ಕುಂಬಾರ ವೃತ್ತಿಗೆ ನೆರವು, ಪ್ರೋತ್ಸಾಹ ಅತ್ಯಗತ್ಯ
ಮಣ್ಣಿನ ಮಡಕೆಗಳತ್ತ ಜನರ ಒಲವು
Team Udayavani, Dec 16, 2019, 5:57 AM IST
ಪೆರ್ಲ: ಆಧುನಿಕ ಕಾಲಘಟ್ಟ ದಲ್ಲಿ ಮಡಕೆಗಳಲ್ಲಿ ಹೊಸ ಆವಿಷ್ಕಾರಗೊಂಡು ಪ್ಲಾಸ್ಟಿಕ್, ಅಲ್ಯುಮಿನಿಯಂ, ಸ್ಟೀಲ್, ನಾನ್‌ಸ್ಟಿಕ್ ಮೊದಲಾದ ಪಾತ್ರೆಗಳ ಭರಾಟೆಯಲ್ಲಿ ಮಣ್ಣಿನ ಪಾತ್ರೆಗಳ ಬಳಕೆ ಕಡಿಮೆ ಆಗಿದೆ. ನಗರ ಪ್ರದೇಶದಲ್ಲಂತೂ ಕಾಣುವುದೇ ಅಪರೂಪ.
ರೆಫ್ರಿಜರೇಟರ್ ಹಾಗೂ ಅಡುಗೆ ಅನಿಲ ಉಪಯೋಗದ ನಂತರ ಹೆಚ್ಚಿನ ಮನೆಗಳ ಮಣ್ಣಿನ ಪಾತ್ರೆಗಳು ಅಟ್ಟ ಸೇರಿದವು. ಆದರೆ ಇಂದೂ ಕೂಡ ಮಣ್ಣಿನ ಪಾತ್ರೆಗಳಲ್ಲೇ ಅಡುಗೆ ಮಾಡುವ ಮನೆಗಳಿಗೇನೂ ಕೊರತೆ ಇಲ್ಲ. ಆರೋಗ್ಯದ ದೃಷ್ಟಿಯಲ್ಲೂ ಮಣ್ಣಿನ ಮಡಕೆಯ ಆಹಾರ ಉತ್ತಮ. ಶರೀರಕ್ಕೆ ಅವಶ್ಯವಾದ ಹಲವು ಲವಣಗಳು ಇದರಿಂದ ಲಭಿಸುತ್ತವೆ.
ಇಂದು ಅಡುಗೆ ಅನಿಲ ಬಳಸುವ ಮನೆಗಳಲ್ಲಿ ನಾನ್ ಸ್ಟಿಕ್ ಪಾತ್ರೆಗಳನ್ನು ಉಪಯೋಗಿಸುವವರು ಹೆಚ್ಚಾದ ಕಾರಣ ಮಣ್ಣಿನ ಪಾತ್ರೆ ಖರೀದಿಸುವವರು ಕಡಿಮೆ ಆಗಿದ್ದಾರೆ. ಇದ್ದ ಒಂದಿಷ್ಟು ಮಣ್ಣಿನ ಚಿಕ್ಕಪುಟ್ಟ ಪಾತ್ರೆಗಳು ಮೂಲೆ ಸೇರಿವೆ.ಕೆಲವು ಜಾತ್ರೆ, ಉತ್ಸವ, ಪೇಟೆ ಬದಿಗಳಲ್ಲಿ ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು ಅಗ್ಗದ ದರದಲ್ಲಿ ಲಭಿಸುತ್ತದೆ. ಆದರೆ ಇದು ಕಳಪೆ ಗುಣಮಟ್ಟದ, ಹಾಗೂ ವಿಷಯುಕ್ತ ರಾಸಾಯನಿಕಗಳನ್ನು ಬಳಸಿ ತಯಾರಿಸಿದ್ದರಿಂದ ಆರೋಗ್ಯಕ್ಕೆ ಹಾನಿಕಾರಕ. ಆದರೆ ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು ನಿತ್ಯ ಬಳಸಿದರೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮೊದಲಾದ ಕಾಯಿಲೆಗಳು