.ಡಿ ಕೊಡಲು ಒಪ್ಪಿದ್ದವರು ಪೊಲೀಸರಿಗೆ ಸಿಕ್ಕಿಕೊಂಡ್ರು!… ಎಂದು ನಕ್ಕಿದ್ದರು.
ದಿನವೂ ಹಗಲಲ್ಲಿ ಮೀಟಿಂಗ್ ಹಾಲ್‌ಗೆ ಬರುತ್ತಿದ್ದರು ತಿಮ್ಮರಾಯಪ್ಪ. ಹಾಡು, ಹರಟೆ, ಜೋಕು, ಜೋತಿಷ, ವಿಜ್ಞಾನ, ರಾಜಕೀಯ, ಪುರಾಣ, ಆಯುರ್ವೇದ- ಹೀಗೆ ಪ್ರತಿಯೊಂದು ಸಂಗತಿಯೂ ಅವರಿಗೆ ತಿಳಿದಿತ್ತು. ತಮ್ಮ ಮಾತನ್ನು ಹತ್ತು ಜನ ಒಪ್ಪುವಂತೆ ಪ್ರಸೆಂಟ್ ಮಾಡುವ ಕಲೆಯೂ ಒಲಿದಿತ್ತು. ಇತಿಹಾಸದ ಯಾವುದೋ ಪ್ರಸಂಗ ನೆನಪಿಸಿ, ಎಲ್ಲರ ತಲೆಗೂ ಹುಳ ಬಿಡುತ್ತಿದ್ದರು. ಜೋಕ್ ಹೇಳಿ ನಗಿಸುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ ತಮ್ಮನ್ನೇ ಗೇಲಿ ಮಾಡಿಕೊಳ್ಳುತ್ತಿದ್ದುದರಿಂದ ಅವರ ತಮಾಷೆಗೆ ಬೇಸರ ಮಾಡಿಕೊಳ್ಳುವ ಅಗತ್ಯವೂ ಬರುತ್ತಿರಲಿಲ್ಲ. ತಿಮ್ಮರಾಯಪ್ಪ ಅವರ ಮೊಬೈಲ್ ಡಿಪಿಯಲ್ಲಿ ಸುಂದರಿಯೊಬ್ಬಳ ಚಿತ್ರವಿತ್ತು.
ಅದನ್ನು ತೋರಿಸಿ- “ಇವಳು ನನ್ನ ಗರ್ಲ್ ಫ್ರೆಂಡು, ಮದುವೆಯಾಗಿ 30 ವರ್ಷ ಆದ್ರೂ ಇವಳ ವಯಸ್ಸು ಇಪ್ಪತೈದರಲ್ಲೇ ನಿಂತುಬಿಟ್ಟಿದೆ. ಅಂಥಾ ಸುಂದರಾಂಗಿ. ಅವಳನ್ನು ಬಿಟ್ಟಿರೋದಕ್ಕೆ ನನಗಂತೂ ಆಗಲ್ಲ’ ಅನ್ನುತ್ತಿದ್ದರು. ಅಷ್ಟೇ ಅಲ್ಲ; ಮಧ್ಯಾಹ್ನ 1 ಗಂಟೆ ಆಗುತ್ತಿದ್ದಂತೆಯೇ ಗಡಿಬಿಡಿಯಿಂದ, ಊಟಕ್ಕೆ ಹೋಗ್ಬೇಕು. ನನ್ನಾಕೆ ಕಾಯ್ತಾ ಇರ್ತಾಳೆ ಅನ್ನುತ್ತಾ ದಡಬಡನೆ ಹೋಗಿಯೇ ಬಿಡುತ್ತಿದ್ದರು. ಸಂಜೆ ಮತ್ತೂಮ್ಮೆ ಸ್ನಾನ ಮುಗಿಸಿ ಬಂದವರೇ, ರಸಿಕತೆಗೂ ಸ್ನಾನಕ್ಕೂ ಬಿಡದ ನಂಟು ಎಂದು ನಗುತ್ತಿದ್ದರು.
