ಕೇರಳದ ಶಾಲೆಗಳಲ್ಲಿ ಮಾದಕ ದ್ರವ್ಯ ತಾಂಡವ
ದ್ರವ್ಯ ಮಾಫಿಯಾ ಹಿಡಿತದಲ್ಲಿ ರಾಜ್ಯದ 1,140 ಶಾಲೆಗಳು; 2 ವರ್ಷಗಳಲ್ಲಿ 3,933 ವಿದ್ಯಾರ್ಥಿಗಳಿಗೆ ವ್ಯಸನಕ್ಕಾಗಿ ಚಿಕಿತ್ಸೆ
Team Udayavani, May 27, 2024, 7:17 AM IST
ಕಾಸರಗೋಡು: “ದೇವರ ಸ್ವಂತ ನಾಡು’ ಎಂದು ಪ್ರಖ್ಯಾತ ವಾಗಿರುವ ಕೇರಳ ರಾಜ್ಯ ಪ್ರಸ್ತುತ ಶಾಲಾ ಕಾಲೇಜು ಮಕ್ಕಳ ಮಾದಕ ದ್ರವ್ಯ ವ್ಯಸನಕ್ಕಾಗಿ ಕುಖ್ಯಾತ ವಾಗಿದೆ. ಕೇರಳದ 1,140 ಶಾಲೆಗಳು ಮಾದಕ ದ್ರವ್ಯ ಮಾಫಿಯಾದ ಹಿಡಿತ ದಲ್ಲಿವೆ, ಕಳೆದ 2 ವರ್ಷಗಳಲ್ಲಿ 3,933 ವಿದ್ಯಾರ್ಥಿಗಳು ಈ ವ್ಯಸನಕ್ಕಾಗಿ ಚಿಕಿತ್ಸೆ ಪಡೆ ದಿದ್ದಾರೆ ಎಂಬ ಅಂಕಿಅಂಶ ಪರಿಸ್ಥಿತಿಯ ಭೀಕರತೆಗೆ ಸಾಕ್ಷಿ ಹೇಳುತ್ತದೆ.
ಕೇರಳ ರಾಜ್ಯ ಅಬಕಾರಿ ಇಲಾಖೆ ನಡೆಸಿದ ರಹಸ್ಯ ತನಿಖೆಯಲ್ಲಿ ಈ ವಿವರಗಳು ತಿಳಿದುಬಂದಿವೆ. ಕೆಲವು ಕಾಲೇಜುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ವ್ಯಸನತೀವ್ರ ವಾಗಿದೆ. ಹಿಂದೆ ಕಾಲೇಜುಗಳಲ್ಲಿ ಮಾತ್ರ ಇದ್ದ ಮಾದಕ ದ್ರವ್ಯ ವ್ಯಸನ ಈಗ ಶಾಲೆಗಳಿಗೂ ಕಾಲಿರಿಸಿದೆ. ಶಾಲಾ ಚೀಲಗಳಲ್ಲಿ ಗಾಂಜಾ, ಎಂಡಿಎಂಎಯಂತಹ ಮಾದಕ ದ್ರವ್ಯಗಳು ಕಂಡುಬರುತ್ತಿವೆ.
ಶಾಲಾ ಬಾಲಕಿಯರು ದ್ರವ್ಯ ವಾಹಕರಾಗಿ ಮಾರ್ಪಡುತ್ತಿದ್ದಾರೆ.ಅಬಕಾರಿ ಇಲಾಖೆಯ ಲೆಕ್ಕಾಚಾರ ಪ್ರಕಾರ ಮಾದಕದ್ರವ್ಯ ವ್ಯಸನಕ್ಕೊಳಗಾದ 3,933 ವಿದ್ಯಾರ್ಥಿಗಳು ಕಳೆದ ಎರಡು ವರ್ಷದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನೂರು ದಿನ ಚಿಕಿತ್ಸೆ ಪಡೆದರೂ ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗದ ಶೇ. 20ರಷ್ಟು ವಿದ್ಯಾರ್ಥಿಗಳು ಇದರಲ್ಲಿ ಸೇರಿದ್ದಾರೆ. ಇದು ಸರಕಾರಿ ಇಲಾಖೆಗಳ ವರದಿಗಳು ನೀಡುವ ಮಾಹಿತಿಯಾದರೆ ಗಮನಕ್ಕೆ ಬಾರದ ಪ್ರಕರಣಗಳು ಇನ್ನಷ್ಟು ಇರುವುದು ಖಚಿತ.
