ಜಲ ದಿಗ್ಬಂಧನದಿಂದ ಕೊನೆಗೂ ಮುಕ್ತಿ
Team Udayavani, Feb 11, 2020, 6:27 AM IST
ಸಾಂದರ್ಭಿಕ ಚಿತ್ರ
ಉಳ್ಳಾಲ: ಚೀನದಲ್ಲಿ ವ್ಯಾಪಿಸಿರುವ ಕೊರೊನಾ ವೈರಸ್‌ನ ಪರಿಣಾಮವಾಗಿ ಹಾಂಕ್‌ಕಾಂಗ್‌ನಲ್ಲಿ ಪ್ರವಾಸಿ ಹಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಸಿಲುಕಿಕೊಂಡಿದ್ದ ಕುಂಪಲದ ಗೌರವ್ ಸೇರಿದಂತೆ ಹಡಗಿನಲ್ಲಿದ್ದ ಪ್ರವಾಸಿಗರಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಇನ್ನೆರಡು ದಿನಗಳಲ್ಲಿ ಮಂಗಳೂರಿಗೆ ತಲುಪುವ ಸಾಧ್ಯತೆ ಇದೆ.
ಬೇರೊಂದು ಹಡಗಿನಲ್ಲಿ ಕೊರೊನಾ ಕಂಡುಬಂದ ಕಾರಣ ಗೌರವ್ ಉದ್ಯೋಗ ಮಾಡುವ ವರ್ಲ್ಡ್ ಡ್ರೀಮ್ ಹಡಗನ್ನು ಸುರಕ್ಷತೆ ದೃಷ್ಟಿಯಿಂದ ಹಾಂಕಾಂಗ್ ಬಂದರಿನಲ್ಲಿ ತಡೆಹಿಡಿಯಲಾಗಿತ್ತು. ಇದರಿಂದಾಗಿ ಸೋಮವಾರ ನಡೆಯಬೇಕಾಗಿದ್ದ ಗೌರವ್ ವಿವಾಹವನ್ನೂ ಮುಂದೂಡಲಾಗಿತ್ತು. ಇದೀಗ ಜಲದಿಗ್ಬಂಧನದಿಂದ ಮುಕ್ತರಾಗಿರುವ ಗೌರವ್ ಭಾರತಕ್ಕೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ತಾಯ್ನಾಡಿಗೆ ಮರಳಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಜ್ಜರಕಾಡು ಆಸ್ಪತ್ರೆಯಿಂದ ಮೂವರ ಬಿಡುಗಡೆ ಉಡುಪಿ: ಕೊರೊನಾ ವೈರಸ್ ಪರೀಕ್ಷೆಗೆಂದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮೂವರು ಸೋಮವಾರ ಮನೆಗೆ ಮರಳಿದ್ದಾರೆ. ಚೀನದಿಂದ ಆಗಮಿಸಿದ್ದ ಅವರಿಗೆ ಶೀತ ಮತ್ತು ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ
ಆಗಮಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಅವರ ರಕ್ತ, ಗಂಟಲ ದ್ರವ ಮಾದರಿಯನ್ನು ಶುಕ್ರವಾರ ಬೆಂಗಳೂರಿನ ಬಿಎಂಸಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ರವಿವಾರ ಲಭಿಸಿದ್ದು, ನೆಗೆಟಿವ್ ಬಂದಿತ್ತು.
ಮುನ್ನೆಚ್ಚರಿಕೆ ಮುಂದುವರಿಕೆ
ಜಿಲ್ಲೆಗೆ ಚೀನದಿಂದ ಆಗಮಿಸು ವವರ ಮಾಹಿತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕವೇ ನೀಡುವಂತೆ ಈಗಾಗಲೇ ಅಪರ ಜಿಲ್ಲಾಧಿಕಾರಿಯವರ ಮೂಲಕ ತಿಳಿಸಲಾಗಿದೆ. ಅಂತಹವರ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ತಪಾಸಣೆ ಮುಂದುವರಿಕೆ
ಮಂಗಳೂರು: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸೋಮವಾರವೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಕಾರ್ಯ ಮುಂದುವರಿದಿದೆ. ಈವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.