ಕಾಸರಗೋಡಿನ ಸಾಹಿತ್ಯ ಲೋಕ: ಅನಂತಪುರ ಈಶ್ವರಯ್ಯ
Team Udayavani, Jun 11, 2018, 6:00 AM IST
“ದೇಗುಲಗಳ ನಾಡು’ ಎಂದೇ ಪ್ರಖ್ಯಾತವಾಗಿರುವ ಕೇರಳದ ಭೂಪಟದಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರವು “ಸರೋವರ ಕ್ಷೇತ್ರ’ವೆಂದೇ ಪ್ರಸಿದ್ಧಿ ಗಳಿಸಿದ್ದು ದೇಶದಾದ್ಯಂತ ಭಕ್ತರು ಈ ಕ್ಷೇತ್ರ ದರ್ಶನಕ್ಕಾಗಮಿಸು ತ್ತಿದ್ದಾರೆ. ಈ ಕ್ಷೇತ್ರದ ಆನುವಂಶಿಕ ಮೊಕ್ತೇಸರರು ಇಲ್ಲಿಯ ಶ್ಯಾನುಭೋಗ ಮನೆತನದವರಾಗಿದ್ದಾರೆ. ಕೇರಳ ಸರಕಾರದ ಭೂಮಸೂದೆ ಕಾಯ್ದೆ ಜಾರಿಯ ಮೊದಲು ಸುಮಾರು 125 ಎಕ್ರೆ ಸ್ಥಳದ ಒಡೆತನವು ಇಲ್ಲಿ ಈ ಮನೆತನಕ್ಕಿತ್ತು. ಕನ್ನಡ ಸಾರಸ್ವತ ಲೋಕದಲ್ಲಿಯೂ ಈ ಮನೆತನವು ಸಿರಿವಂತವಾಗಿದ್ದು ಹೆಸರುವಾಸಿಯಾಗಿದೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದೇ ಗುರುತಿಸಿಕೊಂಡಿರುವ ಪತ್ರಿಕೋದ್ಯಮವನ್ನು ತನ್ನ ವೃತ್ತಿ ಹಾಗೂ ಅದರಲ್ಲಿಯೇ ನಾಡು ನುಡಿ ಹಾಗೂ ಸಂಸ್ಕೃತಿ ಸಂಸ್ಕಾರವನ್ನು ತಿದ್ದಲು ಪ್ರಯತ್ನಶೀಲರಾದವರಲ್ಲಿ ಈ ಶ್ಯಾನುಭೋಗ ಮನೆತನದ ಅನಂತಪುರ ಈಶ್ವರಯ್ಯನವರ ಕೊಡುಗೆ ಆದರ್ಶಮಯವಾದುದಾಗಿದೆ.
ಜಮೀನುದಾರ ದಿ| ಅನಂತಪುರ ನಾರಾಯಣಯ್ಯ ನವರು ಗ್ರಾಮದ ಪಟೇಲರೂ ಆಗಿದ್ದರು. ವೆಂಕಟಲಕ್ಷಮ್ಮ ಅವರ ಪತ್ನಿ. ಆ ದಂಪತಿಯ ನಾಲ್ಕು ಗಂಡು ನಾಲ್ಕು ಹೆಣ್ಣುಮಕ್ಕಳಲ್ಲಿ ಪ್ರಥಮ ಪುತ್ರರಾಗಿ ಈಶ್ವರಯ್ಯನವರು 1940 ಅಗಸ್ಟ್ 12ರಂದು ಜನಿಸಿದರು. ಸಹೋದರರಾದ ಶ್ರೀಕೃಷ್ಣಯ್ಯ ಅನಂತಪುರ ಅವರು ಕವಿ, ಹಾಡುಗಾರ, ಸಂಗೀತ ಪ್ರೇಮಿ, ಸಾಹಿತ್ಯವಲಯದಲ್ಲಿ ಪರಿಚಿತರು. ರಾಜಾರಾಮ ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿ. ಸತ್ಯನಾಥ ಕೃಷಿಕರು. ವೆಂಕಟಲಕ್ಷಿ$¾, ದಿ| ಶಾರದಾ, ದಿ| ಇಂದಿರಾ, ಲಲಿತಾ ಸಹೋದರಿಯರು.
