ಕನ್ನಡಿಗರ ಸಂವಿಧಾನಬದ್ಧ ಹಕ್ಕು,ಸವಲತ್ತು ಪಾಲಿಸಿ : ನೆಲ್ಲಿಕುನ್ನು
Team Udayavani, Oct 5, 2018, 6:55 AM IST
ಕಾಸರಗೋಡು: ಗಡಿ ಪ್ರದೇಶ ವಾದ ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ನೀಡಿರುವ ಹಕ್ಕು ಮತ್ತು ಸವಲತ್ತುಗಳನ್ನು ಪಾಲಿಸಬೇಕು. ಡಾ| ಪ್ರಭಾಕರನ್ ಆಯೋಗದ ಶಿಫಾರಸಿನಂತೆ ಕಾಸರಗೋಡಿನ ಎಲ್ಲ ಸರಕಾರಿ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸಬೇಕೆಂದು ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಸರಕಾರವನ್ನು ಒತ್ತಾಯಿಸಿದರು.
ಕೆಟಗರಿ ನಂಬ್ರ 459/2016 ಕನ್ನಡ/ಮಲಯಾಳ ಬಲ್ಲ ಎಲ್.ಡಿ.ಕ್ಲರ್ಕ್ ಹುದ್ದೆಗಿರುವ ಪರೀಕ್ಷೆಯನ್ನು ಶೀಘ್ರ ನಡೆಸಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಕನ್ನಡ ಬಲ್ಲ ಎಲ್.ಡಿ.ಕ್ಲರ್ಕ್ ಹುದ್ದೆಗಿರುವ ಮೂಲ ಅರ್ಹತೆಯನ್ನು ನಿಗದಿಪಡಿಸಬೇಕು, ಕನ್ನಡ ಶಾಲೆಗಳಿಗೆ ಕನ್ನಡ ಬಲ್ಲ ಅಧ್ಯಾಪಕರನ್ನೇ ನೇಮಿಸಬೇಕು, ಭಾಷಾ ಅಲ್ಪಸಂಖ್ಯಾಕರ ಹಿತರಕ್ಷಣೆಯನ್ನು ಕಾಪಾಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು “ಬೊಲ್ಪು’ ಬದಿಯಡ್ಕ ಆಯೋಜಿಸಿದ ಪಿ.ಎಸ್.ಸಿ. ಕಚೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಭಾಷೆಯನ್ನು ಹೇರುವುದು ಅನ್ಯಾಯ. ಕೇರಳ ಸರಕಾರ ಮಲಯಾಳ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲಾ ಶಾಲೆಗಳಲ್ಲಿ ಮಲಯಾಳ ಕಲಿಕೆ ಅನಿವಾರ್ಯವಾಗಿದೆ. ಆದರೆ ಭಾಷಾ ಅಲ್ಪಸಂಖ್ಯಾಕ ಪ್ರದೇಶವಾಗಿರುವ ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ಮಲಯಾಳ ಹೇರಿಕೆ ಕೂಡದು. ಮಲಯಾಳ ಹೇರಿಕೆಯಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರು ಅನುಭವಿಸುವ ಸಮಸ್ಯೆಗಳ ಬಗ್ಗೆ ಮತ್ತು ಕಾಸರಗೋಡಿನ ಕನ್ನಡಿಗರನ್ನು ಮಲಯಾಳ ಕಲಿಕೆ ಕಡ್ಡಾಯ ದಿಂದ ರಿಯಾಯಿತಿ ನೀಡಬೇಕೆಂದು ಸರಕಾರವನ್ನು ಒತ್ತಾಯಿಸುವುದಾಗಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಭರವಸೆ ನೀಡಿದರು.
