ಜಿಲ್ಲಾ 11ನೇ ಸಾಹಿತ್ಯ ಸಮ್ಮೇಳನಕ್ಕೆ ಅಣಿಯಾಗುತ್ತಿರುವ ಮುಳ್ಳೇರಿಯಾ
Team Udayavani, Mar 27, 2018, 8:30 AM IST
ಕಾಸರಗೋಡು: ಮಾರ್ಚ್ 31 ಎಪ್ರಿಲ್ 2ರಂದು ಮುಳ್ಳೇರಿಯಾದಲ್ಲಿ ನಡೆಯಲಿರುವ ಕ.ಸಾ.ಪ. ಕಾಸರಗೋಡು ಜಿಲ್ಲಾ 11ನೆಯ ಸಾಹಿತ್ಯ ಸಮ್ಮೇಳನಕ್ಕೆ ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿದ್ದು ಸಮ್ಮೇಳನದ ಸಿದ್ಧತೆಗಳು ಸದ್ದಿಲ್ಲದೆ ಭರದಿಂದ ಸಾಗುತ್ತಿವೆ. ಮಲೆನಾಡಿನ ಬುಡದಲ್ಲಿ ಪಯಸ್ವಿನಿಯ ಸೆರಗಿನಲ್ಲಿ ಗುಡ್ಡಬೆಟ್ಟಗಳ ನಡುವೆ ಪ್ರಕೃತಿ ಸೌಂದರ್ಯದ ಆಡುಂಬೊಲವಾಗಿರುವ ಮುಳ್ಳೇರಿಯಾ ಪೇಟೆ ಸಾಹಿತ್ಯದೇವತೆಯ ಸ್ವಾಗತಕ್ಕೆ ಸಜ್ಜಾಗಿದೆ. ಎರಡುದಿನಗಳ ಈ ಸಮ್ಮೇಳನದಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಸಾಹಿತ್ಯಪ್ರಿಯರು ಭಾಗವಹಿಸುವ ನಿರೀಕ್ಷೆಯಿದ್ದು ಎಲ್ಲ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವುದಲ್ಲದೆ ಅವರಿಗೆ ಉಚಿತವಾದ ಪ್ರವೇಶ, ಊಟ ಉಪಚಾರಗಳಿಗೆ ಸಕಲ ಸೌಕರ್ಯಗಳನ್ನು ಏರ್ಪಡಿಸಲಾಗಿದೆ ಎಂದು ಕ.ಸಾ.ಪ.ಕೇರಳ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಅವರು ತಿಳಿಸಿದ್ದಾರೆ. ಮುಳ್ಳೇರಿಯಾದ ಗಣೇಶ ಕಲಾ ಮಂದಿರ ಹಾಗೂ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಗಳ ನಡುವಿನ ಮೈದಾನದಲ್ಲಿ ಸಮಾಜಸೇವಕ ವಿ.ಆರ್. ಶೆಣೈ ನಗರದಲ್ಲಿ, ಹಿರಿಯ ವೈದ್ಯ ವಿ.ಕೇಶವಭಟ್ ಸಭಾಂಗಣದಲ್ಲಿ, ಬಹುಭಾಷಾ ವಿದ್ವಾಂಸ ಸಂಶೋಧಕ ಡಾ| ವೆಂಕಟರಾಜ ಪುಣಿಂಚತ್ತಾಯ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದ್ದು ಕ.ಸಾ.ಪ. ಅಧ್ಯಕ್ಷ ಎಸ್.ವಿ. ಭಟ್ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ರಂಗನಾಥ ಶೆಣೈ ಅವರು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಎಡೆಬಿಡದೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂಲತಃ ಕಾಸರಗೋಡಿನವರೇ ಆಗಿದ್ದು ಪ್ರಸ್ತುತ ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ನೆಲೆಸಿರುವ ಖ್ಯಾತ ವೈದ್ಯ, ಸಾಹಿತಿ, ಸಂಘಟಕ, ಕನ್ನಡಪರ ಚಿಂತಕ ಡಾ| ನಾ. ಮೊಗಸಾಲೆಯವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ಕವಿ, ಅಂಕಣಗಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ| ದೊಡ್ಡರಂಗೇ ಗೌಡರು ಸಮ್ಮೇಳನವನ್ನು ಉದ್ಘಾಟಿಸಲಿರುವರು. ಸಂಸದ ಪಿ. ಕರುಣಾಕರನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಕೆ. ಕುಂಞಿರಾಮನ್, ಪಿ.ಬಿ. ಅಬ್ದುಲ್ ರಜಾಕ್, ವಿಮರ್ಶಕ ಎಸ್. ಆರ್. ವಿಜಯಶಂಕರ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್. ಪುಣಿಂಚತ್ತಾಯ, ಹರಿಕೃಷ್ಣ ಪುನರೂರು ಮೊದಲಾದ ಗಣ್ಯರಲ್ಲದೆ ಜಿಲ್ಲಾ ಪಂಚಾಯತ್ ಮೊದಲಾದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾಸರಗೋಡು ಮತ್ತು ನೆರೆಯ ಜಿಲ್ಲೆಯ ಗಣ್ಯರು, ಸಾಹಿತಿಗಳು ಭಾಗವಹಿಸಲಿರುವರು.
