ಲಂಚ ಕಾಟ: ಚೆಸ್ಕಾಂ ಸಹಾಯಕ ಎಂಜಿನಿಯರ್ ಅಮಾನತಿಗೆ ಆಗ್ರಹ
Team Udayavani, Jun 27, 2018, 1:23 PM IST
ಗೋಣಿಕೊಪ್ಪಲು: ಬಾಳೆಲೆ ಚೆಸ್ಕಾಂ ಕಾರ್ಯಪಾಲನಾ ಶಾಖೆಯ ಸಹಾಯಕ ಇಂಜಿನಿಯರ್ ಸೋಮೇಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬಾಳೆಲೆ ಚೆಸ್ಕಾಂ ಶಾಖೆ ಕಚೇರಿಗೆ ಮುತ್ತಿಗೆ ಹಾಕಿ ಇಂಜಿನಿಯರ್ ವಿರುದ್ದ ಧಿಕ್ಕಾರ ಹಾಕುತ್ತ ಪ್ರತಿಭಟಿಸಿದರು. ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್ ಅವರ ನೇತೃತ್ವದಲ್ಲಿ ಬಾಳೆಲೆ ಹೋಬಳಿಯ ದೇವನೂರು, ಸುಳುಗೋಡು, ಬೆಳ್ಳೂರು, ಮಲ್ಲೂರು, ನಿಟ್ಟೂರು, ಕೊಟ್ಟಗೇರಿ, ಕಾರ್ಮಾಡು ಮತ್ತು ದೇವನೂರು 2 ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯಲ್ಲಿ ನಿರತರಾದರು.
ಗ್ರಾಮಸ್ಥರಿಂದ ಲಂಚ ಪಡೆದು ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್ ಬಗ್ಗೆ ತನಿಖೆಯಾಗಬೇಕು. ಮೇಲಧಿಕಾರಿಗಳನ್ನು ನಿರ್ಲಕ್ಷಿಸಿ ಸ್ವ ಇಚ್ಛೆಯಿಂದ ಕಾರ್ಯನಿರ್ವಹಿಸುವ ಇಂಜಿನಿಯರ್ ಸೋಮೇಶ್ ಗ್ರಾಮಸ್ಥರಿಂದ ಹಣ ಪಡೆದು, ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಇಂತಹ ಇಂಜಿನಿಯರ್ ನಮಗೆ ಬೇಡ. ಈತನನ್ನು ಅಮಾನತ್ತುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿತಿಸಿ ಪ್ರತಿಭಟನೆ ನಡೆಸಿದರು. ಕೋಣನಕಟ್ಟೆ ಗ್ರಾಮಸ್ಥರಿಂದ ಹಣ ಪಡೆದು ಬಾಳೆಲೆಯ ಮೂಲಕ ಹಾದು ಹೋಗಬೇಕಾದ ಎಕ್ಸ್‌ಪ್ರೆಸ್ ವೇ ಕೇಬಲನ್ನು ಪೊನ್ನಪ್ಪಸಂತೆ ಜಂಕ್ಷನ್‌ನಿಂದ ಕೋಣನಕಟ್ಟೆ ಮಾರ್ಗವಾಗಿ ಕೊಂಡೊಯ್ಯಲು ಕಾಮಗಾರಿ ನಡೆಸಿದ್ದಾರೆ. ಇದು ಮೇಲಧಿಕಾರಿಗಳಿಗೆ ಮಾಹಿತಿ ಇಲ್ಲದೆ ಸ್ವ ಇಚ್ಚೆಯಿಂದ ಮಾಡಿದ ಕಾರ್ಯವಾಗಿದೆ ಎಂದು ಹೇಳಿದರು.
ಯಾವುದೇ ಅಂದಾಜು ಪಟ್ಟಿ ತಯಾರಿಸದೆ ಎಫ್ 2 ಫೀಡರ್ ನಿಂದ ಪೊನ್ನಂಪೇಟೆ ಕಿರುಗೂರು, ನಲ್ಲೂರು, ಪೊನ್ನಪ್ಪಸಂತೆ, ಕೈನಾಟಿ ಹಾಗೂ ಬಾಳೆಲೆ ಕೊಡವ ಸಮಾಜದವರೆಗೆ ಎಕ್ಸ್‌ಪ್ರೆಸ್ ವೇ ಕೇಬಲ್ ಅನ್ನು ಹಾಕಲು ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ಸಹಾಯಕ ಇಂಜಿನಿಯರ್ ಸೋಮೇಶ್ ಸ್ವ ಇಚ್ಛೆಯಿಂದ ಪೊನ್ನಪ್ಪಸಂತೆ ಜಂಕ್ಷನ್ ನಿಂದ ಕೋಣನಕಟ್ಟೆ ಮಾರ್ಗವಾಗಿ 17.9 ಮೀಟರ್‌ನಷ್ಟು ದೂರಕ್ಕೆ ಪಿ.ಸಿ.ಸಿ. ಕಂಬಗಳನ್ನು ಹಾಕಿ ಎಕ್ಸ್‌ಪ್ರೆಸ್ ಕೇಬಲನ್ನು ಪೊನ್ನಪ್ಪಸಂತೆ ಜಂಕ್ಷನ್‌ನಿಂದ ಕೋಣನಕಟ್ಟೆ ಮಾರ್ಗವಾಗಿ ಕೊಂಡೊಯ್ಯಲು ಕ್ರಮ ಕೈಗೊಂಡಿದ್ದಾರೆ. ಇದು ಬಾಳೆಲೆ ಗ್ರಾಮಸ್ಥರ ತೀವ್ರ ವಿರೋಧವಿದೆ ಎಂದು ತಿಳಿಸಿದರು.