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನಬದ್ಧವಾಗಿ ನೀಡಿರುವ ಹಕ್ಕು, ಅವಕಾಶಗಳನ್ನು ಕಸಿದುಕೊಳ್ಳುವುದು ಸಮಂಜಸವಲ್ಲ. ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಜವಾಬ್ದಾರಿಯೂ ಹೌದು. ಈ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ವಿಧಾನಸಭೆಯಲ್ಲೂ, ಹೊರಗೂ ವಾದಿಸುತ್ತೇನೆ ಎಂದರು. ಹಿಂದಿನ ಯುಡಿಎಫ್ ಸರಕಾರ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದಾಗ ಭಾಷಾ ಅಲ್ಪಸಂಖ್ಯಾಕರ ಪರವಾಗಿ ಸಾಕಷ್ಟು ತಿದ್ದುಪಡಿ ತಂದಿದೆ. ಈ ಹಿನ್ನೆಲೆಯಲ್ಲಿ ಮಲಯಾಳ ಕಲಿಕೆ ಕಡ್ಡಾಯದಿಂದ ಕಾಸರಗೋಡನ್ನು ಹೊರತುಪಡಿಸಲಾಗಿತ್ತು. ಆದರೆ ಇದೀಗ ಎಡರಂಗ ಸರಕಾರ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಭಾಷೆ ಕಲಿಕೆ ಅವರವರಿಗೆ ಸಂಬಂಧಿಸಿದ ವಿಚಾರ. ಭಾಷೆ ಕಲಿಕೆಗೂ ಎಲ್ಲರೂ ಸ್ವತಂತ್ರರು. ಈ ಸ್ವತಂತ್ರವನ್ನು ಕಸಿದುಕೊಳ್ಳುವುದು ಸಂವಿಧಾನಬಾಹಿರವಾಗಿದೆ ಎಂದರು.
ಧರಣಿ ಸತ್ಯಾಗ್ರಹದಲ್ಲಿ ಬೊಲ್ಪು ಬದಿಯಡ್ಕ ಇದರ ಅಧ್ಯಕ್ಷ ಸುಂದರ ಬಾರಡ್ಕ ಅಧ್ಯಕ್ಷತೆ ವಹಿಸಿದರು. ಯಾವುದೇ ಸರಕಾರ ಬಂದರೂ ಕಾಸರಗೋಡಿನ ಕನ್ನಡಿಗರ ಮೇಲೆ ನಿರಂತರ ಗದಾ ಪ್ರಹಾರ ನಡೆಯುತ್ತಿದ್ದು, ಇದರ ವಿರುದ್ಧ ತೀವ್ರ ಹೋರಾಟ ಅನಿವಾರ್ಯವಾಗಿದೆ. ಅಂಗನವಾಡಿಗೂ ಮಲಯಾಳ ಪುಸ್ತಕಗಳನ್ನು ಮಾತ್ರವೇ ನೀಡಿ ಮಲಯಾಳ ಹೇರುವ ಷಡ್ಯಂತ್ರ ಮಾಡುತ್ತಿದೆ. ಭಾಷಾ ಅಲ್ಪಸಂಖ್ಯಾಕ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಭಾಷಾ ಅಲ್ಪಸಂಖ್ಯಾಕರಿಗೆ ನೀಡಿರುವ ಎಲ್ಲಾ ಹಕ್ಕು, ಸವಲತ್ತುಗಳನ್ನು ಸರಕಾರ ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸುವುದಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ಅವರು ಹೇಳಿದರು.