ಉದ್ಘಾಟನೆ, ಸಮಾರೋಪ ಸಮಾರಂಭಗಳಲ್ಲದೆ ಸಮ್ಮೇಳನಾಧ್ಯಕ್ಷರ ವರ್ಣರಂಜಿತ ಮೆರವಣಿಗೆ, ಪುಸ್ತಕ ಬಿಡುಗಡೆ, ಗಾನ, ಸಂಗೀತ. ನೃತ್ಯ, ಯಕ್ಷ ವೈಭವ, ಕಾಸರಗೋಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ವಿಚಾರಗೋಷ್ಠಿ, ಬಾಲಕವಿಗೋಷ್ಠಿ, ಕವಿಗೋಷ್ಠಿ, ಯಕ್ಷ ಹಾಸ್ಯ ವೈಭವ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿದೆ. ಎರಡು ಯಕ್ಷಗಾನ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಲಿವೆ.
ಮೇಲ್ನೋಟಕ್ಕೆ ವಿಶೇಷ ಪ್ರಚಾರವಿಲ್ಲದಂತೆ ತೋರುತ್ತಿದ್ದರೂ ಸಮ್ಮೇಳನದಲ್ಲಿ ಬಹುಸಂಖ್ಯೆಯ ಸಾಹಿತ್ಯಾಸಕ್ತರು ಭಾಗವಹಿಸುವಂತೆ ಮಾಡಲು ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಸ್ಥಳೀಯ ಹಾಗೂ ಸುತ್ತುಮುತ್ತಲಿನ ಗ್ರಾಮಗಳ ಶಾಲೆಗಳು, ಅಧ್ಯಾಪಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಕೃಷಿಕರು, ಧಾರ್ಮಿಕ ಸಾಂಸ್ಕೃತಿಕ ಮುಖಂಡರು, ವಿವಿಧ ಸಂಘಟನೆಗಳು ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತರಾಗಿದ್ದಾರೆ. ಪುಸ್ತಕ ಮಳಿಗೆಗಳು, ವಸ್ತುಪ್ರದರ್ಶನ, ಚಿತ್ರಕಲಾ ಪ್ರದರ್ಶನಗಳು ಸಮ್ಮೇಳನದ ಆಕರ್ಷಣೆಯನ್ನು ಹೆಚ್ಚಿಸಲಿವೆ. ಎರಡುದಿನಗಳು ಕೂಡ ಅಭ್ಯಾಗತರ ಹಸಿವನ್ನು ತಣಿಸಲು ಶುಚಿರುಚಿಯಾದ ಭೋಜನ ವ್ಯವಸ್ಥೆಯನ್ನು ಮಾಡಲಾಗುವುದು. ಶಿಸ್ತುಬದ್ಧವಾಗಿ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರ ಪಡೆ ಸಿದ್ಧವಾಗಿದೆ ಎಂದು ಕ.ಸಾ.ಪ. ಅಧ್ಯಕ್ಷ ಎಸ್.ವಿ. ಭಟ್ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲ ಭಾಗಗಳಿಂದಲೂ ಸಾಹಿತ್ಯಾಸಕ್ತರು, ಕನ್ನಡಿಗರು ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದ್ದಾರೆ.
ಯಕ್ಷ ಹಬ್ಬವಾಗಲಿರುವ ಸಾಹಿತ್ಯ ಸಮ್ಮೇಳನ
ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಷೆ, ಸಾಹಿತ್ಯ ವಿಚಾರಗಳಿಗೆ ಪ್ರಾಧಾನ್ಯವಿದ್ದರೂ ಕರಾವಳಿಯ ಗಂಡು ಕಲೆಯಾದ ಯಕ್ಷಗಾನಕ್ಕೆ ಪ್ರಾತಿನಿಧ್ಯವಿರುವುದಿಲ್ಲ ಎಂಬ ಕೊರಗು ಯಕ್ಷ ಪ್ರಿಯರನ್ನು ಕಾಡುತ್ತದೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ನಡೆಯುವ ಕ.ಸಾ.ಪ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಎಂದಿಗೂ ಯಕ್ಷಗಾನಕ್ಕೆ ಪ್ರಾತಿನಿಧ್ಯವಿರುತ್ತದೆ. ಅಧ್ಯಕ್ಷರಾದ ಎಸ್.ವಿ. ಭಟ್ ಅವರು ಸ್ವತಃ ಯಕ್ಷಗಾನ ಪ್ರಿಯರಾಗಿ ರುವುದು ಮಾತ್ರವಲ್ಲ ಯಕ್ಷಗಾನದ ತವರು ನೆಲವಾದ ಕಾಸರಗೋಡಿನಲ್ಲಿ ಈ ಮಹಾನ್ ಕಲೆಯ ಅಭಿಮಾನಿಗಳ ಸಂಖ್ಯೆ ಅಪಾರವಾಗಿರುವುದೂ ಇದಕ್ಕೆ ಕಾರಣ.
