ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ದಂತರೋಗ ನಿರ್ಣಯ ಮೊಟಕು: ರೋಗಿಗಳ ಪರದಾಟ
Team Udayavani, May 8, 2019, 7:40 PM IST
ಬದಿಯಡ್ಕ: ಸರಕಾರದ ಅನಾಸ್ತೆಗೆ ಹೆಸರಾದ ಪ್ರದೇಶಗಳಲ್ಲಿ ಬದಿಯಡ್ಕವೂ ಒಂದು. ಈ ಪ್ರದೇಶದ ಜನರಿಗಾಗಿ ರೂಪೀಕರಿಸುವ ಯೋಜನೆಗಳು ಕಡತಗಳಲ್ಲೇ ಉಳಿಯುವುದು, ಅರ್ಧದಲ್ಲೇ ಕಟ್ಟಡಗಳ ಕೆಲಸ ಸ್ಥಗಿತಗೊಳ್ಳುವುದು ಇಲ್ಲವೇ ಸುಸಜ್ಜಿತ, ವ್ಯವಸ್ಥಿತ ಕಚೇರಿಗಳು, ಆರೋಗ್ಯ ಕೇಂದ್ರಗಳು ಉಪಯೋಗ ಶೂನ್ಯವಾಗಿ ಅಣಕಿಸುವಂತೆ ಗೋಚರಿಸುವುದು ಇಲ್ಲಿ ಸರ್ವೇ ಸಾಮಾನ್ಯ. ಇಲ್ಲಿನ ಸಾರ್ವಜನಿಕ ಆರೋಗ್ಯ ಕೇಂದ್ರವೂ ಇದಕ್ಕೆ ಹೊರತಾಗಿಲ್ಲ.
ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿರುವ ದಂತ ರೋಗ ನಿರ್ಣಯ ವಿಭಾಗ ನಾಶದತ್ತ ಸಾಗಿದೆ. ಈ ಕೊಠಡಿಯಲ್ಲಿರುವ ದಂತ ರೋಗ ನಿರ್ಣಯ ಅತ್ಯಾಧುನಿಕ ಯಂತ್ರಗಳು, ರೋಗಿಗಳಿಗೆ ಕುಳಿತುಕೊಳ್ಳುಲು ಸಿದ್ಧಪಡಿಸಿರುವ ಸೀಟು ಎಲ್ಲವೂ ತುಕ್ಕು ಹಿಡಿದು ನಾಶಗೊಳ್ಳುತ್ತಿದೆ. ದಂತರೋಗ ವಿಭಾಗಕ್ಕೆ ವೈದ್ಯರ ನೇಮಕ ನಡೆಯದಿರುವುದೇ ಇದಕ್ಕೆ ಕಾರಣವಾಯಿತು. ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್ ಒಂದು ಕೊಠಡಿಯನ್ನು ದಂತ ರೋಗ ವಿಭಾಗಕ್ಕಾಗಿ ಮೂರು ವರ್ಷಗಳ ಹಿಂದೆ ಮೀಸಲಿಡಲಾಗಿತ್ತು. ದಂತ ರೋಗ ತಪಾಸಣೆಗೆ ಬಳಸುವ ಅತ್ಯಾಧುನಿಕ ಉಪಕರಣಗಳು, ರೋಗಿಗಳನ್ನು ತಪಾಸಣೆ ಮಾಡಲು ಸಹಾಯಕವಾಗುವ ಆಧುನಿಕ ಆಸನ, ಇನ್ನಿತರ ವಸ್ತುಗಳನ್ನು ನೀಡಲಾಗಿತ್ತು. ಆದರೆ ಲಕ್ಷಾಂತರ ರೂ. ವ್ಯಯಿಸಿ ಇಷ್ಟೆಲ್ಲ ಸಾಮಾಗ್ರಿಗಳನ್ನು ಒದಗಿಸಿದ ಸರಕಾರ, ಈ ವಿಭಾಗಕ್ಕೆ ವೈದ್ಯರ ಹಾಗೂ ಸಹಾಯಕರ ನೇಮಕ ನಡೆಸಿರಲಿಲ್ಲ. ಹಲವು ರೋಗಿಗಳು ದಂತ ರೋಗ ನಿರ್ಣಯ ತಪಾಸಣೆಗೆ ಬಂದಿದ್ದರೂ ಅವರಿಗೆ ಚಿಕಿತ್ಸೆ ನೀಡದೆ ಮರಳಿ ಕಳುಹಿಸಲಾಗಿದೆ.
ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ 30 ಹಾಸಿಗೆಗಳಿದ್ದು ಒಳರೋಗಿ ಚಿಕಿತ್ಸಾ ವ್ಯವಸ್ಥೆ ಸೌಲಭ್ಯವಿದೆ. ಆದರೆ ಯಾರನ್ನೂ ಅಡ್ಮಿಟ್ ಮಾಡಲು ಅಧಿಕೃತರು ಮುಂದಾಗುತ್ತಿಲ್ಲ. ರಾತ್ರಿ ವೇಳೆ ವೈದ್ಯರುಗಳ ಸೇವೆ ಇಲ್ಲದಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ. ತಿಂಗಳುಗಳ ಹಿಂದೆ ಕಮ್ಯೂನಿಟಿ ಹೆಲ್ತ್ ಸೆಂಟರನ್ನು ತಾಲೂಕು ಆಸ್ಪತ್ರೆಯಾಗಿ ಭಡ್ತಿಗೊಳಿಸಲಾಯಿತು. ಆದರೆ ಎರಡೇ ದಿನಗಳಲ್ಲಿ ಅದು ರದ್ದುಗೊಂಡಿತು. ಇದರ ವಿರುದ್ಧ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಸೊಲ್ಲೆತ್ತಲು ಸಿದ್ಧರಿರಲಿಲ್ಲ. ಸರಕಾರ ಹಾಗೂ ಅಧಿಕೃತರು ಬದಿಯಡ್ಕ ಪ್ರದೇಶದ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿರುವ ಪ್ರತ್ಯಕ್ಷ ಉದಾಹರಣೆಯಾಗಿದೆ ಇಲ್ಲಿನ ಕಮ್ಯೂನಿಟಿ ಹೆಲ್ತ್ ಸೆಂಟರ್. ಮಳೆಗಾಲದಲ್ಲಿ ನೂರಾರು ರೋಗಿಗಳು ಇಲ್ಲಿಗಾಗಮಿಸುತ್ತಿದ್ದಾರೆ. ಇದೀಗ ಬಾಗಿಲು ಮುಚ್ಚಿರುವ ದಂತ ರೋಗ ವಿಭಾಗವನ್ನು ಮತ್ತೆ ತೆರೆದು ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೆ ಜನರ ಬೇಡಿಕೆಗಳು ಈಡೇರುವ ಯಾವುದೇ ಸೂಚನೆಗಳು ಇದುವರೆಗೆ ಗೋಚರಿಸಲಿಲ್ಲ.
– ಅಖೀಲೇಶ್ ನಗುಮುಗಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.