ರಾಜ್ಯದಲ್ಲಿ 1,681 ವಿದ್ಯಾರ್ಥಿಗಳು ಖಾಯಂ ಆಗಿ ಮಾದಕ ದ್ರವ್ಯ ವ್ಯವಹಾರದಲ್ಲಿ ತೊಡಗಿದ್ದಾರೆ. ಇಂತಹ ವ್ಯವಹಾರದಲ್ಲಿ ತೊಡಗಿರುವವರ ಪೈಕಿ 228 ಮಂದಿಯನ್ನು ಮುಂಜಾಗ್ರತೆಯ ಕ್ರಮವಾಗಿ ಬಂಧಿಸಿದ್ದು, ಈಗ ಜೈಲಿನಲ್ಲಿದ್ದಾರೆ ಎಂದು ಅಬಕಾರಿ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಕೇರಳ ಪೊಲೀಸ್ ಇಲಾಖೆಯು ಪ್ರತ್ಯೇಕವಾಗಿ ನಡೆಸಿದ ಇನ್ನೊಂದು ಸಮೀಕ್ಷೆಯು ಬೇರೆಯದೇ ಆದ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸುತ್ತದೆ. 21 ವರ್ಷ ವಯಸ್ಸಿನೊಳಗಣ ಮಾದಕ ದ್ರವ್ಯ ವ್ಯಸನಿಗಳಲ್ಲಿ ಶೇ. 40 ಮಂದಿ 18 ವರ್ಷಕ್ಕಿಂತ ಕೆಳಗಿನವರು ಎಂಬುದು ಈ ಸಮೀಕ್ಷೆಯ ವರದಿಯಲ್ಲಿದೆ. ಈ ಪೈಕಿ ಬಾಲಕಿಯರೇ ಹೆಚ್ಚು ಸಂಖ್ಯೆಯಲ್ಲಿದ್ದು, ಒಮ್ಮೆ ಮಾದಕ ದ್ರವ್ಯದ ಚಟಕ್ಕೆ ದಾಸರಾದ ಬಳಿಕ ಅವರನ್ನು ಉಪಯೋಗಿಸಿಕೊಂಡು ಇತರರನ್ನು ಬಲೆಗೆ ಬೀಳಿಸುವ ತಂತ್ರವನ್ನು ಮಾಫಿಯಾ ಅನುಸರಿಸುತ್ತಿರುವುದು ಕೂಡ ಬಹಿರಂಗವಾಗಿದೆ. ಇಷ್ಟಲ್ಲದೆ ಮಾದಕದ್ರವ್ಯದ ದಾಸರಾಗಿರುವ ಮಹಿಳೆಯರನ್ನು ಕೂಡ ಬಾಲಕಿಯರನ್ನು ವ್ಯಸನದತ್ತ ಸೆಳೆಯಲು ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ರಸ್ತೆ ಬದಿಯ ಗೂಡಂಗಡಿಗಳು, “ತಟ್ಟುಕಡ’ ಕ್ಯಾಂಟೀನುಗಳಲ್ಲಿ ಮಾದಕ ದ್ರವ್ಯ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ವರದಿ ಹೇಳುತ್ತದೆ.
ಜತೆಗೂಡಿದ ವ್ಯಸನ- ಲೈಂಗಿಕ ದೌರ್ಜನ್ಯ
ಮಾದಕ ದ್ರವ್ಯ ವ್ಯಸನಿಗಳಾದ ಶಾಲಾ ಕಾಲೇಜು ಯುವಕರನ್ನು ಉಪಯೋಗಿಸಿಕೊಂಡು ಬಾಲಕಿಯರನ್ನು ಜಾಲದೊಳಕ್ಕೆ ತರುವ ತಂತ್ರಗಾರಿಕೆಯೂ ನಡೆಯುತ್ತಿದೆ ಎಂದು ಕೇರಳ ಪೊಲೀಸ್ ಮೂಲಗಳು ತಿಳಿಸಿವೆ. ಇಂತಹ ಸಂದರ್ಭಗಳಲ್ಲಿ ದ್ರವ್ಯ ವ್ಯಸನದ ಜತೆಗೆ ಲೈಂಗಿಕ ದೌರ್ಜನ್ಯವೂ ಜತೆಗೂಡಿರುತ್ತದೆ. ವ್ಯಸನಕ್ಕೆ ದಾಸರಾದ ಬಾಲಕಿಯರು ಮಾದಕ ದ್ರವ್ಯಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಮತ್ತೆ ಮತ್ತೆ ತಾವಾಗಿ ಈ ಲೈಂಗಿಕ ದೌರ್ಜನ್ಯಕ್ಕೆ ಬಲಿಬೀಳುವ ಮಟ್ಟಕ್ಕಿಳಿಯುತ್ತಾರೆ.