ಕಾಸರಗೋಡಿನಲ್ಲಿ ಕನ್ನಡದ ಬೆಳವಣಿಗೆಗೆ ಯಕ್ಷಗಾನದ ಕೊಡುಗೆ ಅಪಾರ. ಕನ್ನಡ, ಮಲಯಾಳ, ತುಳು, ಮರಾಠಿ, ಕೊಂಕಣಿ ಮೊದಲಾದ ಬೇರೆ ಬೇರೆ ಮನೆಮಾತುಗಳ ಜನರು ಪಂಡಿತ ಪಾವರರೆನ್ನದೆ ಜಾತಿ ಮತ ಅಂತಸ್ತಿನ ಭೇದವಿಲ್ಲದೆ ಯಕ್ಷಗಾನದತ್ತ ಆಕರ್ಷಿತರಾಗಿದ್ದಾರೆ. ಯಕ್ಷಗಾನದ ಅಭಿರುಚಿ ಕನ್ನಡ ಕಲಿಕೆಯನ್ನು ಉತ್ತೇಜಿಸಿದೆಯಲ್ಲದೆ ಮಾತು ಬರಹದಲ್ಲಿ ಭಾಷಾಶುದ್ದಿಗೂ ಕೊಡುಗೆ ನೀಡಿದೆ. ಪಾರ್ತಿಸುಬ್ಬ, ಕುರಿಯ, ಕೀರಿಕ್ಕಾಡು, ಶೇಣಿ, ಕುಂಬಳೆ ಮೊದಲಾದ ಮಹಾನ್ ಯಕ್ಷ ಕಲಾವಿದರು ಜನ್ಮ ತಳೆದ ನಾಡು ಕಾಸರಗೋಡು. 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುವ ಮುಳ್ಳೇರಿಯಾ ಹಾಗೂ ಅಕ್ಕಪಕ್ಕದ ಊರುಗಳಾದ ಆದೂರು, ಕುಂಟಾರು, ಮುಂಡೋಳು, ಬೆಳ್ಳೂರು, ಮುಳಿಯಾರು ಮೊದಲಾದವು ಅಪಾರ ಯಕ್ಷಪ್ರೇಮಿಗಳನ್ನೂ ಯಕ್ಷಸಂಘಟನೆಗಳನ್ನೂ ಹೊಂದಿವೆ.
ಮುಳ್ಳೇರಿಯಾದ ಹಿರಿಮೆ
ಹನ್ನೊಂದನೆಯ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಮುಳ್ಳೇರಿಯಾವನ್ನೊಳಗೊಂಡ ಕಾರಡ್ಕ ಗ್ರಾಮ ಸಾಹಿತ್ಯ ಸಂಸ್ಕೃತಿಯ ನೆಲೆವೀಡು. ಖ್ಯಾತ ಕವಿಗಳಾದ ಡಾ| ಕೆ.ವಿ. ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಶ್ರೀಕೃಷ್ಣ ಚೆನ್ನಾಂಗೋಡು, ಸಂಶೋಧಕ ಡಾ| ವೆಂಕಟರಾಜ ಪುಣಿಂಚತ್ತಾಯ, ಕಲಾವಿದ ಪಿ.ಎಸ್. ಪುಣಿಂಚತ್ತಾಯ ಮೊದಲಾದವರು ಊರಿನ ಕೀರ್ತಿಯನ್ನು ಬೆಳಗಿಸಿದ್ದಾರೆ. ಮುಂಡೋಳು, ದೇಲಂಪಾಡಿ, ಬೆಳ್ಳೂರು, ನಾರಂಪಾಡಿ, ಆದೂರು, ಅಡೂರು. ಕುಂಟಾರು ಮೊದಲಾದ ಸನಿಹದ ದೇವಸ್ಥಾನಗಳು, ಮಸೀದಿಗಳು, ಇಗರ್ಜಿಗಳು ಊರಿನ ಪಾವಿತ್ರ್ಯವನ್ನು ಹೆಚ್ಚಿಸಿವೆ. ಕನ್ನಡ, ಮಲಯಾಳ, ತುಳು, ಮರಾಠಿ, ಕೊಂಕಣಿ, ಕರಾಡ, ಹವ್ಯಕ, ಮಾಪಿಳ್ಳ ಮೊದಲಾದ ಬಹುಭಾಷೆಗಳು ಈ ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ. ಹಲವಾರು ವಿದ್ಯಾಸಂಸ್ಥೆಗಳು ಈ ಪರಿಸರದಲ್ಲಿವೆ. ಸಂಗೀತ, ನಾಟಕ, ನೃತ್ಯ, ಯಕ್ಷಗಾನ ಕಲೆಗಳಿಗೆ ಈ ಊರು ಹೆಸರಾಗಿದೆ. ಕಾಂಚನಗಂಗಾ ಕಲಾಗ್ರಾಮ. ಕಲ್ಲೇರಿ ಜಲಪಾತ, ಪಯಸ್ವಿನೀ ನದಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ.
