ಕೊರೊನಾ : ಗಡಿ ಪ್ರದೇಶದಲ್ಲಿ ವಾಹನ ತಪಾಸಣೆ
Team Udayavani, Feb 7, 2020, 6:25 AM IST
ಕಾಸರಗೋಡು: ಕೊರೊನಾ ವೈರಸ್ ಸೋಂಕು ತಗಲಿರುವ ಮೂರು ಪ್ರಕರಣಗಳು ಕೇರಳದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳದ ಗಡಿ ಪ್ರದೇಶದಲ್ಲಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಮೋಟಾರು ವಾಹನ ತಪಾಸಣೆ ಬಿಗುಗೊಳಿಸಲು ತೀರ್ಮಾನಿಸಲಾಗಿತ್ತು.
ಚೀನದಿಂದ ಹಾಗೂ ಇತರ ಕೊರೊನಾ ಬಾಧಿತ ದೇಶಗಳಿಂದ ಕೇರಳಕ್ಕೆ ಬರುವವರನ್ನು ಪತ್ತೆಹಚ್ಚಿ ಕಂಟ್ರೋಲ್ ರೂಂನಲ್ಲಿ ವರದಿ ಮಾಡಲು ಗಡಿ ಪ್ರದೇಶದಲ್ಲಿ ವಾಹನ ತಪಾಸಣೆಗೆ ತೀರ್ಮಾನಿಸಲಾಗಿದೆ.
ಹೊಟೇಲ್‌ಗಳಲ್ಲಿ ಕೈತೊಳೆಯಲು ಲಿಕ್ವಿಡ್ ಸೋಪ್ ಬಳಸಬೇಕೆಂದೂ ಈ ಬಗ್ಗೆ ನಡೆದ ಸಭೆಯಲ್ಲಿ ಸಲಹೆ ಮಾಡಿದೆ. ಎಲ್ಲ ವಿದ್ಯಾಲಯ ಗಳಲ್ಲಿ ಕೈತೊಳೆಯುವ ಹವ್ಯಾಸವನ್ನು ರೂಢಿಸಿಕೊಳ್ಳುವಂತೆ ತಿಳಿವಳಿಕೆ ಮೂಡಿಸಲು ಜಾಗೃತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ವಿವಿಧೆಡೆ ತಿಳಿವಳಿಕೆ ಅಭಿಯಾನವನ್ನು ಆರಂಭಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಮೀಡಿಯಾ ಸರ್ವೆಲನ್ಸ್ ತಂಡವನ್ನು ನೇಮಿಸಲಾಗಿದೆ.
ಕಾಂಞಂಗಾಡ್‌ನಲ್ಲಿ ನಡೆದ ಕೊರೊನಾ ಅವಲೋಕನ ಸಭೆಯಲ್ಲಿ ಸಬ್ ಕಲೆಕ್ಟರ್ ಅರುಣ್ ಕೆ. ವಿಜಯನ್ ಅಧ್ಯಕ್ಷತೆ ವಹಿಸಿದರು. ಎಡಿಎಂ ಎನ್.ದೇವಿದಾಸ್, ಡೆಪ್ಯೂಟಿ ಡಿಎಂಒ ಡಾ|ರಾಮದಾಸ್ ಎ.ವಿ|, ಜಿಲ್ಲಾ ಸರ್ವೇಲನ್ಸ್ ಆಫೀಸರ್ ಡಾ| ಮನೋಜ್ ಎ.ಟಿ., ಎನ್.ಎಚ್.ಎಂ. ಜಿಲ್ಲಾ ಪ್ರೋಗ್ರಾಂ ಮೆನೇಜರ್ ಡಾ| ರಾಮನ್ ಸ್ವಾತಿ ವಾಮನ್, ಜಿಲ್ಲಾ ವಾರ್ತಾಧಿಕಾರಿ ಎಂ. ಮಧುಸೂದನನ್, ವಿಶ್ವ ಆರೋಗ್ಯ ಸಂಘಟನೆಯ ವೀಕ್ಷಕ ಡಾ| ದೀನ ದಯಾಳ್, ಡೆಪ್ಯೂಟಿ ಮಾಸ್ ಮೀಡಿಯಾ ಆಫೀಸರ್ ಸಯನ ಎಸ್. ಮೊದಲಾದವರು ಭಾಗವಹಿಸಿದರು.