ಬಾರದ ಹಾಗೆ ಮಾಡಬಹುದು ಎಂದು ಸುಮಾರು 25 ವರ್ಷಗಳಿಂದ ಕುಂಬಾರಿಕೆ ವೃತ್ತಿ ಮಾಡುವ ಬೆಳ್ತಂಗಡಿ ಉಜಿರೆಯ ಮಾಯಿಲ ತಮ್ಮ ಅನುಭವದಿಂದ ಹೇಳುತ್ತಾರೆ. ಇವರು ಕರ್ನಾಟಕ ರಾಜ್ಯ ಅಲ್ಲದೆ ಕೇರಳದ ಪೆರ್ಲ, ಬಂದಡ್ಕ, ಪಾಣತ್ತೂರು, ಕುಟ್ಟಿಕೋಲ್ ಮೊದಲಾದೆಡೆ ಉತ್ಸವ ಸಂದರ್ಭದಲ್ಲಿ ಮಣ್ಣಿನ ಪಾತ್ರೆಗಳನ್ನು ಮಾರಾಟ ಮಾಡುತ್ತಾರೆ. ಇಂದು ಹೆಚ್ಚಾಗಿ ಮಾರಾಟ ವಾಗುವುದು ನೀರಿನ ಹೂಜಿಗಳು. ಇದಕ್ಕೆ ಬಡವರ ಫ್ರಿಜ್ ಎಂದೇ ಕರೆಯುತ್ತಾರೆ.ಇದರಲ್ಲಿಟ್ಟ ನೀರು ಎಲ್ಲ ಸಮಯದಲ್ಲೂ ಬಹಳ ತಂಪಾಗಿರುತ್ತದೆ. ಕೆಲವು ಕಚೇರಿ ಗಳಲ್ಲಿಯೂ ಇದರ ಬಳಕೆ ಇದೆ.
ಲಾಭದಾಯಕವಲ್ಲದ ಕೈಗಾರಿಕೆ
ಮಡಕೆ ತಯಾರಿಸಲು ಪ್ರಧಾನವಾಗಿ ಬೇಕಾದ್ದು ಪ್ರತ್ಯೇಕ ಜೇಡಿ ಮಣ್ಣು .ಇದು ಇರುವ ಸ್ಥಳದಿಂದ ಶೇಖರಿಸಿ ತರಲು ಒಂದು ಟೆಂಪೊ ಮಣ್ಣಿಗೆ ಸುಮಾರು 30 ಸಾವಿರ ರೂ. ಖರ್ಚು ತಗಲುತ್ತದೆ. ಕೂಲಿಗೆ ಜನ ಸೇರಿಸಿ ತಯಾರಿಸಿದರೆ ಏನೂ ಲಾಭ ಸಿಗದು. ಮನೆ ಸದಸ್ಯರೇ ಸೇರಿ ಕೆಲಸ ನಿರ್ವಹಿಸಿದರೆ ಖರ್ಚು ಕಳೆದು ಅಲ್ಪ ಮಟ್ಟಿನ ಲಾಭ ಆದೀತು. ಅದೂ ಬಹಳ ಶ್ರದ್ಧೆ, ಜಾಗರೂಕತೆಯಿಂದ ಮಡಕೆಗಳನ್ನು ಮಾರಾಟಕ್ಕೆ ಕೊಂಡಯ್ಯ ಬೇಕು. ಇಲ್ಲದೆ ಇದ್ದರೆ ಕೆಲವು ಕುಡಿಕೆಗಳು ಒಡೆದು ಹೋಗುವುದೂ ಇದೆ ಎಂದು ಸುಮಾರು 30 ವರ್ಷಗಳಿಂದ ಇದೇ ವೃತ್ತಿ ನಡೆಸುತ್ತಿರುವ ರಮೇಶ ಹೇಳುತ್ತಾರೆ. ಇವರು ಪುತ್ತೂರಿನ ಕುಂಬಾರ ಗುಡಿಕೈಗಾರಿಕೆ ಸಹಕಾರ ಸಂಘದ ನೆರವಿನಿಂದ ಈ ಕಾಯಕ ನಡೆಸುತ್ತಾರೆ.ಮುಂದಿನ ತಲೆಮಾರು ಈ ವೃತ್ತಿಯನ್ನು ಮುಂದುವರಿಸುವ ಆಸಕ್ತಿ ಹೊಂದಿಲ್ಲ ಎನ್ನುತ್ತಾರೆ. ಇದು ಲಾಭದಾಯಕವಲ್ಲದ ಕಾರಣ ಈಗಿನ ಯುವಕರು ಇತರ ಕೆಲಸ ಗಳತ್ತ ಆಸಕ್ತಿ ಹೊಂದಿರುವುದು ಕಾರಣ.
