ಬದಿಯಡ್ಕ ಪೇಟೆ ಚರಂಡಿ ಶುಚೀಕರಣ
Team Udayavani, Jun 2, 2019, 12:15 PM IST
ಬದಿಯಡ್ಕ: ಮಳೆಗಾಲದ ಪೂರ್ವ ಶುಚೀಕರಣ ಅಂಗವಾಗಿ ಬದಿಯಡ್ಕ ಪೇಟೆಯ ಚರಂಡಿಗಳಲ್ಲಿರುವ ತ್ಯಾಜ್ಯಗಳನ್ನು ಎತ್ತುವ ಪ್ರಕ್ರಿಯೆ ಆರಂಭವಾಗಿದೆ. ಪೇಟೆಯ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಇದರಿಂದ ನೀರು ಹರಿಯಲು ಸಾಧ್ಯವಾಗದ ಸ್ಥಿತಿಯುಂಟಾಗಿತ್ತು. ಕೆಲವೊಮ್ಮೆ ಮಳೆ ನೀರು ಚರಂಡಿಯಲ್ಲಿ ಹರಿಯಲಾಗದೆ ರಸ್ತೆಯಲ್ಲಿಯೇ ಹರಿಯುವ ಸಂದರ್ಭವೂ ಉಂಟಾಗಿತ್ತು. ಹಿಂದೆ ಮಳೆಗಾಲ ಆರಂಭವಾದ ಅನಂತರ ಚರಂಡಿಯ ತ್ಯಾಜ್ಯ ಎತ್ತುವ ಪ್ರಕ್ರಿಯೆಯೂ ನಡೆದಿತ್ತು. ಇದೀಗ ಮಳೆಗಾಲದ ಮೊದಲೇ ಬದಿಯಡ್ಕ ಪೇಟೆಯ ಚರಂಡಿಗಳ ತ್ಯಾಜ್ಯ ಎತ್ತುವ ಪ್ರಕ್ರಿಯೆ ಆರಂಭಗೊಂಡಿದ್ದು ಒಂದೆರಡು ದಿನಗಳಲ್ಲಿ ಇದು ಪೂಣೇಗೊಳ್ಳಲಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಮಳೆಗಾಲದ ಮೊದಲೇ ಚರಂಡಿಗಳ ತ್ಯಾಜ್ಯ ತೆಗೆಯುವ ಕಾಯಕಕ್ಕೆ ಮನ್ನಣೆ ನೀಡಿದ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹಾಗೂ ಇತರರನ್ನು ನಗರದ ವ್ಯಾಪಾರಿಗಳು ಶ್ಲಾಘಿಸಿದ್ದಾರೆ.