ಆರ್.ಎಂ.ಸಿ. ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ ಗ್ರಾಮದಲ್ಲಿ ಮೀಟರ್‌ಗಳನ್ನು ಅಳವಡಿಸಿದರೂ ಬಹಳಷ್ಟು ಮಂದಿಗೆ ಆರ್.ಆರ್ ನಂಬರನ್ನು ನೀಡಿಲ್ಲ. ಅಂತಹ ಗ್ರಾಮಸ್ಥರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಣ ನೀಡಿದವರಿಗೆ ಮಾತ್ರ ಕೆಲಸ ಬೇಗನೆ ನಡೆಯುತ್ತದೆ. ಹಣ ನೀಡದೆ ಪ್ರಶ್ನೆ ಮಾಡಿದವರ ವಿರುದ್ದ ಪಿತೂರಿ ನಡೆಸುವ ಇಂಜಿನಿಯರ್ ಇಲಾಖೆಯ ವಿಜೆಲೆನ್ಸಿಯವರಿಗೆ ದೂರು ನೀಡಿ ಇಲ್ಲದ ಆರೋಪ ಮಾಡುವ ಮೂಲಕ ಅವರಿಂದ ಹಣ ವಸೂಲಿ ಮಾಡುವ ದಂಧೆಗೆ ತೊಡಗಿಸಿಕೊಂಡಿದ್ದಾರೆ ಎಂದರು.
ಇಂಜಿನಿಯರ್ ಸೋಮೇಶ್ ಅವರೊಂದಿಗೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹದೇವಪ್ಪ ಎಂಬ ಲೈನ್ ಮಾನ್‌ನನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಕೊಕ್ಕೆಂಗಡ ರಂಜನ್, ಚಕ್ಕೇರ ಸೂರ್ಯ, ಆರ್.ಎಂ.ಸಿ. ಸದಸ್ಯ ಸುಜಾ ಪೂಣಚ್ಚ, ಗ್ರಾಮಸ್ಥರಾದ ಚಿಮ್ಮಣಿಮಾಡ ಕೃಷ್ಣ, ಜ್ಯೋತಿ ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು.
ಚೆಕ್ ಮೂಲಕವೇ ಲಂಚ !
ಬಾಳೆಲೆ ಚೆಸ್ಕಾಂ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಸೊಮೇಶ್ ತಮ್ಮ ಅಧಿಕಾರವಧಿಯಲ್ಲಿ ಗ್ರಾಮದಲ್ಲಿ ನೂರಾರು ವಿದ್ಯುತ್ ಕಂಬಗಳನ್ನು ಮತ್ತು ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಿ ಗ್ರಾಮಸ್ಥರಿಂದಲೇ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಪ್ರತಿ ಕಂಬ ಅಳವಡಿಸಲು 10 ಸಾವಿರ ರೂಪಾಯಿಯಂತೆ ಸಂಬಂಧಪಟ್ಟವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಗ್ರಾಮಸ್ಥರೇ ಆದ ಮಲಚೀರ ಸಂಜು ಅವರಿಂದ ಒಂದು ಲಕ್ಷ ರೂ. ಪಡೆದುಕೊಂಡ ಆರೋಪ ಇವರ ಮೇಲೆ ಇದ್ದು, ಚೆಕ್ ರೂಪದಲ್ಲೇ ಹಣ ಪಡೆದಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಂಡು ತನಿಖೆ ನಡೆಸಬೇಕು. ಗ್ರಾಮಸ್ಥರಿಂದ ಲಂಚದ ರೂಪದಲ್ಲಿ ಪಡೆದ ಹಣದಿಂದ ತಿತಿಮತಿ ಸಮೀಪದ ಭದ್ರಗೊಳದಲ್ಲಿ ಒಂದು ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಮನೆಯನ್ನು ನಿರ್ಮಿಸಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಈ ವೈಭೋಗಕ್ಕೆ ಗ್ರಾಮಸ್ಥರಿಂದ ಪಡೆದ ಲಂಚದ ಹಣವೇ ಕಾರಣ.
-ಅರಮಣಮಾಡ ರಂಜನ್
ಜಿ.ಪಂ. ಮಾಜಿ ಸದಸ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.