ಈಶ್ವರಯ್ಯನವರು ಆಂಗ್ಲ ಭಾಷೆಯಲ್ಲಿ ಪದವಿಯನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪಡೆದರು. ಪ್ರಾಥಮಿಕ ವಿದ್ಯಾಭ್ಯಾಸ ಕಾಲದಲ್ಲಿಯೇ ವಿಷ್ಣು ಕಲ್ಲೂರಾಯರಿಂದ ಅನಂತರ ಮಂಗಳೂರಿನ ಕಲಾಮಂದಿರದಲ್ಲಿ ಸಂಗೀತವನ್ನು ಕಲಿತರು. ಅಲ್ಲದೆ ಕೊಳಲು ವಾದನ, ವಯಲಿನ್, ಕ್ಲಾರಿನೆಟ್ ಮೊದಲಾದವುಗಳನ್ನೂ ಅಭ್ಯಸಿಸಿದರು.
ಈಶ್ವರಯ್ಯನವರು ಹಲವು ಪ್ರತಿಭೆಗಳ ಗಣಿ. ಅವರ ಜ್ಞಾನ ಹಲವು ಮುಖಗಳದ್ದು. ಅವರೊಬ್ಬರು ತುಂಬಿದ ಕೊಡ. ಅನುಭವೀ ಪತ್ರಕರ್ತರು. ಕಲಾಪ್ರೇಮಿ ಹಾಗೂ ಕಲಾವಿಹಾರಿಗಳು.ಸಂಗೀತ ಮತ್ತು ಛಾಯಾಚಿತ್ರಗ್ರಹಣಗಳೆರಡರಲ್ಲೂ ಸಿದ್ಧಹಸ್ತರು. ಒಳ್ಳೆಯ ಬರಹಗಾರರಾದ ಅವರು ಗಂಭೀರವಾಗಿಯೂ ಸರಸ ಶೈಲಿಯಲ್ಲಿಯೂ ಬರೆಯಬಲ್ಲವರು. ಉತ್ತಮ ವಾಗ್ಮಿಯಾಗಿರುವ ಅವರು ತಮ್ಮ ಮಾತಿನ ಮೋಡಿಯಿಂದ ಸಭಿಕರನ್ನು ಗಂಟೆಗಟ್ಟಲೆ ಸೆರೆಹಿಡಿಯಬಲ್ಲವರು. ಒಳ್ಳೆಯ ಓದುಗರಾಗಿರುವ ಅವರು ಸಮರ್ಥ ವಿಮರ್ಶಕರೂ ಆಗಿರುವರು.
ಪತ್ರಿಕಾ ರಂಗಕ್ಕೆ ಪ್ರವೇಶಿಸುವ ಮೊದಲು ಈಶ್ವರಯ್ಯನವರು ಸುಮಾರು ಐದು ವರ್ಷಗಳ ಕಾಲ ಕರ್ನಾಟಕ ಸರಕಾರದ ಪಿ.ಡಬುÉÂ.ಡಿ. ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಅವರು ಸುಮಾರು 60ರಷ್ಟು ಕಥೆಗಳನ್ನು ಬರೆದಿದ್ದು ಅವುಗಳು ಕನ್ನಡದ ಪ್ರಸಿದ್ಧ ಪತ್ರಿಕೆಗಳಾದ ಸುಧಾ, ಮಯೂರ, ಪ್ರಜಾಮತ, ಮಲ್ಲಿಗೆ, ಅಜಂತ, ಕಸ್ತೂರಿ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನೂ ಬರೆದಿದ್ದು ಪ್ರಕಟವಾಗಿವೆ.ಈಶ್ವರಯ್ಯನವರು ಸಮರ್ಥ ನಾಟಕ ಕಲಾವಿದರು. ಕಾಲೇಜು ವಿದ್ಯಾಭ್ಯಾಸ ಕಾಲದಲ್ಲಿ ಪ್ರಥಮವಾಗಿ ಕು.ಶಿ. ಹರಿದಾಸ ಭಟ್ಟರ ನಿರ್ದೇಶನದ ಇಂಗ್ಲಿಷ್ ನಾಟಕದಲ್ಲಿ ಅಭಿನಯಿಸಿದ್ದರು. ಅನಂತರ ಹಲವು ಕನ್ನಡ ನಾಟಕಗಳಲ್ಲಿಯೂ ಪಾತ್ರವಹಿಸಿರುವರು.