ಕೇರಳ ಪೊಲೀಸ್ ಮೂಲಗಳು ಹೇಳುವ ಪ್ರಕಾರ ರಾಜ್ಯ ಈಗ ಹಲವು ವರ್ಷಗಳಿಂದ ಪಂಜಾಬ್ ಎದುರಿಸುತ್ತಿರುವಂತಹ ಪರಿಸ್ಥಿತಿಯಲ್ಲಿದೆ. ತನ್ನ ಸ್ವಂತ ನಾಡಾದ ಕೇರಳದ ಎಳೆಯರನ್ನು ಮಾದಕ ದ್ರವ್ಯ ಮಾಫಿಯಾದಿಂದ ದೇವರಾದರೂ ರಕ್ಷಿಸಬಲ್ಲನೇ ಎಂಬುದೇ ಈಗಿರುವ ಪ್ರಶ್ನೆ.
ಅಧ್ಯಾಪಕರೇನು ಹೇಳುತ್ತಾರೆ?
ಕಾಸರಗೋಡು ಭಾಗದ, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧ್ಯಾಪಕರೊಬ್ಬರು ಈ ಭಾಗದಲ್ಲಿಯೂ ಶಾಲಾ ಕಾಲೇಜು ಮಕ್ಕಳಲ್ಲಿ ಮಾದಕ ದ್ರವ್ಯ ವ್ಯಸನ ವ್ಯಾಪಕವಾಗಿದೆ ಎನ್ನುತ್ತಾರೆ. 100 ಮಂದಿಯಲ್ಲಿ ಒಂದಿಬ್ಬರು ವಿದ್ಯಾರ್ಥಿಗಳು ಮಾದಕ ದ್ರವ್ಯಕ್ಕೆ ಬಲಿಯಾಗಿರು ವುದನ್ನು ಗಮನಿಸಬಹುದು. ಇಂತಹವರು ತರಗತಿಯಲ್ಲಿ ನಿದ್ರಿಸುವ, ಮಾತನಾಡಿದರೆ ಕೋಪಗೊಳ್ಳುವ ಸ್ವಭಾವದವರಾಗಿರುತ್ತಾರೆ.
ಶಾಲೆ ಪರಿಸರದ ಸಣ್ಣ ಅಂಗಡಿಗಳಲ್ಲಿ ಸಣ್ಣ ಪ್ಯಾಕೆಟ್‌ಗಳಲ್ಲಿ ಮಾದಕ ಪದಾರ್ಥ ಲಭ್ಯವಾಗುತ್ತದೆ. ಮೊದಲಿಗೆ ಮಕ್ಕಳಿಗೆ ಹಣ ಸಹಿತ ಮಾದಕ ಪದಾರ್ಥ ನೀಡಿ ಬಲೆಗೆ ಬೀಳಿಸಲಾಗುತ್ತದೆ. ಬಳಿಕ ಅವರಿಗೆ ಅದರ ಸೇವನೆ ಅನಿವಾರ್ಯವಾಗುತ್ತದೆ. ಕೇಳಿದಷ್ಟು ಹಣ ನೀಡಿ ಖರೀದಿಸಿ ಸೇವಿಸುತ್ತಾರೆ. ಅಲ್ಲದೆ ಅವರಿಗೆ ಒಂದಷ್ಟು ಪಾಕೆಟ್ ಮನಿ ನೀಡಿ ಅವರ ಮೂಲಕವೇ ಇತರ ವಿದ್ಯಾರ್ಥಿಗಳಿಗೆ ಹಂಚಿ ಅವರನ್ನೂ ಜಾಲಕ್ಕೆ ಸೇರಿಸಿಕೊಳ್ಳುತ್ತಾರೆ. ಬೆಳಗ್ಗೆ ಬರುವಾಗಲೇ ಸೇವಿಸಿ ಕೊಂಡು ಬರುವ ಮಕ್ಕಳೂ ಇರುತ್ತಾರೆ. 