ಕಾಸರಗೋಡು ಜಿಲ್ಲೆಯಲ್ಲಿ ಚರಿತ್ರೆಗೆ ಸೇರಿದ ಮಣ್ಣಿನ ಪಾತ್ರೆ
ನಿರ್ಮಾಣ ಗುಡಿ ಕೈಗಾರಿಕೆಸುಮಾರು 40 ವರ್ಷಗಳಿ ಗಿಂತ ಮೊದಲು ಕಾಸರಗೋಡು ಜಿಲ್ಲೆಯಲ್ಲಿ ಮಣ್ಣಿನ ಮಡಕೆ ಮಾಡುವ ಗುಡಿ ಕೈಗಾರಿಕೆಗಳು ಬಹಳಷ್ಟು ಇದ್ದವು. ಕ್ರಮೇಣ ಆಧುನಿಕ ಪಾತ್ರೆ ಪಗಡಿ ಆಗಮನವಾದಾಗ ಇದರ ಬೇಡಿಕೆ ಕುಸಿತಗೊಂಡಿತು. ಸುಮಾರು 10 ವರ್ಷಗಳ ಮೊದಲು ಕುಂಬಾರಿಕೆ ಮಾಡುವವರು ಇದ್ದರು. ನಿಧಾನವಾಗಿ ಮಡಕೆ ಮಾಡ ಲು ಮಣ್ಣಿನ ಕೊರತೆ, ಪಾತ್ರೆಗಳಿಗೆ ಬೇಡಿಕೆ ಇಲ್ಲದಿರುವುದರಿಂದ ಈ ಗುಡಿ ಕೈಗಾರಿಕೆಯನ್ನು ಉಪೇಕ್ಷಿಸಿ ಇತರ ಕೆಲಸಗಳತ್ತ ಜನ ಆಸಕ್ತಿ ತೋರಿದರು ಎಂದು ನಿಡುಗಳದ ರಮ್ಯಾ ಸುರೇಶ್ ದಭೆìತ್ತಡ್ಕ ಹೇಳುತ್ತಾರೆ.
ಇದೀಗ ಕರ್ನಾಟಕ ದ.ಕ.ಜಿಲ್ಲೆಯಲ್ಲಿ ಮಾತ್ರ ಇದೀಗಲೂ ಈ ಕಾಯಕವನ್ನು ಮುಂದುವರಿಸಿಕೊಂಡು ಹೋಗುವ ಕುಟುಂಬಗಳು ಇವೆ. ಇಲ್ಲಿಂದ ಕರ್ನಾಟಕದ ವಿವಿಧ ಭಾಗಗಳಿಗೆ ಮತ್ತು ಕಾಸರಗೋಡು ಜಿಲ್ಲೆಯ ವಿವಿಧೆಡೆ ಮಡಕೆಗಳನ್ನು ಮಾರಾಟಕ್ಕೆ ತರುತ್ತಾರೆ.
ಮಣ್ಣಿನ ಹೂಜಿ, ಗಡಿಗೆ, ಹಂಡೆ (ದೊಡ್ಡ ಪಾತ್ರೆ), ಹೆಂಚು, ಹಣತೆ ಇತ್ಯಾದಿ ಮನೆಬಳಕೆಯ ಎಲ್ಲ ಪಾತ್ರೆಗಳು ಮೊದಲು ಇದ್ದವು. ಇಂದು ಮಣ್ಣಿನ ವಿವಿಧ ವಿನ್ಯಾಸದ ಹೂಜಿ, ಅತ್ಯಾಕರ್ಷಕ ಆಲಂಕಾರಿಕ ವಸ್ತುಗಳು ವ್ಯಾಪಾರ ಕೇಂದ್ರಗಳಲ್ಲಿ ಹೆಚ್ಚಾಗಿ ಮಾರಲ್ಪಡುತ್ತವೆ.
