ಫೆಬ್ರವರಿ 11,12 ರಂದು ಉಡುಪಿಯಲ್ಲಿ ಸಮಗ್ರ ಯಕ್ಷ ಸಾಹಿತ್ಯ ಸಮ್ಮೇಳನ ; ನಿಮ್ಮ ಮುಖಕ್ಕೆ ಬಣ್ಣ ಬೇಕೆ ?
ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರದಿಂದ ಸಮ್ಮೇಳನ ಆಯೋಜನೆ : ಸುನಿಲ್ ಕುಮಾರ್
Team Udayavani, Dec 19, 2022, 4:28 PM IST
ಬೆಂಗಳೂರು : ಯಕ್ಷಲೋಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಮಟ್ಟದ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಸಾಹಿತ್ಯ ಸಮ್ಮೇಳನಕ್ಕೆ ಸರಿ ಸಮಾನ ಸಿದ್ಧತೆ ಹಾಗೂ ಗುಣಮಟ್ಟದೊಂದಿಗೆ ಸಮಗ್ರ ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡಸಲು ನಿರ್ಧರಿಸಲಾಗಿದೆ. ಸಚಿವ ವಿ. ಸುನಿಲ್ ಕುಮಾರ್ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್ ಹೆಗಡೆ ನೇತೃತ್ವದಲ್ಲಿ ಸೋಮವಾರ ಈ ಸಂಬಂಧ ಮಹತ್ವದ ಸಭೆ ನಡೆಸಲಾಗಿದ್ದು, ಫೆಬ್ರವರಿ 11 ಹಾಗೂ 12 ರಂದು ಉಡುಪಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಕರಾವಳಿ ಜಿಲ್ಲೆಗಳ ಗಂಡುಕಲೆ ಯಕ್ಷಗಾನದ ಸಮಸ್ಯೆ, ಭವಿಷ್ಯ ಹಾಗೂ ಸಮಕಾಲೀನ ಸ್ಥಿತಿಗತಿಗಳನ್ನು ಅವಲೋಕಿಸುವ ಸಲುವಾಗಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸಮ್ಮೇಳನ ಆಯೋಜಿಸುತ್ತಿದೆ. ಸಚಿವ ಸುನಿಲ್ ಕುಮಾರ್ ಕೂಡಾ ಉಡುಪಿ ಜಿಲ್ಲೆಯವರೇ ಆಗಿರುವುದರಿಂದ ವಿಶೇಷ ಆಸ್ಥೆ ವಹಿಸಿ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ.
ಯಕ್ಷಗಾನ ರಂಗದ ಘನ ವಿದ್ವಾಂಸರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಯಕ್ಷಗಾನದ ಸಮಸ್ಯೆ, ಸಾಧನೆಗಳ ಬಗ್ಗೆ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಫೆಬ್ರವರಿ 11,ಹಾಗೂ 12 ರಂದು ಅಹೋರಾತ್ರಿ ಯಕ್ಷಗಾನ ಪ್ರದರ್ಶನ, ಗೋಷ್ಠಿ, ತಾಳಮದ್ದಳೆ, ಪುಸ್ತಕ ಮಾರಾಟ ನಡೆಯುತ್ತದೆ. ತೆಂಕು , ಬಡಗು, ಮೂಡಲಪಾಯ ಸೇರಿದಂತೆ ಯಕ್ಷಗಾನದ ಎಲ್ಲ ಪ್ರಭೇದಗಳಿಂದ ಪ್ರದರ್ಶನ ನಡೆಸಲಾಗುತ್ತದೆ. ಮೇಳ ಹಾಗೂ ಕಲಾವಿದರ ಸಮಸ್ಯೆ ಬಗ್ಗೆ ಪ್ರತ್ಯೇಕ ಗೋಷ್ಠಿ ಆಯೋಜಿಸಲಾಗಿದೆ.
ನಿಮ್ಮ ಮುಖಕ್ಕೆ ಬಣ್ಣ ಬೇಕೆ ?
ಸಮ್ಮೇಳನದ ಭಾಗವಾಗಿ ”ನಿಮ್ಮ ಮುಖಕ್ಕೆ ಬಣ್ಣ ಬೇಕೇ” ಎಂಬ ವರ್ಣ ವೈಭವ ಆಯೋಜಿಸಲಾಗಿದೆ. ಆಸಕ್ತರಿಗೆ ತೆಂಕು- ಬಡಗು ಶೈಲಿಯಲ್ಲಿ ಬಣ್ಣ ಹಚ್ಚಿ ವೇಷ ಕಟ್ಟಲಾಗುತ್ತದೆ. ಒಟ್ಟಾರೆಯಾಗಿ ಒಂದು ಸಾಹಿತ್ಯ ಸಮ್ಮೇಳನದಲ್ಲಿ ಯಾವ ಅಂಶಗಳು ಅಡಕವಾಗುತ್ತದೆಯೋ ಅವೆಲ್ಲವೂ ಯಕ್ಷ ಸಾಹಿತ್ಯ ಸಮ್ಮೇಳನದಲ್ಲಿ ಕಾಣಸಿಗುತ್ತದೆ.
ಕೋವಿಡ್ ಕಾಲ ಘಟ್ಟದ ಬಳಿಕ ಯಕ್ಷಗಾನ ಪ್ರದರ್ಶನ ಹಾಗೂ ತಿರುಗಾಟದಲ್ಲಿ ಮಹತ್ವದ ಬದಲಾವಣೆಯಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯೇ ಸ್ವಯಂ ಪ್ರೇರಣೆಯಿಂದ ಇಂಥದೊಂದು ಸಮ್ಮೇಳನದ ಆಯೋಜನೆಗೆ ಮುಂದಾಗಿರುವುದು ಯಕ್ಷಗಾನಪ್ರಿಯರಲ್ಲಿ ಕುತೂಹಲ ಸೃಷ್ಟಿಸಿದೆ.
ಸನ್ಮಾನ
ಕಾರ್ಯಕ್ರಮದ ಭಾಗವಾಗಿ ಯಕ್ಷರಂಗದ ಮೇಳದ ಯಜಮಾನರಿಗೆ, ಪಿಎಚ್ ಡಿ ಪ್ರಬಂಧ ಮಂಡಿಸಿದವರಿಗೆ ಹಾಗೂ ಬಡ ಕಲಾವಿದರಿಗೆ ಸನ್ಮಾನಿಸಲು ನಿರ್ಧರಿಸಲಾಗಿದೆ. ಸ್ವಾಗತ ಸಮಿತಿ, ವೇದಿಕೆ, ಆಹಾರ, ಮೂಲಸೌಕರ್ಯಕ್ಕಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.
ಯಕ್ಷಗಾನ ರಾಜ್ಯದ ಗಂಡುಕಲೆ. ಈ ಕಲಾಪ್ರಕಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಕನ್ನಡ- ಸಂಸ್ಕ್ರತಿ ಇಲಾಖೆಯಿಂದ ಆಯೋಜಿಸಲಾಗಿದೆ. ಎಲ್ಲ ತಿಟ್ಟುಗಳ ಶ್ರೀಮಂತ ಕಲಾ ಪ್ರದರ್ಶನದ ಜತೆಗೆ ವಿದ್ವಜ್ಜನ ಮೆಚ್ಚುವ ರೀತಿ ಸಮ್ಮೇಳನ ನಡೆಸುತ್ತೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.