ಪ್ರವಾಸಿಗರ ಮೇಲೆ ನಿಗಾ
ಕೇರಳದಲ್ಲಿ ಮೂವರಿಗೆ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಹೊಟೇಲ್‌ಗಳ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. ಫೆಬ್ರವರಿ ಮಾರ್ಚ್‌ನಲ್ಲಿ ಕೇರಳಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಈ ಎರಡು ತಿಂಗಳು ಹೊಟೇಲ್ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರ ಬಗ್ಗೆ ನಿಗಾ ಇರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಜನರಲ್ ಆಸ್ಪತ್ರೆಗೆ
ವಿಶೇಷ ತಂಡ ಭೇಟಿ
ಜಿಲ್ಲೆಯಲ್ಲಿ ವಿದ್ಯಾರ್ಥಿಯೋರ್ವನಿಗೆ ಕೊರೊನಾ ಪತ್ತೆಯಾಗಿರುವುದರಿಂದ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸರಿಯಾದ ರೀತಿಯ ಚಿಕಿತ್ಸೆ ಒದಗಿಸಲು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ತಜ್ಞ ತಂಡ ಕಾಸರಗೋಡು ಜನರಲ್ ಆಸ್ಪತ್ರೆಗೆ ಭೇಟಿ ನೀಡಿದೆ.
ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಪ್ರಿವೆಂಟಿವ್ ಮೆಡಿಸಿನ್ ಅಸೋಸಿಯೇಟ್ ಪ್ರೊಫೆಸರ್ ಬಿ. ಲೈಲಾ ಅವರ ನೇತೃತ್ವದಲ್ಲಿ ಐವರು ತಜ್ಞರು ಕಾಂಞಂಗಾಡಿನ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದರು.
ವೈದ್ಯರಿಗೆ ತರಬೇತಿ
ಕೊರೊನಾ ಚಿಕಿತ್ಸೆ ಬಗ್ಗೆ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಐ.ಎಂ.ಎ. ನೇತೃತ್ವದಲ್ಲಿ ತರಬೇತಿ ನೀಡಲಾಯಿತು. ತರಬೇತಿ ಕಾರ್ಯಕ್ರಮಕ್ಕೆ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಪ್ರಿವೆಂಟಿವ್ ಮೆಡಿಸಿನ್ ಅಸೋಸಿಯೇಟ್ ಪ್ರೊಫೆಸರ್ ಬಿ.ಲೈಲಾ ಅವರು ಭೇಟಿ ನೀಡಿದರು.
ಪೂರ್ಣ ಸಜ್ಜು
ಕೊರೊನಾ ಎದುರಿಸಲು ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣ ಸಜ್ಜುಗೊಳಿಸಲಾಗಿದೆ. ಅಗತ್ಯದ ಪ್ರತಿರೋಧ ಸಾಮಗ್ರಿಗಳನ್ನು ಎಲ್ಲ ಆಸ್ಪತ್ರೆಗಳಿಗೂ ತಲುಪಿಸಲಾಗಿದೆ. ಆರೋಗ್ಯ ಇಲಾಖೆಯ ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ ಹಾಗೂ ಜನರಲ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಶನ್ ವಾರ್ಡ್ ಗಳನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಆತಂಕಪಡಬೇಕಾದ ಪರಿಸ್ಥಿತಿಯಿಲ್ಲವೆಂದು ಕಾಂಞಂಗಾಡ್ ಸಬ್ ಕಲೆಕ್ಟರ್ ಕಚೇರಿಯಲ್ಲಿ ನಡೆದ ಕೋರ್ ಸಮಿತಿ ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
96 ಮಂದಿ ಮೇಲೆ ತೀವ್ರ ನಿಗಾ
ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚೀನದಿಂದ ಬಂದಿರುವ 92 ಹಾಗೂ ಇತರ ದೇಶಗಳಿಂದ ಬಂದಿರುವ ನಾಲ್ವರು ಸಹಿತ 96 ಮಂದಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ನಿಗಾದಲ್ಲಿದ್ದಾರೆ. ಇವರಲ್ಲಿ 92 ಮಂದಿ ಮನೆಗಳಲ್ಲಿ, ತಲಾ ಇಬ್ಬರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮತ್ತು ಕಾಂಞಂಗಾಡ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಈಗಾಗಲೇ 19 ಮಂದಿಯ ರಕ್ತ ಸ್ಯಾಂಪಲ್‌ಗಳನ್ನು ತಪಾಸಣೆ ಮಾಡಲಾಗಿದೆ. ಇವರಲ್ಲಿ 14 ಮಂದಿಯ ತಪಾಸಣಾ ವರದಿ ಲಭಿಸಿದ್ದು, ಇವರಲ್ಲಿ ಒಬ್ಬರಿಗೆ ಮಾತ್ರ ಪಾಸಿಟಿವ್ ಆಗಿದೆ. ಈತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಂದೇ ಪ್ರಕರಣ
ಕೊರೊನಾ ವೈರಸ್ ಸೋಂಕು ಹರಡದಂತೆ ಜಿಲ್ಲಾಡಳಿತದಿಂದ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಕಾಂಞಂಗಾಡ್‌ನ ಪ್ರಕರಣ ಬಿಟ್ಟು ಬೇರೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.
– ಡಾ| ಡಿ. ಸಜಿತ್‌ಬಾಬು
ಕಾಸರಗೋಡು ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.