ಈಶ್ವರಯ್ಯನವರು ಪ್ರಥಮವಾಗಿ ಉದಯವಾಣಿ ಪತ್ರಿಕೆಯಲ್ಲಿ ಸಂಪಾದಕೀಯ ವಿಭಾಗಕ್ಕೆ ಸೇರಿದರು. ಪತ್ರಿಕೆಯ ಮ್ಯಾಗಜಿನ್ ವಿಭಾಗದಲ್ಲಿ ಲಲಿತರಂಗ, ಕಲಾವಿಹಾರ ಎಂಬ ಅಂಕಣಗಳಿಂದ ಪ್ರಸಿದ್ಧರಾದರು. ಯಕ್ಷಗಾನಕ್ಕೆ ವಿಶೇಷ ಮನ್ನಣೆ ತಂದುಕೊಟ್ಟ ಕೀರ್ತಿ ಈ ಕಲಾವಿಹಾರಕ್ಕೆ ಸಲ್ಲಬೇಕು.
ಉದಯವಾಣಿ ಬಳಗವ “ತುಷಾರ’ ಮಾಸಪತ್ರಿಕೆಯನ್ನು ಆರಂಭಿಸಿತು. ಈ ಪತ್ರಿಕೆಯ ಸಂಪಾದಕತ್ವವನ್ನು ಈಶ್ವರಯ್ಯನವರು ವಹಿಸಿಕೊಂಡರು. ಛಾಯಾಚಿತ್ರ ಲೇಖನಗಳು, ಛಾಯಾಚಿತ್ರಗಳ ಸ್ಪರ್ಧೆ ಮೊದಲಾದ ಅನೇಕ ಹೊಸ ಪ್ರಯೋಗಗಳನ್ನು ತಂದರು. ಯುವಕ ಯುವತಿಯರಿಗಾಗಿ “ಸರಸ’ ಎಂಬ ಲಲಿತ ಪ್ರಬಂಧ ಅಂಕಣವು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತು. ಇದೇ ಸರಸ ಅಂಕಣವನ್ನು ನಂತರ ಉದಯವಾಣಿ ಬಳಗದ ತರಂಗ ವಾರಪತ್ರಿಕೆಯಲ್ಲಿಯೂ ಬರೆದಿರುವರು.
ಸಂಗೀತ ಪ್ರೇಮಿಯಾದ ಈಶ್ವರಯ್ಯನವರು ಉಡುಪಿಯಲ್ಲಿ “ರಾಗಧ್ವನಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆಯ ಆಶ್ರಯದಲ್ಲಿ ತಿಂಗಳಿಗೊಮ್ಮೆ “ಮನೆಮನೆ ಸಂಗೀತ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಓರ್ವ ಕಲಾವಿದರ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. “ರಾಗಧನಶ್ರೀ’ ಎಂಬ ಸಂಗೀತ ಮಾಸಿಕದ ಸಂಪಾದಕರಾಗಿಯೂ, ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವರು.
ಶ್ರೇಷ್ಠ ಅನುವಾದಕರಾಗಿರುವ ಈಶ್ವರಯ್ಯನವರು ನವಕರ್ನಾಟಕ ಪ್ರಕಾಶನದ 50ರ ಸಂದರ್ಭದಲ್ಲಿ ಸಾಹಿತಿ ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ ವಿಶ್ವಕಥಾಕೋಶದ 16ನೇ ಸಂಪುಟವನ್ನು ಈಶ್ವರಯ್ಯನವರು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದ್ದಾರೆ.
ಈ ಕೃತಿಯಲ್ಲಿ ಗ್ರೀಸ್, ಟರ್ಕಿ ಮತ್ತು ಸೈಪ್ರಸ್ ಕಥಾ ಸಾಹಿತ್ಯದಿಂದ ಆಯ್ದ ಹƒದಯಂಗಮಯವಾದ ಹತ್ತು ಕಥೆಗಳಿವೆ. ಸರಸ ಕೃತಿಯು ಲಲಿತ ಪ್ರಬಂಧ ಸಂಕಲನವಾಗಿದೆ. ಅಲ್ಲದೆ ಸಂಗೀತ ಕ್ಷೇತ್ರದ ದಿಗ್ಗಜರನೇಕರ ಸಂದರ್ಶನ ಲೇಖನಗಳ ಸಂಕಲನಗಳನ್ನೂ ಬರೆದಿರುತ್ತಾರೆ. ಯಕ್ಷಗಾನದಲ್ಲೂ ಹಿಡಿತವಿದ್ದು