ಯಾವಾಗಲಾದರೂ ತಮ್ಮ ಮಕ್ಕಳು- ಮೊಮ್ಮಕ್ಕಳ ಕುರಿತು ಹೇಳುವಾಗ ತಿಮ್ಮರಾಯಪ್ಪ ತುಸು ಮಂಕಾಗುತ್ತಿದ್ದರು. ಕೊನೆಗಾಲದಲ್ಲಿ ಮಕ್ಕಳು ಜತೆಗಿರಲಿ ಅಂತ ಆಸೆಪಟ್ಟೆ. ಆದರೆ ರೆಕ್ಕೆ ಬಲಿತ ಹಕ್ಕಿಗಳು ಗೂಡಿಂದ ಹಾರಿ ಹೋದವು ಅನ್ನುವರು. ಇಂಥ ಹಿನ್ನೆಲೆಯ ತಿಮ್ಮರಾಯಪ್ಪನವರು ಒಂದು ವಾರದಿಂದಲೂ ನಾಪತ್ತೆಯಾಗಿದ್ದರು. ಫೋನ್ ಮಾಡಿದರೆ, ಎರಡು ಸಲ ರಿಂಗ್ ಆಗಿ ತತ್‌ಕ್ಷಣ ಕಟ್ ಆಗುತ್ತಿತ್ತು. ಪಾಪ, ಅವರಿಗೆ ಏನು ತೊಂದರೆ ಆಗಿದೆಯೋ, ಈಗ ಹೇಗಿದ್ದರೋ, ಈ ಊರಲ್ಲೇ ಇದ್ದಾರೋ ಅಥವಾ ಪ್ರವಾಸ ಹೋಗಿದ್ದಾರೋ ಎಂದೆಲ್ಲ ಯೋಚಿಸಿ, ಕಡೆಗೊಮ್ಮೆ ಅವರು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಹೋಗಿ ಸೆಕ್ಯುರಿಟಿಯನ್ನು ವಿಚಾರಿಸಿದಾಗ, ನಂಬಲಾಗದಂಥ ಸುದ್ದಿ ಗೊತ್ತಾಯಿತು: ತಿಮ್ಮರಾಯಪ್ಪನವರ ಪತ್ನಿಯ ಆರೋಗ್ಯ ಬಿಗಡಾಯಿಸಿತ್ತು.
ರಾಯರು ಈ ಜಗತ್ತಿನ ಪರಿವೆಯಿಲ್ಲದೆ ಹೆಂಡತಿಯ ಎದುರು ಕುಳಿತು ಬಿಟ್ಟಿದ್ದರು!
ಈ ವಿಷಯ ತಿಳಿಸಿದ ಸೆಕ್ಯುರಿಟಿಯವನೇ ಮುಂದು ವರಿದು ಹೇಳಿದ: “ಪಾಪ ಸರ್, ಆ ಮನುಷ್ಯ ದೇವರಂಥವರು. ಅವರ ಹೆಂಡತಿಗೆ ಮರೆವಿನ ಕಾಯಿಲೆ ಇದೆ. ಆಕೆಗೆ ಯಾರೊಬ್ಬರ ಗುರುತೂ ಹತ್ತುವುದಿಲ್ಲ. ಕೆಲವೊಮ್ಮೆ ಮಂಪರಿನಲ್ಲಿ ಇರುತ್ತಾರೆ. ಜತೆಗೆ, ಸರಿಯಾಗಿ ನಿಲ್ಲಲೂ ಆಗದ, ಕೂರಲೂ ಆಗದಂಥ ನಿಶ್ಶಕ್ತಿ. ದಿನಕ್ಕೆ ಅರ್ಧ ಗಂಟೆ ನಡೆದರೆ ಅದೇ ಹೆಚ್ಚು. ಎಷ್ಟೋ ಸಲ ಶೌಚವೆಲ್ಲ ಮಲಗಿದಲ್ಲೇ ಆಗುತ್ತೆ. ಆಕೆಯನ್ನು ನೋಡಿಕೊಳ್ಳಲು ಒಬ್ಬರು ನರ್ಸ್ ಬರುತ್ತಾರೆ. ದಿನಕ್ಕೆರಡು