ಲಾರಿ-ಜೀಪು ಢಿಕ್ಕಿ: ಐದು ಮಂದಿ ಸಾವು
Team Udayavani, Jul 10, 2018, 9:47 AM IST
ಕಾಸರಗೋಡು: ಉಪ್ಪಳ ನಯಾಬಜಾರ್‌ನಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಐವರು ಸಾವಿಗೀಡಾಗಿ, 13 ಮಂದಿ ಗಾಯ ಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದ ಪಾಲಕ್ಕಾಡ್‌ನಲ್ಲಿ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಕುಟುಂಬ ಸದಸ್ಯರಿದ್ದ ಜೀಪು ಮತ್ತು ಸರಕು ಸಾಗಾಟ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ತಲಪಾಡಿ ಕೆ.ಸಿ. ರೋಡ್ ಅಜ್ಜಿನಡ್ಕದ ಬಿಫಾತಿಮಾ (67), ಪುತ್ರಿ ನಸೀಮಾ (30), ಸಂಬಂಧಿಕ ಇಮಿಯಾಸ್ (48), ಪತ್ನಿ ಮಂಜೇಶ್ವರ ತೂಮಿನಾಡು ನಿವಾಸಿ ಆಸ್ಮಾ (38) ಮತ್ತು ಬಿಫಾತಿಮ್ಮಾ ಅವರ ಇನ್ನೋರ್ವ ಪುತ್ರಿ ಸೌದಾ ಅವರ ಪತಿ ಮುಸ್ತಾಕ್(38) ಸಾವಿಗೀಡಾದರು. ಆಸ್ಮಾ ಅವರ ಮಕ್ಕಳಾದ ಸಲ್ಮಾನ್ (16), ಅಬ್ದುಲ್ ರಹಿಮಾನ್(12), ಮಾಶೀದ್ (10), ಅಮಲ್ (6), ಆಬೀದ್ (8 ತಿಂಗಳು), ನಸೀಮಾ ಅವರ ಮಕ್ಕಳಾದ ಶಾಹೀದ್ (16), ಆಫಿಯಾ (9) ಫಾತಿಮಾ (1), ಮುಸ್ತಾಕ್ ಅವರ ಪತ್ನಿ ಸೌದಾ, ಮಕ್ಕಳಾದ ಸವಾದ್ (12), ಫಾತಿಮಾ (10), ಅಮಲ್ (5), ಸುಮಯ್ಯ (3) ಗಾಯಗೊಂಡಿದ್ದಾರೆ. ಸಾವಿಗೀಡಾದ ಇಮಿ¤ಯಾಸ್ ಮತ್ತು ಮುಸ್ತಾಕ್ ಉಳ್ಳಾಲ ಮುಕ್ಕಚ್ಚೇರಿ ನಿವಾಸಿಗಳಾಗಿದ್ದಾರೆ.
ಪಾಲಕ್ಕಾಡ್‌ನ ಮಂಗಳ ಡ್ಯಾಂ ಸಮೀಪ ಬಿಫಾತಿಮಾ ಅವರ ಇನ್ನೊಬ್ಬ ಪುತ್ರಿ ರುಖೀಯಾ ಅವರ ಗೃಹಪ್ರವೇಶ ಕಾರ್ಯಕ್ರಮ ರವಿವಾರ ನಡೆ ದಿತ್ತು. ಅದರಲ್ಲಿ ಪಾಲ್ಗೊಂಡ ಕುಟುಂಬದ ಸದಸ್ಯರು ರವಿವಾರ ಸಂಜೆ ಪಾಲಕ್ಕಾಡ್‌ನಿಂದ ಫೋರ್ಸ್ ತೂಫಾನ್ ಜೀಪಿನಲ್ಲಿ ಹೊರಟಿದ್ದರು.
ಸೋಮವಾರ ನಸುಕಿನಲ್ಲಿ ನಯಾಬಜಾರ್ ತಲುಪುತ್ತಿದ್ದಂತೆ ಮಹಾರಾಷ್ಟ್ರದಿಂದ ಸರಕು ಹೇರಿಕೊಂಡು ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಲಾರಿ ಢಿಕ್ಕಿ ಹೊಡೆಯಿತು. ಅಪಘಾತದಲ್ಲಿ ಜೀಪು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಧಾವಿಸಿ ಬಂದ ಸ್ಥಳೀಯರು ತತ್‌ಕ್ಷಣ ಮಂಜೇಶ್ವರ ಪೊಲೀಸರಿಗೆ ಮತ್ತು ಉಪ್ಪಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳೀಯರ ನೆರವಿನಿಂದ ಜೀಪನ್ನು ಮುರಿದು ತೆಗೆದು ಅದರಲ್ಲಿ ಸಿಲುಕಿಕೊಂಡಿದ್ದವರನ್ನು ಹೊರ ತೆಗೆದರು. ಈ ಹೊತ್ತಿಗೆ ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದರು.