ತೀವ್ರ ಹೋರಾಟ
ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಸಂವಿಧಾನಬದ್ಧ ಹಕ್ಕು, ಸವಲತ್ತುಗಳನ್ನು ಕಸಿದುಕೊಳ್ಳುತ್ತಿರುವ ಕೇರಳ ಸರಕಾರ ಕನ್ನಡಿ ಗರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಕಾಸರ ಗೋಡು ಜಿಲ್ಲಾ ಪಂಚಾಯತ್ ಸದಸ್ಯ, ನ್ಯಾಯವಾದಿ ಕೆ. ಶ್ರೀಕಾಂತ್ ಹೇಳಿದರು. ಕಾಸರಗೋಡಿನಲ್ಲಿ ಕನ್ನಡಿಗರ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಇಲ್ಲದಿದ್ದಲ್ಲಿ ಲೋಕಸೇವಾ ಆಯೋಗ ಕಚೇರಿಯ ಹೊರಗೂ, ಒಳಗೂ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಮುನ್ನೆಚ್ಚರಿಕೆ ನೀಡಿದರು. ಡಾ| ಪ್ರಭಾಕರನ್ ಆಯೋಗ ನೀಡಿರುವ ಶಿಫಾರಸಿನಂತೆ ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ ಕಾಸರಗೋಡಿನ ಕನ್ನಡಿಗರನ್ನು ಎಲ್ಲ ಸರಕಾರಿ ಕಚೇರಿಗಳಿಗೆ ನೇಮಿಸಬೇಕೆಂದರು.
ಸರಕಾರದಿಂದ ಅವಗಣನೆ
ಕಾಸರಗೋಡಿನ ಬಗ್ಗೆ ಕೇರಳ ಸರಕಾರ ಅವಗಣಿಸುತ್ತಲೇ ಬಂದಿದೆ. ಕನ್ನಡಿಗರಿಗೆ ಸಲ್ಲಬೇಕಾದ ಎಲ್ಲಾ ಸವಲತ್ತುಗಳನ್ನು ಹಕ್ಕುಗಳನ್ನು ಕಸಿಯುತ್ತಲೇ ಬಂದಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳ ಅಧ್ಯಾಪಕರನ್ನು ನೇಮಿಸುತ್ತಿದೆ. ಈ ಹಿನ್ನೆಲೆಯಿಂದ ಕನ್ನಡಿಗರು ಕರ್ನಾಟಕವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಕನ್ನಡಿಗರು ಹೋರಾಟಕ್ಕೆ ಮುನ್ನುಗ್ಗಿದರೆ ಜಯವಂತೂ ಖಂಡಿತ. ಇದಕ್ಕೆ ಸ್ಪಷ್ಟ ಉದಾಹರಣೆ ಮಂಗಲ್ಪಾಡಿ ಶಾಲೆಗೆ ಮಲಯಾಳ ಅಧ್ಯಾಪಕನನ್ನು ನೇಮಿಸಿದ ಸಂದರ್ಭದಲ್ಲಿ ಕನ್ನಡಿಗರು ನಡೆಸಿದ ಹೋರಾಟದ ಫಲವಾಗಿ ಅಧ್ಯಾಪಕರು ನಾಲ್ಕು ತಿಂಗಳ ರಜೆಯಲ್ಲಿ ಹೋಗಬೇಕಾದ ಪರಿಸ್ಥಿತಿ ಬಂತು ಎಂದು ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ ಅವರು ಹೇಳಿದರು.
ಕನ್ನಡದ ಸಮಸ್ಯೆಗೆ ಸ್ಪಂದಿಸಬೇಕು
ಕನ್ನಡಿಗರಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರತೀಯೊಬ್ಬ ಕನ್ನಡಿಗ ಸ್ಪಂದಿಸಬೇಕು. ಈ ಬಗ್ಗೆ ಆಮಂತ್ರಣಕ್ಕೆ ಕಾಯಬಾರದು ಎಂದು ಕರ್ನಾಟಕ ಗಮಕ ಕಲಾ ಪರಿಷತ್ ಕೇರಳ ಘಟಕ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್ ಅವರು ಹೇಳಿದರು. ಕಾಸರಗೋಡು ಜಿಲ್ಲೆಯಲ್ಲಿ ಸರಕಾರದ ವತಿಯಿಂದ ದಸರಾ ನಾಡಹಬ್ಬ ಆಚರಿಸಬೇಕು ಎಂದರು.