ಕಾಲಕ್ಕೆ ತಕ್ಕಂತೆ ಬದಲಾಗ ಬೇಕು ನಿಜ.ಆದರೆ ಆರೋಗ್ಯದ ದೃಷ್ಟಿಯಲ್ಲಿ ಹಿಂದಿನ ಕಾಲದಿಂದಲೆ ಉಪಯೋಗಿಸುತ್ತಿದ್ದ ಮಣ್ಣಿನ ಪಾತ್ರೆಗಳನ್ನು ತ್ಯಜಿಸಿ ಆಧುನಿಕ ಪಾತ್ರೆಗಳಾದ ಅಲ್ಯುಮಿನಿಯಂ,ಪ್ಲಾಸ್ಟಿಕ್, ಸ್ಟೀಲ್, ನಾನ್‌ಸ್ಟಿಕ್ ಪಾತ್ರೆಗಳತ್ತ ಮುಖ ಮಾಡಿ ಆರೋಗ್ಯ ಕೆಡಿಸಿಕೊಳ್ಳುತ್ತೇವೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸಿ ಪರಿಸರ ಮಾಲಿನ್ಯ ಮಾಡುವ ಬದಲು ಮಣ್ಣಿನ ಪಾತ್ರೆಗಳನ್ನು ಬಳಸಲು, ಪ್ರೋತ್ಸಾಹ ನೀಡಲು ಸರಕಾರ ಮುಂದಾಗ ಬೇಕು. ಇದನ್ನೆ ಕಾಯಕವಾಗಿಸಿ ಕೊಂಡವರಿಗೂ ಪ್ರಯೋಜನವಾಗ ಬಹುದು.ಈ ಗುಡಿ ಕೈಗಾರಿಕೆ ಪುನಶ್ಚೇತನಗೊಂಡಲ್ಲಿ ಹಲವಾರು ಅವಕಾಶಗಳಿಗೆ ಸಾಧ್ಯತೆ ಇದೆ.
ಮಣ್ಣಿನ ಪಾತ್ರೆ ಅಡುಗೆ ವಿಶೇಷ ರುಚಿ
ತುಳುನಾಡಿನ ಹೆಚ್ಚಿನ ಮನೆಗಳಲ್ಲಿ ಇಂದು ಕೂಡ ಮೀನು,ಮಾಂಸ ಪದಾರ್ಥ ಮಾಡುವುದು ಮಣ್ಣಿನ ಪಾತ್ರೆಯಲ್ಲಿ. ಅದರಲ್ಲಿ ತಯಾರಿಸಿದ ಅಡುಗೆಗೆ ಪ್ರತ್ಯೇಕ ರುಚಿಯಿದೆ ಎಂದು ಅಂಗನವಾಡಿ ಶಿಕ್ಷಕಿ ವಾಟೆ ವಿಜಯಕುಮಾರಿ ಹೇಳುತ್ತಾರೆ. ಮೊಸರು, ಮಜ್ಜಿಗೆ ಇತ್ಯಾದಿ ತಯಾರಿಸಲು ಮಣ್ಣಿನ ಮಡಕೆ ಆದರೆ ಉತ್ತಮ. ಇದು ಕೆಡದೆ ತಾಜಾತನ ಹೊಂದಿರುತ್ತದೆ. ಹಿಂದಿನ ಕಾಲದಲ್ಲಿ ಕುಡಿಕೆಯಲ್ಲಿ ಮೊಸರು, ಮಜ್ಜಿಗೆ ನೆಲುವಿಗೆಗಳಲ್ಲಿ ತೂಗು ಹಾಕುತ್ತಿದ್ದರು. ಹಲಸಿನ ಸೋಲೆಗಳನ್ನು ಉಪ್ಪಿನಲ್ಲಿ ಹಾಕಿಡಲು ದೊಡ್ಡಗಾತ್ರದ ಮಣ್ಣಿನ ಹಂಡೆಗಳನ್ನು ಬಳಸುತ್ತಿದ್ದರು ಎಂದು ಶಿಕ್ಷಕ ಶ್ರೀಧರ ಭಟ್ ನಲ್ಕ ಬನಾರಿ ನೆನಪಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.