11 ಗಂಟೆ ವೇಳೆಗೆ, ಮಧ್ಯಾಹ್ನದ ಬಳಿಕ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಅಲ್ಲಿಗೆ ಹೋಗಿ ಸೇವಿಸಿ ಬರುವವರೂ ಇದ್ದಾರೆ. ಇದಕ್ಕಾಗಿ ಶೌಚಾಲಯಗಳ ಗೋಡೆಯ ಸಣ್ಣ ಕಿಂಡಿಗಳು, ಬಿರುಕುಗಳಲ್ಲಿ ದಾಸ್ತಾನು ಇಡುವವರೂ ಇಡುತ್ತಾರೆ. ನಿರ್ದಿಷ್ಟ ವೇಳೆಗೆ ಸೇವನೆಗೆ ಅವಕಾಶ ಸಿಗದಿದ್ದರೆ ಅಂತಹ ವಿದ್ಯಾರ್ಥಿಗಳು ಚಡಪಡಿಸಲಾರಂಭಿಸುತ್ತಾರೆ. ಮಾತನಾಡಿದರೆ ಕೋಪಿಸಿಕೊಳ್ಳುತ್ತಾರೆ. ಸಾಧು ಸ್ವಭಾವದ ಶಿಕ್ಷಕರಾಗಿದ್ದರೆ ಅವರ ಮೇಲೆ ಹಲ್ಲೆಗೆ ಮುಂದಾಗುವುದೂ ಇದೆ. ಪುಡಿ ರೂಪದ ಗಾಂಜಾದ ಬಳಕೆ ಹೆಚ್ಚಿದೆ; ಅದಕ್ಕೂ ಹೆಚ್ಚಿನ ಮಾರಕವಾದ ಎಂಡಿಎಂಎ ಬಳಕೆಯ ಮಾಹಿತಿಯೂ ದೊರಕಿದೆ ಎನ್ನುತ್ತಾರೆ ಅವರು.
ಹಲವು ಮಕ್ಕಳು ಮಾದಕ ದ್ರವ್ಯ ಸೇವನೆ ಮಾಡದೆ ಇರುವಾಗ ಪ್ರಶ್ನಿಸಿದರೆ “ನಾವು ಆ ಜಾಲದೊಳಕ್ಕೆ ಬಿದ್ದಿದ್ದೇವೆ; ಬಿಡಲು ಸಾಧ್ಯವಾಗುತ್ತಿಲ್ಲ’ ಎಂದು ದುಃಖೀಸುತ್ತಾರೆ. ಈ ನಿಟ್ಟಿನಲ್ಲಿ ಶಾಲೆ ಆರಂಭದ ದಿನಗಳಲ್ಲಿ ಪ್ರತೀ ವರ್ಷ ಕೌನ್ಸೆಲಿಂಗ್ ತರಗತಿ ನಡೆಸುತ್ತೇವೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಅಥವಾ ಸಂಪನ್ಮೂಲ ವ್ಯಕ್ತಿಗಳು ಬಂದು ಕೌನ್ಸೆಲಿಂಗ್ ನಡೆಸಿ ಕೊಡುತ್ತಾರೆ. ಇಂತಹ ಪ್ರಕರಣ ತಿಳಿದುಬಂದಲ್ಲಿ ವಿದ್ಯಾರ್ಥಿಯನ್ನು ಕರೆದು ಕೌನ್ಸೆಲಿಂಗ್‌ಗೆ ಒಳಪಡಿಸಲಾಗುತ್ತದೆ. ಹೆತ್ತವರಿಗೆ ಮಾಹಿತಿ ಯನ್ನು ನೀಡಲಾಗುವುದು. ಆದರೆ ನಮ್ಮ ಪ್ರದೇಶದ ಮಕ್ಕಳ ಅಪ್ಪಂದಿರು ಹೆಚ್ಚಾಗಿ ವಿದೇಶದಲ್ಲಿ ಇರುವುದರಿಂದ ಮನೆಯವರಿಗೆ ತಿಳಿಸಿದರೂ ಪ್ರಯೋಜನವಾಗುವುದು ಕಡಿಮೆ ಎನ್ನುತ್ತಾರೆ ಈ ಅಧ್ಯಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.