ದೌಡಾಯಿಸಿದ ಜನಪ್ರತಿನಿಧಿಗಳು ವಿಷಯ ತಿಳಿದು ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಜಾಕ್, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಮೊದಲಾದವರು ಸ್ಥಳಕ್ಕೆ ಧಾವಿಸಿದರು.
ಅಮಿತ ವೇಗ ಕಾರಣ
ಎರಡೂ ವಾಹನಗಳು ಅಮಿತ ವೇಗದಲ್ಲಿದ್ದುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಲಾರಿಯ ಟಯರ್ ಸಿಡಿದು ಹೋಗಿದೆ. ಸ್ಥಳದಲ್ಲಿ ರಕ್ತ ಕೋಡಿಯಾಗಿ ಹರಿದಿತ್ತು. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಶಿವಮೊಗ್ಗ ನಿವಾಸಿ ಅಯೂಬ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿದ್ದಾರೆ.
3 ವರ್ಷಗಳಲ್ಲಿ 20 ಸಾವು
ರಸ್ತೆಯಲ್ಲಿ ಹಲವು ತಿರುವು ಹಾಗೂ ಅಮಿತ ವೇಗದ ಪರಿಣಾಮ ಉಪ್ಪಳ ನಯಾಬಜಾರ್ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಈ ಪ್ರದೇಶದಲ್ಲಿ ವಾಹನ ಅಪಘಾತದಲ್ಲಿ ಮಡಿದವರ ಸಂಖ್ಯೆ 20. ಒಂದು ವರ್ಷದ ಹಿಂದೆ ನಯಾಬಜಾರ್‌ನಲ್ಲಿ ಕಾರು-ಲಾರಿ ಢಿಕ್ಕಿ ಹೊಡೆದು ಮಗು ಸಹಿತ ನಾಲ್ವರು ಸಾವಿಗೀಡಾಗಿದ್ದರು. ಎರಡು ವರ್ಷಗಳ ಹಿಂದೆ ಬಸ್- ಕಾರು ಢಿಕ್ಕಿ ಹೊಡೆದು ನಾಲ್ವರು ಸಾವಿಗೀಡಾಗಿದ್ದರು. ಆಟೋರಿಕ್ಷಾಗಳು, ದ್ವಿಚಕ್ರ ವಾಹನಗಳು ಅಪಘಾತಕ್ಕೆ ಸಿಲುಕಿ 7 ಮಂದಿ ಸಾವಿಗೀಡಾಗಿದ್ದರು.
ಇಬ್ಬರೂ ಚಾಲಕರು
ಇಮಿಯಾಝ್ ಹಾಗೂ ಮುಸ್ತಾಕ್ ಇಬ್ಬರೂ ವಾಹನ ಚಾಲಕರಾಗಿದ್ದು, ಮುಸ್ತಾಕ್ ತನ್ನ ಸ್ನೇಹಿತನ ತೂಫಾನ್ ವಾಹನವನ್ನು ಪಡೆದು ಕೊಂಡಿದ್ದರು. ಸೋಮವಾರ ಶಾಲೆಗೆ ಮಕ್ಕಳನ್ನು ತಲುಪಿಸುವ ನಿಟ್ಟಿನಲ್ಲಿ ಪಾಲಕ್ಕಾಡಿನಿಂದ ರಾತ್ರಿಯೇ ಪ್ರಯಾಣ ಬೆಳೆಸಿದ್ದರು. ಇಬ್ಬರೂ ಪಾಳಿಯಲ್ಲಿ ವಾಹನ ಚಲಾಯಿಸಿದ್ದರು. ಬೆಳಗ್ಗಿನ ವೇಳೆಗೆ ಇಮಿಯಾಝ್ ವಾಹನ ಚಲಾಯಿಸುತ್ತಿದ್ದು, ಎಲ್ಲರೂ ನಿದ್ದೆಯ ಮಂಪರಿನಲ್ಲಿದ್ದಾಗಲೇ ಅಪಘಾತ ಸಂಭವಿಸಿದೆ.