ಬಾರಿ ಬಂದು ಮಾತ್ರೆ ಕೊಟ್ಟು, ಚೆಕ್ ಮಾಡಿ, ಡ್ರೆಸ್ ಬದಲಿಸಿ ಹೋಗಿಬಿಡ್ತಾರೆ. ಆ ಸಮಯದಲ್ಲಿ ಈ ರಾಯರು ಪಕ್ಕದಲ್ಲಿಯೇ ಇದ್ದು ಚೂರೂ ಬೇಸರಿಸದೆ ಸೇವೆ ಮಾಡ್ತಾರೆ. ಎಷ್ಟೋ ಸಲ ಆ ನರ್ಸ್, ನಾನು ಮಾಡ್ತೇನೆ ಸರ್ ಅಂದರೂ ಇವರು- “ಬೇಡಮ್ಮ, ಅಷ್ಟು ದೂರದಿಂದ ನೀವು ಬರುವುದೇ ಹೆಚ್ಚು. ಇದೆಲ್ಲ ಕೆಲಸ ನನಗಿರಲಿ’ ಅನ್ನುತ್ತಾರೆ…”
ಇಷ್ಟೆಲ್ಲ ವಿವರ ಕೇಳಿದ ಅನಂತರ, ತಿಮ್ಮರಾಯಪ್ಪನವರನ್ನು ಭೇಟಿಯಾಗಿ ಸಮಾಧಾನಿಸಿ ಹೋಗೋಣ ಅಂತ ನಾವು ಮಾತಾಡುತ್ತಿದ್ದಾಗಲೇ, ನರ್ಸ್ ಬಂದುಬಿಟ್ಟರು. ಮುಂದಿನ ಎರಡು ಗಂಟೆ ಯಾರಿಗೂ ಮನೆಯೊಳಗೆ ಹೋಗಲು ಅವಕಾಶವಿಲ್ಲ ಎಂದು ಸೆಕ್ಯುರಿಟಿಯವನು ಸ್ಪಷ್ಟಪಡಿಸಿದ. ಸಮೀಪದ ಅಂಗಡಿಯಿಂದ ಒಂದಷ್ಟು ಹಣ್ಣು ತಂದು, ಅವರಿಗೆ ಕೊಟ್ಟು ಬಿಡಪ್ಪಾ ಎಂದು ತಿಳಿಸಿ ಹಿಂದಿರುಗಿದೆವು. ಅದುವರೆಗೂ, ರಸಿಕ ಮಾತುಗಳ ತಿಮ್ಮರಾಯಪ್ಪ ದಿನಕ್ಕೆರಡು ಬಾರಿ ಸ್ನಾನ ಮಾಡಿ ಬರುವುದರ ಕುರಿತು ನಮ್ಮ ಲೆಕ್ಕಾಚಾರಗಳೇ ಬೇರೆ ಇದ್ದವು. “ಅವಳು ಕಾಯ್ತಾ ಇರ್ತಾಳೆ…’ ಅಂದರೆ- ಅವಳಿಗೆ ಊಟ ಮಾಡಿಸಬೇಕು ಎನ್ನುವ ತುರ್ತು ಅವರ ಮಾತಿನಲ್ಲಿರುತ್ತಿತ್ತು.
ನಾವು ಅದನ್ನು ಬೇರೊಂದು ರೀತಿಯಲ್ಲಿ ತಿಳಿದಿದ್ದೆವು! ಹೆಂಡತಿಯನ್ನು ಮಗುವಿನಂತೆ “ಶುದ್ಧ’ ಮಾಡಿದ ಅನಂತರ ಅವರು ಸ್ನಾನ ಮಾಡುತ್ತಿದ್ದರು, ಎದೆಯ ತುಂಬಾ ನೋವಿನ ಪರ್ವತವೇ ಇದ್ದರೂ ಅದನ್ನು ತೋರಿಸಿಕೊಳ್ಳದೆ ಜೋಕ್ ಹೇಳುತ್ತಾ ನಮ್ಮನ್ನು ಖುಷಿಪಡಿಸುತ್ತಿದ್ದರು ಎಂದು ತಿಳಿದಾಗ ಖುಷಿಯೂ, ಸಂಕಟವೂ ಒಟ್ಟಿಗೇ ಆಯಿತು.