ಭಿಕ್ಷೆ ಕೇಳುತ್ತಿಲ್ಲ: ಕಾಸರಗೋಡಿನ ಕನ್ನಡಿಗರು ಸಂವಿಧಾನ ಬದ್ಧ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನು ಕೇಳುತ್ತಿಲ್ಲ. ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿ, ಪರಂಪರೆಯನ್ನು ಉಳಿಸಲು ಯುವ ಜನಾಂಗ ಕಾಸರಗೋಡಿನ ಹೋರಾಟದ ಪ್ರತಿಯೊಂದು ಕ್ಷಣಗಳನ್ನು ಅರಿತಿರಬೇಕು. ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಲು ಬದ್ಧತೆಯಿಂದ ಕೆಲಸ ಮಾಡಬೇಕೆಂದು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಕನ್ನಡ ವಿಭಾಗ ಮುಖ್ಯಸ್ಥೆ ಡಾ|ಯು.ಮಹೇಶ್ವರಿ ಅವರು ಹೇಳಿದರು.
ಚಳವಳಿ ತೀವ್ರಗೊಳಿಸಬೇಕು
ಕನ್ನಡಿಗರನ್ನು ಸಂರಕ್ಷಿಸಲು ತೀವ್ರ ಹೋರಾಟ ನಡೆಸಬೇಕು. ಆ ಮೂಲಕ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆದು ಕೊಳ್ಳಬೇಕು. ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲವರನ್ನೇ ನೇಮಿಸಬೇಕೆಂದು ಬಿಜೆಪಿ ಬದಿಯಡ್ಕ ಪಂಚಾಯತ್ ಅಧ್ಯಕ್ಷ ನಾರಾಯಣ ಭಟ್ ಅವರು ಹೇಳಿದರು. ರಾಮ ಪಟ್ಟಾಜೆ ಅವರು ಧರಣಿ ಸತ್ಯಾಗ್ರಹಕ್ಕೆ ಶುಭಹಾರೈಸಿದರು.
ಬೇಬಿ ಜಯರಾಮ್ ಅವರು ಸ್ವಾಗತಿಸಿದರು. ವೆಂಕಟಕೃಷ್ಣ ಶರ್ಮ ವಂದಿಸಿದರು. ಧರಣಿ ಸತ್ಯಾಗ್ರಹದ ಬಳಿಕ ಕನ್ನಡಿಗರ ಬೇಡಿಕೆಗಳ ಮನವಿಯನ್ನು ಲೋಕಸೇವಾ ಆಯೋಗ ಅಧಿಕಾರಿಗಳಿಗೆ ಸಲ್ಲಿಸಿ ಶೀಘ್ರವೇ ಕನ್ನಡ ಬಲ್ಲವರನ್ನೇ ಸರಕಾರಿ ಕಚೇರಿಗಳಲ್ಲಿ ನೇಮಿಸುವಂತೆ ಆಗ್ರಹಿಸಲಾಯಿತು.
ಕನ್ನಡಿಗರನ್ನೇ ನೇಮಿಸಿ
ಕಾಸರಗೋಡು ಜಿಲ್ಲೆ ಅತ್ಯಂತ ಹಿಂದುಳಿಯಲು ಸ್ಥಳೀಯರನ್ನು ಸರ ಕಾರಿ ಕಚೇರಿಗಳಲ್ಲಿ ನೇಮಿಸದಿರುವುದು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆ ುಲ್ಲಿ ಎಲ್ಲರಿಗೂ ವ್ಯವಹರಿಸಲು ಸಾಧ್ಯವಾಗುವಂತೆ ಕನ್ನಡ ಬಲ್ಲವರನ್ನೇ ನೇಮಿಸಬೇಕು. ಕನ್ನಡಿಗರ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ನಡೆಸುವ ಎಲ್ಲ ಹೋರಾಟಗಳಿಗೂ ನನ್ನ ಸಂಪೂರ್ಣ ಬೆಂಬಲವಿದೆ ಹಾಗೂ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತೇನೆ. ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಸ್ಥಳೀಯರನ್ನು ನೇಮಿಸಬೇಕು.
– ಎನ್.ಎ. ನೆಲ್ಲಿಕುನ್ನು, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.