ಅಕ್ಷರಶಃ ಯಕ್ಷ ಹಬ್ಬ
ಈ ಬಾರಿಯ ಸಮ್ಮೇಳನ ಅಕ್ಷರಶಃ ಯಕ್ಷಹಬ್ಬವಾಗಲಿದ್ದು ಎರಡು ಯಕ್ಷಗಾನ ಪ್ರದರ್ಶನಗಳಲ್ಲದೆ ಪ್ರಸಿದ್ಧ ಯಕ್ಷ ಕಲಾವಿದರಿಂದ ತೆಂಕುತಿಟ್ಟಿನ ಯಕ್ಷ ಹಾಸ್ಯಲಹರಿ ಎಂಬ ವಿನೂತನ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲಿದೆ. ಮೊದಲದಿನ ಅಪರಾಹ್ನ ಬಡಗುತಿಟ್ಟಿನ ಪ್ರಸಿದ್ಧ ಮೇಳವಾದ ಸಾಲಿಗ್ರಾಮ ಮೇಳದವರಿಂದ “ಭಕ್ತ ಚಂದ್ರಹಾಸ’ ಎಂಬ ಪ್ರಸಂಗ ಹಾಗೂ ಎರಡನೇ ದಿನವೂ ಅಪರಾಹ್ನ ಯಕ್ಷ ಹಾಸ್ಯಲಹರಿಯ ಹೊರತಾಗಿ ಕಾಸರಗೋಡಿನ ಪ್ರತಿಭಾವಂತ ಕಲಾವಿದರಿಂದ “ಮಹಿಷಾಸುರ ವಧೆ’ ಎಂಬ ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮುಳ್ಳೇರಿಯಾದಲ್ಲಿ ಇದು ಎರಡನೆ ಬಾರಿ
ಮುಳ್ಳೇರಿಯಾ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸುತ್ತಿರುವುದು ಇದು ಎರಡನೇ ಬಾರಿ. ಹಿಂದೆ 2006ರಲ್ಲಿ ಮೂರನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಡಾ| ರಮಾನಂದ ಬನಾರಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಮಲಯಾಳ ಭಾಷೆ ಹೆಚ್ಚಾಗಿ ಪ್ರಚಲಿತವಿರುವಂತೆ ಕಾಣುತ್ತಿರುವ ಈ ಪ್ರದೇಶದಲ್ಲಿ ಸಮ್ಮೇಳನ ಯಶಸ್ವಿಯಾಗಬಹುದೇ ಎಂಬ ಶಂಕೆಗೆ ಇದು ಉತ್ತರವಾಗಿತ್ತು. ಆಗ ಐ.ವಿ. ಭಟ್ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅಂದು ಕಾರ್ಯದರ್ಶಿಯಾಗಿದ್ದ ಎಸ್.ವಿ. ಭಟ್ ಅವರು ಜಿಲ್ಲೆಯ ಪ್ರತಿಯೊಂದು ಶಾಲೆಗಳಿಗೂ ತೆರಳಿ ಸಮ್ಮೇಳನದ ಯಶಸ್ಸಿಗಾಗಿ ದುಡಿದಿದ್ದರು. ಮೇಲುನೋಟಕ್ಕೆ ಮಲಯಾಳಮಯವಾದ ವಾಣಿಜ್ಯನಗರಿಯಂತಿದ್ದರೂ ಮುಳ್ಳೇರಿಯಾ ಪೇಟೆಯ ನಾಡಿಮಿಡಿತವನ್ನು ಅರಿತಿರುವ ಎಸ್.ವಿ. ಭಟ್ ಈ ಭಾಗದ ಜನರಿಗೆ ಸುಪ್ತವಾದ ಸಾಂಸ್ಕೃತಿಕ ಒಲವಿದೆ, ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ಜನಸೇರುವ ಮೂಲಕ ಇದು ಪ್ರತಿಬಿಂಬಗೊಳ್ಳಲಿದೆ ಎಂಬ ವಿಶ್ವಾಸವನ್ನು ಪ್ರಕಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.