ಹಲವು ಲೇಖನಗಳನ್ನು ಬರೆದಿರುವರು. ಸಿನಿಮಾ ಸಂಗೀತದ ಕುರಿತಾದ ಲೇಖನಗಳು ಫಿಲ್ಮ್ಫೇರ್ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಈಶ್ವರಯ್ಯನವರ ಸಾಧನೆಗೆ ಗೌರವಾದರಗಳು ಅವರನ್ನು ಅರಸಿಕೊಂಡು ಬಂದಿವೆ. ಈಶ್ವರಯ್ಯನವರ ಲೈವ್ ಸಂದರ್ಶನವನ್ನು ಆಕಾಶವಾಣಿ ಮತ್ತು ಹೆಚ್ಚಿನ ಚಾನೆಲ್‌ಗಳು ಪ್ರಸಾರ ಮಾಡಿವೆ. ಶಾಸ್ತ್ರೀಯ ಸಂಗೀತ ಸಭಾ ಕಾರ್ಕಳ, ಸಂಗೀತ ಪರಿಷತ್ತು ಮಂಗಳೂರು, ರಾಗಧನ ಉಡುಪಿ, ಇಮೇಜ್ ಪುತ್ತೂರು, ಕ್ರಿಯೇಟಿವ್ ಕೆಮರಾ ಕ್ಲಬ್ ಮಂಗಳೂರು, ಗಾನ ಕಲಾ ಪರಿಷತ್ ಬೆಂಗಳೂರು, ಪದವೀಧರ ಯಕ್ಷಗಾನ ಸಮಿತಿ ಮುಂಬಯಿ, ಶ್ರೀ ಪೇಜಾವರ ಮಠ ಉಡುಪಿ, ಗಾಯನ ಸಮಾಜ ಬೆಂಗಳೂರು, ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಗದಗ, ಮಣಿಪಾಲ ಮೀಡಿಯಾ ನೆಟ್ ವರ್ಕ್ಸ್ ಮೊದಲಾದ ಅನೇಕ ಸಂಘ ಸಂಸ್ಥೆಗಳಿಂದ ಈಶ್ವರಯ್ಯನವರು ಗೌರವಿಸಲ್ಪಟ್ಟಿದ್ದಾರೆ.
ಪೊಲ್ಯ ಯಕ್ಷಗಾನ ಪ್ರಶಸ್ತಿ (1994), ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ (2000), ರಾಜ್ಯಮಟ್ಟದ ಸಂದೇಶ ಪತ್ರಿಕೋದ್ಯಮ ಸಮ್ಮಾನ ಪ್ರಶಸ್ತಿ (2001), ರಂಗವಾಚಸ್ಪತಿ ಬಿರುದು (2003), ಪರಶುರಾಮ ಪ್ರಶಸ್ತಿ (2003), ವ್ಯಾಸ ಸಾಹಿತ್ಯ ಪ್ರಶಸ್ತಿ (2008), ನುಡಿಸಿರಿ ರಾಜ್ಯ ಪ್ರಶಸ್ತಿ ಮೊದಲಾದ ಶ್ರೇಷ್ಠ ಪ್ರಶಸ್ತಿಗಳು ಈಶ್ವರಯ್ಯನವರಿಗೆ ಪ್ರಾಪ್ತವಾಗಿವೆ.
ನಾರಂಪಾಡಿಯ ಸುಬ್ರಾಯರ ಸುಪುತ್ರಿ ಗಿರಿಜಾ ಈಶ್ವರಯ್ಯನವರ ಪತ್ನಿ. ಈ ದಂಪತಿಗಳಿಗೆ ಪುತ್ರಿಯರಲ್ಲಿ ಅನುರಾಧಾ ಮತ್ತು ಚೇತನಾ ಗೃಹಿಣಿಯರು. ಪುತ್ರ ಶೈಲೇಂದ್ರ ಮಾಹೆ ವಿಶ್ವವಿದ್ಯಾಲಯದಲ್ಲಿ ಪರೀûಾ ನಿಯಂತ್ರಕರು.
ಇದೀಗ ನಿವೃತ್ತಿಯ ಅನಂತರ ಉಡುಪಿಯಲ್ಲಿ ನೆಲೆಸಿರುವ ಈಶ್ವರಯ್ಯನವರ ಬಾಳು -ಬದುಕಿನ ಕುರಿತಾಗಿ ಉದಯವಾಣಿಯ ಹಿರಿಯ ಸಂಪಾದಕರಾಗಿದ್ದ ನಿತ್ಯಾನಂದ ಪಡ್ರೆಯವರು “ಕಲಾಲೋಕದ ಚಿಂತಕ ಎ. ಈಶ್ವರಯ್ಯ’ ಎಂಬ ಕೃತಿಯನ್ನು ರಚಿಸಿದ್ದು ಇದನ್ನು ಕಾಂತಾವರ ಕನ್ನಡ ಸಂಘದವರು ಪ್ರಕಟಿಸಿರುತ್ತಾರೆ.
ಲೇ: ಕೇಳು ಮಾಸ್ತರ್ ಅಗಲ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.