ಎರಡು ದಿನಗಳ ನಂತರ ಅದೇ ಹಳೆಯ ಮುಗುಳ್ನಗೆಯೊಂದಿಗೆ ತಿಮ್ಮರಾಯಪ್ಪ ಎದುರಾದರು. “ನೀವೆಲ್ಲರೂ ಬಂದಿದ್ರಂತೆ. ಆಗ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ, ಸಾರಿ. ಹೆಂಡತಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ನಾಲ್ಕು ದಿನ ಆಸ್ಪತ್ರೆಯಲ್ಲಿದ್ದೆವು. ಅಲ್ಲಿ ನೆಟ್‌ವರ್ಕ್ ಸಮಸ್ಯೆ. ಮಾತನಾಡಲೂ ಇಷ್ಟವಿರಲಿಲ್ಲ. ಹಾಗಾಗಿ ಫೋನ್ ಪಿಕ್ ಮಾಡಲಿಲ್ಲ, ಬೇಜಾರಾಗಬೇಡಿ’ ಅಂದರು. ನಾವು ನಿಂತೆವೆಂದು ಸಮಯ ನಿಲ್ಲುವುದೇ? ಮಧ್ಯಾಹ್ನ ಒಂದು ಗಂಟೆ ಆಗುತ್ತಿದ್ದಂ ತೆಯೇ-ಊಟಕ್ಕೆ ಹೆಂಡತಿ ಕಾಯ್ತಾ ಇರ್ತಾಳೆ… ಅನ್ನುತ್ತಾ ಹೊರಟು ನಿಂತರು ತಿಮ್ಮರಾಯಪ್ಪ. ಅದುವರೆಗೂ ಸುಮ್ಮ ನಿದ್ದ ನನ್ನ ಗೆಳೆಯ ಇದ್ದಕ್ಕಿದ್ದಂತೆ ಹೇಳಿಬಿಟ್ಟ’ ಸರ್, ನಿಮ್ಮ ಮನೆಯವರಿಗೆ ಮರೆವಿನ ಕಾಯಿಲೆಯಂತೆ. ಹೀಗಿರುವಾಗ ನೀವು ಅವರ ಎದುರಿಗಿದ್ದು ಏನುಪಯೋಗ? ಇಷ್ಟು ದಿನ ಅವರ ಸೇವೆ ಮಾಡಿ ದಣಿದಿದ್ದೀರಿ. ಇವತ್ತಾದ್ರೂ ನಿಧಾನಕ್ಕೆ ಹೋಗಬಹುದಲ್ಲ..?”
ಗೆಳೆಯನ ಹೆಗಲ ಮೇಲೆ ಕೈಹಾಕಿದ ತಿಮ್ಮರಾಯಪ್ಪ ಹೇಳಿದರು: “ನೀವು ಹೇಳುವುದೂ ಸರಿ. ಆಕೆಗೆ ನಾನು ಯಾರು ಅನ್ನುವುದು ಗೊತ್ತಿಲ್ಲ. ಆದರೆ ಅವಳು ಯಾರು ಅಂತ ನನಗೆ ಗೊತ್ತಿದೆ ಅಲ್ವ? ಇಷ್ಟು ವರ್ಷದಲ್ಲಿ ಅವಳು ನನ್ನನ್ನು ಸಾಕಿ ಸಲಹಿದ್ದಾಳೆ. ನನಗೋಸ್ಕರ ಏನೆಲ್ಲ ತ್ಯಾಗ ಮಾಡಿದ್ದಾಳೆ. ಅಂಥವಳು ಅಸಹಾಯಕಳಾಗಿ ಇರುವಾಗ, ನಾನು ಜತೆಯಲ್ಲಿ ಇರ ಬೇಕಲ್ವ? ಅಕಸ್ಮಾತ್ ಇದ್ದಕ್ಕಿದ್ದಂತೆ ನೆನಪು ಮರುಕಳಿಸಿಬಿಟ್ರೆ… ಗಂಡ ಜತೆಗಿಲ್ಲ ಅನ್ನಿಸಿ ಆಕೆಗೆ ನಾನು ಒಂಟಿ ಅನ್ನಿಸಿ ನೋವಾಗಲ್ವ? ಹಾಗಾಗಲು ನಾನು ಅವಕಾಶ ಕೊಡಲಾರೆ. ಅವಳು ನನ್ನ ಜೀವ. ಅವಳಿಗೆ ನನ್ನ ಗುರುತು ಸಿಗದಿರಬಹುದು. ಆದರೆ ಆಕೆಯ ಕರುಳಿಗೆ ನನ್ನ ಪರಿಚಯ ಸಿಕ್ಕಿ ಬಿಡುತ್ತೆ! ಹಾಗಾಗಿ, ಅವಳ
ಪಕ್ಕದಲ್ಲಿ ನಿಂತಾಗಲೇ ನನಗೆ ಸಮಾಧಾನ… ನಾಳೆ ಸಿಕ್ಕೋಣ, ಬರ್ಲಾ… ”
ನಮ್ಮ ಉತ್ತರಕ್ಕೂ ಕಾಯದೆ ಗಡಿಬಿಡಿಯಿಂದಲೇ ಹೆಜ್ಜೆ ಮುಂದಿಟ್ಟರು ತಿಮ್ಮರಾಯಪ್ಪ. ಆ ಕ್ಷಣದಮಟ್ಟಿಗೆ ಸೂರ್ಯನನ್ನು ಮೋಡವೊಂದು ಆವರಿಸಿಕೊಂಡು, ಹಿತವಾದ ನೆರಳು ಇಳೆಯನ್ನು ತಂಪಾಗಿಸಿತು…
ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.