ಕೃಷಿಕರ ಸಮಗ್ರ ಮಾಹಿತಿ ಸಂಗ್ರಹ
Team Udayavani, Mar 4, 2019, 1:00 AM IST
ಕಾಸರಗೋಡು: ರಾಜ್ಯದ ಕೃಷಿಕರ ಸಮಗ್ರ ಮಾಹಿತಿ ಸಂಗ್ರಹ ಸಹಿತ ವಿಸ್ತೃತವಾದ ಜಾನುವಾರು ಗಣತಿ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ.
ಪಶು ಸಂರಕ್ಷಣೆ ಇಲಾಖೆ ಸಿಬ್ಬಂದಿ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ ನಿವಾಸಕ್ಕೆ ತೆರಳಿ ಮಾಹಿತಿ ಸಂಗ್ರಹಿಸುವ ಮೂಲಕ ಜಿಲ್ಲಾ ಮಟ್ಟದ ಜಾನುವಾರ ಗಣತಿಗೆ ಚಾಲನೆ ಲಭಿಸಿದೆ.
ಜಿಲ್ಲೆಯ ಎಲ್ಲ ಮನೆಗಳಿಗೆ ಆಗಮಿಸುವ ಇಲಾಖೆ ಸಿಬ್ಬಂದಿ ಮನೆಗಳಲ್ಲಿ ಸಾಕುವ ಎಲ್ಲ ರೀತಿಯ ಜಾನುವಾರುಗಳ ಗಣನೆ ಪಡೆದುಕೊಳ್ಳಲಿದ್ದಾರೆ. ಈ ಮಾಹಿತಿಯನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾದ ಆ್ಯಪ್‌ನಲ್ಲಿ ದಾಖಲಿಸುವರು. ಇದಕ್ಕಾಗಿ ಸಿಬ್ಬಂದಿಗೆ ಟ್ಯಾಬ್ ನೀಡಲಾಗಿದೆ.
ಇದೇ ರೀತಿ ಮೀನುಗಾರರ ಗಣತಿಯೂ ನಡೆಯಲಿದೆ. ಮೀನುಗಾರಿಕೆ, ಮೀನು ಸಾಕಣೆ, ಸಂಬಂಧಿ ಸಲಕರಣೆಗಳ ನಿರ್ಮಾಣ ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. 5 ವರ್ಷಗಳಿಗೊಮ್ಮೆ ಈ ಜಾನುವಾರು ಗಣತಿ ನಡೆಯುತ್ತದೆ.
ಎಲ್ಲ ವಲಯಗಳ ಕೃಷಿಕರ ಮತ್ತು ಜಾನುವಾರುಗಳ ಮಾಹಿತಿ ಸಂಗ್ರಹಿಸಿ, ಆಯಾ ಪ್ರದೇಶಗಳ ಭೌತಿಕ ಸ್ವಭಾವಕ್ಕನುಗುಣವಾದ ನೀತಿ ಸಿದ್ಧಪಡಿಸಿ ಯೋಜನೆಗಳ ರಚನೆ ನಡೆಸುವುದು ಇಲ್ಲಿನ ಉದ್ದೇಶ ಎಂದು ಜಿಲ್ಲಾ ಪಶು ಸಂರಕ್ಷಣೆ ಅಧಿಕಾರಿ ಟಿ.ಜಿ.ಉಣ್ಣಿಕೃಷ್ಣನ್ ತಿಳಿಸಿದರು.
ಸರಕಾರದ ಸೌಲಭ್ಯಗಳು ಅರ್ಹರಿಗೆ ಸಿಗುವಂತೆ ಮಾಡಲು, ಜಲದುರಂತದಂಥಾ ವಿಪತ್ತುಗಳು ಸಂಭವಿಸಿದರೆ ನಂತರದ ಪರಿಹಾರ ಚಟುವಟಿಕೆ ನಡೆಸಲು ಈ ಗಣತಿ ಪೂರಕವಾಗಿದೆ ಎಂದರು.
ಸಚಿವ ಇ.ಚಂದ್ರಶೇಖರನ್ ಅವರ ಮನೆಯಲ್ಲಿ ನಡೆದ ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾ ಪಶು ಸಂರಕ್ಷಣೆ ಅಧಿಕಾರಿ ಡಾ.ಡಿ.ಜಿ.ಉಣ್ಣಿಕೃಷ್ಣನ್, ಪ್ರಧಾನ ವೆಟರ್ನರಿ ಅಧಿಕಾರಿ ಬಾಲಚಂದ್ರ ರಾವ್, ಜಿಲ್ಲಾ ಸಂಚಾಲಕ ಡಾ.ಪಿ.ನಾಗರಾಜ್, ಸಹಾಯಕ ಯೋಜನೆ ಅಧಿಕಾರಿ ಡಾ.ಬಿ.ಜಿ.ಮಂಜಪ್ಪ, ವೆಟರ್ನರಿ ಸರ್ಜನ್‌ರಾದ ಡಾ.ವಿ.ಜಿ.ವಿಜಯನ್, ಡಾ.ಬಬಿತಾ, ಪಿ.ಆರ್.ಒ.ಡಾ.ಮುರಳೀಧರನ್, ಅನ್ಯುಮರೇಟರ್ ಟಿ.ರೇಷ್ಮಾ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.