ಮನೆ ಸೇರಲು ಕೆಲವೇ ನಿಮಿಷ
ಐವರ ಅಕಾಲಿಕ ಸಾವಿನ ಆಘಾತದಿಂದ ಪರಿಸರದ ಮಂದಿ ಶೋಕತಪ್ತರಾಗಿದ್ದಾರೆ. ಸುಮಾರು 350 ಕಿ.ಮೀ. ದೂರದ ಪಾಲಕ್ಕಾಡ್‌ನಿಂದ ಹೊರಟು ಗಮ್ಯ ಸೇರಲು ಕೇವಲ 20 ನಿಮಿಷ ಬಾಕಿ ಎನ್ನುವಷ್ಟರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮೃತ ದೇಹಗಳನ್ನು ಮಹಜರು ನಡೆಸಿದ ಬಳಿಕ ಊರಿಗೆ ಕೊಂಡೊಯ್ಯಲಾಯಿತು.
ಮಕ್ಕಳು ಅನಾಥ
ಮಂಜೇಶ್ವರ ತೂಮಿನಾಡು ನಿವಾಸಿ ಆದಂ ಕುಂಞಿ, ಆಯಿಷಾ ದಂಪತಿಯ ನಾಲ್ವರು ಮಕ್ಕಳಲ್ಲಿ ಆಸ್ಮಾ 2ನೆಯವರು. ಅಪಘಾತದಲ್ಲಿ ಆಸ್ಮಾ ಮತ್ತು ಪತಿ ಇಮಿ¤ಯಾಝ್ ಮೃತಪಟ್ಟಿದ್ದು ಅವರ ನಾಲ್ವರು ಮಕ್ಕಳು ಅನಾಥರಾಗಿದ್ದಾರೆ. ಮುಕ್ಕಚ್ಚೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇಮಿ¤ಯಾಝ್ ಶಾಲಾ ವಾಹನ ಮತ್ತು ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
* ಬಿಫಾತಿಮಾ ಅವರ ಪುತ್ರಿ ನಸೀಮಾ ಮಂಗಳೂರಿನ ಜಪ್ಪುವಿನಲ್ಲಿ ವಾಸವಾಗಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಸೀಮಾ ಅವರ ಪುತ್ರಿ ಫಾತಿಮಾ (1) ಸ್ಥಿತಿ ಗಂಭೀರವಾಗಿದೆ.
* ಬಿಫಾತಿಮಾ ಪುತ್ರಿ ಸೌದಾ ಅವರ ಪತಿ ಮುಸ್ತಾಕ್ ಅಪಘಾತದಲ್ಲಿ ಮೃತಪಟ್ಟಿದ್ದು ಇಬ್ಬರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುಸ್ತಾಕ್ ಶಾಲಾ ವಾಹನ ಚಾಲಕರಾಗಿ, ಉಳಿದ ಸಂದರ್ಭದಲ್ಲಿ ರಿಕ್ಷಾ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಘಟನೆಯಲ್ಲಿ ಅವರ ಪತ್ನಿ ಸೌದಾ ಮತ್ತು ಪುತ್ರ ಪವಾಝ್ ಗಂಭೀರ ಸ್ಥಿತಿಯಲ್ಲಿದ್ದಾರೆ.
* ಬಿಫಾತಿಮಾ ಅವರ ಇಬ್ಬರು ಪುತ್ರಿಯರ ಗಂಡಂದಿರು ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಉಪ್ಪಳದಲ್ಲಿ ಸಂಭವಿಸಿದ ಅಪಘಾತದಿಂದ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
* ಮೃತದೇಹಗಳನ್ನು ಮಂಗಲ್ಪಾಡಿ ಆಸ್ಪತ್ರೆಯಿಂದ ಸಂಜೆ ಅಜ್ಜಿನಡ್ಕ ಮನೆಗೆ ತಂದು, ಅಲ್ಲಿಂದ ಉಚ್ಚಿಲ ಅಜ್ಜಿನಡ್ಕ ಸಲಫಿ ಮಸೀದಿಯಲ್ಲಿ ಮಯ್ಯತ್ ನಮಾಝ್ ಪೂರ್ತಿಗೊಳಿಸಿ ಕಲ್ಲಾಪು ಪಟ್ಲದ ಸಲಫಿ ಮಸೀದಿಯ ದಫನ ಭೂಮಿಯಲ್ಲಿ ದಫನ ಮಾಡಲಾಯಿತು. ಸಾವಿರಾರು ಜನರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.